MICO FMSCI National Karting : ಬೆಂಗಳೂರಿನ ಮೂರು ರೇಸರ್‌ಗಳಿಗೆ ಪ್ರಶಸ್ತಿ!

ರೋಚಕ ಅಂತ್ಯಕಂಡ ಮೀಕೋ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರು ರೇಸರ್‌ಗಳು ಮೂರು ಪ್ರಶಸ್ತಿ ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದಾರೆ. ಹಿರಿಯರ ಎನ್‌ಸಿ ರೇಸಿಂಗ್ ಎಂಸ್ಪೋರ್ಟ್ ಎಕ್ಸ್‌೩೦ ಇಂಡಿಯಾ ಕ್ಲಾಸ್ ವಿಭಾಗದಲ್ಲಿ ರುಹಾನ್ ಆಳ್ವಾ ಪ್ರಶಸ್ತಿ ಗೆದ್ದರೆ, ಜೂನಿಯರ್ ವಿಭಾಗದಲ್ಲಿ ರೋಹನ್ ಮಾದೇಶ್ ಹಾಗೂ ಕೆಡೆಟ್(ಕಿರಿಯರ) ವಿಭಾಗದಲ್ಲಿ ನಿಖಿಲೇಶ್ ರಾಜು ಪೋಡಿಯಂನಲ್ಲಿ ಅಗ್ರಸ್ಥಾನ ಗಳಿಸಿದರು.

ಈ ಮೂವರಲ್ಲದೇ ಬೆಂಗಳೂರಿನ ಮತ್ತಿಬ್ಬರು ಯುವ ರೇಸರ್‌ಗಳು ಟ್ರೋಫಿ ಜಯಿಸಿದರು. ಹಿರಿಯರ ವಿಭಾಗದಲ್ಲಿ ನೈಜಲ್ ಥಾಮಸ್ ೨ನೇ ಸ್ಥಾನ ಪಡೆದರೆ, ಕೆಡೆಟ್ಸ್ ವಿಭಾಗದಲ್ಲಿ ಝಾರಾ ಮಿಶ್ರಾ ೩ನೇ ಸ್ಥಾನ ಪಡೆದರು.

೧೫ ವರ್ಷದ ರುಹಾನ್ ಆಳ್ವಾ (೧೬೭ ಅಂಕಗಳು) ಎಲ್ಲಾ ಐದೂ ಸುತ್ತುಗಳಲ್ಲಿ ಅತ್ಯಾಕರ್ಷಕ ಪ್ರದರ್ಶನ ತೋರಿ, ತಮ್ಮದೇ ಛಾಪು ಮೂಡಿಸಿದರು. ೨ನೇ, ೩ನೇ ಹಾಗೂ ೪ನೇ ಸುತ್ತುಗಳಲ್ಲಿ ನಡೆದ ಎಲ್ಲಾ ನಾಲ್ಕು ರೇಸ್‌ಗಳಲ್ಲಿ ಗೆಲ್ಲುವ ಮೂಲಕ ಪ್ರಶಸ್ತಿ ತಮ್ಮ ಕೈತಪ್ಪಿ ಹೋಗದಂತೆ ನೋಡಿಕೊಂಡರು.

ಅಂತಿಮ ಸುತ್ತಿನಲ್ಲೂ ರುಹಾನ್‌ಗೆ ಕೇವಲ ಒಮ್ಮೆ ಮಾತ್ರ ಹಿನ್ನಡೆ ಆಯಿತು. ಎರಡನೇ ರೇಸ್‌ನಲ್ಲಿ ಅವರು ೨ನೇ ಸ್ಥಾನ ಪಡೆದರು. ಆದರೆ ಆ ಹೊತ್ತಿಗಾಗಲೇ ಅವರು ಚಾಂಪಿಯನ್‌ಶಿಪ್ ಜಯಿಸಿದ್ದರು.

ಚಾಂಪಿಯನ್‌ಶಿಪ್‌ನಲ್ಲಿ ನೈಜಲ್ ಥಾಮಸ್(೧೨೦ ಅಂಕಗಳು) ಹಾಗೂ ಉಮಾಶಂಕರ್(೯೨), ರುಹಾನ್‌ರ ಹತ್ತಿರಕ್ಕೂ ಬರಲಿಲ್ಲ.
ಜೂನಿಯರ್ ವಿಭಾಗದಲ್ಲಿ ರೋಹನ್ ಮಾದೇಶ್(೧೪೬ ಅಂಕಗಳು) ಅವರಿಗೆ ಜಡೆನ್ ಪರಿಯತ್(೧೩೪ ಅಂಕಗಳು) ಹಾಗೂ ಕಿರಿಯ ಸಹೋದರ ಇಶಾನ್ (೧೩೦ ಅಂಕಗಳು) ಅವರಿಂದ ಕಠಿಣ ಸವಾಲು ಎದುರಾಯಿತು.

ಕೇವಲ ೫ ಅಂಕಗಳ ಮುನ್ನಡೆಯೊಂದಿಗೆ ಅಂತಿಮ ಸುತ್ತಿಗೆ ಕಾಲಿಟ್ಟ ರೋಹನ್, ಮನಮೋಹಕ ಪ್ರದರ್ಶನ ತೋರಿದರು. ೨ ಗೆಲುವು ಹಾಗೂ ಒಂದು ರೇಸ್‌ನಲ್ಲಿ ೨ನೇ ಸ್ಥಾನದೊಂದಿಗೆ ಅತ್ಯಮೂಲ್ಯ ೩೨ ಅಂಕಗಳನ್ನು ಗಳಿಸಿದರು. ಜಡೆನ್ ಕೇವಲ ೨೫ ಅಂಕಗಳನ್ನು ಗಳಿಸಿ ೨ನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಇಶಾನ್ ೩೪ ಅಂಕಗಳನ್ನು ಕಲೆಹಾಕಿದರೂ, ಒಟ್ಟಾರೆ ಅಂಕಗಳ ಪಟ್ಟಿಯಲ್ಲಿ ಮೇಲೇಳಲು ಸಾಧ್ಯವಾಗಲಿಲ್ಲ.

ಕೆಡೆಟ್(ಕಿರಿಯರ) ವಿಭಾಗದಲ್ಲಿ ರೋಚಕ ಪೈಪೋಟಿ ಏರ್ಪಟ್ಟಿತ್ತು. ೨ನೇ ಸ್ಥಾನ ಪಡೆದ ಅರಾಫತ್ ಶೇಖ್(೧೫೭ ಅಂಕಗಳು) ೫ನೇ ಹಾಗೂ ಅಂತಿಮ ಸುತ್ತಿನಲ್ಲಿ ಎಲ್ಲಾ ನಾಲ್ಕೂ ರೇಸ್‌ಗಳನ್ನು ಗೆದ್ದರು. ೪೦ ಅಂಕಗಳನ್ನು ಕಲೆಹಾಕಿದರೂ, ಒಟ್ಟಾರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದ ನಿಖಿಲೇಶ್(೧೬೭ ಅಂಕಗಳು) ಅವರನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. ಎಲ್ಲಾ ಸುತ್ತುಗಳಲ್ಲೂ ಸ್ಥಿರ ಪ್ರದರ್ಶನ ತೋರಿದ ನಿಖಿಲೇಶ್ ಚಾಂಪಿಯನ್ ಸ್ಥಾನ ಅಲಂಕರಿಸಿದರು.

ಅಂತಿಮ ಚಾಂಪಿಯನ್‌ಶಿಪ್ ಪಟ್ಟಿ
ಕೆಡೆಟ್ ವಿಭಾಗ: ೧.ನಿಖಿಲೇಶ್ ರಾಜು (ಬೆಂಗಳೂರು, ೧೬೭ ಅಂಕ), ೨. ಅರಾಫತ್ ಶೇಖ್(ಪುಣೆ, ೧೫೭ ಅಂಕ), ೩. ಝಾರಾ ಮಿಶ್ರಾ (ಬೆಂಗಳೂರು, ೭೬ ಅಂಕ)
ಜೂನಿಯರ್ ವಿಭಾಗ: ೧.ರೋಹನ್ ಮಾದೇಶ್(ಬೆಂಗಳೂರು, ೧೪೬ ಅಂಕ), ೨.ಜಡೆನ್ ಪರಿಯತ್(ಗುವಾಹಟಿ, ೧೩೪ ಅಂಕ), ೩.ಇಶಾನ್ ಮಾದೇಶ್(ಬೆಂಗಳೂರು ೧೩೦ ಅಂಕ)
ಹಿರಿಯರ ವಿಭಾಗ: ೧.ರುಹಾನ್ ಆಳ್ವಾ(ಬೆಂಗಳೂರು, ೧೯೦ ಅಂಕ), ೨.ನೈಜಲ್ ಥಾಮಸ್(ಬೆಂಗಳೂರು, ೧೨೦ ಅಂಕ), ೩.ನಿರ್ಮಲ್ ಉಮಾಶಂಕರ್(ಚೆನ್ನೈ)

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights