Fact check: ಉಡುಪಿ ಕಾಲೇಜಿನಲ್ಲಿ ಕೇಸರಿ ಶಾಲು, ಪೇಟ ಹಂಚಿದ್ದು ಮುಸ್ಲಿಮರಲ್ಲ, ಹಿಂದುತ್ವವಾದಿಗಳು

“ಶಿವಮೊಗ್ಗಾದಲ್ಲಿ ಮುಸ್ಲಿಂ ಹುಡುಗರು ಕೇಸರಿ ಪೇಟ, ಶಾಲು ಧರಿಸಿ, ಕಲ್ಲುತೂರಾಟ, ಗಾಜು ಒಡೆಯುವುದು ಇತ್ಯಾದಿ ಕಿಡಿಗೇಡಿತನ ಮಾಡಿ ಹಿಂದು ಹುಡುಗರ ತಲೆಗೆ ಕಟ್ಟುವ ಕೆಲಸ ಮಾಡಿದ್ದಾರೆ” ಎಂಬ ಹೇಳಿಕೆ ಇರುವ ವಿಡಿಯೊವನ್ನು ಸಾಮಾಜಿಕ ಮಾದ್ಯಮಗಳಲ್ಲಿ  ಕೋಮುವಾದದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಹಿಂದೂ ಮತ್ತು  ಮುಸ್ಲಿಂ ಧರ್ಮಗಳ ನಡುವಿನ ಘರ್ಷಣೆಗೆ ಕಾರಣವಾಗಿದ್ದು ಸದ್ಯ ವಿವಾದ ನ್ಯಾಯಾಲಯದಲ್ಲಿದೆ.

ಆದರೂ ಈ ವಿವಾದದ ಸಂದರ್ಭವನ್ನೆ ಬಳಸಿಕೊಂಡು ಕೆಲವರು ಪ್ರಚೋದನಾಕಾರಿ  ಮತ್ತು ಅವಹೇಳನಾಕಾರಿ ಸಂದೇಶಗಳನ್ನು ಜೊತೆ ಜೊತೆಗೆ ಇದೆಲ್ಲವೂ ಮುಸ್ಲಿಮರ ಸಂಚು ಎಂಬ ಸಂದೇಶಗಳನ್ನು ವಾಟ್ಸಪ್ ಗುಂಪು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಳ್ಳುತ್ತ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದ್ದಾರೆ. ಹಾಗಾಗಿ ಸದ್ಯ ವೈರಲ್ ಆಗುತ್ತಿರುವ ಪೋಸ್ಟ್‌ಗಳಲ್ಲಿ ಪ್ರತಿಪಾದನೆಯ ಸತ್ಯಾಸತ್ಯಗಳನ್ನು ಪರಿಶೀಲಿಸೋಣ.

ಫೇಸ್‌ಬುಕ್‌ನಲ್ಲಿ ಮುಸ್ಲಿಂ ವಿರುದ್ದ ಮಾಡುತ್ತಿರುವ ಪೊಸ್ಟ್

 

 

ಶಿವಮೊಗ್ಗದಲ್ಲಿ ನಡೆದಿದ್ದೇನು ? ಫ್ಯಾಕ್ಟ್‌ಚೆಕ್:

2022 ಜನವರಿ 7 ರಂದು ಶಿವಮೊಗ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಧ್ವಜಸ್ತಂಭಕ್ಕೆ ತ್ರಿವರ್ಣ ದ್ವಜಕ್ಕೆ ಬದಲಾಗಿ ಕೇಸರಿ ಧ್ವಜ ಹಾರಿಸಿದ್ದು ಬಾರಿ ವಿವಾದವಾಗಿತ್ತು. ಪೊಲೀಸರು ಕೆಲವು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಘಟನೆಯೂ ನಡೆದಿತ್ತು. ಹಿಜಾಬ್-ಕೇಸರಿಶಾಲು ವಿವಾದವನ್ನೇ ನೆಪವಾಗಿ ಇರಿಸಿಕೊಂಡು ಶಿವಮೊಗ್ಗದ ಹಲವೆಡೆ ಪುಂಡರು ಕಲ್ಲುತೂರಾಟ ನಡೆಸಿದ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಸಿಆರ್​ಪಿಸಿ 144ರ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ನಾಗರಾಜ್ ಆದೇಶ ಮಾಡಿದ್ದರು. ಇಷ್ಟೂ ಘಟನೆ ಶಿವಮೊಗ್ಗಕ್ಕೆ ಸಂಬಂಧಿಸಿದ್ದು.

ಶಿವಮೊಗ್ಗದ ಕಾಲೇಜಿನಲ್ಲಿ ನಡೆದ ಘಟನೆಗೆ ಈಶ್ವರಪ್ಪ ಪ್ರತಿಕ್ರಿಯಿಸಿದ್ದು ಕೇಸರಿ ಭಗವಾದ್ವಜ ವನ್ನು ರಾಷ್ಟ್ರದ್ವಜ ಮಾಡುತ್ತೇವೆ ಎಂದಿದ್ದಾರೆ, ಹಾಗಾಗಿ ಇದು ಯಾವ ರಾಷ್ಟ್ರ ಪ್ರೇಮ, ಇದು RSS ಪ್ರೇಮವಿರಬೇಕೆಂದು ಪ್ರಶ್ನಿಸುತ್ತಿದ್ದಾರೆ ರಾಜ್ಯದ ಜನ..

ಈ ವಿಡಿಯೋಗಳನ್ನು ಗಮನಿಸಿ ಶಿವಮೊಗ್ಗದಲ್ಲಿ ಈ ಘಟನೆ ವೇಳೆ ವಿದ್ಯಾರ್ಥಿಗಳು ಕೇಶರಿ ಶಾಲನ್ನು ಮಾತ್ರ ಹಾಕಿದ್ದು ಕೇಸರಿ ಪೇಟ ಧರಿಸಿಲ್ಲ. ಆದರೆ ಶೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೊದಲ್ಲಿ ಶಿವಮೊಗ್ಗದ ಮುಸ್ಲಿಂ ಯುವಕರು ಕೇಸರಿ ಪೇಟ ಹಂಚುತ್ತಿದ್ದಾರೆ ಎಂಬ ಹೇಳಿಕೆ ಇದೆ. ಹಾಗಾದರೆ ಕೇಸರಿ ಪೇಟವನ್ನು ಶಿವಮೊಗ್ಗದಲ್ಲಿ ಹಂಚಿಲ್ಲವೆಂದಾದರೆ ಬೇರೆಲ್ಲಿ ಹಂಚಿದ್ದಾರೆ? ಅದನ್ನು ಹಂಚಿದವರು ನಿಜವಾಗಿಯೂ ಮುಸ್ಲಿಮರ?

ಕೇಸರಿ ಪೇಟ ಮತ್ತು ಕೇಸರಿ ಶಾಲು ಹಂಚಿರುವ ವಿಡಿಯೋ ಶಿವಮೊಗ್ಗದಲ್ಲ, ಉಡುಪಿಯದ್ದು

ಈ ವಿವಾದ ಸೃಷ್ಟಿಯಾದಾಗಿನಿಂದ ಕೇಸರಿ ಶಾಲುಗಳನ್ನು ಹಂಚಿರುವುದು ಬಹುಪಾಲು ಬಲಪಂಥೀಯ  ಸಂಘಟನೆಗಳು, ಹಿಂದುತ್ವದ ಪ್ರತಿಪಾದಕರು ಎಂಬುದು ಗಮನಾರ್ಹ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಕೇಸರಿ ಪೇಟ ಸಂಗ್ರಹಿಸುತ್ತಿರುವ ವಿಡಿಯೂ ಶಿವಮೊಗ್ಗದಲ್ಲಿ ಅಲ್ಲ, ಅದು ಉಡುಪಿಯ ಎಂಜಿಎಂ ಕಾಲೇಜಿನದ್ದು.

ಹಿಜಾಬ್‌ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಅಡ್ಡಿ ಪಡಿಸುವಂತೆ ವಿದ್ಯಾರ್ಥಿಗಳನ್ನು ಹಿಂದೂ ಜಾಗರಣಾ ವೇದಿಕೆ (ಹಿಂಜಾವೇ) ಹೇಗೆ ಪ್ರಚೋದಿಸಿತು ಎಂಬುದನ್ನು `ದಿ ನ್ಯೂಸ್‌ ಮಿನಿಟ್‌’ ಸುದ್ದಿ ಜಾಲತಾಣ ವರದಿ ಮಾಡಿದೆ.

ಉಡುಪಿ ಎಂಜಿಎಂ ಕಾಲೇಜಿನಲ್ಲಿ ನಡೆದ ಘಟನೆ

ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ಸಹಪಾಠಿಗಳ ವಿರುದ್ಧ ಪ್ರತಿಭಟಿಸುವಂತೆ ವಿದ್ಯಾರ್ಥಿಗಳನ್ನು ಉಡುಪಿಯ ಹಿಂದೂ ಜಾಗರಣ ವೇದಿಕೆ ಪ್ರಚೋದಿಸಿತು. ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಮತ್ತು ಪೇಟಗಳನ್ನು ಹಿಂಜಾವೇ ಒದಗಿಸಿತು ಎಂದು ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ.

ಫೆಬ್ರವರಿ 8ರಂದು 100ಕ್ಕೂ ಹೆಚ್ಚು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಮತ್ತು ಹಿಜಾಬ್ ಧರಿಸಿದ ಮುಸ್ಲಿಂ ಹುಡುಗಿಯರ ನಡುವೆ ಘರ್ಷಣೆ ನಡೆಯಿತು. ಕೇಸರಿ ಧರಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳು ‘ನ್ಯೂಸ್‌ ಮಿನಿಟ್’ ಜೊತೆ ಮಾತನಾಡಿ, “ಉಡುಪಿಯ ಮಹಿಳಾ ಸರಕಾರಿ ಪಿಯು ಕಾಲೇಜಿನಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿದ ನಂತರ ಈ ಸಮಸ್ಯೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದೇವೆ” ಎಂದಿದ್ದಾರೆ. ಆದರೆ ಹೆಚ್ಚಿನ ತನಿಖೆ ನಡೆಸಿರುವ ನ್ಯೂಸ್‌ ಮಿನಿಟ್‌, “ಈ ಪ್ರತಿಭಟನೆಗಳು ಸ್ವಯಂಪ್ರೇರಿತವಾಗಿಲ್ಲ. ಕೇಸರಿ ಶಾಲುಗಳು ಮತ್ತು ಪೇಟಗಳನ್ನು ಹಿಂದೂ ಜಾಗರಣ ವೇದಿಕೆಯಿಂದ ನೀಡಲಾಗಿತ್ತು” ಎಂದು ತಿಳಿಸಿದೆ.

ಸ್ವತಃ BJP ಯ ಈಶ್ವರಪ್ಪನವರೆ ಹೇಳಿರುವಂತೆ ಕೇಸರಿ ಶಾಲು ಮತ್ತು ಕೇಸರಿ ಪೇಟಗಳನ್ನು ಅಯೋದ್ಯೆಯಿಂದ ತರಿಸಿ ಹಂಚಲಾಗಿದೆ (ವಿಡಿಯೊ ನೋಡಿ)

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ‘ದುರ್ಗಾ ದೌಡ್’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಾಲುಗಳು ಮತ್ತು ಪೇಟಗಳನ್ನು ಸ್ವೀಕರಿಸಿದ್ದರು ಎಂದು ತಿಳಿದುಬಂದಿದೆ. “ಕಳೆದ ವರ್ಷ ದುರ್ಗಾ ದೌಡ್ ಕಾರ್ಯಕ್ರಮದ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ನಮಗೆ ವೈಯಕ್ತಿಕವಾಗಿ ಶಾಲು ನೀಡಲಾಯಿತು” ಎಂದು ಶಾಲು ಧರಿಸಿದ್ದ ವಿದ್ಯಾರ್ಥಿಯೊಬ್ಬರು ನ್ಯೂಸ್‌ ಮಿನಿಟ್‌ಗೆ ತಿಳಿಸಿದ್ದಾರೆ.  ಮಂಗಳವಾರ ಆ ಶಾಲನ್ನು ಬಳಸಲು ಆ ವಿದ್ಯಾರ್ಥಿ ನಿರ್ಧರಿಸಿದ್ದನು. ಸ್ವಂತ ಶಾಲು ಹೊಂದಿರದ ಇತರ ವಿದ್ಯಾರ್ಥಿಗಳಿಗೆ ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ಕೇಸರಿ ಶಾಲು ಮತ್ತು ಪೇಟಗಳನ್ನು ಕಾಲೇಜು ಆವರಣದ ಹೊರಗೆ ವಿತರಿಸಿದರು.

ವಿದ್ಯಾರ್ಥಿಗಳನ್ನು ಚದುರಿಸಿದ ನಂತರ, ಹಿಂದೂ ಜಾಗರಣ ವೇದಿಕೆ ಸದಸ್ಯರು ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಂದ ಈ ಶಾಲುಗಳು ಮತ್ತು ಪೇಟಗಳನ್ನು ಹಿಂಪಡೆದು ಪ್ಯಾಕ್ ಮಾಡಿದರು ಎಂಬುದಾಗಿ ವರದಿ ಹೇಳುತ್ತದೆ. ಶಾಲುಗಳು ಮತ್ತು ಪೇಟಗಳ ಸಂಗ್ರಹವನ್ನು BOOM ಲೈವ್‌ನ ನಿವೇದಿತಾ ನಿರಂಜನಕುಮಾರ್ ದಾಖಲಿಸಿದ್ದಾರೆ.

ಉಡುಪಿಯಲ್ಲಿ ಹಿಜಾಬ್ ಧರಿಸಿ ಪ್ರತಿಭಟನೆ ನಡೆಸುತ್ತಿರುವ ಮುಸ್ಲಿಂ ಹುಡುಗಿಯರನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟಿಸಿದೆ, ಇದನ್ನು ಎಸ್‌ಡಿಪಿಐ ಬೆಂಬಲಿಸುತ್ತದೆ ಎಂದು ಉಡುಪಿಯ ಬಿಜೆಪಿ ಮತ್ತು ಹಿಂದೂ ಜಾಗರಣ ವೇದಿಕೆಯಂತಹ ಹಿಂದುತ್ವ ಗುಂಪುಗಳು ಪದೇ ಪದೇ ಹೇಳುತ್ತಿವೆ. ಉಡುಪಿಯ ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿದವರನ್ನು ತರಗತಿಗೆ ನಿರ್ಬಂಧಿಸಿದ ಬಳಿಕ ಆ ಹುಡುಗಿಯರ ವೈಯಕ್ತಿಕ ಹಕ್ಕುಗಳನ್ನು ಬೆಂಬಲಿಸಿದೆವು ಎಂದು ಸಿಎಫ್‌ಐ ಹೇಳಿಕೊಂಡಿದೆ.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ಮಾತನಾಡಿ, “ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಬಾಲಕಿಯರನ್ನು ತರಗತಿಗೆ ನಿರ್ಬಂಧಿಸಿದ ನಂತರ ನಮ್ಮ ಸಂಘಟನೆಯು ಕೈಜೋಡಿಸಿದೆ. ಇದು ಸಿಎಫ್‌ಐನ ಆಂದೋಲನ ಎಂದು ಹೇಳಲಾಗುತ್ತಿದೆ. ಆದರೆ ಅದು ನಿಜವಲ್ಲ. ಎಂಜಿಎಂ ಕಾಲೇಜಿನಲ್ಲಿ ಬಿಜೆಪಿ ಮುಖಂಡ ಯಶಪಾಲ್ ಸುವರ್ಣ ಅವರು ವಿದ್ಯಾರ್ಥಿಗಳ ಏನು ಮಾಡುತ್ತಿದ್ದರು ಎಂದು ನಾವು ಕೇಳಲು ಬಯಸುತ್ತೇವೆ? ಈ ವಿಚಾರವಾಗಿ ಅವರು ರಾಜಕೀಯ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

 

ಒಟ್ಟಾರೆಯಾಗಿ ಇಡೀ ಹಿಜಾಬ್ ಮತ್ತು ಕೇಸರಿ ಶಾಲು ವಿವಾದವನ್ನೆ ಲಾಭ ಮಾಡಿಕೊಂಡಿರುವ ಹಿಂದುತ್ವವಾದಿಗಳು ತಾವು ಮಾಡಿರುವ ಕುಕೃತ್ಯಗಳನ್ನು ಮುಸ್ಲಿಮರ ಮೇಲೆ ಹೊರಿಸಿ ಸಮಾಜದಲ್ಲಿ ಧಾರ್ಮಿಕ ಅಶಾಂತಿನ್ನು ಸೃಷ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊಂಚುಹಾಕುತ್ತಿದೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ “ಶಿಮೊಗ್ಗಾದ ಮುಸ್ಲಿಂ ಯುವಕರು ಕೇಸರಿ ಶಾಲು ಮತ್ತು ಪೇಟ ಹಂಚುತ್ತಿದ್ದಾರೆ”ಎಂಬುದು ಸುಳ್ಳು. ಅದು ಉಡುಪಿಯ ಎಂಜಿಎಂ ಕಾಲೇಜಿನ ವಿವಾದಕ್ಕೆ ಸಂಬಂಧಿಸಿದ್ದು ಎಂಬುದು ಖಚಿತವಾಗಿದೆ.


ಇದನ್ನು ಓದಿರಿ: Fact check: ಹರಿಹರದಲ್ಲಿ ಮುಸ್ಲಿಮರು “ಪಾಕಿಸ್ತಾನ್ ಜಿಂದಾಬಾದ್” ಘೊಷಣೆ ಕೂಗಿಲ್ಲ, ಇದು ಬಲಪಂಥೀಯರು ಸೃಷ್ಟಿಸಿದ ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.