ರೋಹಿಣಿ ಕೋರ್ಟ್ ಶೂಟೌಟ್ ಪ್ರಕರಣ: ಇಬ್ಬರು ಆರೋಪಿಗಳ ಬಂಧನ!

ದೆಹಲಿಯ ರೋಹಿಣಿ ನ್ಯಾಯಾಲಯದೊಳಗೆ ನಡೆದ ಶೂಟೌಟ್‌ಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ರೋಹಿಣಿ ನ್ಯಾಯಾಲಯದೊಳಗೆ ನಡೆದ ಶೂಟೌಟ್‌ನಲ್ಲಿ ಗ್ಯಾಂಗ್ ಸ್ಟರ್ ಜಿತೇಂದರ್ ಗೋಗಿ ಸೇರಿದಂತೆ ಮೂವರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಉಮಂಗ್ ಯಾದವ್ ಮತ್ತು ವಿನಯ್ ಎಂದು ಗುರುತಿಸಲಾಗಿದೆ. ಈ ಇಬ್ಬರು ದಾಳಿಕೋರರು ಶೂಟೌಟ್‌ಗೆ ಎರಡು ದಿನಗಳ ಮೊದಲು ರೋಹಿಣಿ ನ್ಯಾಯಾಲಯದ ಆವರಣಕ್ಕೆ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ ಜಿತೇಂದರ್ ಗೋಗಿ ಯನ್ನು ಬಂಧಿಸಿ ತಿಹಾರ್ ಜೈಲಿನಲ್ಲಿಡಲಾಗಿತ್ತು. ಈತನ ವಿಚಾರಣೆಗೆಂದು ಶುಕ್ರವಾರ ದೆಹಲಿಯ ರೋಹಿಣಿ ಕೋರ್ಟ್ ಗೆ ಕರೆತಂದಾಗ ಗುಂಡಿನ ದಾಳಿ ನಡೆದಿದೆ. ವಕೀಲರಂತೆ ವೇಷಧರಿಸಿ ಕೋರ್ಟ್ ಆವರಣಕ್ಕೆ ಪ್ರವೇಶಿದಿದ ಕ್ರಿಮಿನಲ್ಸ್ ಪೊಲೀಸರ ಮೇಲೆ ದಾಳಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ಮಾಡಿದ್ದರು. ಘಟನೆಯಲ್ಲಿ ಜಿತೇಂದರ್ ಗೋಗಿ ಸಾವನ್ನಪ್ಪಿದ್ದಾನೆ. ಘಟನೆ ಬಳಿಕ ದಾಳಿಕೋರರು ಪರಾರಿಯಾಗಿದ್ದರು. ಸದ್ಯ ಪ್ರಕರಣದಲ್ಲಿ ಪರಾರಿಯಾಗಿದ್ದ ಇಬ್ಬರು ಕ್ರಿಮಿನಲ್ಸ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೂಲಗಳ ಪ್ರಕಾರ, ಜಿತೇಂದರ್ ಗೋಗಿಯನ್ನು ಕೊಲೆಗೈಯಲು ಕ್ರಿಮಿನಲ್ ಟಿಲ್ಲು ತಾಜಪುರಿಯ ಈ ಯೋಜನೆಯನ್ನು ರೂಪಿಸಿದ್ದನು. ಜೈಲಿನಿಂದ ಬಂದ ಕರೆಗಳ ಮೇಲೂ ಟಿಲ್ಲು ಆರೋಪಿಗಳಿಗೆ ಸೂಚನೆಗಳನ್ನು ನೀಡುತ್ತಿದ್ದ. ಇಬ್ಬರು ಶೂಟರ್‌ಗಳು ರೋಹಿಣಿ ನ್ಯಾಯಾಲಯದಿಂದ 3 ಕಿಮೀ ಸುತ್ತಮುತ್ತಲಿನ ದೆಹಲಿಯ ಹೈದರ್‌ಪುರ್ ಪ್ರದೇಶದ ಫ್ಲಾಟ್‌ನಲ್ಲಿ ತಂಗಿದ್ದರು. ಈ ಫ್ಲಾಟ್ ಉಮಂಗ್ ಯಾದವ್ ಅವರಿಗೆ ಸೇರಿದ್ದಾಗಿದೆ.

ವಿಚಾರಣೆಯ ಸಮಯದಲ್ಲಿ, ಉಮಂಗ್ ಯಾದವ್ ಅವರು ಕಳೆದ ಎರಡು ವರ್ಷಗಳಿಂದ ಟಿಲ್ಲಿಗಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇವರಿಬ್ಬರು ಟಿಲ್ಲು ವಿನ ಸಂಪರ್ಕದಲ್ಲಿದ್ದರು. ಜೊತೆಗೆ ಇವರಿಬ್ಬರಿಗೆ ಸಹಾಯ ಮಾಡಲು ಇನ್ನಿಬ್ಬರು ಹುಡುಗರು ಇದ್ದರು ಎನ್ನುವ ವಿಚಾರ ಬಯಲಾಗಿದೆ. ಟಿಲ್ಲು ಆತನ ಆಪ್ತ ಸಹಾಯಕರಾದ ಸುನಿಲ್ ರಾಥಿ ಮತ್ತು ನವೀನ್ ಬಾಲಿ ಎನ್ನುವ ಇತರ ಇಬ್ಬರನ್ನು ಗೋಗಿಯನ್ನು ಕೊಲ್ಲಲು ನೇಮಿಸಿಕೊಂಡಿದ್ದನು. ಇವರಿಬ್ಬರು ಆರೋಪಿ ಉಮಂಗ್ ಯಾದವ್ ಮತ್ತು ವಿನಯ್ ನನ್ನು ಗೋಗಿ ಹತ್ಯೆಗೆ ಬಳಸಿಕೊಂಡಿದ್ದಾರೆ.

ಪ್ರಸ್ತುತ ಬಾಗಪತ್ ಜೈಲಿನಲ್ಲಿರುವ ಟಿಲ್ಲು ತಾಜಪುರಿಯ ಸ್ನೇಹಿತ ಸುನೀಲ್ ರಾಥಿ ಶೂಟೌಟ್ ಕಾರ್ಯಗತಗೊಳಿಸಲು ರಾಘಿ ಅಲಿಯಾಸ್ ನಿತಿನ್ ಹಾಗೂ ಬಾಘ್‌ಪತ್‌ನ ದಾಳಿಕೋರರಲ್ಲಿ ಒಬ್ಬರನ್ನು ನೇಮಿಸಿಕೊಂಡಿದ್ದ. ಜೊತೆಗೆ ಟಿಲ್ಲಿ ಗ್ಯಾಂಗ್‌ಗೆ ಸೇರಿದ ದೆಹಲಿಯ ಇನ್ನೊಬ್ಬ ಅಪರಾಧಿ ನವೀನ್ ಬಾಲಿ ಶೂಟೌಟ್ ನಡೆಸಲು ಮತ್ತೊಬ್ಬ ಕ್ರಿಮಿನಲ್ ನನ್ನು ನೇಮಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಎರಡೂ ಗ್ಯಾಂಗ್​ಗಳ ನಡುವಿನ ಘರ್ಷಣೆಯೇ ಗೋಗಿ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಮಾತ್ರವಲ್ಲದೇ ಎರಡೂ ಗ್ಯಾಂಗ್​ಗಳ ನಡುವಿನ ಘರ್ಷಣೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದಾರೆ ಎಂದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ತಾನ ತಿಳಿಸಿದ್ದಾರೆ.

ಹಲವಾರು ಕ್ರಿಮಿನಲ್​ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಜಿತೇಂದರ್​ ಗೋಗಿ ಅನಾರೋಗ್ಯಕ್ಕೆ ಒಳಗಾಗಿದ್ದ. ಆತನನ್ನು ಶುಕ್ರವಾರ ನ್ಯಾಯಾಲಯಕ್ಕೆ ಕರೆತರುವ ವಿಷಯ ತಿಳಿಯುತ್ತಿದ್ದಂತೆ ಆತನ ವಿರೋಧಿ ಗುಂಪು ಆತನ ಮೇಲೆ ಹಲ್ಲೆಗೆ ಸಂಚು ರೂಪಿಸಿದೆ.

ದಾಳಿ ವೇಳೆ ಬಂಧಿತ ಆರೋಪಿ ಉಮಂಗ್ ಯಾದವ್ ವಕೀಲರಂತೆ ಸಮವಸ್ತ್ರ ಧರಿಸಿದ್ದನು. ಎನ್ಕೌಂಟರ್ ನಂತರ ಆರೋಪಿ ವಿನಯ್ ಮತ್ತು ಉಮಂಗ್ ಇಬ್ಬರು ಬಳಸಿದ್ದ ಬಟ್ಟೆ ಮತ್ತು ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಮಂಗ್ ಅವರು ಮೂರು ವರ್ಷಗಳ ಕಾಲ ಕಾನೂನು ಅಧ್ಯಯನ ಮಾಡಿದ್ದರಿಂದ ವಕೀಲರ ಸಮವಸ್ತ್ರವನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾನೆ.

ಸೆಪ್ಟೆಂಬರ್ 24 ರಂದು, ಈ ಇಬ್ಬರು ರೋಹಿಣಿ ನ್ಯಾಯಾಲಯದ ಸಮೀಪದ ಮಾಲ್‌ಗೆ ಬಂದು ವಕೀಲರ ಸಮವಸ್ತ್ರವನ್ನು ಬದಲಾಯಿಸಿದರು. ಗೋಗಿಯನ್ನು ಕೊಂದ ನಂತರ ಅವರು ಪಲಾಯನ ಮಾಡಲು ಯೋಜಿಸಿದ್ದರು, ಆದರೆ ಯೋಜನೆ ವಿಫಲವಾದಾಗ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಆರೋಪಿಗಳ ಪ್ರಕರಣದ ತನಿಖೆ ನಡೆಸುತ್ತಿರುವ ಅಪರಾಧ ವಿಭಾಗಕ್ಕೆ ಇವರನ್ನು ಹಸ್ತಾಂತರಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights