ರಾಹುಲ್ ಮತ್ತು ಪ್ರಿಯಾಂಕಾ ಅನನುಭವಿಗಳು; ಅವರನ್ನು ಸಲಹೆಗಾರರು ದಾರಿ ತಪ್ಪಿಸುತ್ತಿದ್ದಾರೆ: ಅಮರೀಂದರ್ ಸಿಂಗ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಅನನುಭವಿಗಳು. ಅವರನ್ನು ಅವರ ಸಲಹೆಗಾರರು ದಾರಿತಪ್ಪಿಸುತ್ತಿದ್ದಾರೆ ಎಂದು ಪಂಜಾಬ್‌ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಪಕ್ಷದ ಆಂತರಿಕ ಭಿನ್ನಮತದಿಂದ ಅಮರೀಂದರ್‌ ಸಿಂಗ್‌ ಅವರು ಪಂಜಾಬ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಮತ್ತು ಅಮರೀಂದರ್‌ ಸಿಂಗ್‌ ಅವರ ನಡುವಿನ ಜಟಾಪಟಿ ಸಿಂಗ್‌ ಅವರ ರಾಜೀನಾಮೆಗೆ ಕಾರಣವಾಗಿತ್ತು. ಇದೀಗ ನೂತನ ಸಿಎಂ ಆಗಿ ಚರಣ್‌ಜಿತ್‌ ಸಿಂಗ್ ಚನ್ನಿ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ರಾಜೀನಾಮೆ ನೀಡಿದ ಬಳಿಕ ಪಕ್ಷದ ಹೈಕಮಾಂಡ್‌ ಬಗ್ಗೆ ಅಸಮಾಧಾನಗೊಂಡಿರುವ ಅಮರೀಂದರ್‌ ಸಿಂಗ್‌ ಸಂದರ್ಶನವೊಂದರಲ್ಲಿ, ಪ್ರಿಯಾಂಕಾ ಮತ್ತು ರಾಹುಲ್ ನನ್ನ ಮಕ್ಕಳಿದ್ದಂತೆ. ಪಂಜಾಬ್‌ನ ರಾಜಕೀಯ ವಿದ್ಯಾಮಾನ ಈ ರೀತಿ ಕೊನೆಗೊಳ್ಳಬಾರದಿತ್ತು. ನನಗೆ ನೋವಾಗಿದೆ. ರಾಹುಲ್ ಮತ್ತು ಪ್ರಿಯಾಂಕಾ ಅನನುಭವಿಗಳು. ಅವರ ಸಲಹೆಗಾರರು ಅವರನ್ನು ದಾರಿ ತಪ್ಪಿಸುತ್ತಿರುವುದು ಸ್ಪಷ್ಟ ಎಂದು ಹೇಳಿದ್ದಾರೆ.

ನಾನು ಶಾಸಕರನ್ನು ಗೋವಾ ಅಥವಾ ಬೇರೆ ಕಡೆಗೆ ವಿಮಾನದಲ್ಲಿ ಕರೆದುಕೊಂಡು ಹೋಗುತ್ತಿರಲಿಲ್ಲ. ಅದು ನಾನು ಕಾರ್ಯನಿರ್ವಹಿಸುವ ರೀತಿಯಲ್ಲ. ನಾನು ಗಿಮಿಕ್‌ಗಳನ್ನು ಮಾಡುವುದಿಲ್ಲ. ಇದು ಗಾಂಧಿ ಕುಟುಂಬದವರಿಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.

ನವಜೋತ್ ಸಿಂಗ್ ಸಿಧು ಅವರು 2022ರ ವಿಧಾನಸಭೆ ಚುನಾವಣೆಯ ನಂತರ ಪಂಜಾಬ್‌ ಸಿಎಂ ಆಗದಂತೆ ತಡೆಯಲು ಹೋರಾಡುತ್ತೇನೆ. ಅವರು ವಿರುದ್ದ ಮುಂದಿನ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇನೆ. ಅವರನ್ನು ಖಂಡಿತಾ ಸೋಲಿಸುತ್ತೇವೆ. ಅಂತಹ ಅಪಾಯಕಾರಿ ವ್ಯಕ್ತಿಯಿಂದ ದೇಶವನ್ನು ರಕ್ಷಿಸಲು ಯಾವುದೇ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ಅಮರೀಂದರ್ ಹೇಳಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಭರ್ಜರಿ ಗೆಲುವು ತಂದುಕೊಡಬೇಕು. ಆ ನಂತರ ಅಧಿಕಾರ ಬಿಟ್ಟುಕೊಡಲು ಮತ್ತು ಬೇರೆಯವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡಲು ನಾನು ಸಿದ್ಧ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಿಳಿಸಿದ್ದೆ. ಆದರೆ, ನಾನು ರಾಜೀನಾಮೆ ನೀಡಬೇಕು ಎಂದು ಪಕ್ಷದ ಹೈಕಮಾಂಡ್‌ ಸೂಚಿಸಿತು. ನನಗೆ ಅವಮಾನ ಮಾಡಲಾಯಿತು. ನನ್ನ ಮುಂದಿನ ಭವಿಷ್ಯವನ್ನು ನಿರ್ಧರಿಸುವ ಮುನ್ನ ಸ್ನೇಹಿತರೊಂದಿಗೆ ಚರ್ಚಿಸುತ್ತೇನೆ ಎಂದು ಅಮರೀಂದರ್ ತಿಳಿಸಿದ್ದಾರೆ.

ಇದನ್ನೂ ಓದಿ: ಸ್ನೇಹಿತೆಯನ್ನು ಭೇಟಿ ಮಾಡಿದ ಯುವಕ; ಯುವತಿಯಿಂದಲೇ ಸ್ನೇಹಿತನಿಗೆ ಹೊಡೆಸಿ ಹಲ್ಲೆ ಮಾಡಿದ ಬಜರಂಗದಳದ ಕಾರ್ಯಕರ್ತರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights