ರೈತರ ತಲೆ ಒಡೆಯಿರಿ ಎಂದ IAS ಅಧಿಕಾರಿ ವಿರುದ್ದ ಕ್ರಮಕ್ಕೆ ಹಾಗೂ ಸಾವನ್ನಪ್ಪಿದ ರೈತರ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರಕ್ಕೆ ರೈತರ ಒತ್ತಾಯ!
ಕಳೆದ ಶನಿವಾರ ಬಿಜೆಪಿ ಸಭೆಯ ವಿರುದ್ದ ಪ್ರತಿಭಟನೆ ನಡೆಸಿದ ಹರಿಯಾಣದ ರೈತರ ಮೇಲೆ ಕರ್ನಾಲ್‌ನಲ್ಲಿ ಮಾರಣಾಂತಿಕ ಲಾಠಿ ಚಾರ್ಜ್ ನಡೆಸಲಾಗಿತ್ತು. ರೈತರ ಮೇಲೆ ಪೊಲೀಸರು ಎಸಗಿದ ದೌರ್ಜನ್ಯದ ಬಗ್ಗೆ ರೈತ ಸಂಘಟನೆ ನಡೆಸಿದ್ದು, ಪೊಲೀಸರು ಮತ್ತು ಹಲ್ಲೆಗೆ ಆದೇಶಿಸಿದ ಅಧಿಕಾರಿ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ.
ಹಲ್ಲೆಗೆ ಆದೇಶ ನೀಡಿದ್ದ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆಗಿರುವ ಆಯುಷ್ ಸಿನ್ಹಾ ಮತ್ತು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಮಾರಣಾಂತಿಕ ಹಲ್ಲೆಯಲ್ಲಿ ಗಾಯಗಳಿಂದ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಹರಿಯಾಣದ ರೈತ ಸಂಘಟನೆಗಳು ಒತ್ತಾಯಿಸಿವೆ.
ಸೋಮವಾರ ಕರ್ನಾಲ್‌ನಲ್ಲಿ ಸಭೆ ನಡೆಸಿದ ಹರಿಯಾಣ ರೈತ ಸಂಘಟನೆಗಳು, ತಮ್ಮ ಬೇಡಿಕೆಗಳನ್ನು ಸೆಪ್ಟೆಂಬರ್ 6 ರ ಒಳಗೆ ಈಡೇರಿಸದಿದ್ದಲ್ಲಿ ಕರ್ನಾಲ್ ಮಿನಿ-ಸೆಕ್ರೆಟರಿಯೇಟ್‌ಗೆ (Karnal mini-Secretariat) ಅನಿರ್ದಿಷ್ಟಾವಧಿ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿವೆ.
ಇದನ್ನೂ ಓದಿ: ಬಿಜೆಪಿ ಸಭೆಯ ವಿರುದ್ದ ರೈತರ ಪ್ರತಿಭಟನೆ; ಹೆದ್ದಾರಿಯಲ್ಲಿ ರೈತರ ಮೇಲೆ ಲಾಠಿ ಚಾರ್ಜ್; ಹಲವರಿಗೆ ಗಾಯ!
ಭಾರತೀಯ ಕಿಸಾನ್ ಯೂನಿಯನ್ (ಚಾರುಣಿ) ಅಧ್ಯಕ್ಷ ಗುರ್ನಾಮ್ ಸಿಂಗ್ ಚಾರುಣಿ, ಸರ್ಕಾರವು ಶಾಂತಿಯುತ ಪ್ರತಿಭಟನೆಗಳನ್ನು ನಡೆಸುತ್ತಿರುವ ರೈತರ ಮೇಲೆ ಹಿಂಸಾಚಾರವನ್ನು ಎಸಗಿದೆ. ಘಟನೆಯಲ್ಲಿ 11 ಜನರಿಗೆ ಗಂಭೀರ ಗಾಯಗಳಾಗಿದ್ದು, 40ಕ್ಕೂ ಹೆಚ್ಚು ರೈತರಿಗೆ ಗಾಯಗಳಾಗಿವೆ. ಹಲ್ಲೆಯಿಂದಾ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿರುವ ಸುಶೀಲ್ ಕಾಜಲ್ ಅವರ ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಸಂಘಟನೆ ಆಗ್ರಹಿಸಿದೆ. ಜೊತೆಗೆ ಗಾಯಗೊಂಡಿರುವ ರೈತರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನಿಡಬೇಕು ಎಂದಿದೆ.
ರೈತ ಸಂಘಗಳ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಪತ್ರಿಕಾ ಹೇಳಿಕೆಯಲ್ಲಿ, “ಮನೋಹರ್ ಲಾಲ್ ಖಟ್ಟರ್ ಸರ್ಕಾರವು ಲಾಠಿಚಾರ್ಜ್‌ಗೆ ಆದೇಶಿಸಿದ ಅಧಿಕಾರಿಯನ್ನು ತಕ್ಷಣವೇ ವಜಾಗೊಳಿಸದಿದ್ದರೆ, ಆತನ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಆ ಅಧಿಕಾರಿ ಬೇರೆಡೆಯಿಂದ ಬಂದ ಸೂಚನೆಗಳ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಯಬೇಕಾಗುತ್ತದೆ” ಎಂದು ಹರಿಯಾಣ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಕಳೆದ ಶನಿವಾರ “ಇದು ತುಂಬಾ ಸರಳ ಮತ್ತು ಸ್ಪಷ್ಟವಾಗಿದೆ. ಅವರು ಯಾರಾದರೂ ಆಗಿರಲಿ, ಎಲ್ಲಿಂದ ಬಂದಿರಲಾಗಿರಲಿ ಯಾರೊಬ್ಬರೂ ಬ್ಯಾರಿಕೇಡ್‌ನಿಂದ ಮುಂದೆ ಹೋಗಬಾರದು. ಒಂದು ವೇಳೆ ಬಂದರೆ ಅವರ ಬುರುಡೆಯನ್ನು ಒಡೆಯಿರಿ. ಯಾವುದೇ ಸೂಚನೆ ಅಥವಾ ನಿರ್ದೇಶನದ ಅಗತ್ಯವಿಲ್ಲ. ನಮ್ಮಲ್ಲಿ ಸಾಕಷ್ಟು ಪೊಲೀಸ್ ಪಡೆಯಿದೆ” ಎಂದು ಕರ್ನಾಲ್‌ನಲ್ಲಿ ಪ್ರತಿಭಟನಾ ನಿರತ ರೈತರನ್ನು ನಿಭಾಯಿಸಲು ನಿಯೋಜಿಸಲಾದ ಪೊಲೀಸರಿಗೆ ಆಯುಷ್ ಸಿನ್ಹಾ ಹೇಳಿದ್ದರು.
ಇದನ್ನೂ ಓದಿ: ಯೋಗಿ ನಿಮ್ಮ ಚರ್ಮ ಸುಲಿದು ಗೋಡೆಗೆ ಅಂಟಿಸುತ್ತಾರೆ; ಬಿಜೆಪಿಯಿಂದ ರೈತರಿಗೆ ಬಹಿರಂಗ ಬೆದರಿಕೆ!