ಬೆಂಗಳೂರಿನ ಹಲವೆಡೆ ಭಾರಿ ಮಳೆ : ಬಹುತೇಕ ಮುಖ್ಯ ರಸ್ತೆಗಳು ಜಲಾವೃತ!
ಬೆಂಗಳೂರಿನ ಹಲವೆಡೆ ಭಾರಿ ಮಳೆಯಾಗುತ್ತಿದ್ದು ಅನಿರೀಕ್ಷಿತ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಇಂದು ಮಧ್ಯಾಹ್ನದಿಂದ ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆಯಾಗುತ್ತಿದ್ದು ಬಹುತೇಕ ಮುಖ್ಯ ರಸ್ತೆಗಳು ಜಲಾವೃತಗೊಂಡಿವೆ.
ಇಷ್ಟು ದಿನ ನಗರದಲ್ಲಿ ಬಿಸಿಲಿಗೆ ಹೈರಾಣಾಗಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಇಂದು ಮುಂಜಾನೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಆದರೆ ಈ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಯಾರಿಗೂ ಇರಲಿಲ್ಲ. ಆದರೆ ಏಕಾಏಕಿ ಸುರಿದ ಮಳೆಗೆ ಜನ ಹೈರಾಣಾಗಿದ್ದಾರೆ. ರಸ್ತೆಗಳು ಜಲಾವೃತವಾಗಿದ್ದು ಗುಂಡಿಗಳು ಕಾಣದೆ ವಾಹನ ಸಂಚಾರ ಕಷ್ಟಕರವಾಗಿದೆ.
ಬೈಯಪ್ಪನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಮೈಸೂರು ಸರ್ಕಲ್, ಗಾಂಧಿ ಬಜಾರ್, ಜಯನಗರ, ಕೆಆರ್ ಸರ್ಕಲ್ ನಲ್ಲಿ ಮಳೆಯ ಅರ್ಭಟ ಜೋರಾಗಿದೆ. ತಗ್ಗು ಪ್ರದೇಶದಲ್ಲಿ ನಿಲ್ಲಿಸಿದ್ದ ಆಟೋ, ಕಾರು ಜಲಾವೃತಗೊಂಡಿದ್ದು ವಾಹನ ಸವಾರರು ಪರದಾಡುವಂತಾಗಿದೆ.
ನಗರದ ಪ್ರಮುಖ ರಸ್ತೆಗಳು ರಸ್ತೆಗಳು ಜಲಾವೃತಗೊಂಡಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ. ಫ್ಲೈ ಓವರಗಳ ಕೆಳಗೆ ಐದು ಅಡಿ ನೀರು ನಿಂತುಕೊಂಡಿದೆ. ಇದರಿಂದ ವಾಹನ ವಾಹನ ಸಂಚಾರ ಕಷ್ಟವಾಗಿದೆ. ನಾಳೆ ಕೂಡ ಭಾರೀ ಮಳೆಯಾಗುವ ಮುನ್ಸೂಚನೆ ಹವಮಾನ ಇಲಾಖೆ ನೀಡಿದೆ.