ಲಕ್ಷದ್ವೀಪದ ಕಾನೂನು ವ್ಯಾಪಿ ಕೇರಳದಿಂದ ಕರ್ನಾಟಕ ಹೈಕೋರ್ಟ್‌ಗೆ ಬದಲಾವಣೆಗೆ ಪ್ರಸ್ತಾಪ; ತೀವ್ರಗೊಂಡ ಆಕ್ರೋಶ
ಲಕ್ಷದ್ವೀಪಕ್ಕೆ ನೂತನವಾಗಿ ನೇಮಕವಾಗಿರುವ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರ ನೀತಿ-ಧೋರಣೆಗಳ ವಿರುದ್ದ ಲಕ್ಷದ್ವೀಪದ ಜನರು ಸಿಡಿದೆದ್ದಿದ್ದಾರೆ. ಅಲ್ಲದೆ, ಅವರ ನೀತಿಗಳ ವಿರುದ್ದ ಕೇರಳ ಹೈಕೋರ್ಟ್‌ನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಲಕ್ಷದ್ವೀಪದ ಕಾನೂನು ವ್ಯಾಪ್ತಿಯನ್ನು ಕೇರಳ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್ ಬದಲಾಯಿಸಲು ಪ್ರಫುಲ್ ಪ್ರಸ್ತಾಪ ಇಟ್ಟಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಲಕ್ಷದ್ವೀಪದಲ್ಲಿ ಜಾರಿಗೆ ತರಲು ಮುಂದಾಗಿರುವ ಗೋ ಮಾಂಸ ಮಾರಾಟ ನಿಷೇಧ, ಅಪರಾಧ ಪ್ರಕರಣ ಕಡಿಮೆ ಇರುವ ದ್ವೀಪದಲ್ಲಿ ಗೂಂಡಾ ಕಾಯ್ದೆ ಜಾರಿ, ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಪಂಚಾಯತ್ ಆಕಾಂಕ್ಷಿಗಳು ಅನರ್ಹ, ಅಭಿವೃದ್ಧಿ ಯೋಜನೆಗಳಿಗಾಗಿ ಖಾಸಗಿಯವರಿಂದ ಭೂಮಿ ವಶಪಡಿಸಿಕೊಳ್ಳಲು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ, ಲಕ್ಷದ್ವೀಪಾಭಿವೃದ್ಧಿ ಪ್ರಾಧಿಕಾರ 2021 ರಚನೆ, ಲಕ್ಷದ್ವೀಪದಲ್ಲಿ ಮದ್ಯ ಮಾರಾಟ ನಿಷೇಧ ತೆರವು, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮಾಂಸಾಹಾರ ನಿಷೇಧವನ್ನು ಒಳಗೊಂಡ ಹಲವು ಮಸೂದೆ, ವಿಧೇಯಕಗಳಿಗೆ ದ್ವೀಪದ ಜನರು ವಿರೋಧ ವ್ಯಕ್ತಪಡಿಸಿ, ಹೋರಾಟ ನಡೆಸುತ್ತಿದ್ದಾರೆ. ಅಲ್ಲದೆ, ಕಾನೂನು ಹೋರಾಟಕ್ಕೂ ಮುಂದಾಗಿದ್ದು, ಕೇರಳ ಹೈಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.
ಈ ಹಿನ್ನೆಲೆಯಿಂದಾಗಿ ದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಲಕ್ಷದ್ವೀಪದ ಕಾನೂನು ವ್ಯಾಪ್ತಿಯನ್ನು ಕೇರಳ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ಗೆ ಬದಲಿಸುವ ಚಿಂತನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ತೀವ್ರ ಖಂಡನೆ, ಆಕ್ರೋಶ ವ್ಯಕ್ತವಾಗುತ್ತಿದೆ.
Read Also: ಲಕ್ಷದ್ವೀಪ: ನಟಿ, ನಿರ್ಮಾಪಕಿ ವಿರುದ್ದ ದೇಶದ್ರೋಹ ಕೇಸ್; ಬಿಜೆಪಿ ತೊರೆದ 15 ನಾಯಕರು!
ನ್ಯಾಯಾಂಗ ವ್ಯಾಪ್ತಿಯನ್ನು ಕೇರಳದಿಂದ ಕರ್ನಾಟಕಕ್ಕೆ ಸ್ಥಳಾಂತರಿಸುವ ಪಟೇಲ್ ಅವರ ಪ್ರಯತ್ನ ಸಂಪೂರ್ಣವಾಗಿ ತನ್ನ ಅಧಿಕಾರದ ದುರುಪಯೋಗವಾಗಿದೆ. ಈ ದ್ವೀಪಗಳಲ್ಲಿನ ಜನರ ಮಾತೃಭಾಷೆ ಮಲಯಾಳಂ. ಹೈಕೋರ್ಟ್‌ನ ಹೆಸರನ್ನು ಕೇರಳ ಮತ್ತು ಲಕ್ಷದ್ವೀಪ ಹೈಕೋರ್ಟ್ ಎಂಬುದನ್ನು ಯಾರೂ ಮರೆಯಬಾರದು. ಪಟೇಲರ ಮೊದಲು 36 ನಿರ್ವಾಹಕರು ಇದ್ದರು. ಯಾರಿಗೂ ಈ ರೀತಿಯ ಆಲೋಚನೆ ಇರಲಿಲ್ಲ. ನಾವು ಈ ಪ್ರಸ್ತಾಪವನ್ನು ವಿರೋಧಿಸುತ್ತೇವೆ ಎಂದು ಲಕ್ಷದ್ವೀಪವನ್ನು ಪ್ರತಿನಿಧಿಸುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯ ಮೊಹಮ್ಮದ್ ಫೈಜಲ್ ಪಿ ಪಿ ಹೇಳಿದ್ದಾರೆ.
ಸಂವಿಧಾನದ 241 ನೇ ವಿಧಿ ಪ್ರಕಾರ ಹೈಕೋರ್ಟ್‌ನ ಅಧಿಕಾರ ವ್ಯಾಪ್ತಿಯನ್ನು ಸಂಸತ್ತಿನ ಕಾಯ್ದೆಯ ಮೂಲಕ ಮಾತ್ರ ಬದಲಿಸಬಹುದಾಗಿದೆ. ಈ ವಿಧಿಯ ಅನುಚ್ಛೇದ (1)ರ ಪ್ರಕಾರ ಸಂಸತ್ತು ತನ್ನ ಕಾಯಿದೆಯ ಮೂಲಕ ಕೇಂದ್ರಾಡಳಿತ ಪ್ರದೇಶಕ್ಕಾಗಿ ಹೈಕೋರ್ಟ್ ಸ್ಥಾಪಿಸಬಹುದು ಅಥವಾ ಆ ಪ್ರದೇಶದಲ್ಲಿರುವ ನ್ಯಾಯಾಲಯವನ್ನು ಹೈಕೋರ್ಟ್ ಆಗಿ ಪರಿವರ್ತಿಸಬಹುದು.
Read Also: ಲಕ್ಷದ್ವೀಪದಲ್ಲಿ ಬಿಜೆಪಿ ವಿರುದ್ದ ಆಕ್ರೋಶ; 08 ಪದಾಧಿಕಾರಿಗಳು ಪಕ್ಷಕ್ಕೆ ರಾಜೀನಾಮೆ!
ಲಕ್ಷದ್ವೀಪ ಆಡಳಿತ ಸುಧಾರಣೆಗಳನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಕೇರಳ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ. ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರದ ಕರಡು ನಿಯಮಗಳನ್ನು ಪ್ರಶ್ನಿಸಿ ಕೆಪಿಸಿಸಿ ಪದಾಧಿಕಾರಿ ನೌಶಾದ್ ಆಲಿ ಸಲ್ಲಿಸಿದ್ದ ಮನವಿಯನ್ನು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ತಿರಸ್ಕರಿಸಿದೆ. ಆಡಳಿತ ಸುಧಾರಣೆಗಳ ಬಗ್ಗೆ ದೂರುದಾರರು ತಕ್ಷಣ ತಡೆಯಾಜ್ಞೆ ನೀಡುವಂತೆ ಕೋರಿದ್ದಾರೆ. ಆದರೆ ನ್ಯಾಯಾಲಯ ಅದಕ್ಕೆ ಅವಕಾಶ ನೀಡಿಲ್ಲ. ಬದಲಾಗಿ, ವಿವರಣೆ ಕೋರಿ ಕೇಂದ್ರ ಮತ್ತು ಲಕ್ಷದ್ವೀಪ ಆಡಳಿತಕ್ಕೆ ಪತ್ರ ಕಳುಹಿಸಿದೆ.
Read Also: ಕೊರೊನಾ 3ನೇ ಅಲೆ: ರಾಜ್ಯದಲ್ಲಿ 3.4 ಲಕ್ಷ ಮಕ್ಕಳು ಕೋವಿಡ್‌ಗೆ ಒಳಗಾಗುವ ಆತಂಕ!