Fact check: ಹರಿಹರದಲ್ಲಿ ಮುಸ್ಲಿಮರು “ಪಾಕಿಸ್ತಾನ್ ಜಿಂದಾಬಾದ್” ಘೊಷಣೆ ಕೂಗಿಲ್ಲ, ಇದು ಬಲಪಂಥೀಯರು ಸೃಷ್ಟಿಸಿದ ಸುಳ್ಳು

ಸದ್ಯ ಕರ್ನಾಟಕದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿಷಯಗಳು ಹೆಚ್ಚು ಚರ್ಚೆಯಾಗುತ್ತಿರುವ ಹೊತ್ತಲ್ಲಿ ಸಾಮಾಜಿಕ ಮಾದ್ಯಮಗಳಲ್ಲಿ ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ. ಅದೇನೆಂದರೆ ದಾವಣಗೆರೆಯ ಹರಿಹರದಲ್ಲಿ ಮುಸ್ಲಿಂ ಯುವಕರು “ಪಾಕಿಸ್ತಾನ್ ಜಿಂದಾಬಾದ್” ಎಂದು ಘೋಷಣೆ ಕೂಗಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೊವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಮುಖ್ಯವಾಗಿ ಬಲಪಂಥೀಯ ವಿಚಾರಧಾರೆಯ ಪ್ರತಿಪಾದಕ ಪೇಸ್‌ಬುಕ್ ಪೇಜ್ ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿ ವಿಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ನಿಜವೆ ಎಂದು ಪರಿಶೀಲಿಸೋಣ.

ಸಂವಾದ ಎಂಬ ಬಲಪಂಥಿಯ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವುದು.

rss times ಎಂಬ ಪೇಸ್‌ಬುಕ್ ಪೇಜ್‌ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ

ಲಿಂಕ್‌ಅನ್ನು ಇಲ್ಲಿ ನೋಡಬಹುದು .

ಫ್ಯಾಕ್ಟ್‌ಚೆಕ್:

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಮುಸ್ಲಿಂ ಯುವಕರು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ ಎನ್ನುವ ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ “ಜಿಂದಾಬಾದ್’ ಎನ್ನುವ ದ್ವನಿ ಸ್ಪಷ್ಟವಾಗಿ ಕೇಳಿಸುತ್ತದೆ, ಆದರೆ ಅಲ್ಲಿ ಪಾಕಿಸ್ತಾನ್ ಎಂಬ ದ್ವನಿ ಕೇಳಿಸುವುದಿಲ್ಲ. ವಿಡಿಯೋದಲ್ಲಿ ನೂರಾರು ಯುವಕರು ಜೋರಾಗಿ ಕೂಗಾಡುವುದು ಕೇಳಿಸುತ್ತದೆ ಆದರೆ ಎಲ್ಲಿಯೂ ” ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗುವುದು ಕೇಳಿಸುವುದಿಲ್ಲ.

ಮುಸ್ಲಿಮರು “ಪಾಕಿಸ್ತಾನ್ ಜಿಂದಾಬಾದ್” ಘೋಷಣೆ ಕೂಗಿದ್ದಾರೆ ಎಂಬುದು ಸೂಕ್ಷ್ಮವಾದ ವಿಚಾರವಾಗಿರುವುದರಿಂದ ಇನ್ನಷ್ಟು ಮಾಹಿತಿಯನ್ನು ಏನ್‌ಸುದ್ದಿ.ಕಾಂ ಕಲೆಹಾಕಿದೆ. ಅದರಲ್ಲಿ ಎಲ್ಲಿಯೂ ಮುಸ್ಲಿಂ ಯುವಕರ ಗುಂಪು “ಪಾಕಿಸ್ತಾನ ಜಿಂದಾಬಾದ್” ಘೋಷಣೆ ಕೂಗಿರುವ ಮಾಹಿತಿ ಲಭ್ಯವಿಲ್ಲ. ಒಂದು ವೇಳೆ ಆ ಘೋಷಣೆ ಕೂಗಿದ್ದೆ ನಿಜವಾಗಿದ್ದರೆ ಮುಖ್ಯವಾಹಿನಿಗಳು, ಪತ್ರಿಕೆಗಳು ಇದನ್ನು ದೊಡ್ಡ ಸುದ್ದಿ ಮಾಡುತ್ತಿದ್ದವು ಆದರೆ ಆ ರೀತಿಯ ಸುದ್ದಿಗಳು ಎಲ್ಲಯೂ ವರದಿಯಾಗಿಲ್ಲ.

ಮುಂದುವರೆದು ಘಟನೆ ಬಗ್ಗೆ ಮತ್ತಷ್ಟು ವಿವರಗಳನ್ನು ಪಡೆಯಲು ದಾವಣಗರೆಯ ಪತ್ರಕರ್ತರಾದ ಸತೀಶ್ ನಾಯಕ್ ಎಂಬುವವರನ್ನುನ ಸಂಪರ್ಕಿಸಲಾಗಿದ್ದು ಘಟನೆ ಬಗ್ಗೆ ವಾಸ್ತವ ಅಂಶಗಳನ್ನು ಹಂಚಿಕೊಂಡಿದ್ದಾರೆ. ಹರಿಹರದಲ್ಲಿ ಮಾರುತಿ ಎಂಬ ಹಿಂದೂ ಯುವಕ  ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದಂತೆ  ವಾಟ್ಸಪ್ ನಲ್ಲಿ ಅವಹೇಳನಾಕಾರಿ ಸಂದೇಶವೊಂದನ್ನು ಹಾಕಿದ್ದಾನೆ. ಆ ಸಂದೇಶ ಮುಸ್ಲಿಮ್ ಯುವಕರನ್ನು ಕೆರಳಿಸಿದೆ. ಈ ಸಂದೇಶ ವಿಚಾರ ಕೆಲವೇ ನಿಮಿಷಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ ಮುಸ್ಲಿಂ ಯುವಕರು  ಪೊಲೀಸ್ ಠಾಣೆ ಎದುರು ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದಾರೆ. ವಾಟ್ಸಪ್ ಸಂದೇಶವನ್ನು ಹರಡಿದ ಆರೋಪಿಯನ್ನ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡ ಮುಸ್ಲಿಂ ಯುವಕರು “ಇಸ್ಲಾಂ ಜಿಂದಾಬಾದ್, ಆವಾಜ್ ದೋ.. ಹಮ್ ಏಕ್ ಹೈ ಎಂದು ಐದಾರು ನಿಮಿಷ ಘೋಷಣೆ ಕೂಗಿದ್ದಾರೆ. ಅಷ್ಟಕ್ಕೆ ನಿಲ್ಲಿಸಿಲ್ಲ ಭಾರತ್ ಮಾತಾ ಕಿ ಜೈ ಎಂದೂ ಕೂಗಿದ್ದಾರೆ. ಆದರೆ ಅಲ್ಲಿ ಎಲ್ಲಿಯೂ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿಲ್ಲ ಎಂದಿದ್ದಾರೆ. ಈ ರೀತಿ ಘೋಷಣೆ ಕೂಗುವಾಗ ಪೊಲೀಸ್ ಸಿಬ್ಬಂದ್ದಿಗಳು ಸ್ಥಳದಲ್ಲೆ ಇದ್ದರು. ಒಂದು ವೇಳೆ ಆ ಯುವಕರು “ಪಾಕಿಸ್ತಾನ್ ಜಿಂದಾಬಾದ್” ಎಂದು ಘೋಷಣೆ ಕೂಗಿದ್ದರೆ ಅವರನ್ನು ವಶಕ್ಕೆ ಪಡೆಯಬೇಕಾಗಿತ್ತು ಆದರೆ ಹಾಗಾಗಿಲ್ಲ. ಜೊತೆಗೆ ಪೊಲೀಸರು ಇಡೀ ಘಟನೆಯನ್ನು ಚಿತ್ರೀಕರಿಸಿದ್ದಾರೆ, ಅಲ್ಲಿಯೂ ತನಿಖೆ ಮಾಡಬಹುದು. ಘಟನೆ ನಡೆದು ಮೂರ್ನಾಲ್ಕು ದಿನ ಕಳೆದರು ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದವರ ವಿರುದ್ದ ಪ್ರಕರಣ ದಾಖಲಾಗಬೇಕಿತ್ತು, ಆದರೆ ಅದೂ ಕೂಡ ಆಗಿಲ್ಲ. ಏಕೆಂದರೆ ಆ ಘೋಷನೆ ಕೂಗೇ ಇಲ್ಲ, ಬೇಕಂತಲೇ ಮುಸ್ಲಿಂ ಸಮುದಾಯವನ್ನು ಕೇಂದ್ರೀಕರಿಸಿ ಬಲಪಂಥೀಯ ಸಿದ್ದಾಂತದ ಪ್ರತಿಪಾದಕರು ಸುಳ್ಳು ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿ ಸತೀಶ್ ನಾಯಕ್.

ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿಯನ್ನು ಅವಲೋಕಿಸಿದ ಪೊಲೀಸ್ ಇಲಾಖೆ ವಾಟ್ಸಪ್ ನಲ್ಲಿ ಅವಹೇಳನಾಕಾರಿ ಸಂದೇಶ ಹಂಚಿದ ಮಾರುತಿ ಎಂಬ ಆರೋಪಿಯನ್ನ ತಕ್ಷಣಕ್ಕೆ ಬಂಧಿಸಿ ಕೇಸ್ ದಾಖಲು ಮಾಡಿದ್ದಾರೆ.

ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ದಾವಣಗೆರೆಯ ಹರಿಹರದಲ್ಲಿ ಮುಸ್ಲಿಂ ಯುವಕರು ‘ಪಾಕಿಸ್ತಾನ್ ಜಿಂದಾಬಾದ್” ಎಂದು ಘೋಷಣೆ ಕೂಗಿದ್ದಾರೆ ಎಂಬುದು ಬಲಪಂಥೀಯ ಪ್ರತಿಪಾದಕ ಸೋಶಿಯಲ್ ಮೀಡಿಯಾಗಳು ಸೃಷ್ಟಿಸಿರುವ ಸುಳ್ಳು ಸುದ್ದಿ ಎಂಬುದು ತಿಳಿದುಬಂದಿದೆ.


ಇದನ್ನು ಓದಿರಿ: Fact check: ನಿಜಗುಣಾನಂದ ಸ್ವಾಮಿ ಹೆಸರಿನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಬರಹ ವೈರಲ್


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights