ತಮ್ಮ ವಿರುದ್ದದ ಪ್ರಕರಣವನ್ನು ಬಿಜೆಪಿ ಮತ್ತಷ್ಟು ಜಟಿಲಗೊಳಿಸುತ್ತಿದೆ: ಲಕ್ಷದ್ವೀಪದ ನಿರ್ಮಾಪಕಿ ಆಯಿಷಾ ಸುಲ್ತಾನಾ
ಲಕ್ಷದ್ವೀಪಕ್ಕೆ ನೂತನವಾಗಿ ನೇಮಕವಾಗಿರುವ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರ ಕಾರ್ಯ ಧೋರಣೆಳು ಮತ್ತು ನೀತಿಗಳ ವಿರುದ್ದ ಮಾತನಾಡಿದ್ದ ಲಕ್ಷದ್ವೀಪ ಮೂಲದ ಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಆದರೆ ಬಿಜೆಪಿಯು ನನಗೆ ಪಾಕಿಸ್ತಾನದ ಸಂಪರ್ಕವಿದೆ ಎಂದು ಪ್ರಕರಣವನ್ನು ಮತ್ತಷ್ಟು ಜಟಿಲಗೊಳಿಸುತ್ತಿದೆ ಎಂದು ಆಯಿಷಾ ಸುಲ್ತಾನ ಆರೋಪಿಸಿದ್ದಾರೆ.
ಟಿವಿ ಕಾರ್ಯಕ್ರಮವೊಂದರ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಹೊಸ ಆಡಳಿತಾಧಿಕಾರಿ ಲಕ್ಷದ್ವೀಪದಲ್ಲಿ ಜಾರಿಗೆ ತರಲು ಹೊರಟಿರುವ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಿಡಿಸಿದ್ದರು. ಅವರ ಹೇಳಿಕೆಗಳು ವಿವಾದಾತ್ಮವಾಗಿದೆ ಎಂದು ಪೊಲೀಸರು ದೂರಿದ್ದು, ಆಯಿಷಾ ಅವರನ್ನು ಮೂರನೆ ಬಾರಿಗೆ ವಿಚಾರಣೆ ನಡೆಸಲಾಗಿದೆ ಎಂದು TNIE ವರದಿ ಮಾಡಿದೆ.
“ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಬಿಜೆಪಿಯ ಐಟಿ ಸೆಲ್ ಮತ್ತಷ್ಟು ಜಟಿಲಗೊಳಿಸುತ್ತಿದೆ. ಸಾಮಾಜಿಕ ಜಾಲತಣದಲ್ಲಿ ತಮಗೆ ಪಾಕಿಸ್ತಾನದ ಜೊತೆ ನಂಟಿದೆ ಎಂದು ಬಿಂಬಿಸುತ್ತಿದೆ. ಪೊಲೀಸರು ನನ್ನ ಫೋನ್ ವಿವರಗಳು, ವಾಟ್ಸಾಪ್ ಕರೆಗಳು ಮತ್ತು ಬ್ಯಾಂಕ್ ವಿವರಗಳನ್ನು ಪರಿಶೀಲಿಸಿದ್ದು, ನನಗೆ ಯಾವುದೇ ವಿದೇಶಿ ಸಂಪರ್ಕವಿದೆಯೇ ಎಂದು ವಿಚಾರಣೆ ನಡೆಸಿದ್ದಾರೆ. ನನ್ನ ಹೇಳಿಕೆಗಳನ್ನು ಪಾಕಿಸ್ತಾನದಲ್ಲಿ ಸಂಭ್ರಮಿಸಲಾಗುತ್ತಿದೆ ಎಂದು ಬಿಜೆಪಿ ನಾಯಕರು ಪ್ರಚಾರ ಮಾಡಿದ್ದರಿಂದ ಈ ವಿಚಾರಣೆ ಮಾಡುವುದು ಅಗತ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ” ಎಂದು ಆಯಿಷಾ ಸುಲ್ತಾನಾ ಹೇಳಿದ್ದಾರೆ.
ಇದನ್ನೂ ಓದಿ: ಲಕ್ಷದ್ವೀಪ: ನಟಿ, ನಿರ್ಮಾಪಕಿ ವಿರುದ್ದ ದೇಶದ್ರೋಹ ಕೇಸ್; ಬಿಜೆಪಿ ತೊರೆದ 15 ನಾಯಕರು!
ಈ ನಡುವೆ, ಲಕ್ಷದ್ವೀಪ ಪೊಲೀಸರು ಆಯಿಷಾ ಅವರನ್ನು ಗುರುವಾರ ಮೂರನೇ ಸುತ್ತಿನ ವಿಚಾರಣೆ ನಡೆಸಿದ್ದು ನಂತರ ಅವರನ್ನು ದ್ವೀಪದಿಂದ ಹೊರಗೆ ಹೊಗಲು ಅನುಮತಿ ನೀಡಿದ್ದಾರೆ. ತನ್ನ ಏಳು ದಿನಗಳ ಕಡ್ಡಾಯ ಕ್ವಾರಂಟೈನ್ ಅನ್ನು ಶುಕ್ರವಾರ ಕೊನೆಗೊಳಿಸಿ, ಶನಿವಾರ ಕೊಚ್ಚಿಗೆ ತೆರಳಲಿದ್ದೇನೆ ಎಂದು ಆಯಿಷಾ ಹೇಳಿದ್ದಾರೆ. ಈ ಮೊದಲು ಜೂನ್ 20 ಮತ್ತು 23 ರಂದು ಪೊಲೀಸರು ಆಯಿಷಾ ಅವರನ್ನು ವಿಚಾರಣೆ ನಡೆಸಿದ್ದರು.
“ಪ್ರಕರಣವು ತನಿಖೆಯ ಹಂತದಲ್ಲಿದೆ. ನಾವು ಆಯಿಷಾ ಅವರ ಹೇಳಿಕೆಯನ್ನು ದಾಖಲಿಸಿದ್ದೇವೆ. ದೂರಿನ ಆಧಾರದಲ್ಲಿ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿದೆ. ಈ ಸಂಬಂಧಿತ ನಾವು ವಿಷಯಗಳ ಬಗ್ಗೆ ತನಿಖೆ ನಡೆಸಬೇಕಾಗಿದ್ದು, ಸಾಕ್ಷಿಗಳನ್ನು ಪರೀಶೀಲಿಸಬೇಕಾಗುತ್ತದೆ. ತನಿಖೆ ಪ್ರಗತಿಯಲ್ಲಿರುವುದರಿಂದ ಅದರ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದು ಲಕ್ಷದ್ವೀಪ ಎಸ್ಪಿ ಶರತ್ ಕುಮಾರ್ ಸಿನ್ಹಾ ಹೇಳಿದ್ದಾರೆ.
ಇದನ್ನೂ ಓದಿ: ಲಕ್ಷದ್ವೀಪದಲ್ಲಿ ಬಿಜೆಪಿ ವಿರುದ್ದ ಆಕ್ರೋಶ; 08 ಪದಾಧಿಕಾರಿಗಳು ಪಕ್ಷಕ್ಕೆ ರಾಜೀನಾಮೆ!
ಮಲಯಾಳಂ ಟಿವಿ ಚಾನೆಲ್ ಒಂದರಲ್ಲಿ ಕಾಣಿಸಿಕೊಂಡಿದ್ದ ಆಯಿಷಾ ಸುಲ್ತಾನ, “ಲಕ್ಷದ್ವೀಪದ ಆಡಳಿತಾಧಿಕಾರಿಯನ್ನು ಒಕ್ಕೂಟ ಸರ್ಕಾರವು ‘ಜೈವಿಕ ಅಸ್ತ್ರ’ ರೂಪದಲ್ಲಿ ಪ್ರಯೋಗಿಸಿದೆ” ಎಂದು ಹೇಳಿದ್ದರು. ಇದರ ವಿರುದ್ದ ಲಕ್ಷದ್ವೀಪ ಬಿಜೆಪಿ ಅಧ್ಯಕ್ಷ ಸಿ. ಅಬ್ದುಲ್ ಖಾದರ್ ಹಾಜಿ ನೀಡಿದ ದೂರಿನ ಮೇರೆಗೆ ಜೂನ್ 10 ರಂದು ದ್ವೀಪದ ಪೊಲೀಸರು ಆಯಿಷಾ ಸುಲ್ತಾನ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಆಯಿಷಾ ಸುಲ್ತಾನ ಅವರು ಟಿವಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಶೂನ್ಯ ಕೊರೊನಾವಿದ್ದ ಪ್ರದೇಶದಲ್ಲಿ ದಿನಕ್ಕೆ ನೂರು ಪ್ರಕರಣಗಳು ವರದಿಯಾಗುತ್ತಿವೆ. ಒಕ್ಕೂಟ ಸರ್ಕಾರ ಹೊಸದಾಗಿ ನೇಮಕಮಾಡಿದ್ದ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರನ್ನು ಪ್ರಯೋಗಿಸಿದ್ದು ‘ಜೈವಿಕ ಅಸ್ತ್ರ’ ರೀತಿಯಲ್ಲಾಗಿದೆ. ನನಗೆ ಸ್ಪಷ್ಟವಾಗಿ ಹೇಳಲು ಸಾಧ್ಯ, ಒಕ್ಕೂಟ ಸರ್ಕಾರವು ಕೊರೊನಾವನ್ನು ಜೈವಿಕ ಅಸ್ತ್ರವಾಗಿ ಪ್ರಯೋಗಿಸಿದೆ” ಎಂದು ಹೇಳಿದ್ದರು. ಇದನ್ನು ಬಿಜೆಪಿ ವಿವಾದವನ್ನಾಗಿ ಮಾಡಿತ್ತು.
ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಪರಿಚಯಿಸಿದ ಹೊಸ ನಿಯಮಗಳ ವಿರುದ್ದ, ಹಲವು ತಿಂಗಳಿಗಿಂತಲೂ ಹೆಚ್ಚು ಕಾಲದಿಂದ ದ್ವೀಪವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸ ನೀತಿಗಳು ದ್ವೀಪವಾಸಿಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: ಲಕ್ಷದ್ವೀಪದ ಕಾನೂನು ವ್ಯಾಪಿ ಕೇರಳದಿಂದ ಕರ್ನಾಟಕ ಹೈಕೋರ್ಟ್ಗೆ ಬದಲಾವಣೆಗೆ ಪ್ರಸ್ತಾಪ; ತೀವ್ರಗೊಂಡ ಆಕ್ರೋಶ

