ದೆಹಲಿಯಲ್ಲಿ ಹೆಚ್ಚಿದ ಪ್ರತಿಭಟನಾ ಕಿಚ್ಚು : ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್!
ರೈತರ ಭಾರತ್ ಬಂದ್ ಕರೆಗೆ ಓಗೊಟ್ಟು ದೇಶದ ಹಲವೆಡೆ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರ ಪ್ರತಿಭಟನಾ ಕಿಚ್ಚು ಜೋರಾಗಿದ್ದು ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಕೋರಿ ದೀರ್ಘಕಾಲದ ಪ್ರತಿಭಟನೆಯ ಭಾಗವಾಗಿ ರೈತ ಸಂಘಟನೆಗಳು ಇಂದು “ಭಾರತ್ ಬಂದ್” ಗೆ ಕರೆ ನೀಡಿವೆ. ಹೀಗಾಗಿ ದೆಹಲಿಯ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಗುರುಗ್ರಾಮ-ದೆಹಲಿಯ ಪ್ರಮುಖ ರಸ್ತೆಯಲ್ಲಿ ಕಣ್ಣು ಹಾಯಿಸಿದೆಲ್ಲೆಲ್ಲಾ ಮಂದಗತಿಯಲ್ಲಿ ಸಾಗುತ್ತಿರುವ ಕಾರುಗಳು ಕಾಣ ಸಿಗುತ್ತಿವೆ. ಸಾವಿರಾರು ಕಾರುಗಳು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ವಾಹನ ಸವಾರರು ಪರದಾಡುತ್ತಿದ್ದಾರೆ.
ಪ್ರತಿಭಟನಾ ಕಿಚ್ಚು ಹೆಚ್ಚಾಗಿದ್ದು ಉತ್ತರ ಪ್ರದೇಶದಿಂದ ದೆಹಲಿ, ಹರಿಯಾಣದಿಂದ ದೆಹಲಿಗೆ ರಸ್ತೆ ಬಂದ್ ಮಾಡಲಾಗಿದೆ. ಹೀಗಾಗಿ ಕಿಲೋಮಿಟರ್ ಗಟ್ಟಲೇ ವಾಹನಗಳು ನಿಂತಿವೆ. ಹರಿಯಾಣದಿಂದ ಗುರುಗ್ರಾಮಕ್ಕೆ ಕೆಲಸಕ್ಕೆ ಬರುವಂತವರಿಗೆ ಹೋಗುವಂತರಿಗೆ ಸಾಕಷ್ಟು ಸಮಸ್ಯೆ ಆಗಿದೆ.
ಮಾತ್ರವಲ್ಲದೆ ನೊಯ್ಡಾದಿಂದ ದೆಹಲಿಗೆ ಬರುವಂತವರಿಗೆ ತುಂಬಾನೇ ತೊಂದರೆ ಆಗಿದೆ. ಸಂಜೆ ನಾಲ್ಕು ಗಂಟೆಗಳ ವರೆಗೆ ಇದೇ ರೀತಿ ಸಂಚಾರ ಅಸ್ಥವ್ಯಸ್ಥವಾಗುತ್ತದೆ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಹೀಗಾಗಿ ಪೊಲೀಸರು ಸಂಚಾರ ದಟ್ಟಣೆ ತಪ್ಪಿಸಲು ಹರಸಾಹಸ ಪಡುತ್ತಿದ್ದಾರೆ.
ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ.