ಜುಲೈ 26ಕ್ಕೆ ಬಿಎಸ್‌ವೈ ರಾಜೀನಾಮೆ ಫಿಕ್ಸ್‌?; ತರಾತುರಿಯಲ್ಲಿ ಸಾವಿರಾರು ಕೋಟಿ ಮೊತ್ತದ ಯೋಜನೆಗಳಿಗೆ ಅನುಮತಿ!

ದೆಹಲಿ ಭೇಟಿಯ ನಂತರ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮಾತೇ ಇಲ್ಲ ಎಂದು ಹೇಳಿದ್ದ ಸಿಎಂ ಬಿಎಸ್‌ವೈ, ಗುರುವಾರ ಬೆಳಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಹೈಕಮಾಂಡ್‌ ನಿರ್ಧಾರಕ್ಕೆ ಬದ್ದನಾಗಿರುತ್ತೇನೆ ಎಂದು ಹೇಳಿರುವ ಅವರು ತಾವು ರಾಜೀನಾಮೆ ನೀಡುವ ಸೂಚನೆಯನ್ನು ಕೊಟ್ಟಿದ್ದಾರೆ.

ಅವರ ಈ ಹೇಳಿಕೆಯ ಬಳಿಕ ಸಚಿವರು ಬಿಎಸ್‌ವೈ ಮನೆಗೆ ದೌಡಿಟ್ಟಿದ್ದು, ಸಭೆ ನಡೆಸಿದ್ದಾರೆ. ಈ ವೇಳೆ ಸಭೆ ನಡೆಸಿದ್ದು, ಸಾವಿರಾರು ಕೋಟಿ ರೂ ಮೊತ್ತದ ಹಲವಾರು ಯೋಜನೆಗಳಿಗೆ ಅನುಮತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ತರಾತುರಿಯಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಅವರು ಜುಲೈ 26ರಂದು ರಾಜೀನಾಮೆ ನೀಡುವುದು ಖಚಿತವೆಂಬುದನ್ನು ಸೂಚಿಸುತ್ತಿವೆ ಎನ್ನಲಾಗಿದೆ.

ನಿರಾವರಿ ಇಲಾಖೆಯ 4 ನಿಗಮಗಳಲ್ಲಿ 12ಸಾವಿರ ಕೋಟಿ ಮೊತ್ತದ ಯೋಜನೆಗೆ ಅನುಮತಿ ನೀಡಿದ್ದಾರೆ. ಈ ಪೈಕಿ ಕಾವೇರಿ ನಿಗಮಕ್ಕೆ ಕೇವಲ 1 ಸಾವಿರ ಕೋಟಿಯಷ್ಟೇ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಮಾತ್ರವಲ್ಲದೆ, ಎರಡು ದಿನಗಳ ಹಿಂದೆ ತಮ್ಮ ತವರು ಶಿವಮೊಗ್ಗ ಜಿಲ್ಲೆಯಲ್ಲಿ ಕೆಲವು ಕಾಮಗಾರಿಗಳಿಗೆ ಬಿಎಸ್‌ವೈ ಚಾಲನೆ ನೀಡಿದ್ದಾರೆ. ಜೋಗ​ ಜಲಪಾತದ ಅಭಿವೃದ್ಧಿ ಮತ್ತು ಶಿಕಾರಿಪುರದ ಕೆಲವು ನೀರಾವರಿ ಕಾಮಗಾರಿಗಳಿಗೂ ಶಂಕುಸ್ಥಾಪನೆ ಮಾಡಿದ್ದಾರೆ.

ಅಲ್ಲದೆ, ಜಿಲ್ಲೆಯ ಶಿವಮೊಗ್ಗ, ಶಿಕಾರಿಪುರ, ಸೊರಬ, ಸಾಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ವಿವಿಧ ರೀತಿಯ ಅಂದಾಜು 1,700 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ವರ್ಚುವಲ್‌ ಸಭೆಯಲ್ಲಿ ಚಾಲನೆ ನೀಡಿದ್ದಾರೆ.

ಇದಲ್ಲದೆ, 30 ಜಿಲ್ಲೆಗಳ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 1,277 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಮೂಲಕ, 2020-21ನೇ ಸಾಲಿನ ಹಣ ಬಿಡುಗಡೆಯಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಒಟ್ಟು 132 ವಿಧಾನಸಭಾ ಕ್ಷೇತ್ರಗಳ ಶಾಸಕರಿಗೂ ಸಿಎಂ ಫಂಡ್ ರಿಲೀಸ್‌ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಜುಲೈ 26ರಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷಗಳನ್ನು ಪೂರೈಸಲಿದೆ. ಹೀಗಾಗಿ, ಅಂದಿನ ಸಂಭ್ರಮಾಚರಣೆಯ ಬಳಿಕ ಬಿಎಸ್‌ವೈ ರಾಜೀನಾಮೆ ನೀಡುವ ಸಾಧ್ಯತೆಗಳಿವೆ. ಅವರು ರಾಜೀನಾಮೆ ನೀಡಬೇಕೆ, ಬೇಡವೇ ಎಂಬುದರ ಕುರಿತು ಬಿಜೆಪಿ ಹೈಕಮಾಂಡ್‌ ಜುಲೈ 25ರಂದು ನಿರ್ಧಾರವನ್ನು ತಿಳಿಸಲಿದೆ ಎಂದು ಬಿಎಸ್‌ವೈ ಅವರೇ ಪರೋಕ್ಷವಾಗಿ ತಿಳಿಸಿದ್ದಾರೆ.

ಸಿಎಂ ಯಡಿಯೂರಪ್ಪ ಅವರು ತರಾತುರಿಯಲ್ಲಿ ಯೋಜನೆಗಳಿಗೆ ಅನುಮತಿ ಮತ್ತು ಚಾಲನೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ, ಇಷ್ಟೊಂದು ತರಾತುರಿಯಲ್ಲಿ ಮನಸಿಗೆ ಬಂದ ಹಾಗೆ ಯೋಜನೆಗಳಿಗೆ ಅನುಮತಿ ನೀಡುತ್ತಿರುವುದೇಕೆ. ಅಂತಹ ದರದು ಏನಿದೆ. ಯಾವ ಕಾರಣಕ್ಕಾಗಿ ಈ ತೀರ್ಮಾನ.? ಈಗಲೂ ದುಡ್ಡು ಹೊಡೆಯಲಿಕ್ಕಾ, ರಾಜ್ಯದ ತೆರಿಗೆ ಹಣ ಲೂಟಿ ಮಾಡಲಿಕ್ಕಾ.? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸಿಎಂ ಬದಲಾವಣೆ ಖಚಿತ?; ಕೆ.ಎಸ್.ಈಶ್ವರಪ್ಪಗೆ ಮುಖ್ಯಮಂತ್ರಿ ಪಟ್ಟ?

Spread the love

Leave a Reply

Your email address will not be published. Required fields are marked *