ಮೈಸೂರಿನಲ್ಲಿ ಅನ್ನದಾತದಿಂದ ಬಸ್ ಸಂಚಾರಕ್ಕೆ ಅಡ್ಡಿ : ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ..!
ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಇಂದು ದೇಶದೆಲ್ಲಡೆ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಒಂದು ವರ್ಷದ ರೈತರ ಪ್ರತಿಭಟನೆಯ ಭಾಗವಾಗಿ ಇಂದು ‘ಭಾರತ್ ಬಂದ್’ಗೆ ಕರೆ ನೀಡಲಾಗಿದೆ. ಇದಕ್ಕೆ ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನ್ನದಾತರು ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದು ಮೈಸೂರಿನಲ್ಲಿ ಬಸ್ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿ ಪ್ರತಿಭಟನೆ ಮಾಡಲಾಗುತ್ತಿದೆ.
ಹಿರಿಯ ರೈತ ಮುಖಂಡ ಕುರುಬೂರು ಶಾಂತ್ ಕುಮಾರ್ ನೇತೃತ್ವದಲ್ಲಿ ಸಾಂಸ್ಕೃತ ನಗರಿ ಮೈಸೂರಿನಲ್ಲಿ ರೈತರು ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಲಾಗುತ್ತಿದೆ. ಜಿಲ್ಲಾಡಳಿತ ಕಚೇರಿ ಕಡೆಗೆ ಮೆರವಣಿಗೆ ಸಾಗಿದ್ದು ಬಸ್ ಮುಂಭಾಗ ಕುಳಿತು ಬಸ್ ಗಳನ್ನು ವಾಪಸ್ಸ್ ಕಳಿಸಿ ಆಕ್ರೋಶ ಹೊರಹಾಕಿದ್ದಾರೆ. ಮೈಸೂರಿನಲ್ಲಿ ಕೇಂದ್ರಿಯ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಮಲಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ.
ಹೀಗಾಗಿ ಸಿಟಿ ಬಸ್ ನಿಲ್ದಾಣದ ಒಳಗೆ ಸದ್ಯಕ್ಕೆ ಯಾವುದೇ ಬಸ್ ಗಳ ಪ್ರವೇಶಕ್ಕೆ ಅವಕಾಶ ನಿಡಲಾಗುತ್ತಿಲ್ಲ. ಸಿಟಿ ಬಸ್ ನಿಲ್ದಾಣದ ಹೊರ ಭಾಗದಿಂದಲೇ ಬಸ್ ಗಳು ಸಂಚರಿಸುತ್ತಿವೆ.
ನೂರಾರು ರೈತರು ಮೈಸೂರು ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ಧಾರೆ. ಭಾರತ್ ಬಂದ್ ಹಿನ್ನಲೆ ಸರಿಸುಮಾರು ಅರ್ಧ ತಾಸುಗಳ ಕಾಲ ರಸ್ತೆ ತಡೆ ನಡೆಸಿದರು.
ಭಾರತ್ ಬಂದ್ ಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೈಸೂರಿನಲ್ಲಿ ಸಾರಿಗೆ ಸಂಚಾರ, ಆಟೋ, ಟ್ಯಾಕ್ಸಿ ಸೇರಿದಂತೆ ಇತರೆ ವಾಹನ ಸಂಚಾರ ಎಂದಿನಂತೆ ಸಾಗಿದೆ. ವ್ಯಾಪಾರ ವಹಿವಾಟು ಕೂಡ ಎಂದಿನಂತೆ ಆರಂಭವಾಗಿದೆ. ಈಗಾಗಲೇ ಕೊರೊನಾದಿಂದ ತತ್ತರಿಸಿ ಆರ್ಥಿಕ ಸಂಕಷ್ಟದಲ್ಲಿ ಇರುವ ಜನರಿಂದ ಭಾರತ್ ಬಂದ್ ಗೆ ಬೆಂಬಲವನ್ನು ನೀಡಿಲ್ಲ.