Fact check: ನಿಜಗುಣಾನಂದ ಸ್ವಾಮಿ ಹೆಸರಿನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಬರಹ ವೈರಲ್

ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮಿ ಅವರು ಬರೆದಿದ್ದಾರೆ ಎಂದು ಪ್ರತಿಪಾದಿಸಿ, ಇಸ್ಲಾಂ ಧರ್ಮದ ವಿರುದ್ದ ದ್ವೇಷ ಹರಡುವ ಲೇಖನವೊಂದನ್ನು ಫೇಸ್‌ಬುಕ್ ಮತ್ತು ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ. ಈ ಲೇಖನವನ್ನು ಇಸ್ಲಾಂ ಧರ್ಮದ ಬಗ್ಗೆ ಮತ್ತು ಹಿಜಾಬ್ ಬಗ್ಗೆ ಅವಹೇಳನಕಾರಿ ಮತ್ತು ತಪ್ಪು ಮಾಹಿತಿಯೊಂದಿಗೆ ಹರಿಯಬಿಡಲಾಗಿದೆ.

ಉಡುಪಿ ಜಿಲ್ಲೆಯ ಕಾಲೇಜುಗಳಲ್ಲಿ ಹಿಜಾಬ್ ಧರಿಸುತ್ತಿದ್ದ ಮುಸ್ಲಿಂ ವಿದ್ಯಾರ್ಥಿನಿಯರನ್ನು ವಿರೋಧಿಸಿ ಬಿಜೆಪಿ ಬೆಂಬಲಿತ ವಿದ್ಯಾರ್ಥಿಗಳು ಕೇಸರಿ ಶಾಲು ಕುತ್ತಿಗೆಗೆ ಸುತ್ತಿಕೊಂಡು ವಿವಾದ ಸೃಷ್ಟಿಸಿದ ನಂತರ ಫೇಸ್‌ಬುಕ್ ಮತ್ತು ವಾಟ್ಸಪ್‌ನಲ್ಲಿ ಈ ಬರಹವನ್ನು ಸ್ವಾಮಿಜಿ ಹೆಸರಿನಲ್ಲಿ, ಜೋರ್ಡಾನ್‌ನ ರಾಜ ಕುಟುಂಬದ ಚಿತ್ರದೊಂದಿಗೆ ಹರಿಬಿಡಲಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ನೀಟ್ ಟಾಪರ್‌ಗೆ ಸೀಟ್ ಸಿಗಲಿಲ್ಲವೆಂದು ಸುಳ್ಳು ಸುದ್ದಿ ಹರಡಿದ ‘ವಿಶ್ವವಾಣಿ’!

ವಿಶೇಷವೇನೆಂದರೆ ಈ ಲೇಖನವನ್ನು ಹೆಚ್ಚಿನ ಕಡೆಗೆ ಹಂಚಿರುವವರು ಬಿಜೆಪಿ ಪರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರೊಪಗಾಂಡ ಸೃಷ್ಟಿಸುವವ ಪೇಜ್‌ಗಳು ಮತ್ತು ಬಿಜೆಪಿ ಬೆಂಬಲಿಗರಾಗಿದ್ದಾರೆ. ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌‌‌

ವೈರಲ್ ಲೇಖನದ ಮೊದಲ ಪ್ಯಾರಾದಲ್ಲಿ ಜೊರ್ಡಾನ್‌ ರಾಜ ಕುಟುಂಬ ಪ್ರವಾದಿ ಮೊಹಮ್ಮದ್‌ ಅವರ ಕುಟುಂಬ ಎಂದು ಉಲ್ಲೇಖಿಸಲಾಗಿದೆ. “ಅಲ್ಲಿನ ರಾಜನಿಗೆ ಒಬ್ಬಳೇ ಪತ್ನಿ, ಯಾರೂ ಗಡ್ಡ ಬಿಟ್ಟಿಲ್ಲಾ, ಟೋಪಿ ಹಾಕಿಲ್ಲಾ, ಹೆಣ್ಣುಮಕ್ಕಳ್ಯಾರು ಬುರ್ಕಾ ಹಾಕಿಲ್ಲಾ, ಹಿಜಾಬ್ ಹಾಕಿಲ್ಲಾ, ಆಧುನಿಕ ವಸ್ತ್ರಗಳನ್ನೇ ತೊಡುತ್ತಿದ್ದಾರೆ, ಅತ್ಯಾಧುನಿಕ ಶಿಕ್ಷಣ ಪಡೆಯುತ್ತಿದ್ದಾರೆ, ಬರ್ತ್ ಡೇ ಆಚರಿಸಿಕೊಳ್ಳುತ್ತಾರೆ, ಆಧುನಿಕರಂತೆ ಬದುಕುತ್ತಿದ್ದಾರೆ” ಎಂದು ಉಲ್ಲೇಖಿಸಲಾಗಿದೆ.

ಜೊರ್ಡಾನ್‌‌ ರಾಜಕುಟುಂಬವು ಪ್ರವಾದಿ ಮೊಹಮ್ಮದ್‌‌ ಅವರ ವಂಶಸ್ಥರು ಎಂದು ಘೋಷಿಸಿಕೊಂಡಿದ್ದು ನಿಜವೇ ಆಗಿದೆ. ಆದರೆ ಪ್ರವಾದಿ ಕುಟುಂಬ ಎಂದ ಮಾತ್ರಕ್ಕೆ ಅವರು ಆಚರಣೆ ಮಾಡುವುದೇ ಇಸ್ಲಾಂ ಎಂದಲ್ಲ. ಧರ್ಮವನ್ನು ಪಾಲನೆ ಮಾಡುವುದು ಅವರವರ ಸ್ವಾತಂತ್ಯ್ರವಾಗಿದೆ. ಮೊದಲ ಪ್ಯಾರಾದಲ್ಲಿ ಜೋರ್ಡಾನ್‌ಗೆ ರಾಜನಿಗೆ ‘ಒಬ್ಬಳೇ ಪತ್ನಿ’ ಎಂದು ಬರೆದು, ಇಸ್ಲಾಂ ಎಂದರೆ ಹಲವು ಪತ್ನಿಯರು ಇರಲೇಬೇಕು ಎಂದು ಪ್ರತಿಪಾದಿಸಲಾಗಿದೆ. ಆದರೆ ವಾಸ್ತವದಲ್ಲಿ ‘ಇಸ್ಲಾಂ’ ಬಹುಪತ್ನಿತ್ವವನ್ನು ಪ್ರತಿಪಾದಿಸುವುದಿಲ್ಲ.


ಇದನ್ನೂ ಓದಿ: Fact check: ಯುಪಿಯಲ್ಲಿ ಮತ್ತೆ ಯೋಗಿ ಸರ್ಕಾರ ಬಂದರೆ ಪತ್ರಿಕೋದ್ಯಮ ತೊರೆಯುತ್ತೇನೆ -ಎಂದು ಅಜಿತ್ ಅಂಜುಮ್ ಹೇಳಿದ್ದು ನಿಜವೇ?


ಹಲವಾರು ಪತ್ನಿಯರನ್ನು ಕಟ್ಟಿಕೊಂಡವರಿಗೆ ಸಮಾಜದಲ್ಲಿ ಹೆಚ್ಚು ಬೆಲೆ ಇರುವುದು ಸಾಮಾನ್ಯವಾಗಿದ್ದ ಕಾಲದಲ್ಲಿ, ನಾಲ್ಕಕ್ಕಿಂತ ಹೆಚ್ಚು ಜನರನ್ನು ಪತ್ನಿಯರನ್ನು ಹೊಂದಿರಬಾರದು ಎಂದು ಇಸ್ಲಾಂ ಬೋಧಿಸಿತ್ತು. ಇದನ್ನೇ, ಮುಸ್ಲಿಮರು ನಾಲ್ಕು ಪತ್ನಿಯನ್ನು ಹೊಂದಿರಬಹುದು ಎಂದು ತಪ್ಪಾಗಿ ಪ್ರತಿಪಾದಿಸಲಾಗುತ್ತಿದೆ.

ಉಳಿದಂತೆ ಗಡ್ಡ, ಟೋಪಿ, ಬುರ್ಖಾ ಮತ್ತು ಹಿಜಾಬ್‌ ಅಥವಾ ಬೇರೆ ಆಚರಣೆಗಳು ಪಾಲಿಸುವುದು ಮತ್ತು ಬಿಡುವುದು ಅವರವರ ಸ್ವಾತಂತ್ಯ್ರವಾಗಿದೆ.

ಎರಡನೇ ಪ್ಯಾರಾದಲ್ಲಿ, “ಇಸ್ಲಾಂನಲ್ಲಿ ಎರಡು ಬಗೆ, ಒಂದು ಅಲ್ಲಾನಾ ಇಸ್ಲಾಂ, ಇನ್ನೊಂದು ಮುಲ್ಲಾನ ಇಸ್ಲಾಂ. ಇವರು ಅಲ್ಲಾ ಇಸ್ಲಾಂನವರು, ಅಲ್ಲಾನ ಇಸ್ಲಾಂನವರು ಎಲ್ಲರೊಳಗೊಂದಾಗಿ, ಎಲ್ಲರಂತೆ ಶಾಂತಿಯಿಂದ ಬದುಕುತ್ತಾರೆ. ಆದರೆ ಮುಲ್ಲಾನ ಇಸ್ಲಾಂನವರು ಅನಕ್ಷರಸ್ಥ ಮುಲ್ಲಾಗಳ ಮಾತು ಕೇಳಿ ಅವರು ಬದುಕಿರುವ ಸಮಾಜ-ದೇಶ ಎಲ್ಲವನ್ನು ಹಿಂಸಿಸುತ್ತಾ, ಭಯೋತ್ಪಾದನೆ, ಲವ್ ಜಿಹಾದ್, ಡ್ರಗ್ಸ್ ಮಾಫಿಯಾ, ರೌಡಿಸಂ, ದೋ ನಂಬರ್ ಬ್ಯುಸಿನೆಸ್ ಎಲ್ಲಾ‌ ಮಾಡುತ್ತಾ ಅಶಾಂತಿಗೆ ಕಾರಣರಾಗಿದ್ದಾರೆ. ಮೇಲಾಗಿ ಇಸ್ಲಾಂ ಸಂಪ್ರದಾಯ ಎಂದು ಹೆಣ್ಣುಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುತ್ತಾ, ಬುರ್ಕಾ-ಹಿಜಬ್ ನೊಳಗೆ ತುರುಕಿ, ತಲಾಕ್, ಬಹುಪತ್ನಿತ್ವದ ಹೆಸರಿನಲ್ಲಿ ಮಕ್ಕಳ ಹೆರುವ ಯಂತ್ರ ಮಾಡಿಕೊಂಡಿದ್ದಾರೆ” ಎಂದು ಪ್ರತಿಪಾದಿಸಲಾಗಿದೆ.

ಈ ಪ್ಯಾರಾದಲ್ಲಿ ಕೋಮುದ್ವೇಷ ಹರಡುವ ಹುನ್ನಾರವಿದೆ. ಯಾವುದೇ ಧರ್ಮವನ್ನು ಪಾಲಿಸುವವರು ತನ್ನ ಧರ್ಮವನ್ನು ಶಾಂತಿಯಿಂದಲೇ ಪಾಲಿಸುತ್ತಾ, ತನ್ನಷ್ಟಕ್ಕೆ ತಾನಿರುತ್ತಾರೆ. ಜೊತೆಗೆ ಈ ಪ್ಯಾರಾದಲ್ಲಿ ಉಲ್ಲೇಖಿಸಿದ, ‘ಸಮಾಜ ಹಾಗೂ ದೇಶದಲ್ಲಿ ಹಿಂಸೆ, ಭಯೋತ್ಪಾದನೆ, ಡ್ರಗ್ಸ್‌ ಮಾಫಿಯಾ, ರೌಡಿಸಂ, ಇನ್ನಿತರ ಅಶಾಂತಿ’ ಮಾಡುವವರು ಎಲ್ಲೆಡೆಯು ಇರುತ್ತಾರೆ. ಅದರಲ್ಲಿ ಧರ್ಮವನ್ನು ಎಳೆದು ತರುವುದು ಕೋಮುದ್ವೇಷವಾಗಿದೆ. ಎಲ್ಲಾ ಸಮಾಜ, ಸಮುದಾಯಗಳಲ್ಲಿ ಸಾಧಕರು, ಗಣ್ಯರು ಇರುವ ಹಾಗೆಯೆ ಸಮಾಜದ್ರೋಹಿಗಳು ಇರುತ್ತಾರೆ. ಲೇಖನದಲ್ಲಿ ಪ್ರತಿಪಾದಿಸಿರುವ ಹಾಗೆ ಮಹಿಳೆಯು ಮಕ್ಕಳ ಹೆರುವ ಯಂತ್ರ ಎಂದು ಇಸ್ಲಾಂ ಎಲ್ಲಿಯೂ ಉಲ್ಲೇಖಿಸಿಲ್ಲ. ಉಳಿದಂತೆ ‘ಲವ್ ಜಿಹಾದ್‌’ ಪದವನ್ನು ಲೇಖನದಲ್ಲಿ ಉಲ್ಲೇಖಿಸಲಾಗಿದೆ.  ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರವೇ ‘ಲವ್ ಜಿಹಾದ್’ ಎಂಬುವುದೇ ಇಲ್ಲ ಎಂದು ಸದನದಲ್ಲೇ ಮಾಹಿತಿ ನೀಡಿದೆ. ಆದ್ದರಿಂದ ಈ ಹೇಳಿಕೆಯು ತಪ್ಪಾಗಿದೆ.


ಇದನ್ನೂ ಓದಿ: Fact check: ಲತಾ ಮಂಗೇಶ್ಕರ್‌ ಅಂತಿಮ ನಮನದ ವೇಳೆ ಶಾರುಖ್ ಜೊತೆಗಿರುವುದು ಗೌರಿ ಖಾನ್ ಅಲ್ಲ


ಎಲ್ಲಕ್ಕಿಂತ ಮುಖ್ಯವಾಗಿ ಈ ಲೇಖನವನ್ನು ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮಿ ಅವರು ಬರೆದಿದ್ದಾರೆ ಎಂದು ಪ್ರತಿಪಾದಿಸಿ ಹರಿಬಿಡಲಾಗಿದೆ.

ಈ ಬಗ್ಗೆ ensuddi.com ನಿಜಗುಣಾನಂದ ಸ್ವಾಮಿ ಅವರುನ್ನು ಸಂಪರ್ಕಿಸಿದ್ದು, “ಈ ಲೇಖನ ನಾನು ಬರೆದಿಲ್ಲ, ನನ್ನ ಹೆಸರು ಬಳಸಿ ಅಪಪ್ರಚಾರ ಮಾಡಲಾಗುತ್ತಿದೆ” ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಸ್ವಾಮಿಗಳ ಆಪ್ತರೊಬ್ಬರು ನಾನುಗೌರಿ.ಕಾಂ ಜೊತೆಗೆ ಮಾತನಾಡಿ, “ಆರೆಸ್ಸೆಸ್‌ ಮತ್ತು ಸಂಘಪರಿವಾರವನ್ನು ಸ್ವಾಮಿಗಳು ನಿರಂತರವಾಗಿ ಟೀಕಿಸುತ್ತಿರುವುದರಿಂದ ಅವರ ವಿರುದ್ದ ಅಪಪ್ರಚಾರ ಮಾಡಲಾಗುತ್ತಿದೆ. ಈ ಲೇಖನವನ್ನು ಮೊದಲಿಗೆ ಸ್ವಾಮಿಗಳ ಹೆಸರಿನಲ್ಲಿ ಫೇಕ್‌ ಐಡಿ ಕ್ರಿಯೇಟ್‌ ಮಾಡಿ ಹರಿಯಬಿಡಲಾಗಿತ್ತು. ನಂತರ ಅದನ್ನು ಡಿಲೀಟ್ ಮಾಡಲಾಗಿದೆ. ಸ್ವಾಮಿಗಳ ಹೆಸರನ್ನು ಬಳಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ದ ಸ್ವಾಮಿಜಿ ಅಭಿಮಾನಿಗಳು ಕಾನೂನು ಹೋರಾಟಕ್ಕೆ ಸಿದ್ದರಾಗುತ್ತಿದ್ದಾರೆ” ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಹೇಳಬೇಕೆಂದರೆ, ವೈರಲ್ ಲೇಖನವನ್ನು ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮಿ ಅವರು ಬರೆದಿಲ್ಲ. ಅಲ್ಲದೆ ಲೇಖನದಲ್ಲಿ ಹಲವಾರು ದಾರಿ ತಪ್ಪಿಸುವ ಮತ್ತು ಸುಳ್ಳು ಮಾಹಿತಿಗಳಿವೆ. ಜೊತೆಗೆ ಲೇಖನವು ಮುಖ್ಯವಾಗಿ ಮುಸ್ಲಿಂ ಸಮುದಾಯದ ಬಗ್ಗೆ ದ್ವೇಷ ಹರಡಲಿ ಬೇಕಾಗಿಯೆ ಬರೆಯಲಾಗಿದೆ. ಅದರಲ್ಲೂ ಈ ಲೇಖನವನ್ನು ಬಿಜೆಪಿ ಪರವಾಗಿ ಬೆಂಬಲಿಸುವ ಪೇಜ್‌ಗಳು ಹಂಚಿಕೊಳ್ಳುತ್ತಿವೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ‘ಮಸೀದಿ ಕಟ್ಟಿಸು’ ಎಂದು ಅಖಿಲೇಶ್‌ಗೆ ವೃದ್ಧ ಛೀಮಾರಿ ಹಾಕಿಲ್ಲ; ಅವರು ಹೇಳಿದ್ದು EVM ಬಗ್ಗೆ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights