Fact check: ಲತಾ ಮಂಗೇಶ್ಕರ್ ಅವರ ಸಾವಿನ ಮುಂಚಿನ ಕ್ಷಣದ ಇತ್ತೀಚಿನ ವಿಡಿಯೊ ಎಂಬುದು ನಿಜವೇ?
ಭಾರತದ ಖ್ಯಾತ ಹಿನ್ನಲೆ ಗಾಯಕಿ ಲತಾ ಮಂಗೇಶ್ಕರ್ ಅವರು 06 ಫೆಬ್ರವರಿ 2022 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಅವರ ನಿಧನಾನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಡಿಯೊ ವೈರಲ್ ಆಗುತ್ತಿದ್ದು ಅದರಲ್ಲಿ “ಇದು ಲತಾ ಮಂಗೇಶ್ಕರ್ ಅವರ ಸಾವಿಗೂ ಮುನ್ನ ಅವರ ಕೊನೆಯ ಕ್ಷಣಗಳು” ಎಂದು ಪ್ರತಿಪಾದಿಸಿ ವ್ಯಾಪಕವಾಗಿ ಶೇರ್ ಮಾಡಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗಾಯಕಿ ಲತಾ ಮಂಗೇಶ್ಕರ್ ಮಾತನಾಡುತ್ತಿರುವ ದೃಶ್ಯಾವಳಿಗಳನ್ನು ಅವರ ಸಾವಿಗೂ ಮುನ್ನ ಮಾಡಿರುವ ವಿಡಿಯೊ ಎಂದು ಹೇಳಿಕೊಳ್ಳಲಾಗಿದೆ. ವೈರಲ್ ವಿಡಿಯೊದ ಫೋಟೋವನ್ನು ಸ್ಕ್ರೀನ್‌ಶಾಟ್ ತೆಗೆದು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಲತಾ ಮಂಗೇಶ್ಕರ್ ಅವರ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಅದೇ ವಿಡಿಯೋ ಲಭ್ಯವಾಗಿದೆ. ಆ ವಿಡಿಯೊ 04 ಜನವರಿ 2017 ರಲ್ಲಿ ಮಾಡಲಾಗಿದ್ದು, ತಮ್ಮ ಅಭಿಮಾನಿಗಳೊಂದಿಗೆ ಲತಾ ಮಂಗೇಶ್ಕರ್ ಅವರು ಲೈವ್ ಫೇಸ್‌ಬುಕ್ ಸಂವಾದದಲ್ಲಿ ಭಾಗವಹಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ಫೇಸ್‌ಬುಕ್ ಲೈವ್ ಸಂವಾದದ ಸಮಯದಲ್ಲಿ, ಲತಾ ಮಂಗೇಶ್ಕರ್ ಅವರು ಮೊದಲಿಗೆ ಹಿಂದಿ ಸಂಗೀತ ನಿರ್ದೇಶಕ ದಿವಂಗತ ಆರ್.ಡಿ ಬರ್ಮನ್ ಅವರಿಗೆ ಗೌರವ ಸಲ್ಲಿಸಿದರು ನಂತರ ಅವರ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಲು ಪ್ರಾರಂಭಿಸಿರುವುದು ದೃಶ್ಯಾವಳಿಗಳ ಮೂಲಕ ಕಂಡುಬಂದಿದೆ.
07 ಫೆಬ್ರವರಿ 2022 ರಂದು, ‘ಬಾಂಬೆ ಟೈಮ್ಸ್’ ಲತಾ ಮಂಗೇಶ್ಕರ್ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸುವ ಮುನ್ನ ಅವರು ಮನೆಯವರ ಆರೈಕೆಯಲ್ಲಿದ್ದ ಸಂದರ್ಭದ ದೃಶ್ಯಾವಳಿಗಳ ವೀಡಿಯೊವನ್ನು ಟ್ವೀಟ್ ಮಾಡಿದೆ. ದೃಶ್ಯಗಳನ್ನು ಹೋಲಿಸಿದಾಗ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊವು ದಿವಂಗತ ಲತಾ ಮಂಗೇಶ್ಕರ್ ಅವರ ಅಂತಿಮ ಕ್ಷಣದ ವಿಡಿಯೊ ಅಲ್ಲ ಎಂದು ಖಚಿತವಾಗಿದೆ. ಲತಾ ಮಂಗೇಶ್ಕರ್ ಅವರು ನಡೆಯಲು ಕಷ್ಟಪಡುವ ಸಮಯದಲ್ಲಿ ಕುಳಿತು ಮಾತನಾಡಲು ಹೇಗೆ ಸಾಧ್ಯ? ಹಾಗಾಗಿ ಅದು 2017ರ ವಿಡಿಯೊ ಎಂಬುದು ವಾಸ್ತವವಾಗಿದೆ.
This video will melt your heart ❤️ When #LataMangeshkar was admitted in the hospital… pic.twitter.com/gL95Ln3ENR
— BombayTimes (@bombaytimes) February 6, 2022
ಒಟ್ಟಾರೆಯಾಗಿ ಹೇಳುವುದಾದರೆ, ಲತಾ ಮಂಗೇಶ್ಕರ್ ಅವರು ತಮ್ಮ ಅಭಿಮಾನಿಗಳೊಂದಿಗೆ ಫೇಸ್‌ಬುಕ್‌ನಲ್ಲಿ ನೇರ ಸಂವಾದ ನಡೆಸುತ್ತಿರುವ ಹಳೆಯ ವೀಡಿಯೊವನ್ನು ಸಾವಿಗೂ ಮುನ್ನ ಮಾತನಾಡಿರುವ ಇತ್ತೀಚಿನ ವಿಡಿಯೊ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದನ್ನು ಓದಿರಿ: Fact check: ನಿಜಗುಣಾನಂದ ಸ್ವಾಮಿ ಹೆಸರಿನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಬರಹ ವೈರಲ್

