ಕೊರೊನಾ 3ನೇ ಅಲೆ: ರಾಜ್ಯದಲ್ಲಿ 3.4 ಲಕ್ಷ ಮಕ್ಕಳು ಕೋವಿಡ್‌ಗೆ ಒಳಗಾಗುವ ಆತಂಕ!

ಕೊರೊನಾ ಎರಡನೇ ಅಲೆಯು ರಾಜ್ಯದಲ್ಲಿ ಇಳಿಕೆಯಾಗುತ್ತಿದೆ. ಅದರೆ, 3ನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. 3ನೇ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದ್ದು, ರಾಜ್ಯದಲ್ಲಿ 3.4 ಲಕ್ಷ ಮಕ್ಕಳು ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ. ಇದಕ್ಕಾಗಿ ಮಕ್ಕಳ ಆರೈಕೆಗಾಗಿ ವಿಶೇಷ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಜ್ಞರ ಸಮಿತಿ ಎಚ್ಚರಿಸಿದೆ.

ಹೃದ್ರೋಗ ತಜ್ಞ ಡಾ.ದೇವಿ ಪ್ರಸಾದ್‌ ಶೆಟ್ಟಿ ನೇತೃತ್ವದ 16 ಸದಸ್ಯರನ್ನು ಒಳಗೊಂಡ ತಜ್ಞರ ಸಮಿತಿಯು, ಕೊರೊನಾ 3ನೇ ಅಲೆಯ ಬಗ್ಗೆ ಆತಂಕ ವ್ಯಕ್ತಪಡಿಸಿದೆ. 91 ಪುಟಗಳ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವ ಸಮಿತಿ, ಹಲವಾರು ಶಿಫಾರಸ್ಸುಗಳನ್ನು ಮಾಡಿದೆ.

ರಾಜ್ಯದಲ್ಲಿ ಅಕ್ಟೋಬರ್‌ ಅಥವಾ ನವೆಂಬರ್‌ ತಿಂಗಳಿನಲ್ಲಿ ಕೋವಿಡ್ ಮೂರನೇ ಅಲೆ ಉಲ್ಬಣಿಸುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ 0-18 ವರ್ಷ ವಯ್ಸಸಿನ 32.21 ಲಕ್ಷ ಮಕ್ಕಳಿದ್ದಾರೆ. ಈ ಪೈಕಿ, 45,958 ಮಕ್ಕಳು ಸೋಂಕಿಗೆ ತುತ್ತಾಗಲಿದ್ದಾರೆ. ರಾಜ್ಯದಾದ್ಯಂತ 0-18 ವರ್ಷ ವಯಸ್ಸಿನ 2.38 ಕೋಟಿ ಜನಸಂಖ್ಯೆಯಲ್ಲಿ 3.4 ಲಕ್ಷ ಮಕ್ಕಳು ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಸಮಿತಿ ಅಂದಾಜಿಸಿದೆ.

ಇದನ್ನೂ ಓದಿ: ಆಂಧ್ರ ರಾಜ್ಯಪಾಲರಾಗಿ ಯಡಿಯೂರಪ್ಪ? ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಖಚಿತ?

ಬೆಂಗಳೂರಿನಲ್ಲಿ ಮಕ್ಕಳಿಗೆ 3,677 ಹಾಸಿಗೆಗಳ ಅವಶ್ಯಕತೆಯಿದೆ. ಅದರಲ್ಲಿ 1,838 ಐಸಿಯು ಮತ್ತು ಎಚ್‌ಡಿಯು (ಹೈ ಡಿಪೆಂಡೆನ್ಸಿ ಯುನಿಟ್) ಹಾಸಿಗೆಗಳು ಇರಬೇಕಾಗುತ್ತದೆ. ಅಲ್ಲದೆ, ಹೆಚ್ಚುವರಿಯಾಗಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 7,353 ಹಾಸಿಗೆಗಳು ಬೇಕಾಗುತ್ತವೆ ಎಂದು ಅಂದಾಜಿಸಲಾಗಿದೆ.

ಉಳಿದಂತೆ ರಾಜ್ಯಾದ್ಯಂತ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 27,205 ಹಾಸಿಗೆಗಳು, 13,602 ಐಸಿಯು ಹಾಗೂ 54,409 ಎಚ್‌ಡಿಯು ಹಾಸಿಗೆಗಳು ಬೇಕಾಗುತ್ತವೆ ಎಂದು ಸಮಿತಿ ಸೂಚಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ‘ತಜ್ಞರ ಸಮಿತಿ ಅಂತಿಮ ವರದಿ ಆಧರಿಸಿ 45 ದಿನಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ’ ಎಂದು ಹೇಳಿದ್ದಾರೆ.

2ನೇ ಅಲೆಯ ಆರಂಭದ ಒಂದು ತಿಂಗಳು ಇಡೀ ದೇಶ ತತ್ತರಿಸಿ ಹೋಗಿತ್ತು. ಆಕ್ಸಿಜನ್‌ ಕೊರತೆಯಿಂದಾಗಿ ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಉತ್ತರ ಪ್ರದೇಶದಲ್ಲಿ ಶವಗಳ ಅಂತ್ಯ ಸಂಸ್ಕಾರವನ್ನೂ ಮಾಡಲಾಗದೆ ಸರ್ಕಾರ ಶವಗಳನ್ನು ನದಿ ತೀರದ ಮರಳಿನಲ್ಲಿ ಹೂತು ತನ್ನ ನಿರ್ಲಕ್ಷ್ಯವನ್ನೂ, ಅಮಾನವೀಯನ್ನೂ ಪ್ರದರ್ಶಿಸಿತು.

ಇದೀಗ ಕೊರೊನಾ ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್‌ಅನ್ನು ಸಡಿಲಗೊಳಿಸಲಾಗಿದೆ. ಜೂನ್‌ 21ರಿಂದ ಅನ್‌ಲಾಕ್‌ 2.0 ಆರಂಭವಾಗಲಿದೆ.

ಇದನ್ನೂ ಓದಿ: ‘ಮೆಡಿಕಲ್‌ ಟೆರರಿಸಂ’ ಎಂಬ ಟೈಟಲ್‌ ಸೃಷ್ಟಿಸಿದ್ದ ಬಿಜೆಪಿ ಈಗೇಕೆ ಮೌನವಾಗಿದೆ: ಕಾಂಗ್ರೆಸ್‌ ಪ್ರಶ್ನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights