ಫ್ಯಾಕ್ಟ್‌ಚೆಕ್: ‘ಮಸೀದಿ ಕಟ್ಟಿಸು’ ಎಂದು ಅಖಿಲೇಶ್‌ಗೆ ವೃದ್ಧ ಛೀಮಾರಿ ಹಾಕಿಲ್ಲ; ಅವರು ಹೇಳಿದ್ದು EVM ಬಗ್ಗೆ!
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ, ರಾಜ್ಯದ ವಯೋವೃದ್ದನೋರ್ವ ‘ಛೀಮಾರಿ’ ಹಾಕುತ್ತಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೊ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 14 ಸೆಕೆಂಡಿನ ಈ ವಿಡಿಯೊದಲ್ಲಿ ಅಖಿಲೇಶ್ ಯಾದವ್ ಅವರು ಕಾಣಿಸಿಕೊಂಡಿದ್ದು, ವಯಸ್ಸಾದ ವ್ಯಕ್ತಿಯೊಬ್ಬರು ಅವರ ಜೊತೆಗೆ ಮಾತನಾಡುವುದು ಕೇಳಿಸುತ್ತದೆ.
ಹಿಂದಿ ಹಾಗೂ ಕನ್ನಡ ಸಂದೇಶದೊಂದಿಗೆ ಈ ವಿಡಿಯೊ ವೈರಲ್ ಆಗಿದೆ. “ನೀನು ಹೋಗು, ಮಸೀದಿ ಕಟ್ಟಿಸು, ಇಡೀ ಪ್ರದೇಶದಿಂದ ನಿನಗೆ ಒಂದು ಮತವನ್ನೂ ನಾವು ಕೊಡುವುದಿಲ್ಲ” ಎಂದು ವೃದ್ದ ವ್ಯಕ್ತಿ ಅಖಿಲೇಶ್ ಯಾದವ್ ಅವರಿಗೆ ಹೇಳಿದ್ದಾರೆ ಎಂದು ಕನ್ನಡದಲ್ಲಿ ವೈರಲ್ ಆಗಿದೆ. ಈ ವೈರಲ್ ಪೋಸ್ಟ್ “ಅಖಿಲೇಶ್ ಯಾದವ್‌ಗೆ ಮಂಗಳಾರತಿ” ಮಾಡಲಾಗಿದೆ ಎಂದು ಪ್ರತಿಪಾದಿಸುತ್ತದೆ.
ಈ ವಿಡಿಯೊವನ್ನು ಬಿಜೆಪಿ ಬೆಂಬಲಿಗ ಸಂತೋಷ್ ಕೆಂಚಾಂಬ ಎಂಬ ವ್ಯಕ್ತಿ ಸೇರಿದಂತೆ, ಇನ್ನೂ ಹಲವಾರು ಜನರು ಹಂಚಿಕೊಂಡಿದ್ದಾರೆ. ಈ ಮೂಲಕ ಈ ವಿಡಿಯೊವನ್ನು ಸಾವಿರಾರು ಜನರು ಹಂಚಿಕೊಂಡಿದ್ದಾರೆ ಮತ್ತು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಟ್ವಿಟರ್‌ನಲ್ಲೂ ಈ ವಿಡಿಯೊ ಅದೇ ಪ್ರತಿಪಾದನೆಯೊಂದಿಗೆ ಕನ್ನಡ ಸಂದೇಶದೊಂದಿಗೆ ಹಂಚಿಕೊಂಡಿರುವುದನ್ನು ಇಲ್ಲಿ ನೋಡಬಹುದು.
ಇಷ್ಟೇ ಅಲ್ಲದೆ ಹಿಂದಿ ಭಾಷೆಯಲ್ಲೂ ಈ ವಿಡಿಯೊ ವೈರಲ್ ಆಗಿದೆ. ದೆಹಲಿ ಬಿಜೆಪಿಯ ಉಪಾಧ್ಯಕ್ಷ ಸುನಿಲ್ ಯಾದವ್ ಅವರು, “ವಯೋವೃದ್ಧ ವ್ಯಕ್ತಿ ಅಖಿಲೇಶ್ ಯಾದವ್ ಅವರಿಗೆ ವೋಟ್ ಇಲ್ಲ, ವೋಟ್ ಇಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ” ಎಂಬ ಪ್ರತಿಪಾದನೆಯೊಂದಿಗೆ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಕನ್ನಡದಲ್ಲಿ ವೈರಲ್ ಆಗಿರುವಂತೆಯೇ ಹಿಂದಿಯಲ್ಲಿ ಕೂಡಾ, “ನೀವು ಮಸೀದಿ ಮಾಡಲು ಹೋಗುತ್ತೀರಿ, ಇಡೀ ಪ್ರದೇಶದ ಯಾರೂ ನಿಮಗೆ ಮತ ನೀಡುವುದಿಲ್ಲ” ಎಂದು ವಯೋವೃದ್ದ ವ್ಯಕ್ತಿ ಅಖಿಲೇಶ್‌ಗೆ ಛೀಮಾರಿ ಹಾಕಿದ್ದಾರೆ ಎಂದು ವೈರಲ್ ಆಗಿದೆ. ಇದೇ ರೀತಿಯ ಪ್ರತಿಪಾದನೆಯೊಂದಿಗೆ ಟ್ವಿಟರ್‌ನಲ್ಲಿ ಹಲವು ಜನರು ಹಂಚಿಕೊಂಡಿದ್ದಾರೆ. ಜೊತೆಗೆ ಫೇಸ್‌ಬುಕ್ ಅಲ್ಲೂ ಈ ವಿಡಿಯೊ ವೈರಲ್ ಆಗಿದೆ. ಅದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.
आखिलेश भैया को डोर टु डोर कैम्पेन में भीड़ व कैमरे के सामने एक बुजुर्ग ने बड़े वाले…लगा दिए
बुजुर्ग बोले "तुम जाओ मस्जिद बनाओ मस्जिद , पूरे मोहल्ले में से तुम्हे कोई एक वोट भी नही देगा?? pic.twitter.com/J81GmdpN2I— गोपाल सनातनी (@GopalSa22721269) February 1, 2022
ಫ್ಯಾಕ್ಟ್‌ಚೆಕ್ ;
ಒಟ್ಟಿನಲ್ಲಿ ನೋಡುವುದಾದರೆ, ‘ಅಖಿಲೇಶ್ ಯಾದವ್ ಅವರಿಗೆ ಯುಪಿಯಲ್ಲಿ ವೃದ್ದರೊಬ್ಬರು ಛೀಮಾರಿ ಹಾಕಿದ್ದಾರೆ’ ಎಂಬ ಪ್ರತಿಪಾದನೆಯೊಂದಿಗೆ 14 ಸೆಕೆಂಡಿನ ಈ ವಿಡಿಯೊವನ್ನು ವೈರಲ್ ಮಾಡಿರುವವರಲ್ಲಿ ಹೆಚ್ಚಿನ ಜನರು ಬಿಜೆಪಿ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರೇ ಆಗಿದ್ದಾರೆ.
ಏನ್‌ಸುದ್ಧಿ.ಕಾಂ ಈ ವಿಡಿಯೊದ ಸ್ಕ್ರೀನ್ ಶಾರ್ಟ್ ಬಳಿಸಿ ರಿವರ್ಸ್ ಸರ್ಚ್ ಮಾಡಿದಾಗ, ವೈರಲ್ ವಿಡಿಯೊದ ಧೀರ್ಘ ವಿಡಿಯೊ ಲಭ್ಯವಾಗಿದೆ. ಈ ವಿಡಿಯೊ 1:04 ಸೆಕೆಂಡ್ ಇದೆ.
ಈ ವಿಡಿಯೊ, ಉತ್ತರ ಪ್ರದೇಶದ ಚುನಾವಣೆ ಪ್ರಯುಕ್ತ ಅಖಿಲೇಶ್ ಯಾದವ್ ಮನೆ ಮನೆ ಪ್ರಚಾರದ ಸಮಯದಲ್ಲಿ ಮಾಡಿರುವ ವಿಡಿಯೊ ಎಂದು ತೋರುತ್ತಿದೆ. ಈ ಸಂಧರ್ಭದಲ್ಲಿ ಹಲವಾರು ಜನರು ಅವರ ಸುತ್ತುವರೆದು ಮಾತನಾಡುತ್ತಿದ್ದಾರೆ.
ಅಖಿಲೇಶ್ ಯಾದವ್ ಅವರು ಅಲ್ಲಿ ನೆರೆದಿರುವ ಜನರೊಂದಿಗೆ ಮಾತನಾಡುತ್ತಾ, “ಜನರು ಏನು ಯೋಚಿಸುತ್ತಿದ್ದಾರೆ” ಎಂದು ಪ್ರಶ್ನಿಸುತ್ತಾರೆ. ಜೊತೆಗೆ, ಜನರು ಚೆನ್ನಾಗಿದ್ದಾರೆಯೆ? ರಸ್ತೆ ಮತ್ತು ಹೆದ್ದಾರಿ ಚೆನ್ನಾಗಿದೆಯೆ ಎಂದು ಕೇಳುತ್ತಾರೆ.
ಈ ವೇಳೆ ವಯೋವೃದ್ದಎಂದು ತೋರುವ ವ್ಯಕ್ತಿಯೊಬ್ಬರು, “ಮಗನೇ, ಮೊದಲು ಮಿಷಿನ್(EVM) ಅನ್ನು ಸುಟ್ಟು ಹಾಕು” ಎಂದು ಹೇಳುತ್ತಾರೆ. ವಿಡಿಯೊದಲ್ಲಿ ವ್ಯಕ್ತಿ ಕಾಣಿಸುವುದಿಲ್ಲ. ಕೇವಲ ಕೈಗಳಷ್ಟೇ ಕಾಣುತ್ತದೆ.
ಈ ಸಮಯದಲ್ಲಿ ಅಖಿಲೇಶ್ ಯಾದವ್ ಅವರು, “ಈ ಹಿಂದೆ ಅವರು ಚುನಾವಣಾ ಬೂತ್‌ಗಳನ್ನು ಗಲಾಟೆ ಮಾಡಿ ವಶಕ್ಕೆ ಪಡೆಯುತ್ತಿದ್ದರು. ಈಗ ಬಿಜೆಪಿಯವರು ಅದನ್ನು ಬೇರೆಯೆ ರೀತಿಯಲ್ಲಿ ತಂತ್ರಪೂರ್ವಕವಾಗಿ ಮಾಡುತ್ತಿದ್ದಾರೆ” ಎಂದು ಹೇಳುತ್ತಾರೆ.
ಇದರ ನಂತರ ಅಖಿಲೇಶ್ ಅವರನ್ನು ಉದ್ದೇಶಿಸಿ ಮತ್ತೇ ಮಾತನಾಡುವ ವಯೋವೃದ್ಧ, “ನಾನು ನಿಮಗೆ ಹೇಳುತ್ತಿದ್ದೇನೆ. ಇಲ್ಲಿ ಒಂದು ಓಟು ಕೂಡಾ ಇಲ್ಲ, ಎಲ್ಲಾ ಓಟು ಕೂಡಾ ಮಿಷಿನ್(EVM)ಗೆ ಹೋಗುತ್ತಿದೆ. ನೀವು ಮಿಷಿನ್(EVM) ಬದಲಾಯಿಸದೆ, ಜನರ ಸರ್ಕಾರ ಬರುವುದಿಲ್ಲ, ಬರುವುದಿಲ್ಲ, ಬರುವುದಿಲ್ಲ” ಎಂದು ಹೇಳುತ್ತಾರೆ.
ಈ ವೇಳೆ ಅಖಿಲೇಶ್ ಯಾದವ್, “ಇದು ನಿಜವೇ” ಎಂದು ಕೇಳುತ್ತಾರೆ. ಅದಕ್ಕೆ ವಯೋವೃದ್ದ , “ಮಿಷಿನ್(EVM) ಬದಲಾಯಿಸಿ, ಒಂದೇ ಬಾರಿಗೆ ಎಲ್ಲಾ ಓಟುಗಳೂ ಬರುತ್ತದೆ” ಎಂದು ಹೇಳುತ್ತಾರೆ. ಇದರ ನಂತರ ವೃದ್ದ, ಪ್ರಧಾನಿ ಮೋದಿ ಅವರನ್ನು ಉಲ್ಲೇಖಿಸಿ ಅಶ್ಲೀಲ ಪದ ಉಲ್ಲೇಖಿಸುವಾಗ ಅಖಿಲೇಶ್ ಯಾದವ್ ಅವರು ಬಾಯಿಗೆ ಬೆರಳಿಟ್ಟು, ಹಾಗೆ ಹೇಳಬೇಡಿ ಎಂದು ಸೂಚಿಸುತ್ತಾರೆ.
ಪೂರ್ಣ ವಿಡಿಯೊ ನೋಡಿ
ವಾಸ್ತವದಲ್ಲಿ ಬಿಜೆಪಿ ಬೆಂಬಲಿಗರು ವೈರಲ್ ಮಾಡಿರುವ ವಿಡಿಯೊ 14 ಸೆಕೆಂಡ್ ಇದೆ. ಅದು ಅಸ್ಪಷ್ಟವಾಗಿದೆ. ಅದರಲ್ಲಿ ವಯೋವೃದ್ದ ಮಾತನಾಡುವುದು, “ಎಲ್ಲಾ ಓಟು ಕೂಡಾ ಮಿಷಿನ್(EVM)ಗೆ ಹೋಗುತ್ತಿದೆ. ನೀವು ಮಿಷಿನ್(EVM) ಬದಲಾಯಿಸದೆ, ಜನರ ಸರ್ಕಾರ ಬರುವುದಿಲ್ಲ, ಬರುವುದಿಲ್ಲ, ಬರುವುದಿಲ್ಲ” ಎಂದಾಗಿದೆ.
ಬಿಜೆಪಿ ಬೆಂಬಲಿಗರು ಪ್ರತಿಪಾದಿಸಿದಂತೆ, ವಯೋವೃದ್ದ ವ್ಯಕ್ತಿಯು ಈ ಇಡೀ ಸಂಭಾಷಣೆಯಲ್ಲಿ, ಮಸೀದಿಯ ಬಗ್ಗೆಯಾಗಲಿ, ನಿಮಗೆ ಓಟು ನೀಡುವುದಿಲ್ಲ ಎಂದಾಗಲಿ ಅಥವಾ ನಿಮ್ಮ ಸರ್ಕಾರ ಬರುವುದಿಲ್ಲ ಎಂದಾಗಲಿ ಹೇಳುವುದಿಲ್ಲ.
ಒಟ್ಟಿನಲ್ಲಿ ಹೇಳಬಹುದಾದರೆ, ಉತ್ತರ ಪ್ರದೇಶ ಚುನಾವಣಾ ಪ್ರಚಾರದ ಸಮಯದಲ್ಲಿ ಅಖಿಲೇಶ್ ಯಾದವ್ ಅವರಿಗೆ ವಿಡಿಯೊದಲ್ಲಿನ ವಯೋವೃದ್ದ ಛೀಮಾರಿ ಹಾಕಿಲ್ಲ. ಅವರು ಮಾತನಾಡಿದ್ದು ‘EVM’ ಮಿಷಿನ್ ಬಗ್ಗೆಯಾಗಿದ್ದು, ಅದನ್ನು ಬದಲಾಯಿಸಿ ಎಂದು ಅಖಿಲೇಶ್ ಜೊತೆಗೆ ಹೇಳಿದ್ದಾರೆ.
ಇದನ್ನು ಓದಿರಿ: Fact check: ‘ಮೋದಿಯಿಂದಾಗಿ ಕೊರೊನಾ ಸಮಯದಲ್ಲಿ ಪ್ರತಿ ಮನೆಗೆ ಲಕ್ಷ್ಮಿ ದೇವಿ ಬಂದಿದ್ದರು’; ಅಮಿತ್ ಶಾ ಹೇಳಿದ್ದು ನಿಜವೇ?