ಸೌರವ್ ಗಂಗೂಲಿ ಜೀವನಚರಿತ್ರೆ ಸಿನಿಮಾ ನಿರ್ಮಾಣ : ದಾದಾ ಪಾತ್ರದಲ್ಲಿ ಯಾರು ಕಾಣಿಸಿಕೊಳ್ತಾರಾ?
ಸೌರವ್ ಗಂಗೂಲಿ ಜೀವನಚರಿತ್ರೆ ಸಿನಿಮಾ ನಿರ್ಮಾಣವಾಗಲಿದ್ದು ದಾದಾ ಪಾತ್ರದಲ್ಲಿ ಯಾರು ಕಾಣಿಸಿಕೊಳ್ತಾರಾ ಎನ್ನುವ ಕುತೂಹಲ ಮೂಡಿಸಿದೆ.
ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಮತ್ತು ಮೊಹಮ್ಮದ್ ಅಜರುದ್ದೀನ್ ನಂತರ ಸೌರವ್ ಗಂಗೂಲಿ ಭಾರತದ ಕ್ರಿಕೆಟ್ ನಾಯಕರಾಗಿದ್ದರು. ಸದ್ಯ ಇವರ ಜೀವನವನ್ನು ದೊಡ್ಡ ಪರದೆಯಲ್ಲಿ ತೋರಿಸಲು ನಿರ್ಧರಿಸಲಾಗಿದೆ. ಮಾಜಿ ಕ್ರಿಕೆಟಿಗ ಮತ್ತು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಪ್ರಸ್ತುತ ಅಧ್ಯಕ್ಷರಾದ ಸೌರವ್ ಗಂಗೂಲಿ ಸನಿಮಾ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ವರದಿಗಳ ಪ್ರಕಾರ, ಇದು ದೊಡ್ಡ ಬಜೆಟ್ ಚಿತ್ರವಾಗಲಿದ್ದು, 200 ಕೋಟಿ ರೂ.ಗಳಿಂದ 250 ಕೋಟಿ ರೂ. ವರೆಗೆ ಖರ್ಚಾಗುವ ಸಾಧ್ಯತೆ ಇದೆ. ರಣಬೀರ್ ಕಪೂರ್ ದಾದಾ ಜೀವನಚರಿತ್ರೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಊಹಿಸಲಾಗಿದೆ.
ನ್ಯೂಸ್ 18 ಬಾಂಗ್ಲಾಕ್ಕೆ ನೀಡಿದ ಸಂದರ್ಶನದಲ್ಲಿ ಸೌರವ್ ಗಂಗೂಲಿ ಈ ಸುದ್ದಿಯನ್ನು ದೃಢಪಡಿಸಿದ್ದಾರೆ. “ಹೌದು, ನಾನು ಜೀವನಚರಿತ್ರೆಗೆ ಒಪ್ಪಿಕೊಂಡಿದ್ದೇನೆ. ಅದು ಹಿಂದಿಯಲ್ಲಿರುತ್ತದೆ ಆದರೆ ನಿರ್ದೇಶಕರ ಹೆಸರನ್ನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ. ಎಲ್ಲವೂ ಅಂತಿಮಗೊಳ್ಳಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ” ಎಂದು ಸೌರವ್ ಹೇಳಿದರು.
ಸುದ್ದಿ ವರದಿಗಳ ಪ್ರಕಾರ, ಚಿತ್ರದ ಚಿತ್ರಕಥೆಯನ್ನು ಬರೆಯಲಾಗುತ್ತಿದೆ. ಪ್ರೊಡಕ್ಷನ್ ಹೌಸ್ ಸೌರವ್ ಗಂಗೂಲಿ ಅವರನ್ನು ಒಂದಕ್ಕಿಂತ ಹೆಚ್ಚು ಬಾರಿ ಭೇಟಿ ಮಾಡಿದೆ. ಸೌರವ್ ಗಂಗೂಲಿಯನ್ನು ತೆರೆಯ ಮೇಲೆ ಚಿತ್ರಿಸುವ ನಟನ ಬಗ್ಗೆ ಪ್ರೊಡಕ್ಷನ್ ಹೌಸ್ ಕೂಡ ನಿರ್ಧರಿಸಿದೆ ಎಂದು ಮೂಲಗಳು ಹೇಳುತ್ತವೆ. ರಣಬೀರ್ ಕಪೂರ್ ಈ ಪಾತ್ರಕ್ಕಾಗಿ ಅಗ್ರ ಸ್ಪರ್ಧಿ ಎಂದು ವರದಿಗಳು ಹೇಳುತ್ತವೆ. ದಾದಾ ಪಾತ್ರದಲ್ಲಿ ನಟಿಸಲು ಹೃತಿಕ್ ರೋಷನ್ ಸೇರಿದಂತೆ ಇನ್ನೂ ಇಬ್ಬರು ನಟರನ್ನು ಸಹ ಪರಿಗಣಿಸಲಾಗುತ್ತಿದೆ.