Fact check: ‘ಮೋದಿಯಿಂದಾಗಿ ಕೊರೊನಾ ಸಮಯದಲ್ಲಿ ಪ್ರತಿ ಮನೆಗೆ ಲಕ್ಷ್ಮಿ ದೇವಿ ಬಂದಿದ್ದರು’; ಅಮಿತ್ ಶಾ ಹೇಳಿದ್ದು ನಿಜವೇ?

ಬುಧವಾರದಂದು ಉತ್ತರ ಪ್ರದೇಶದ ಅಟ್ರೌಲಿ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ, “ಕೋವಿಡ್ ಸಾಂಕ್ರಾಮಿಕದ ಕಳೆದ ಎರಡು ವರ್ಷಗಳಲ್ಲಿ ಕಮಲದ ಮೇಲೆ ಕೂತ ಲಕ್ಷ್ಮಿ ದೇವಿ ಪ್ರತಿ ಮನೆಗೂ ಬಂದಿದ್ದಾಳೆ. ಇದೆಲ್ಲವೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಾಧ್ಯವಾಗಿದೆ” ಎಂದು ಹೇಳಿದ್ದಾರೆ.

ಭಾರತೀಯ ಪುರಾಣ ಕತೆಗಳ ಪ್ರಕಾರ ಲಕ್ಷ್ಮೀ ದೇವಿ ಸಂಪತ್ತಿನ ದೇವತೆಯಾಗಿದ್ದಾಳೆ. ಅಮಿತ್‌ ಶಾ ಅವರ ಈ ಹೇಳಿಕೆಯನ್ನು ಅರ್ಥ ಮಾಡಿಕೊಂಡರೆ, ಅವರು ಹೇಳಿದ್ದು, “ಕೊರೊನಾ ಸಮಯದಲ್ಲಿ ಪ್ರತಿ ಭಾರತೀಯರ ಮನೆಯಲ್ಲಿ ಸಂಪತ್ತು ತುಳುಕುತ್ತಿತ್ತು. ಆರ್ಥಿಕ ತೊಂದರೆ ದೇಶದ ಯಾವುದೇ ಪ್ರಜೆಯ ಮನೆಯಲ್ಲಿ ಇರಲಿಲ್ಲ. ಇದೆಲ್ಲವೂ ಸಾಧ್ಯವಾಗಿದ್ದು ಪ್ರಧಾನಿ ಮೋದಿಯಿಂದಾಗಿ” ಎಂದಾಗಿದೆ.

ಇದನ್ನೂ ಓದಿ: Fact check: ಕರ್ನಾಟಕ ಯೂತ್‌ ಕಾಂಗ್ರೆಸ್ ಕಚೇರಿ ಉದ್ಘಾಟನೆಗೆ ಇಸ್ಲಾಂ ಧಾರ್ಮಿಕ ವಿಧಾನಗಳನ್ನು ಅನುಸರಿಸಿದ್ದು ನಿಜವೇ?

ಫ್ಯಾಕ್ಟ್‌ಚೆಕ್

ಗೃಹ ಸಚಿವ ಅಮಿತ್‌ ಶಾ ಅವರು ಹೇಳಿದ್ದು ನಿಜವೇ ಅಥವಾ ಸುಳ್ಳೆ ಎಂದು ಚರ್ಚೆಗಳಾಗುತ್ತಿದೆ. ಸಚಿವರ ಈ ಹೇಳಿಕೆಯ ಬಗ್ಗೆ ‘ಏನ್‌ಸುದ್ದಿ.ಕಾಂ’ ಸತ್ಯಾಸತ್ಯತೆಯನ್ನು ಪರಿಶೀಲಿಸಿದೆ. ಅವುಗಳನ್ನು ಒಂದೊಂದಾಗಿ ನೋಡೋಣ.

ದೇಶದ ಜಿಡಿಪಿ

ಜಿಡಿಪಿ ಎಂದರೆ Gross Domestic Product ಅರ್ಥಾತ್ ಒಟ್ಟು ದೇಶೀಯ ಉತ್ಪನ್ನ. ಅಂದರೆ ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದೊಳಗೆ ಉತ್ಪಾದನೆಯಾಗುವ ಸರಕು ಮತ್ತು ಸೇವೆಗಳ ಒಟ್ಟು ಮಾರುಕಟ್ಟೆ ಮೌಲ್ಯವಾಗಿದೆ. ಇದರೊಂದಿಗೆ ದೇಶದಲ್ಲಿ ಜಿಡಿಪಿ ಇಳಿಕೆಯಾಗಿದೆ ಎಂದರೆ ದೇಶದಲ್ಲಿ ಉತ್ಪಾದನೆಗಳು ಕಡಿಮೆಯಾಗಿದೆ ಎಂದರ್ಥ.

ಕೊರೊನಾ ಸೋಂಕು 2019ರಲ್ಲಿ ಚೀನಾದಲ್ಲಿ ಪತ್ತೆಯಾದರೂ, 2020ರ ಹೊತ್ತಿಗೆ ಭಾರತದಲ್ಲಿ ಎಲ್ಲಾ ಕಡೆಗೆ ಹರಡಲು ಪ್ರಾರಂಭವಾಗಿತ್ತು. 2020 ರಲ್ಲಿ ದೇಶದ ಜಿಡಿಪಿ -7.252 ಗೆ ಇಳಿದಿತ್ತು. (ಸರಿಯಾಗಿ ಗಮನಿಸಿ ಅದು ಮೈನಸ್‌ 7.252)

ಕೊರೊನಾ ಸಮಯದಲ್ಲಿ ಲಾಕ್‌ಡೌನ್‌‌ ಇದ್ದ ಕಾರಣ ವಿಶ್ವದ ಇತರ ದೇಶಗಳಲ್ಲೂ ಜಿಡಿಪಿ ಕುಸಿತ ಕಂಡಿತ್ತು. ಹೀಗೆಯೇ ಭಾರತದಲ್ಲೂ ಜಿಡಿಪಿ ಕುಸಿತ ಆಗಿತ್ತು ಎಂಬ ವಾದಕ್ಕೆ ಬರುವುದಾದರೆ ಅದು 100% ಸರಿಯಾದ ವಾದವಲ್ಲ. ಯಾಕೆಂದರೆ ಕಳೆದ ಹತ್ತು ವರ್ಷಗಳ ಜಿಡಿಪಿಯನ್ನು ಲೆಕ್ಕಕ್ಕೆ ತೆಗೆದುಕೊಂಡದರೆ ಭಾರತದ ಜಿಡಿಪಿ ಏರುತ್ತಲೇ ಇತ್ತು. ಭಾರತದ ಜಿಡಿಪಿ ನಿರಂತರವಾಗಿ ಇಳಿಕೆ ಪ್ರಾರಂಭವಾಗಿದ್ದು 2016ರ ನಂತರವಾಗಿದೆ.

2010 ರಲ್ಲಿ 8.498 ಇದ್ದ ದೇಶದ ಜಿಡಿಪಿ 2019 ರ ಹೊತ್ತಿಗೆ 4.042 ತಲುಪಿತ್ತು. ಅದೇ ರೀತಿ 2020 ರಲ್ಲಿ ದೇಶದ ಜಿಡಿಪಿ ‘ಮೈನಸ್‌ 7.252ತಲುಪಿತ್ತು. ಈ ಮಾದರಿಯನ್ನು ನೋಡುವುದಾದರೆ ದೇಶದಲ್ಲಿ ಕೊರೊನಾ ಹರಡದಿದ್ದರೂ ದೇಶದ ಜಿಡಿಪಿ ಮೇಲಕ್ಕೆ ಏರುತ್ತಿರಲಿಲ್ಲ. ಆರ್ಥಿಕ ತಜ್ಞರು, ‘ನೋಟ್ ಬ್ಯಾನ್, ಅವೈಜ್ಞಾನಿಕ ಜಿಎಸ್‌ಟಿ ಜಾರಿ ಮತ್ತು ಮೋದಿ ಸರ್ಕಾರದ ಇತರ ಯೋಜನೆಗಳು ಇದಕ್ಕೆ ಕಾರಣ’ ಎಂದು ಹೇಳುತ್ತಾರೆ.

ಇದನ್ನೂ ಓದಿ: Fact check: UP ಮುಸ್ಲಿಮ್ಮರು BJP ಯನ್ನು ಬೆಂಬಲಿಸುತ್ತಿದ್ದಾರೆ ಎಂದು ಸುದ್ದಿ ಮಾಡಿದ ‘ಟಿವಿ9 ಭಾರತವರ್ಷ’! ವಾಸ್ತವವೇನು?

ಇಷ್ಟೇ ಅಲ್ಲದೆ, ದೇಶದಲ್ಲಿ ಕೊರೊನಾ ಲಾಕ್‌ಡೌನ್‌ ಪ್ರಾರಂಭವಾಗಿದ್ದು 2020 ರ ಮಾರ್ಚ್‌ ನಂತರವಾಗಿದೆ. ಆದರೆ ದೇಶದ ಜಿಡಿಪಿ 2018-19 ಮತ್ತು  2019-20 ರ ಆರ್ಥಿಕ ವರ್ಷ ಎಂಟು ತ್ರೈಮಾಸಿದಲ್ಲೂ ಇಳಿಕೆಯಲ್ಲಿತ್ತು. ಕೊರೊನಾ ಲಾಕ್‌ಡೌನ್‌‌ನಿಂದಾಗಿ ದೇಶದ ಜಿಡಿಪಿ ಮೇಲೆ ಪರಿಣಾಮ ಬೀರಿದ್ದು 2020-21 ರ ಮೇಲೆಯಾಗಿದೆ. 2020-21 ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ -23.9 (ಸರಿಯಾಗಿ ಗಮನಿಸಿ ಅದು ‘ಮೈನಸ್‌23.9ಆಗಿದೆ). ಅದರ ನಂತರ ಲಾಕ್‌ಡೌನ್‌ ಸಡಿಲಿಕೆಯ ನಂತರ ದೇಶದ ಜಿಡಿಪಿ ಮೇಲೇರುತ್ತಾ ಬಂದಿದೆ.


source: tradingeconomics.com

ತಲಾ ಆದಾಯ

ತಲಾ ಆದಾಯ ಎಂದರೆ ದೇಶದ ಪ್ರತಿ ವ್ಯಕ್ತಿ ಗಳಿಸಿದ ಸರಾಸರಿ ಆದಾಯ. ತಲಾ ಆದಾಯವನ್ನು ಒಂದು ದೇಶದ ಜನಸಂಖ್ಯೆಯ ಜೀವನ ಮಟ್ಟ ಮತ್ತು ಜೀವನದ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲು ಬಳಸಬಹುದು.

ದೇಶದ ತಲಾ ಆದಾಯ 2012 ರಿಂದ ನಿತಂತರ ಏರುಗತಿಯಲ್ಲೇ ಇತ್ತು. ಆದರೆ 2020 ರಲ್ಲಿ ದೇಶದ ತಲಾ ಆದಾಯ ಪ್ರಧಾನಿ ಮೋದಿ ಇದ್ದಾಗಿಯೂ ಇಳಿದಿದೆ.


source: tradingeconomics.com

ಇದನ್ನೂ ಓದಿ: Fact check: ‘RSS ದಾಳಿಯಿಂದ ಗ್ರಾಮ ತೊರೆದ ಮುಸ್ಲಿಮರು’ ಎಂಬ ವಿಡಿಯೊದ ವಾಸ್ತವವೇನು?

ಭಾರತದ ಸಂಪತ್ತು

ಭಾರತವು “ಶ್ರೀಮಂತ ಗಣ್ಯರನ್ನು ಹೊಂದಿರುವ ಬಡ ಮತ್ತು ಅತ್ಯಂತ ಅಸಮಾನ ದೇಶವಾಗಿದೆ” ಎಂದು ಇತ್ತೀಚಿನ “ವಿಶ್ವ ಅಸಮಾನತೆ ವರದಿ-2022’’ ಹೇಳಿದೆ. 2021 ರಲ್ಲಿ ದೇಶದ 57% ಒಟ್ಟು ರಾಷ್ಟ್ರೀಯ ಆದಾಯದ ಪಾಲು ಅಗ್ರ 10% ಜನರು ಹೊಂದಿದ್ದಾರೆ ಎಂದು ವರದಿಯು ಹೇಳಿದೆ.

ಭಾರತೀಯ ವಯಸ್ಕ ಜನಸಂಖ್ಯೆಯ ಸರಾಸರಿ ರಾಷ್ಟ್ರೀಯ ಆದಾಯ 2,04,200 ಆಗಿದೆ. ಕೆಳ ಮಟ್ಟದ 50% ಜನರು ವಾರ್ಷಿಕವಾಗಿ ₹53,610 ಗಳಿಸಿದರೆ, ಅಗ್ರ 10% ಜನರು ಅದಕ್ಕಿಂದ 20 ಪಟ್ಟು (₹11,66,520) ಹೆಚ್ಚು ಗಳಿಸುತ್ತಾರೆ ಎಂದು ವರದಿಯು ಉಲ್ಲೇಖಿಸಿದೆ. ವಿಶ್ವ ಅಸಮಾನತೆಯ ವರದಿ-2022 ರ ಪ್ರಕಾರ, “2021 ರಲ್ಲಿ ದೇಶದ ಒಟ್ಟು ರಾಷ್ಟ್ರೀಯ ಆದಾಯದ 22% ಸಂಪತ್ತು ಕೇವಲ ಅಗ್ರ 1% ಜನರ ಬಳಿ ಶೇಖರಣೆಗೊಂಡಿದ್ದು, ಈ ಮೂಲಕ ಭಾರತವು ಅತ್ಯಂತ ಅಸಮಾನ ದೇಶವಾಗಿ ಹೊರಹೊಮ್ಮಿದೆ” ಎಂದು ಉಲ್ಲೇಖಿಸಿದೆ. ಈ ವರ್ಷದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರೇ ಆಗಿದ್ದಾರೆ.

ಅವೈಜ್ಞಾನಿಕ ಕೊರೊನಾ ಲಾಕ್‌ಡೌನ್‌ನಲ್ಲಿ ಕಾರ್ಮಿಕ ಮಹಾವಲಸೆ

ಪ್ರಧಾನಿ ಮೋದಿಯವರ ಅವೈಜ್ಞಾನಿಕ ಮತ್ತು ಅತ್ಯಂತ ತುರ್ತಿನ ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ದೇಶದ ಸಂಪತ್ತನ್ನು ಸೃಷ್ಟಿಸುವ ಕೋಟ್ಯಾಂತರ ಕಾರ್ಮಿಕರು ಸಂಕಷ್ಟಕ್ಕೆ ಒಳಗಾದರು. ಲಕ್ಷಾಂತರ ಕಾರ್ಮಿಕರು ಹೊಟ್ಟೆಗೆ ಏನೂ ಇಲ್ಲದೆ ಸಾವಿರಾರು ಕಿಲೊ ಮೀಟರ್‌ ದೂರದ ತಮ್ಮ ಮನೆಯನ್ನು ಅರಸುತ್ತಾ ಬರಿಗಾಲಲ್ಲಿ ನಡೆಯುತ್ತಾ ಹೊದರು. ಈ ವೇಳೆ ಸಾವಿರಾರು ಜನರು ದಾರಿ ಮಧ್ಯೆ ಅಸುನೀಗಿದರು. ಹಲವಾರು ದಾರುಣ ಘಟನೆಗಳಿಗೂ ದೇಶ ಸಾಕ್ಷಿಯಾಯಿತು. ಈ ವೇಳೆ ಕೂಡಾ ಮೋದಿ ದೇಶದ ಪ್ರಧಾನಿಯಾಗಿದ್ದರು.

ಆರೋಗ್ಯ ತಜ್ಞರ ಎಚ್ಚರಿಕೆಯ ಹೊರಾಗಿಯು ಆರೋಗ್ಯ ವ್ಯವಸ್ಥೆ ಸರಿ ಮಾಡದ ಪ್ರಧಾನಿ

ಕೊರೊನಾ ಮೊದಲ ಅಲೆಯ ಸಮಯದಲ್ಲಿ ದೇಶದ ಜನತೆ ಕಷ್ಟಪಟ್ಟರೂ, ಎರಡನೇ ಅಲೆ ಬರಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದರೂ, ಪ್ರಧಾನಿ ಮೋದಿ ಅದರ ಬಗ್ಗೆ ಗಮನಹರಿಸಿರಲಿಲ್ಲ. 2021ರ ಜನವರಿ 28 ರಂದು ವರ್ಲ್ಡ್ ಎಕನಾಮಿಕ್ ಫೋರಮ್‌ನ ದಾವೋಸ್ ಸಂವಾದವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ‘ಕೊರೊನಾ ವೈರಸ್ ಅನ್ನು ಯಶಸ್ವಿಯಾಗಿ ನಿಯಂತ್ರಿಸಿದ ದೇಶಗಳಲ್ಲಿ ಭಾರತವೂ ಒಂದು’ ಎಂದು ಘೋಷಿಸಿದ್ದರು.

ಇದರ ನಂತರ ದೇಶದಲ್ಲಿ ಎರಡನೇ ಅಲೆ ಪ್ರಾರಂಭವಾಗಿ ದೇಶದ ಜನತೆ ಆಮ್ಲಜನಕವಿಲ್ಲದೆ ಕಷ್ಟಕ್ಕೆ ಒಳಗಾಗಿದ್ದು. ಕೋಟ್ಯಾಂತರ ಭಾರತೀಯರು ಆಮ್ಲಜನಕವಿಲ್ಲದೆ, ಕೊರೊನಾ ಚಿಕಿತ್ಸೆಗೆ ದುಡ್ಡಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದರು. ದೇಶದ ಸ್ಮಶಾನಗಳು ತುಂಬಿ ಜನರು ಹೆಣವನ್ನು ಸುಡಲೂ ಸರತಿ ಸಾಲಿನಲ್ಲಿ ನಿಲ್ಲುವಂತಾಯಿತು.

ಇದನ್ನೂ ಓದಿ: Fact check: ಜಾಟ್ ಮನೆಗಳಿಂದ ಲಸ್ಸಿ ಕೇಳುತ್ತಿದ್ದಾರೆ – ಪ್ರಧಾನಿಯವರ ಭಾಷಣವನ್ನು ತಿರುಚಲಾಗಿದೆ

ಹೆಚ್ಚಿದ ಸಾಲ

ಕೊರೊನಾದ ಎರಡು ವರ್ಷಗಳಲ್ಲಿ ಪ್ರತಿ ಭಾರತೀಯನ ಮೇಲಿನ ಸಾಲಗಳು ಹೆಚ್ಚಾಗಿದೆ. ಭಾರತದ ಸಾಲದ ಹೊರೆಯು 2021 ರ ಹಣಕಾಸು ವರ್ಷಕ್ಕೆ ಒಟ್ಟು GDP ಗಿಂತಲೂ 60.5% ಕ್ಕೆ ಜಿಗಿದಿದೆ.

ಉದ್ಯೋಗ ನಷ್ಟ

CMIE 2020 ವರದಿಯ ಪ್ರಕಾರ, ಜುಲೈ 2020 ರಲ್ಲಿ ರಾಷ್ಟ್ರೀಯ ನಿರುದ್ಯೋಗ ದರವು 7.4% ಕ್ಕೆ ಇಳಿದಿತ್ತು ಮತ್ತು ಏಪ್ರಿಲ್ 2020 ರಲ್ಲಿ ಗರಿಷ್ಠ 23.5% ವರೆಗೂ ತಲುಪಿತ್ತು. ನವೆಂಬರ್ 2021 ರಲ್ಲಿ ಕಾರ್ಮಿಕ ವರ್ಗದ ಲಕ್ಷಾಂತರ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು CMIE ವರದಿ ಮಾಡಿತ್ತು.  ಸುಮಾರು 60 ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ಈ ವರದಿ ಹೇಳಿತ್ತು.

ಬೆಲೆ ಏರಿಕೆ

ಕೊರೊನಾದಿಂದ ದೇಶದ ಜನರು ಉದ್ಯೋಗವಿಲ್ಲದೆ ಕಷ್ಟ ಪಡುತ್ತಿದ್ದಾಗ, ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಪೆಟ್ರೋಲ್, ಡೀಸೆಲ್ ಸೇರಿದಂತೆ ಇಂಧನಗಳ ಬೆಲೆಗಳನ್ನು ಏರಿಸುತ್ತಲೇ ಹೋಗಿದೆ. ದೇಶದ ಇತಿಹಾಸದಲ್ಲೇ ಇಂದನಕ್ಕೆ ಅತ್ಯಂತ ಹೆಚ್ಚು ಬೆಲೆ ಕೊರೊನಾದ ಈ ಎರಡು ವರ್ಷಗಳಲ್ಲಿ ದಾಖಲಾಯಿತು. ಇಷ್ಟೇ ಅಲ್ಲದೆ, ಅಡುಗೆ ಎಣ್ಣೆ ಸೇರಿದಂತೆ ದಿನ ಬಳಕೆ ವಸ್ತುಗಳ ಮೇಲೆ ಕೂಡಾ ಬೆಲೆ ಏರಿಕೆ ಆಗಿತ್ತು. ಜನರು ಬೆಲೆ ಏರಿಕೆಯಿಂದಾಗಿ ಕಷ್ಟ ಪಡುವಂತಾಯಿತು.

ಈ ಎಲ್ಲಾ ಆಧಾರಗಳನ್ನು ಇಟ್ಟುಕೊಂಡು ಹೇಳಬಹುದಾದರೆ, ಮೋದಿಯಿಂದಾಗಿ ಕೊರೊನಾ ಸಮಯದಲ್ಲೂ ದೇಶದ ಪ್ರತಿ ಮನೆಯ ಸಂಪತ್ತು ತುಂಬಿತ್ತು ಎಂಬ ಅಮಿತ್‌ ಶಾ ಅವರ ಹೇಳಿಕೆಯು ತಪ್ಪಾಗಿದೆ. ಇದಕ್ಕೆ ಯಾವುದೆ ಅಧೀಕೃತ ಆಧಾರಗಳು ಇಲ್ಲ. ಇದೊಂದು ರಾಜಕೀಯ ಗಿಮಿಕ್ಕಿನ ಭಾಷಣ ಮಾತ್ರವೇ ಆಗಿದೆ.

ಇದನ್ನೂ ಓದಿ:Fact check: ಸಿರಿಯಾ ಆಂತರಿಕ ಸಂಘರ್ಷದ ಫೋಟೋಗಳನ್ನು ಆಫ್ಘಾನಿಸ್ತಾನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights