FACT CHECK | ಪ್ರಧಾನಿ ಮೋದಿಯೊಂದಿಗೆ ಕೂತು ಊಟ ಮಾಡುತ್ತಿರುವ ಫೋಟೊದ ಅಸಲೀಯತ್ತೇನು ಗೊತ್ತೆ?
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಹೀನಾಯ ಸೋಲು ಕಂಡಿದೆ. ಇದರೊಂದಿಗೆ ನಾಲ್ಕನೇ ಬಾರಿ ಅಧಿಕಾರ ಹಿಡಿಯುವ ಕನಸು ಕಮರಿದೆ. ಮತ್ತೊಂದೆಡೆ 26 ವರ್ಷಗಳ ಸುದೀರ್ಘ ಅವಧಿಯ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕಮಲ ಅರಳಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ 48 ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ವೊಂದು ವೈರಲ್ ಆಗುತ್ತಿದ್ದು, ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಟ್ಟಿಗೆ ಊಟ ಮಾಡಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.
‘views sports sakil’ ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಡೈನಿಂಗ್ ಟೇಬಲ್ ಮುಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಎಪಿ ಸಂಚಾಲಕ, ದಿಲ್ಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಇರುವ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಇದರ ಜೊತೆಗೆ, ‘ಪ್ರಧಾನಿ ನರೇಂದ್ರ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ಒಟ್ಟಿಗೆ ಭೋಜನ ಮಾಡಿದರು’ ಎಂದು ಬರೆಯಲಾಗಿದೆ. ಇದರ ಜೊತೆಗೆ ದಿಲ್ಲಿ ಚುನಾವಣೆಗೆ ಸಂಬಂಧಿಸಿದ ಹ್ಯಾಶ್ಟ್ಯಾಗ್ಗಳನ್ನೂ ಬಳಸಲಾಗಿದೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ ಅಂತಹ ಯಾವುದೇ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ. ಮತ್ತಷ್ಟು ಮಾಹಿತಿಗಾಗಿ ಸೂಕ್ಷ್ಮವಾಗಿ ಪರಿಶೀಲಿಸಲು ‘ಸೈಟ್ ಎಂಜಿನ್’ ಎಂಬ ಎಐ ಚಿತ್ರಗಳನ್ನು ಪತ್ತೆ ಹಚ್ಚುವ ಟೂಲ್ನಲ್ಲಿ ಈ ಚಿತ್ರವನ್ನು ಪರಿಶೀಲನೆ ನಡೆಸಲಾಯಿತು. ಆಗ ಇದು ಶೇ. 99ರಷ್ಟು ಎಐನಿಂದ ರಚಿಸಿದ ಚಿತ್ರ ಎಂದು ಫಲಿತಾಂಶ ನೀಡಿದೆ. ಶೇ. 99ರಷ್ಟು ಜನರೇಟಿವ್ ಎಐ ಬಳಸಲಾಗಿದ್ದು, ಶೇ. 80ರಷ್ಟು ಫೇಸ್ ಮ್ಯಾನಿಪುಲೇಷನ್ ಮಾಡಲಾಗಿದೆ ಎಂದು ತಿಳಿಸಿದೆ.
![]()
ಇದನ್ನು ಮತ್ತಷ್ಟು ಖಚಿತಪಡಿಸಿಕೊಳ್ಳಲು ಎಐ ಕಂಟೆಂಟ್ ಅನ್ನು ಪತ್ತೆ ಹಚ್ಚುವ ಇನ್ನೊಂದು ಟೂಲ್ ‘ಹೈವ್ ಮಾಡರೇಷನ್’ನಲ್ಲಿ ಪರಿಶೀಲನೆಗೆ ಒಳಪಡಿಸಲಾಯಿತು. ಅದು ಕೂಡ ಈ ಚಿತ್ರವನ್ನು ಶೇ. 91.5ರಷ್ಟು ಕೃತಕ ಬುದ್ಧಿಮತ್ತೆ (ಎಐ) ಬಳಸಿ ರಚಿಸಿದ್ದು ಎನ್ನುವ ಫಲಿತಾಂಶವನ್ನು ನೀಡಿದೆ.
![]()
ಒಟ್ಟಾರೆಯಾಗಿ ಹೇಳುವುದಾದರೆ, ದಿಲ್ಲಿ ಚುನಾವಣಾ ಫಲಿತಾಂಶ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಒಟ್ಟಾಗಿ ಊಟ ಮಾಡಿದರು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಚಿತ್ರ ನಕಲಿ ಎಂಬುದು ಸ್ಪಷ್ಟವಾಗಿದೆ. ವೈರಲ್ ಪೋಟೊವನ್ನು ಎಐ ಟೂಲ್ಗಳನ್ನು ಬಳಸಿ ರಚಿಸಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಉತ್ತರ ಪ್ರದೇಶದಲ್ಲಿ ಹಿಂದೂ ಸ್ವಾಮೀಜಿಯ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಎಂದು 2015ರ ವಿಡಿಯೋ ಹಂಚಿಕೆ

