ದಿಲ್ಲಿ ಮೈನರ್ ರೇಪ್ ಕೇಸ್ : ಸಂತ್ರಸ್ತೆಯ ಪೋಷಕರನ್ನು ಭೇಟಿಯಾದ ರಾಹುಲ್ ಗಾಂಧಿ!

ದೆಹಲಿಯಲ್ಲಿಂದು 9 ವರ್ಷದ ಅತ್ಯಾಚಾರ ಸಂತ್ರಸ್ತೆಯ ಪೋಷಕರನ್ನು ರಾಹುಲ್ ಗಾಂಧಿ ಭೇಟಿಯಾದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ದೆಹಲಿ ಕ್ಯಾಂಟ್ ನ ನಂಗಲ್ ರಾಯ್ ಪ್ರದೇಶದಲ್ಲಿ ಅತ್ಯಾಚಾರ, ಕೊಲೆ ಮತ್ತು ಬಲವಂತವಾಗಿ ಅಂತ್ಯಸಂಸ್ಕಾರ ಮಾಡಿದ ಒಂಭತ್ತು ವರ್ಷದ ಹುಡುಗಿಯ ಪೋಷಕರನ್ನು ಭೇಟಿ ಮಾಡಿದರು.

ಸಂತ್ರಸ್ತೆಯ ಪೋಷಕರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ನಾನು ಕುಟುಂಬದೊಂದಿಗೆ ಮಾತನಾಡಿದ್ದೇನೆ, ಅವರಿಗೆ ನ್ಯಾಯ ಬೇಕಾಗಿದೆ. ಅವರಿಗೆ ನ್ಯಾಯವನ್ನು ನೀಡುತ್ತಿಲ್ಲ. ಹೀಗಾಗಿ ಅವರಿಗೆ ಸಹಾಯ ಮಾಡಬೇಕು ಎಂದು ಅವರು ಹೇಳುತ್ತಿದ್ದಾರೆ. ನಾವು ಅದನ್ನು ಮಾಡುತ್ತೇವೆ. ನಾನು ಅವರೊಂದಿಗೆ ನಿಂತಿದ್ದೇನೆ. ರಾಹುಲ್ ಗಾಂಧಿ ಅವರಿಗೆ ನ್ಯಾಯ ಸಿಗುವವರೆಗೂ ನಿಂತುಕೊಳ್ಳುತ್ತಾನೆ “ಎಂದು ಹೇಳಿದರು.

ಘಟನೆಯ ಬಳಿಕ ಈ ಪ್ರದೇಶದ ಕೌನ್ಸಿಲರ್ ತಮ್ಮನ್ನು ಭೇಟಿ ಮಾಡಿಲ್ಲ ಎಂದು ಕೆಲ ಸ್ಥಳೀಯರು ರಾಹುಲ್ ಗಾಂಧಿಯ ಭೇಟಿಯನ್ನು ವಿರೋಧಿಸಿದರು. ಈ ವೇಳೆ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಮಾತನಾಡಿ, ‘ರಾಹುಲ್ ಗಾಂಧಿ ಹುಡುಗಿಯ ಪೋಷಕರನ್ನು ಭೇಟಿ ಮಾಡಲು ಬಂದಿದ್ದಾರೆ ಮತ್ತು ರಾಜಕೀಯ ಮಾಡಲು ಅಲ್ಲ. ಸಂಸತ್ತಿನಲ್ಲಿ ರಾಹುಲ್ ಗಾಂಧಿ ಈ ವಿಷಯವನ್ನು ಪ್ರಸ್ತಾಪಿಸುತ್ತಾರೆ ‘ಎಂದು ಸುರ್ಜೆವಾಲಾ ಹೇಳಿದರು.

ಈ ಘಟನೆಯ ವರದಿಯನ್ನು ಹಂಚಿಕೊಂಡ ರಾಹುಲ್ ಗಾಂಧಿ “ದಲಿತರ ಮಗಳು ಕೂಡ ದೇಶದ ಮಗಳು” ಎಂದು ಮಂಗಳವಾರ ಟ್ವೀಟ್ ಮಾಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಬುಧವಾರ ಹುಡುಗಿಯ ಕುಟುಂಬವನ್ನು ಭೇಟಿ ಮಾಡುವ ಸಾಧ್ಯತೆಯಿದೆ. “ನಾಳೆ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ, ನ್ಯಾಯಕ್ಕಾಗಿ ಈ ಹೋರಾಟದಲ್ಲಿ ಕುಟುಂಬಕ್ಕೆ ಸಹಾಯ ಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಏನಿದು ದಿಲ್ಲಿ ಮೈನರ್ ರೇಪ್ ಕೇಸ್?
ಅಪ್ರಾಪ್ತ ಬಾಲಕಿಯನ್ನು ಜುಲೈ 1 ರಂದು ದೆಹಲಿಯ ನಂಗಲ್ ಗ್ರಾಮದಲ್ಲಿ ಅತ್ಯಾಚಾರ, ಕೊಲೆ ಮತ್ತು ಬಲವಂತವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ.

ಪೊಲೀಸರ ಪ್ರಕಾರ, ಹುಡುಗಿ ತನ್ನ ಮನೆಯ ಸಮೀಪದ ಶ್ಮಶಾನದಲ್ಲಿ ವಾಟರ್ ಕೂಲರ್‌ನಿಂದ ತಣ್ಣೀರು ತರಲು ಮನೆಯಿಂದ ಹೊರಬಂದಿದ್ದಾಳೆ. ನಂತರ ಶ್ಮಶಾನದಲ್ಲಿ ಅರ್ಚಕರಾದ ರಾಧೇ ಶ್ಯಾಮ್ ಮತ್ತು ಎರಡು-ಮೂರು ಜನರು ಬಾಲಕಿಯ ತಾಯಿಯನ್ನು ಸ್ಮಶಾನಕ್ಕೆ ಕರೆದು ಹುಡುಗಿಯ ದೇಹವನ್ನು ತೋರಿಸಿದರು. ಆ ಹುಡುಗಿ ಕೂಲರ್ ನಿಂದ ನೀರು ಕುಡಿಯುವಾಗ ವಿದ್ಯುತ್ ತಂತಿ ತಗುಲಿತ್ತು ಎಂದು ತಾಯಿಗೆ ಹೇಳಿದ್ದಾರೆ.

ನಂತರ ಆರೋಪಿಗಳು ತಾಯಿಯ ಒಪ್ಪಿಗೆಯಿಲ್ಲದೆ ಬಾಲಕಿಯನ್ನು ಸುಟ್ಟು ಹಾಕಿದ್ದಾರೆ. ಈ ವೇಳೆ ತಾಯಿ ಗಂಡನಿಗೆ ಕರೆ ಮಾಡಿದ್ದಾಳೆ. ಶೀಘ್ರದಲ್ಲೇ, ಸುಮಾರು 200 ಗ್ರಾಮಸ್ಥರು ಶ್ಮಶಾನದಲ್ಲಿ ಜಮಾಯಿಸಿದರು ಮತ್ತು ಪೊಲೀಸರಿಗೆ ಕರೆ ಮಾಡಿದರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪೂಜಾರಿ ಅವರನ್ನು ಬಂಧಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights