ಪುರುಷ ಪ್ರಧಾನತೆಗೆ ಬ್ರೇಕ್: ಈ ವರ್ಷ ಕಂಬಳ ಓಟದಲ್ಲಿ ಸ್ಪರ್ಧಿಸಲಿದ್ದಾರೆ ಐವರು ಯುವತಿಯರು!
ಪುರುಷರಿಗಿಂತ ನಾವೇನೂ ಕಮ್ಮಿ ಇಲ್ಲ, ನಾವೂ ಸಮಾನರೇ ಎಂದು ಹೆಣ್ಣು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಬೀತು ಪಡಿಸುತ್ತಿದ್ಧಾರೆ. ಅಂತದ್ದೇ, ಮತ್ತೊಂದು ಕ್ಷೇತ್ರಕ್ಕೆ ಹೆಣ್ಣು ಮಕ್ಕಳು ಕಾಲಿಟ್ಟಿದ್ದಾರೆ. ಪುರುಷ ಪ್ರಧಾನ ಕ್ರೀಡೆಯಾಗಿ ಉಳಿದಿರುವ, ಕಂಬಳ ಓಟದಲ್ಲಿ ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯ ಐವರು ಯುವತಿಯರು ಭಾಗವಹಿಸಲಿದ್ದಾರೆ. ಅದಕ್ಕಾಗಿ, ಹೈ-ಅಡ್ರಿನಾಲಿನ್ ದೈಹಿಕ ಸಾಮರ್ಥ್ಯವನ್ನು ಬೆಳಸಿಕೊಳ್ಳಲು ತರಬೇತಿ ಪಡೆಯುತ್ತಿದ್ದಾರೆ.
ಕಂಬಳ ಓಟದಲ್ಲಿರುವ ಪುರುಷ ಪ್ರಧಾನತೆಯ ಸಂಪ್ರದಾಯವನ್ನು ಮುರಿದು, ಕಂಬಳ ಅಕಾಡೆಮಿ ಅವರಿಗೆ ಕಂಬಳ ಜಾಕಿಗಳಾಗಲು ಅವಕಾಶ ಮಾಡಿಕೊಟ್ಟಿದೆ. ಅವರು ತಮ್ಮ ಕೋಣಗಳನ್ನು ಕೆಸರು ತುಂಬಿದ ಪಥದಲ್ಲಿ ಓಡಿಸಲಿದ್ದಾರೆ. ಪ್ರತಿದಿನ ಪುರುಷರಿಗೆ ತರಬೇತಿ ಮುಗಿದ ನಂತರ, ಈ ಐದು ಯುವತಿಯರಿಗೆ ಪ್ರತ್ಯೇಕ ಸೆಷನ್‌ಗಳನ್ನು ನಡೆಸಲಾಗುತ್ತಿದೆ.
“ನಾನು ಮಹಿಳೆಯರನ್ನು ಸೇರಿಸಿಕೊಳ್ಳಲು ನಿರ್ಧರಿಸಿದಾಗ ನನಗೆ ಬೆದರಿಕೆ ಬಂತು. ಮಹಿಳೆಯರಿಗೆ ಆಸಕ್ತಿ ಇದ್ದಾಗ ನಾವೇಕೆ ಅವರಿಗೆ ಅವಕಾಶಗಳನ್ನು ನೀಡಬಾರದು? ಅವರ ಪೋಷಕರು ಕೂಡ ಒಪ್ಪಿಕೊಂಡಿದ್ದಾರೆ. ಅವರಿಗೆ ಕನಿಷ್ಠ ಐದು ದಿನಗಳವರೆಗೆ ತರಬೇತಿ ನೀಡಲಾಗುತ್ತದೆ ಮತ್ತು ಅವರು ತಮ್ಮ ಮನೆಗಳಲ್ಲಿ ಬೆಳೆದ ಕೋಣಗಳೊಂದಿಗೆ ಭಾಗವಹಿಸುತ್ತಾರೆ” ಎಂದು ಕಂಬಳ ಸಂರಕ್ಷಣೆ, ಮಾನಿಟರಿಂಗ್ ಮತ್ತು ತರಬೇತಿ ಅಕಾಡೆಮಿಯ ಸಂಚಾಲಕ ಗುಣಪಾಲ್ ಹೇಳಿದ್ದಾರೆ.
ವಿರೋಧದ ಹೊರತಾಗಿಯೂ, ಈ ವರ್ಷ ಮೂಡಬಿದ್ರಿಯಲ್ಲಿ ಈ ಹುಡುಗಿಯರಿಗಾಗಿ ನಾವು ವಿಶೇಷ ಕಂಬಳವನ್ನು ನಡೆಸುತ್ತೇವೆ. ಮುಂದಿನ ದಿನಗಳಲ್ಲಿ, ಹೆಚ್ಚಿನ ಮಹಿಳೆಯರು ಮುಂದೆ ಬರುತ್ತಾರೆ. ಈಗಾಗಲೇ ಯಕ್ಷಗಾನದಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗಿದ್ದು, ಇದು ದೀರ್ಘಕಾಲದವರೆಗೆ ಪುರುಷ ಮಾತ್ರವೇ ಸೀಮಿತವಾಗಿತ್ತು ಎಂದು ಅವರು ಹೇಳಿದ್ದಾರೆ.
ಕಂಬಳ ತರಬೇತಿ ಅಕ್ಟೋಬರ್ 10 ರಂದು ಮುಗಿಯಲಿದೆ
ಈಗಾಗಲೇ, ಕುಂದಾಪುರದ ಹುಡುಗಿ ಚೈತ್ರಾ ಪರಮೇಶ್ವರ್ ಭಟ್ ಕಳೆದ ವರ್ಷ ತನ್ನ ಜೋಡಿ ಕೋಣಗಳೊಂದಿಗೆ ಮಿಯಾರ್‌ನಲ್ಲಿ ಕಾಣಿಸಿಕೊಂಡಿದ್ದರು. ಆಕೆ, ಈಗಾಗಲೇ ಕಂಬಳ ಟ್ರ್ಯಾಕ್‌ಗೆ ಪ್ರವೇಶಿಸಿದ್ದಾಳೆ. ಈ ಸಮಯದಲ್ಲಿ ಇತರ ನಾಲ್ಕು ಹುಡುಗಿಯರು ಸಹ ಭಾಗವಹಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಅಕಾಡೆಮಿಯಿಂದ 15 ದಿನಗಳ ತರಬೇತಿ ಕಾರ್ಯಕ್ರಮಕ್ಕೆ 18 ರಿಂದ 20 ವರ್ಷದೊಳಗಿನ 33 ಪುರುಷ ಜಾಕಿಗಳನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ಸೆಪ್ಟೆಂಬರ್ 19 ರಿಂದ ತರಬೇತಿಯನ್ನು ಆರಂಭಿಸಲಾಗಿದೆ. ಈ ತರಬೇತಿ ಅಕ್ಟೋಬರ್ 10 ರಂದು ಪೂರ್ಣಗೊಳ್ಳುತ್ತದೆ.
ಈಗಾಗಲೆ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಕೃಷಿ, ಐಟಿ, ತಂತ್ರಜ್ಞಾನ, ವಿಜ್ಞಾನ, ಕ್ರೀಡೆ, ಸೇನೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಾವು ಭಾಗವಹಿಸಲ್ಲರು, ಸ್ಪರ್ಧಿಸಬಲ್ಲರು, ದುಡಿಯಬಲ್ಲರು ಎಂಬುದನ್ನು ತೋರಿಸಿದ್ದಾರೆ. ಆದರೂ, ಇನ್ನೂ ಹಲವು ಕ್ಷೇತ್ರಗಳು ಮಹಿಳೆಯರನ್ನು ಹೊರಗಿಟ್ಟಿವೆ. ಆ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಳ್ಳುವ ಸಾಮರ್ಥ್ಯ ಮಹಿಳೆಯರಲ್ಲಿದೆ. ಅವರು, ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸಬೇಕು. ಇಂದು ಕಂಬಳದಲ್ಲಿ ಐವರು ಯುವತಿಯರು ಭಾಗವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಸಂಖ್ಯೆಗೆ ಹಿಗ್ಗಬೇಕು ಎಂಬುದು ನಮ್ಮ ಆಶಯ.
ಇದನ್ನೂ ಓದಿ: ಸಿಂದಗಿ, ಹಾನಗಲ್ ಗೆಲ್ಲಲು ಬಿಎಸ್‌ವೈ ಆಶ್ರಯಿಸಿದೆ ಬಿಜೆಪಿ!