FACT CHECK | ಉತ್ತರ ಪ್ರದೇಶದಲ್ಲಿ ಹಿಂದೂ ಸ್ವಾಮೀಜಿಯ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಎಂದು 2015ರ ವಿಡಿಯೋ ಹಂಚಿಕೆ
‘‘ಬಿಜೆಪಿ ಸರ್ಕಾರದ ವಿರುದ್ಧ ಎರಡು ಮಾತಾಡಿದ ಕಾರಣಕ್ಕೆ ಹಿಂದು ಸಮುದಾಯದ ಒಬ್ಬ ಸ್ವಾಮೀಜಿಯ ಪರಿಸ್ಥಿತಿ ನೋಡಿ. ಸ್ವಾಮೀಜಿ ಆದ್ರೆ ಏನು ಇನ್ನೊಬ್ಬರು ಆದ್ರೆ ಏನು, ದೇಶ ಅಪಾಯದಲ್ಲಿದೆ’’ ಎಂಬ ಬರಹದೊಂದಿಗೆ ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
View this post on Instagram
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೈರಲ್ ವಿಡಿಯೋದಲ್ಲಿ ಜ್ಯೋತಿರ್ಮಠದ ಶಂಕರಾಚಾರ್ಯ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಶ್ರೀಗಳನ್ನು ಬೆನ್ನಟ್ಟಿ ಪೊಲೀಸರು ಲಾಠಿ ಚಾರ್ಜ್ ನಡೆಸುತ್ತಿರುವುದುನ್ನು ಕಾಣಬಹುದು. ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ಇವರಿಗೆ ಈ ಪರಿಸ್ಥಿತಿ ಬಂದಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಪೋಸ್ಟ್ನ ಆರ್ಕೈವ್ ಲಿಂಕ್ ಅನ್ನು ಇಲ್ಲಿ ನೋಡಬಹುದು. ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವೀಡಿಯೊದ ಕೆಲವು ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ ಕೆಲ ಸುದ್ದಿ ಮಾಧ್ಯಮ ಯೂಟ್ಯೂಬ್ನಲ್ಲಿ ವೈರಲ್ ವೀಡಿಯೊಕ್ಕೆ ಹೋಲುವ ವೀಡಿಯೊವನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಇಂಡಿಯಾ ಟಿವಿ ಸೆಪ್ಟೆಂಬರ್ 23, 2015 ರಂದು ‘‘ವಾರಣಾಸಿಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆ, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ’’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಸಾರ ಮಾಡಿದೆ. ಈ ವೀಡಿಯೊದ 59ನೇ ಸೆಕೆಂಡ್ನಲ್ಲಿ ವೈರಲ್ ವೀಡಿಯೊದಲ್ಲಿರುವ ದೃಶ್ಯ ಕಾಣಬಹುದು.
ಫಸ್ಟ್ ಇಂಡಿಯಾ ನ್ಯೂಸ್ ಕೂಡ ಸೆಪ್ಟೆಂಬರ್ 23, 2015 ರಂದು ಇದೇ ರೀತಿಯ ವಿಡಿಯೋ ಹಂಚಿಕೊಂಡಿರುವುದು ನಾವು ಕಂಡುಕೊಂಡಿದ್ದೇವೆ. ವಿಡಿಯೋದ ಶೀರ್ಷಿಕೆಯು ವಾರಣಾಸಿಯಲ್ಲಿ ವಿಗ್ರಹ ವಿಸರ್ಜನೆಯ ಕುರಿತು ಸಂತರ ಮೇಲೆ ಲಾಠಿ ಚಾರ್ಜ್ ಎಂದು ಹೇಳುತ್ತದೆ.
ಈ ಮಾಹಿತಿಯನ್ನು ಪಡೆದುಕೊಂಡು ನಾವು ಗೂಗಲ್ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಆಗ ನವ್ಭಾರತ್ ಟೈಮ್ಸ್ ಸೆಪ್ಟೆಂಬರ್ 23, 2015 ರಂದು ವೈರಲ್ ವೀಡಿಯೊದಲ್ಲಿ ಕಂಡುಬರುವ ದೃಶ್ಯಗಳನ್ನು ಒಳಗೊಂಡಿರುವ ಫೋಟೋ ಗ್ಯಾಲರಿ ಸುದ್ದಿಯನ್ನು ಪ್ರಕಟಿಸಿರುವುದು ಸಿಕ್ಕಿತು. ಇದರಲ್ಲಿರುವ ಮಾಹಿತಿಯ ಪ್ರಕಾರ, ‘ಗಂಗಾ ನದಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸುವ ಬಗ್ಗೆ ವಾರಣಾಸಿಯಲ್ಲಿ 30 ಗಂಟೆಗಳ ಕಾಲ ನಡೆದ ಹಿಂಸಾಚಾರ ಮತ್ತು ದಿಗ್ಬಂಧನವು ಸೆಪ್ಟೆಂಬರ್ 23 ರ ಬುಧವಾರ ಮುಂಜಾನೆ ಕೊನೆಗೊಂಡಿತು. ವಿದ್ಯಾ ಮಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಸೇರಿದಂತೆ ಕೆಲವು ಹಿಂದೂ ಮಠಾಧೀಶರು ಸೇರಿದಂತೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಂಡರು. ಪೊಲೀಸರು ಲಕ್ಷ್ಮಿ ಕುಂಡದಲ್ಲಿ ವಿಗ್ರಹವನ್ನು ವಿಸರ್ಜಿಸಿದರು. ಸುಮಾರು 30 ಜನರು ಗಾಯಗೊಂಡರು, ಗಲಭೆ ಮತ್ತು ಕಲ್ಲು ತೂರಾಟದ ಜೊತೆಗೆ ಸಿಆರ್ಪಿಸಿಯ ಸೆಕ್ಷನ್ 144 ಅನ್ನು ಉಲ್ಲಂಘಿಸಿದ್ದಕ್ಕಾಗಿ 25 ಜನರನ್ನು ಬಂಧಿಸಲಾಯಿತು. ಇದಲ್ಲದೆ, ಗಾಯಗೊಂಡ ಶ್ರೀಗಳನ್ನು ಸೆಪ್ಟೆಂಬರ್ 23 ರ ಬುಧವಾರ ವಿಭಾಗೀಯ ಆಸ್ಪತ್ರೆಯ ತುರ್ತು ವಾರ್ಡ್ಗೆ ದಾಖಲಿಸಲಾಗಿದೆ’’ ಎಂದು ಬರೆದುಕೊಂಡಿದೆ.
ಸೆಪ್ಟೆಂಬರ್ 24, 2015 ರ ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ‘‘ವಾರಣಾಸಿಯ ಆಡಳಿತವು ಲಕ್ಷ್ಮಿ ಕುಂಡದಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಜನರಿಗೆ ಅವಕಾಶ ನೀಡಿತ್ತು. ಆದಾಗ್ಯೂ, ದ್ವಾರಕಾ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದರ ಶಿಷ್ಯರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ಮಹಾಂತ್ ಬಾಲಕ ದಾಸ್ ನೇತೃತ್ವದ ಪ್ರತಿಭಟನಾಕಾರರು, ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಗಂಗಾ ನದಿಯಲ್ಲಿ ವಿಗ್ರಹವನ್ನು ವಿಸರ್ಜಿಸಲು ದೃಢನಿಶ್ಚಯ ಮಾಡಿದರು. ಈ ಪ್ರತಿಭಟನಾಕಾರರು ದಶಾಶ್ವಮೇಧ ಘಾಟ್ ಬಳಿಯ ಗೊಡೌಲಿಯಾ ಕ್ರಾಸಿಂಗ್ನಲ್ಲಿ ಧರಣಿ ಕುಳಿತಿದ್ದರು. 30 ಗಂಟೆಗಳ ಕಾಲ ನಡೆದ ಘರ್ಷಣೆಯ ನಂತರ, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು’’ ಎಂದು ಬರೆಯಲಾಗಿದೆ.

ಹೀಗಾಗಿ ಸುಮಾರು 10 ವರ್ಷಗಳ ಹಿಂದೆ ಅಂದರೆ 2015 ರಲ್ಲಿ ನಡೆದ ಘಟನೆ ಇದಾಗಿದೆ. ಆ ಸಂದರ್ಭ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸರ್ಕಾರವಿತ್ತು ಮತ್ತು ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದರು ಎಂಬುದನ್ನು ನಾವು ಖಚಿತವಾಗಿ ಹೇಳುತ್ತೇವೆ.
ಇನ್ನು ಸಂತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಕ್ಕಾಗಿ ಅಖಿಲೇಶ್ ಯಾದವ್ ಅವರು ಆರು ವರ್ಷಗಳ ಬಳಿಕ ಕ್ಷಮೆಯನ್ನು ಕೂಡ ಕೇಳಿದ್ದರು. Swarajyamag ಏಪ್ರಿಲ್ 12, 2021 ರಂದು ಈ ಕುರಿತು ಸುದ್ದಿ ಪ್ರಕಟಿಸಿದ್ದು, ‘‘ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತಮ್ಮ ಆಡಳಿತದ ಅವಧಿಯಲ್ಲಿ ಮಾಡಿದ ತಪ್ಪಿಗೆ ಹಿಂದೂ ಸ್ವಾಮೀಜಿಗಳ ಕ್ಷಮೆಯಾಚಿಸಿದ್ದಾರೆ. 2015 ರಲ್ಲಿ ವಾರಣಾಸಿಯಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮದ ಸಂದರ್ಭದಲ್ಲಿ ಅವರ ಸರ್ಕಾರವು ಶ್ರೀಗಳ ಮೇಲೆ ಲಾಠಿ ಚಾರ್ಜ್ಗೆ ಆದೇಶಿಸಿತ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಮಾಡಿದ ತಪ್ಪನ್ನು ಒಪ್ಪಿಕೊಂಡು ಯಾದವ್ ಶಂಕರಾಚಾರ್ಯರಲ್ಲಿ ಕ್ಷಮೆಯಾಚಿಸಿದರು. ಏಪ್ರಿಲ್ 11 ರಂದು ಯಾದವ್ ಅವರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಮತ್ತು ಸ್ವಾಮಿ ಅವಿಮುಕ್ತೇಶ್ವರಾನಂದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು’’ ಎಂದು ವರದಿಯಲ್ಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆಡಳಿತಾವಧಿಯಲ್ಲಿ 2015ರಲ್ಲಿ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದರ ಮೇಲೆ ನಡೆಸಿದ ಲಾಠಿ ಚಾರ್ಜ್ಅನ್ನು ಪ್ರಸ್ತುತ ಬಿಜೆಪಿ ಸರ್ಕಾರದ ಅವದಿಯಲ್ಲಿ ನಡೆದಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಸರ್ವ ಶಿಕ್ಷಾ ಅಭಿಯಾನದ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂಬ ಪೋಸ್ಟ್ ನ ಅಸಲೀಯತ್ತೇನು ಗೊತ್ತೇ?

