ಉತ್ತರ ಪ್ರದೇಶ: ಕಾಂಗ್ರೆಸ್ಗೆ ಚುನಾವಣಾ ಯುದ್ದ; ಪ್ರಿಯಾಂಕಾ ಗಾಂಧಿಗೆ ಕಠಿಣ ಪರೀಕ್ಷೆ!
2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಮಾಡಲಾಗುತ್ತದೆಯೇ?
ಈ ಬಗ್ಗೆ ಕಾಂಗ್ರೆಸ್ ಗಟ್ಟಿಯಾದ ಮೌನವನ್ನು ತಾಳಿದೆ, ಆದರೆ ಆಕೆ ಆ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ.
“ಅಂತಹ ಪ್ರೊಜೆಕ್ಷನ್ ಅನ್ನು ಈಗಲೇ ನೀಡುವುದು ತೀರ ಮುಂಚಿತವಾಗುತ್ತದೆ. ಸೂಕ್ತ ಸಮಯ ಬರಲಿ”ಎಂದು ಪ್ರಿಯಾಂಕಾ ಗಾಂಧಿ ಕೆಲವು ದಿನಗಳ ಹಿಂದೆ ಹೇಳಿದ್ದಾರೆ.
ದೇಶದ ಅತಿದೊಡ್ಡದಾದ ಮತ್ತು ರಾಜಕೀಯವಾಗಿ ಅತ್ಯಂತ ನಿರ್ಣಾಯಕ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ 2019ರಿಂದ ಪ್ರಿಯಾಂಕಾಗಾಂಧಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪಕ್ಷವನ್ನು ಪುನಶ್ಚೇತನಗೊಳಿಸುವ ಜವಾಬ್ದಾರಿಯೂ ಅವರ ಮೇಲಿದೆ.
ಈ ಒಂದೂವರೆ ವರ್ಷದಲ್ಲಿ ಮೊದಲ ಬಾರಿಗೆ ಅವರು ಕಳೆದ ತಿಂಗಳು ರಾಜ್ಯದಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿದ್ದರು. ಪಕ್ಷದ ಧ್ಯೇಯವು ಮನೆ-ಮನೆಗಳಿಗೆ ತಲುಪಿಸುವುದು ಅವರ ಸದ್ಯದ ಯೋಜನೆಯಾಗಿದೆ.
ಅವರು ಕೆಲವು ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದರು. ಪಕ್ಷದ ಹೊಸ ತಲೆಮಾರಿನ ನಾಯಕರು ಮತ್ತು ಹಳೆಯ ಕಾರ್ಯಕರ್ತರನ್ನು ಒಂದೇ ವೇದಿಕೆಯಲ್ಲಿ ತರಲು ಯತ್ನಿಸುತ್ತಿದ್ದಾರೆ.
“ಅವರ ಭೇಟಿಯು ಪ್ರಾಥಮಿಕವಾಗಿ ಪಕ್ಷದ ಕಾರ್ಯಕರ್ತರನ್ನು ಹೆಚ್ಚಿಸುವುದಾಗಿದೆ” ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
“ಅವರ ದೀರ್ಘಾವಧಿಯ ಅನುಪಸ್ಥಿತಿಯು ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ರಾಜ್ಯದಲ್ಲಿ ಪಕ್ಷವು ಹಲವು ಸವಾಲುಗಳನ್ನು ಎದುರಿಸುತ್ತಿದೆ. ತಳಮಟ್ಟದಲ್ಲಿ ಸಂಘಟನೆಯನ್ನು ಭದ್ರಗೊಳಿಸುವುದು. ಜಿಲ್ಲಾ ಮಟ್ಟದ ನಾಯರಿಗೆ ಪಕ್ಷದಲ್ಲಿ ತಮ್ಮ ಪಾತ್ರವನ್ನು ಅರ್ಥೈಸುವುದು. ಉತ್ತರ ಪ್ರದೇಶದಲ್ಲಿ ಪಕ್ಷದ ಪ್ರಭಾವವನ್ನು ಹೆಚ್ಚಿಸುವುದು ಸೇರಿದಂತೆ ಕೆಲವು ಕಠಿಣ ಸವಾಲುಗಳಿವೆ” ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಪಂಚಾಯತಿ ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದ 2,000 ಸಿಬ್ಬಂದಿಗಳು ಸಾವು!
2019 ರ ಲೋಕಸಭಾ ಚುನಾವಣೆಯಲ್ಲಿ, ಲಲ್ಲು ಅವರು ಸೋನಿಯಾ ಗಾಂಧಿ ಸ್ಪರ್ಧಿಸಿದ್ದ ರಾಯ್ ಬರೇಲಿಯಲ್ಲಿ ಮತ್ತು ರಾಹುಲ್ ಗಾಂಧಿ ಸ್ಪರ್ಧಿಸಿದ್ದ ಅಮೇಥಿಯಲ್ಲಿ ಚುನಾವಣಾ ಉಸ್ತುವಾರಿಯನ್ನು ನೋಡಿಕೊಳ್ಳುವುದರ ಜೊತೆಗೆ ರಾಜ್ಯಾದ್ಯಂತ ಪಕ್ಷದ ಮೇಲ್ವಿಚಾರಣೆಯನ್ನು ನೋಡಿಕೊಳ್ಳಬೇಕಾಯಿತು.
ಇದು ಅವರಿಗೆ ಹೆಚ್ಚಿನ ಒತ್ತಡವನ್ನು ತಂದಿತ್ತು. ಮಾತ್ರವಲ್ಲದೆ, ಫಲಿತಾಂಶವು ನಿರಾಶಾದಾಯಕವಾಗಿತ್ತು: ಕಾಂಗ್ರೆಸ್ ತನ್ನ ಭದ್ರಕೋಟೆಯಾದ ಅಮೇಥಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸೋತಿತು. ರಾಯ್ ಬರೇಲಿಯಲ್ಲಿ ಮಾತ್ರ ಗೆದ್ದು, ಒಂದು ಸ್ಥಾನವನ್ನು ಉಳಿಸಿಕೊಂಡಿತು.
ಆದ್ದರಿಂದ, 2022ರ ಚುನಾವಣೆಯು ಪ್ರಿಯಾಂಕಾಗೆ ಮಹತ್ವವನ್ನು ನೀಡುತ್ತದೆ. ಇಂದಿನಿಂದ ರಾಜ್ಯದಲ್ಲಿ ಪ್ರಿಯಾಂಕ ಅವರ ಸಾಂಸ್ಥಿಕ ಕೌಶಲ್ಯ ಮತ್ತು ಮತದಾನದ ನಿರ್ವಹಣೆಯನ್ನು ಪರೀಕ್ಷಿಸುತ್ತದೆ. ಏಕೆಂದರೆ ಕೇಸರಿ ಪಾಳಯವನ್ನು ಎದುರಿಸಲು ಆಕೆಯ ಜನಪ್ರಿಯತೆ ಅಗತ್ಯಗತ್ಯವಾಗಿದೆ.
ಪ್ರಸ್ತುತ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಅತ್ಯಂತ ಕೆಳಮಟ್ಟದಲ್ಲಿದೆ. ಅದು ಕೇವಲ ಏಳು ಶಾಸಕರನ್ನು ಹೊಂದಿದೆ. ಅವರಲ್ಲೂ ಇಬ್ಬರು ಬಂಡಾಯಗಾರರಿದ್ದಾರೆ.
“ಕಳೆದ ಮೂರು ದಶಕಗಳಲ್ಲಿ, ಪಕ್ಷವು ಯುಪಿಯಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಂಡಿದೆ; ಪಕ್ಷದ ಸಂಘಟನೆ ನೆಲಕಚ್ಚಿದೆ. ತನ್ನ ನೆಲೆಯನ್ನು ಮರಳಿ ಪಡೆಯಲು ಪ್ರಿಯಾಂಕಾ ಹೆಚ್ಚಿನ ಶ್ರಮ ಹಾಕುವ ಅಗತ್ಯವಿದೆ. ಅವರು ಅದನ್ನು ಮಾಡಲು ಸಾಧ್ಯವಾಗುತ್ತದೆಯೇ ಎಂಬುದು ಒಂದು ಮುಖ್ಯ ಪ್ರಶ್ನೆಯಾಗಿದೆ”ಎಂದು ರಾಜಕೀಯ ವೀಕ್ಷಕರಾದ ಪ್ರೊಫೆಸರ್ ಎಕೆ ಮಿಶ್ರಾ ಹೇಳುತ್ತಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಯಾರೊಂದಿಗೂ ಮೈತ್ರಿ ಇಲ್ಲ; ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸುತ್ತದೆ: ಮಾಯಾವತಿ
ಪಕ್ಷವು 500 ಸದಸ್ಯರ ರಾಜ್ಯ ಕಾರ್ಯಕಾರಿ ಸಮಿತಿಯನ್ನು ಹೊಂದಿತ್ತು. ಪ್ರಿಯಾಂಕಾ ಆ ಸಂಖ್ಯೆಯನ್ನು 115 ಕ್ಕೆ ಇಳಿಸಿದರು. ಹಿಂದುಳಿದ ವರ್ಗಕ್ಕೆ ಸೇರಿದ ನಾಯಕ ಅಜಯ್ ಕುಮಾರ್ ಲಲ್ಲು ಅವರನ್ನು ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಈ 115ರಲ್ಲಿ ಶೇಕಡ 34 ರಷ್ಟು ಮೇಲ್ಜಾತಿಗಳು ಮತ್ತು ಹಿಂದುಳಿದವರು, ಶೇಕಡಾ 17 ರಷ್ಟು ಮುಸ್ಲಿಮರು ಮತ್ತು 12 % SC/ST ಮುಖಂಡರಿದ್ದಾರೆ.
ಈಗ ಯುಪಿಸಿಸಿ ಕಾರ್ಯಕಾರಿಣಿ 16 ಪ್ರಧಾನ ಕಾರ್ಯದರ್ಶಿಗಳು ಮತ್ತು ಆರು ಉಪಾಧ್ಯಕ್ಷರನ್ನು ಹೊಂದಿದೆ.
“ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ಸಕ್ರಿಯ ಕ್ರಮಕ್ಕೆ ತರಲು ರಾಜ್ಯ ಮಟ್ಟದಲ್ಲಿ ರಚನೆಯಾದ ವಿವಿಧ ಸಮಿತಿಗಳಲ್ಲಿ ಅನುಭವಿಗಳನ್ನು ನೇಮಿಸಲಾಗಿದೆ” ಎಂದು ಲಲ್ಲೂ ಹೇಳುತ್ತಾರೆ.
ಆದಾಗ್ಯೂ, ರಾಜ್ಯದಲ್ಲಿ ಚುನಾವಣಾ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಇನ್ನೂ ಗೊಂದಲವಿದೆ. ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರು ಮೈತ್ರಿಯ ವಿರುದ್ಧ ಇದ್ದರೂ, ಕಳೆದ ತಿಂಗಳು ನಡೆದ ಸಭೆಯಲ್ಲಿ ಆಯ್ಕೆಗಳನ್ನು ಮುಕ್ತವಾಗಿಡಬೇಕು ಎಂದು ಪ್ರಿಯಾಂಕಾ ಹೇಳಿದ್ದರು.
ಚುನಾವಣೆಗೆ 160-165 ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸುವುದರೊಂದಿಗೆ ಪಕ್ಷದ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ಹೇಳುತ್ತವೆ.
ಇದನ್ನೂ ಓದಿ: ಉತ್ತರ ಪ್ರದೇಶ ಸಿ-ವೋಟರ್ ಸಮೀಕ್ಷೆ: ಮತ್ತೆ ಅಧಿಕಾರ ಹಿಡಿಯಲಿದೆ ಬಿಜೆಪಿ; ಕಾಂಗ್ರೆಸ್ ಕಳಪೆ ಪ್ರದರ್ಶನ ಸಾಧ್ಯತೆ!

