ಗಂಡನನ್ನು ಹೆಗಲ ಮೇಲೆ ಹೊತ್ತುಕೊಳ್ಳುವಂತೆ ಒತ್ತಾಯಿಸಿ ಮಹಿಳೆಯ ಬೆತ್ತಲೆ ಮೆರವಣಿಗೆ!
23 ವರ್ಷದ ಮಹಿಳೆಗೆ ಗಂಡನನ್ನು ಹೆಗಲ ಮೇಲೆ ಹೊತ್ತುಕೊಳ್ಳುವಂತೆ ಒತ್ತಾಯಿಸಿದ ಗ್ರಾಮಸ್ಥರು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಗುಜರಾತ್‌ನ ದಾಹೋಡ್ ಜಿಲ್ಲೆಯ ಹಳ್ಳಿಯೊಂದರ 23 ವರ್ಷದ ಬುಡಕಟ್ಟು ಮಹಿಳೆಯೊಬ್ಬಳನ್ನು ಪತಿ ಮತ್ತು ಇತರ ಗ್ರಾಮಸ್ಥರು ಬೆತ್ತಲೆಯಾಗಿ ಮೆರವಣಿಗೆ ಮಾಡಿಸಿದ್ದಾರೆ.
ಜುಲೈ 6 ರಂದು ಬುಡಕಟ್ಟು ಪ್ರಾಬಲ್ಯದ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ. ಇಂದು ಘಟನೆಯಲ್ಲಿ ಮಹಿಳೆಯ ಪತಿ ಮತ್ತು ಇತರ 18 ಮಂದಿಯನ್ನು ಬಂಧಿಸಲಾಗಿದೆ.
ವೈರಲ್ ವೀಡಿಯೊದಲ್ಲಿ ಮಹಿಳೆಯ ಪತಿ, ಇತರ ಪುರುಷರು, ಅವರ ಸಂಬಂಧಿಕರು ಸಾರ್ವಜನಿಕವಾಗಿ ಮಹಿಳೆಯನ್ನು ಎಳೆದುಕೊಂಡು ಹೋಗುವುದು, ಹೊಡೆಯುವುದು ಕಂಡುಬರುತ್ತದೆ ಎಂದು ಸಬ್ ಇನ್ಸ್‌ಪೆಕ್ಟರ್ ಬಿಎಂ ಪಟೇಲ್ ತಿಳಿಸಿದ್ದಾರೆ. ಮಹಿಳೆಗೆ ತನ್ನ ಗಂಡನನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆಯಲು ಸಹ ಒತ್ತಾಯಿಸಲಾಗಿದೆ.
ವೀಡಿಯೋದಲ್ಲಿ ಇತರ ಮಹಿಳೆಯರು ಮುಚ್ಚಿಕೊಳ್ಳಲು ತಂದ ಬಟ್ಟೆಗಳನ್ನು ಆಕೆಯ ಪತಿ ಕಸಿದುಕೊಳ್ಳುವುದನ್ನು ಕಾಣಬಹುದು.
“ಮಹಿಳೆ ಇತ್ತೀಚೆಗೆ ಇನ್ನೊಬ್ಬ ಪುರುಷನೊಂದಿಗೆ ಓಡಿಹೋಗಿದ್ದಳು. ಅವಳ ಪತಿ ಮತ್ತು ಇತರ ಗ್ರಾಮಸ್ಥರು ಆಕೆಯನ್ನು ಪತ್ತೆ ಹಚ್ಚಿ ಹಳ್ಳಿಗೆ ಕರೆತಂದಿದ್ದಾರೆ. ಜುಲೈ 6 ರಂದು ಆಕೆಗೆ ಅಮಾನವೀಯವಾಗಿ ಶಿಕ್ಷೆ ನೀಡಲಾಗಿದೆ. ವೀಡಿಯೊದಲ್ಲಿ ನೋಡಿದ ಎಲ್ಲ ಆರೋಪಿಗಳನ್ನು ನಾವು ಬಂಧಿಸಿದ್ದೇವೆ, “ಎಂದು ಪಟೇಲ್ ಹೇಳಿದರು.
ಭಾರತೀಯ ದಂಡ ಸಂಹಿತೆಯಡಿ ಗಲಭೆ, ಹಲ್ಲೆ, ಕ್ರಿಮಿನಲ್ ಬೆದರಿಕೆ ಮತ್ತು ಮಹಿಳೆಯ ನಮ್ರತೆಯನ್ನು ಅವಮಾನಿಸಿದ ಆರೋಪದ ಮೇಲೆ ಮತ್ತು ಘಟನೆಯ ವಿಡಿಯೋ ಚಿತ್ರೀಕರಣ ಮತ್ತು ಪ್ರಸಾರಕ್ಕಾಗಿ ಐಟಿ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.