ಫುಟ್ ಪಾತ್ ನಲ್ಲಿ ವಾಸಿಸುತ್ತಿದ್ದಾರೆ ಪಶ್ಚಿಮ ಬಂಗಾಳದ ಮಾಜಿ ಸಿಎಂನ ಅತ್ತಿಗೆ..!
ತೆಳ್ಳನೆಯ ಕೂದಲು, ಮಸುಕಾದ ನೀಲಿ ನೈಟ್‌ಗೌನ್‌ನಲ್ಲಿರುವ ಈ ಮಹಿಳೆ ಫುಟ್ ಪಾತ್ ಮೇಲೆ ಮಲಗುತ್ತಾಳೆ. ಬೀದಿ ವ್ಯಾಪಾರಿಗಳಿಂದ ಆಹಾರ ತೆಗೆದುಕೊಂಡು ಸೇವಿಸುತ್ತಾಳೆ. ಅಷ್ಟಕ್ಕೂ ಈಕೆ ಯಾರು ಅಂದರೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ಅತ್ತಿಗೆ. ಬುದ್ಧದೇವ್ ಭಟ್ಟಾಚಾರ್ಯ ಅವರು 10 ವರ್ಷಗಳಿಗಿಂತ ಹೆಚ್ಚು ಕಾಲ ಬಂಗಾಳ ಸರ್ಕಾರವನ್ನು ನಡೆಸಿದರು.
ಪಶ್ಚಿಮ ಬಂಗಾಳದ ಪ್ರಿಯನಾಥ ಬಾಲಕಿಯರ ಪ್ರೌಢಶಾಲೆಯಲ್ಲಿ ಈ ಹಿಂದೆ ಜೀವ ವಿಜ್ಞಾನ ಶಿಕ್ಷಕರಾಗಿದ್ದ ಇರಾ ಬಸು ಬುದ್ಧದೇವ್ ಭಟ್ಟಾಚಾರ್ಯರ ಪತ್ನಿ ಮೀರಾ ಅವರ ಸಹೋದರಿ. ಈಗ ಬಾರಾಬಜಾರ್ ಪ್ರದೇಶದ ಡನ್‌ಲಾಪ್‌ನ ಫುಟ್ ಪಾತ್ ಮೇಲೆ ಎರಡು ವರ್ಷಗಳಿಂದ ವಾಸಿಸುತ್ತಿದ್ದಾರೆ.
ಬುದ್ಧದೇವ್ ಭಟ್ಟಾಚಾರ್ಯ ಅವರ ಅತ್ತಿಗೆ ಇರಾ ಬಸು ವೈರಾಲಜಿಯಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಮಾತ್ರವಲ್ಲ ಇಂಗ್ಲಿಷ್ ಮತ್ತು ಬಂಗಾಳಿ ಎರಡನ್ನೂ ನಿರರ್ಗಳವಾಗಿ ಮಾತನಾಡಬಲ್ಲರು. ಅಷ್ಟೇ ಯಾಕೆ ಟೇಬಲ್ ಟೆನಿಸ್ ಮತ್ತು ಕ್ರಿಕೆಟ್ ನಲ್ಲಿ ರಾಜ್ಯಮಟ್ಟದ ಕ್ರೀಡಾಪಟುವಾಗಿದ್ದರು.
ಐರಾ ಬಸು ಯಾರು?
ಇರಾ ಬಸು 1976 ರಲ್ಲಿ ಜೀವನ ವಿಜ್ಞಾನ ಶಿಕ್ಷಕರಾಗಿ ಪ್ರಿಯನಾಥ ಬಾಲಕಿಯರ ಪ್ರೌಢಶಾಲೆಗೆ ಸೇರಿದರು. ಜೂನ್ 28, 2009 ರಂದು, ಅವರು ತಮ್ಮ ಕೆಲಸದಿಂದ ನಿವೃತ್ತರಾದರು. ಆಗಿನ್ನು ಬುದ್ಧದೇವ್ ಭಟ್ಟಾಚಾರ್ಯ ಇನ್ನೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದರು. ಆ ಸಮಯದಲ್ಲಿ ಇರಾ ಅವರು ಬಾರಾನಗರದಲ್ಲಿ ವಾಸಿಸುತ್ತಿದ್ದರು. ನಂತರ ಪಶ್ಚಿಮ ಬಂಗಾಳದ ಖರ್ದಾದಲ್ಲಿನ ಲಿಚು ಬಗಾನ್ ಪ್ರದೇಶಕ್ಕೆ ತೆರಳಿದರು. ಆದರೆ ಕೆಲ ದಿನಗಳ ನಂತರ ಇರಾ ಈ ವಿಳಾಸದಿಂದ ಇದ್ದಕ್ಕಿದ್ದಂತೆ ಕಣ್ಮರೆಯಾದರು. ಅದಾದ ಬಳಿಕ ಇರಾ ಅವರು ಕೊಲ್ಕತ್ತಾದಿಂದ ಬಹಳ ದೂರದಲ್ಲಿರುವ ಡನ್‌ಲಾಪ್‌ನ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಿಯನಾಥ ಶಾಲೆಯ ಮುಖ್ಯ ಪ್ರಾದ್ಯಾಪಕಿ ಕೃಷ್ಣಕಳಿ ಚಂದ, “ಇರಾ ಬಸು ಇಲ್ಲಿ ಕೆಲಸ ಮಾಡುತ್ತಿದ್ದರು. ಅವರ ನಿವೃತ್ತಿಯ ನಂತರ ನಾವು ಅವಳ ಪಿಂಚಣಿ ನೀಡಲು ಎಲ್ಲಾ ಪೇಪರ್‌ಗಳನ್ನು ಸಲ್ಲಿಸುವಂತೆ ಕೇಳಿದೆವು. ಆದರೆ ಅವರು ಪಿಂಚಣಿ ಪಡೆಯಲಿಲ್ಲ.
‘ನನಗೆ ವಿಐಪಿ ಐಡೆಂಟಿಟಿ ಬೇಡ’
ಶಿಕ್ಷಕರ ದಿನದಂದು ಅಂದರೆ ಈ ವರ್ಷ ಸೆಪ್ಟೆಂಬರ್ 5 ರಂದು ಇರಾ ಬಸು ಅವರನ್ನು ಡನ್ಲೋಪ್ ನಲ್ಲಿರುವ ‘ಆರ್ಟ್ಯಾಜಾನ್’ ಸಂಸ್ಥೆಯ ಸದಸ್ಯರು ಸನ್ಮಾನಿಸಿದರು. ಆಕೆಗೆ ಹಾರ ಹಾಕಿ ಸಿಹಿ ತಿನ್ನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಇರಾ ಅವರು, “ಎಲ್ಲಾ ಶಿಕ್ಷಕರು ಈಗಲೂ ನನ್ನನ್ನು ಪ್ರೀತಿಸುತ್ತಾರೆ ಮತ್ತು ಅನೇಕ ವಿದ್ಯಾರ್ಥಿಗಳು ನನ್ನನ್ನು ನೆನಪಿಸಿಕೊಳ್ಳುತ್ತಾರೆ. ಕೆಲವರು ನನ್ನನ್ನು ಅಪ್ಪಿಕೊಂಡಾಗ ಅಳುತ್ತಾರೆ” ಎಂದು ಸಂತಸ ವ್ಯಕ್ತಪಡಿಸಿದ್ದರು.
ಬುದ್ಧದೇವ್ ಭಟ್ಟಾಚಾರ್ಯರ ಕುಟುಂಬದೊಂದಿಗಿನ ಅವಳ ಸಂಬಂಧದ ಕುರಿತು ಮಾತನಾಡಿದ ಅವರು, “ನಾನು ಶಾಲಾ ಶಿಕ್ಷಕನಾಗಿ ನನ್ನ ವೃತ್ತಿಜೀವನವನ್ನು ಆರಂಭಿಸಿದಾಗ ನಾನು ಆತನಿಂದ ಯಾವುದೇ ಪ್ರಯೋಜನಗಳನ್ನು ಪಡೆಯಲು ಬಯಸಲಿಲ್ಲ. ನಾನು ಅದನ್ನು ನನ್ನ ಸ್ವಂತ ಸಾಮರ್ಥ್ಯದ ಮೇಲೆ ಮಾಡಿದ್ದೇನೆ. ನಾನು ವಿಐಪಿ ಗುರುತನ್ನು ಬಯಸುವುದಿಲ್ಲ, ಆದರೂ ಅನೇಕ ಜನರು ನಮ್ಮ ಕೌಟುಂಬಿಕ ಹಿನ್ನೆಲೆ ಬಗ್ಗೆ ತಿಳಿದುಕೊಂಡಿದ್ದಾರೆ” ಎಂದಿದ್ದರು.
ಮುಂದೆ ಏನು?
ಇರಾ ಬಸು ಅವರ ಪ್ರಸ್ತುತ ಜೀವನ ಪರಿಸ್ಥಿತಿಗಳ ಸುದ್ದಿಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಆಡಳಿತವು ಅವಳನ್ನು ಡನ್ಲೋಪ್ ಪ್ರದೇಶದಿಂದ ಬಾರಾನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲು ಖರ್ದಾ ಪುರಸಭೆಯಿಂದ ಆಂಬ್ಯುಲೆನ್ಸ್ ಅನ್ನು ಕಳುಹಿಸಿದ್ದು ಸದ್ಯ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಆಕೆಯನ್ನು ಕೋಲ್ಕತ್ತಾದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.