FACT CHECK | ಉದಯಪುರ ಫೈಲ್ಸ್‌ ಚಿತ್ರದಲ್ಲಿ ಅಭಿನಯಿಸಿದ ಕಲಾವಿದನ ಮನೆಗೆ ಮುಸ್ಲಿಮರು ಬೆಂಕಿ ಹಚ್ಚಿದ್ದಾರೆ ಎಂಬುದು ಸುಳ್ಳು

ಜನರ ಗುಂಪೊಂದು ಮನೆಗೆ ಬೆಂಕಿ ಹಚ್ಚುವುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉದಯಪುರ ಫೈಲ್ಸ್ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದನ ಮನೆಯನ್ನು ಮುಸ್ಲಿಮರು ಸುಟ್ಟುಹಾಕಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ.

ಈ ವಿಡಿಯೋದ ಲಿಂಕ್‌ಅನ್ನು ಇಲ್ಲಿ ನೋಡಬಹುದು.

ಇದೇ ರೀತಿಯ ಹೇಳಿಕೆಯೊಂದಿಗೆ ಹಲವು ಸಾಮಾಝಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಝಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜುಲೈ 05, 2025 ರಂದು soyelsilencioso ಎಂಬ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ಅದೇ ವಿಡಿಯೋ ಲಭ್ಯವಾಗಿದೆ. ಸ್ಪ್ಯಾನಿಷ್ ಶೀರ್ಷಿಕೆಯು ವಿಡಿಯೋದಲ್ಲಿ ಕೊಲಂಬಿಯಾದ ನಜರೆತ್‌ನಲ್ಲಿ ಪೊಲೀಸರು ತಪ್ಪಾಗಿ ಗುಂಡು ಹಾರಿಸಿ ಯುಲ್ಬರ್ಟ್ ಬಾರ್ಬೋಜಾ ಅವರನ್ನು ಕೊಂದ ನಂತರ ಸ್ಥಳೀಯರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತಿರುವುದನ್ನು ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

 

View this post on Instagram

 

A post shared by El Silencioso (@soyelsilencioso)

ಮತ್ತಷ್ಟು ಸರ್ಚ್ ಮಾಡಿದಾಗ, ಕೊಲಂಬಿಯಾದ ಇತರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿರುವ ಮತ್ತೊಂದು  ಆಂಗಲ್‌ನಲ್ಲಿ ಈ ಘಟನೆ ದೃಶ್ಯಗಳು ಲಭ್ಯವಗಿದೆ. ದೃಶ್ಯಗಳು ವೈರಲ್ ವಿಡಿಯೋಗೆ ಸರಿಯಾಗಿ ಹೊಂದಿಕೆಯಾಗುತ್ತವೆ. ಶೀರ್ಷಿಕೆಯ ಪ್ರಕಾರ ಈ ಘಟನೆ ಕೊಲಂಬಿಯಾದ ನಜರೆತ್‌ನಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿದೆ.

La muerte de Yulbert Fernández

ಕೊಲಂಬಿಯಾದ ಹಲವಾರು ಸ್ಥಳೀಯ ಮಾಧ್ಯಮಗಳಿಂದ ಬಂದ ವರದಿಗಳು ನಮಗೆ ದೊರೆತವು. ಈ ವರದಿಗಳ ಪ್ರಕಾರ, ಜುಲೈ 04, 2025 ರಂದು, ಯುಲ್ಬರ್ಟ್ ಫೆರ್ನಾಂಡಿಸ್ ಬಾರ್ಬೋಸಾ ಅವರನ್ನು ಲಾ ಗುವಾಜಿರಾದ ನಜರೆತ್‌ನಲ್ಲಿ ಪೊಲೀಸರು ಗುಂಡಿಕ್ಕಿ ಕೊಂದರು. ಪೊಲೀಸ್ ಠಾಣೆಯ ಮೇಲೆ ಈ ಹಿಂದೆ ನಡೆದ ದಾಳಿಯಲ್ಲಿ ಬಳಸಲಾದ ವಾಹನ ಎಂದು ಅವರು ತಪ್ಪಾಗಿ ಭಾವಿಸಿದ್ದರು. ಅವರ ಸಾವು ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು, ಸ್ಥಳೀಯರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ನ್ಯಾಯಕ್ಕಾಗಿ ಒತ್ತಾಯಿಸಿದರು. ಗಲ್ಫ್ ಕ್ಲಾನ್ ಮತ್ತು ಕಾಂಕ್ವಿಸ್ಟಾಡೋರಸ್ ಡೆ ಲಾ ಸಿಯೆರಾ ನೆವಾಡಾ (ACSN) ನಂತಹ ಸಶಸ್ತ್ರ ಗುಂಪುಗಳ ನಡುವಿನ ಹಿಂಸಾತ್ಮಕ ಘರ್ಷಣೆಗಳಿಂದಾಗಿ ಈ ಪ್ರದೇಶದಲ್ಲಿ ಅಶಾಂತಿ ಸೃಷ್ಟಿಯಾಗಿ ಈ ಘಟನೆ ಸಂಭವಿಸಿದೆ ಎಂಬ ಮಾಹಿತಿ ಇದರಲ್ಲಿದೆ.

ಏನಿದು ಉದಯಪುರ ಫೈಲ್ಸ್‌ :

2022 ರಲ್ಲಿ ಉದಯಪುರದ ದರ್ಜಿ ಕನ್ಹಯ್ಯಾ ಲಾಲ್ ಅವರ ಹತ್ಯೆಯನ್ನು ಆಧರಿಸಿದ ಉದಯಪುರ ಫೈಲ್ಸ್ ಎಂಬ ಹೆಸರಿನ ಸಿನಿಮಾ ಬಿಡುಗಡೆಗೆ ನಿರ್ಧರಿಸಲಾಗಿತ್ತು. ಆದರೆ ದೆಹಲಿ ಹೈಕೋರ್ಟ್ ಜುಲೈ 10, 2025 ರಂದು ಈ ಸಿನಿಮಾವನ್ನು ತಡೆಹಿಡಿದಿದೆ. ವರದಿಗಳ ಪ್ರಕಾರ, ಜಮಿಯತ್ ಉಲಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು ಈ ಚಿತ್ರವು ದ್ವೇಷ ಭಾಷಣವನ್ನು ಉತ್ತೇಜಿಸುತ್ತದೆ, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುತ್ತದೆ ಮತ್ತು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಬಹುದು ಎಂದು ವಾದಿಸಿ ಅದರ ಬಿಡುಗಡೆಯನ್ನು ಶಾಶ್ವತವಾಗಿ ನಿಷೇಧಿಸುವಂತೆ ಅರ್ಜಿ ಸಲ್ಲಿಸಿದ್ದಾರೆ.

‘ಉದಯಪುರ ಫೈಲ್ಸ್‘ ಸಿನಿಮಾ ಬಿಡುಗಡೆಗೆ ಡೆಲ್ಲಿ ಹೈಕೋರ್ಟ್ ತಡೆ: ಕಾರಣವೇನು?

ಆದಾಗ್ಯೂ, ಉದಯಪುರ ಫೈಲ್ಸ್‌ನಲ್ಲಿ ಭಾಗಿಯಾಗಿರುವ ಕಲಾವಿದರ ಮನೆಗಳನ್ನು ಮುಸ್ಲಿಮರು ಸುಟ್ಟುಹಾಕಿದ್ದಾರೆ ಎಂಬ ಯಾವುದೇ ವಿಶ್ವಾಸಾರ್ಹ ವರದಿಗಳು ನಮಗೆ ಕಂಡುಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಉದಯಪುರ ಫೈಲ್ಸ್‌ನ ಕಲಾವಿದನ ಮನೆಗೆ ಮುಸ್ಲಿಮರು ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ ಎಂದು ಕೊಲಂಬಿಯಾದ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿರುವ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬುರ್ಖಾ ಧರಿಸಿ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದಾಗ ಸಿಕ್ಕಿ ಬಿದ್ದ ಸಹೋದರಿಯರು ಮುಸ್ಲಿಮರಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights