ರಾಮ ಮಂದಿರ ಟ್ರಸ್ಟ್‌ 16 ಕೋಟಿ ಹಗರಣ; ಆರೋಪ ಮಾಡಿದವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲು ವಿಹೆಚ್‌ಪಿ ಸೂಚನೆ!

ರಾಮ ಜನ್ಮಭೂಮಿ ಟ್ರಸ್ಟ್‌ ವಿರುದ್ದ 16.5 ಕೋಟಿ ಭೂ ಹಗರಣದ ಆರೋಪ ಮಾಡಲಾಗಿದೆ. ಈ ಆರೋಪ ಸುಳ್ಳು, ಆರೋಪ ಮಾಡಿರುವವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್‌ (ವಿಹೆಚ್‌ಪಿ)ಯ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್‌ ಹೇಳಿದ್ದಾರೆ.

ಆಮ್‍ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್‍ ಮತ್ತು ಸಮಾಜವಾದಿ ಪಕ್ಷದ ಮಾಜಿ ಶಾಸಕ ಪವನ್‍ ಪಾಂಡೆ ಭಾನುವಾರ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿ ರಾಮ ಜನ್ಮಭೂಮಿ ಟ್ರಸ್ಟ್‌ ಭೂ ಹಗರಣ ನಡೆಸುತ್ತಿದೆ ಎಂದು ಆರೋಪಿಸಿದ್ದರು. 2 ಕೋಟಿ ರೂ. ಗೆ ಒಂದು ಜಮೀನು ಖರೀದಿ ಮಾಡಿ, ಕೇವಲ 5 ನಿಮಿಷಗಳ ಅಂತರದಲ್ಲಿ ರಾಮಜನ್ಮಭೂಮಿ ಟ್ರಸ್ಟ್‌‌ ಅದೇ ಜಮೀನನ್ನು 18.5 ಕೋಟಿ ರೂ.ಗಳಿಗೆ ಖರೀದಿಸಿದೆ ಎಂದು ಸಂಜಯ್‍ಸಿಂಗ್‍ ದಾಖಲೆಗಳನ್ನು ಅವರು ಬಿಡುಗಡೆ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಲೋಕ್ ಕುಮಾರ್‌‌, “ಸುಳ್ಳಾರೋಪಗಳನ್ನು ಎಸಗುವ ವ್ಯಕ್ತಿಗಳ ವಿರುದ್ಧ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾನನಷ್ಟ ಮೊಕದ್ದಮೆ ಹೂಡುವಂತೆ ನಾವು ಸೂಚಿಸಿದ್ದೇವೆ. ಮುಂದಕ್ಕೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಅದಕ್ಕಾಗಿ ಅವರು ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ” ಎಂದು ಅವರ ತಿಳಿಸಿದ್ದಾರೆ.

ಅಯೋಧ್ಯೆಯ ರಾಮ ಜನ್ಮಭೂಮಿ ಟ್ರಸ್ಟ್ ಖರೀದಿಸಿದ ಭೂಮಿಯಲ್ಲಿ ಭ್ರಷ್ಟಾಚಾರದ ಆರೋಪದ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶ್ರೀರಾಮನ ಹೆಸರಲ್ಲಿ ಮೋಸ ಮಾಡುವುದು ಅಧರ್ಮವಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿಯ ಮಾಜಿ ಮಿತ್ರ ಪ್ರಕ್ಷವಾಗಿರುವ ಶಿವಸೇನೆ ಕೂಡಾ ಇದರ ಬಗ್ಗೆ ಸ್ಪಷ್ಟನೆ ಕೋರಿದ್ದು, ಶಿವಸೇನೆ ಸಂಸದ ಸಂಜಯ್ ರಾವತ್‌, “ರಾಮ ಮತ್ತು ರಾಮ ಮಂದಿರದ ಹೋರಾಟವು ನಮಗೆ ನಂಬಿಕೆಯ ವಿಷಯವಾಗಿದೆ. ಕೆಲವರಿಗೆ ಇದು ರಾಜಕೀಯ ವಿಷಯ. ಮಂದಿರದ ನಿರ್ಮಾಣಕ್ಕಾಗಿ ರಚಿಸಲಾದ ಟ್ರಸ್ಟ್‌ ತಮ್ಮ ಮೇಲಿನ ಆರೋಪಗಳು ನಿಜವೋ ಸುಳ್ಳೋ ಎಂದು ಸ್ಪಷ್ಟಪಡಿಸಬೇಕು ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ: ಶ್ರೀರಾಮನ ಹೆಸರಲ್ಲಿ ಭ್ರಷ್ಟಾಚಾರ; ಟ್ರಸ್ಟ್‌ ವಿರುದ್ದ 16 ಕೋಟಿ ರೂ ಅವ್ಯವಹಾರ ಆರೋಪ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights