ಪಂಜಾಬ್: ಅಟ್ಟಾಡಿಸಿ ಗುಂಡುಕ್ಕಿ ಅಕಾಲಿದಳದ ಯುವಮುಖಂಡನ ಹತ್ಯೆ!
ಪಂಜಾಬ್ನ ಮೊಹಾಲಿಯಲ್ಲಿ ಅಕಾಲಿದಳ ಪಕ್ಷದ ಯುವ ಮುಖಂಡ ವಿಕ್ರಮ್ಜೀತ್ ಸಿಂಗ್ ಅಲಿಯಾಸ್ ವಿಕ್ಕಿ ಮಿದ್ದುಖೇರಾ ಅವರನ್ನು ಅಟ್ಟಾಡಿಸಿ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಶನಿವಾರ ನಡೆದಿದೆ.
ತಮ್ಮ ಪ್ರತಿಸ್ಪರ್ಧಿ ಗ್ಯಾಂಗ್ ಆದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ಗೆ ವಿಕ್ಕಿ ಮಾಹಿತಿದಾರನಾಗಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ನಾವೇ ಹತ್ಯೆ ಮಾಡಿದ್ದೇವೆ ಎಂದು ದೇವೇಂದ್ರ ಬಂಬಿಹಾ ಗ್ಯಾಂಗ್ ಫೇಸ್ಬುಕ್ನಲ್ಲಿ ಬರೆದುಕೊಂಡಿದೆ.
ಆಸ್ತಿ ಡೀಲರ್ ಒಬ್ಬರನ್ನು ಭೇಟಿ ಮಾಡಿದ್ದ ವಿಕ್ಕಿ ತಮ್ಮ ಕಾರಿಗೆ ಮರಳುತ್ತಿರುವಾಗ ಇಬ್ಬರು ಪಿಸ್ತೂಲಿಂದ ಗುಂಡು ಹಾರಿಸಿದ್ದಾರೆ. ವಿಕ್ಕಿ ಶೂಟರ್ನತ್ತ ಕೈಸಿಕ್ಕ ವಸ್ತುವನ್ನು ಎಸೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೂ, ಇಬ್ಬರು ಶೂಟರ್ಗಳು ವಿಕ್ಕಿಯನ್ನು ಬೆನ್ನಟ್ಟಿ ಗುಂಡು ಹೊಡೆದಿದ್ದಾರೆ. ಈ ಹತ್ಯೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಾಲ್ಕು ಮಂದಿ ಸಶಸ್ತ್ರಧಾರಿಗಳು ಕಾರಿನಲ್ಲಿ ಪಾರ್ಕಿಂಗ್ ಪ್ರದೇಶಕ್ಕೆ ಆಗಮಿಸಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ. ಇಬ್ಬರು ವಾಹನದಲ್ಲೇ ಉಳಿದರೆ, ಉಳಿದ ಇಬ್ಬರು ವಿಕ್ಕಿಯನ್ನು ಹಿಂಬಾಲಿಸಿದರು ಎಂದು ಹೇಳಲಾಗಿದೆ.
ವಿಕ್ಕಿಗೆ ಸುಮಾರು ಒಂಭತ್ತು ಗುಂಡುಗಳು ತಗುಲಿವೆ. ಸ್ಥಳದಲ್ಲೇ ಅವರು ಮೃತಪಟ್ಟಿದ್ದು, ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ನಡೆಸಲಾಗುತ್ತಿದೆ. ಈ ಹತ್ಯೆಯನ್ನು ಎಲ್ಲ ಸಂಭಾವ್ಯ ಕೋನಗಳಿಂದ ಪರಿಶೀಲಿಸಲಾಗುತ್ತಿದೆ ಎಂದು ಎಸ್ಎಸ್ಪಿ ಸತೀಂದರ್ ಸಿಂಗ್ ಹೇಳಿದ್ದಾರೆ.
ವಿಕ್ಕಿ ಅವರು ಪಂಜಾಬ್ ವಿವಿಯಲ್ಲಿ ಅಕಾಲಿದಳದ ವಿದ್ಯಾರ್ಥಿ ವಿಭಾಗ ಸ್ಟೂಡೆಂಟ್ ಆರ್ಗನೈಸೇಷನ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರಾಗಿದ್ದರು. ವಿಕ್ಕಿ ಎರಡು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದರು.
ಇದನ್ನೂ ಓದಿ: ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಪಂಜಾಬ್ ಸಿಎಂ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ!

