FACT CHECK | ಸ್ಪೇನ್‌ನ ನಾಗರಿಕರು ಮುಸ್ಲಿಮರ ಮಸೀದಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ

ಸ್ಪೇನ್ ಜನರು ಮಸೀದಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋದಲ್ಲಿ ಮಸೀದಿಯಂತೆ ಕಾಣುವ ಕಟ್ಟಡವೊಂದು ಬೆಂಕಿಗೆ ಆಹುತಿಯಾಗುತ್ತಿರುವುದನ್ನು ಕಾಣಬಹುದು. ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ಸ್ಪೇನ್ ಜನರು ಮಸೀದಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು, ‘‘ಮುಸ್ಲಿಮ್ಮರಿಂದ ನಿರಂತರ ಕಿರುಕುಳಕ್ಕೆ ಒಳಗಾದ ಸ್ಪೆನ್ ನ ಸಾರ್ವಜನಿಕರು ಮುಸ್ಲಿಂಮರ ದೊಡ್ಡ ಮಸೀದಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಎಚ್ಚೆತ್ತು ಕೊಂಡ ಸ್ಪೆನ್ ಸಾರ್ವಜನಿಕರು’’ ಎಂಬ ಬರಹದೊಂದಿಗೆ ಪೋಸ್ಟ್‌ ಮಾಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವೀಡಿಯೊದ ಕೆಲವು ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದಾಗ, ಅಕ್ಟೋಬರ್ 19, 2022 ರಂದು ಇಂಡೋನೇಷಿಯಾದ ಸ್ಥಳೀಯ ಸುದ್ದಿ ಸಂಸ್ಥೆ Radio Elshinta ತನ್ನ X ಖಾತೆಯಿಂದ ಮಾಡಿದ ಪೋಸ್ಟ್ ಲಭ್ಯವಾಗಿದೆ. ಈ ವೀಡಿಯೊದಲ್ಲಿನ ದೃಶ್ಯಗಳು ವೈರಲ್ ವಿಡಿಯೋಗೆ ಹೊಂದಿಕೆಯಾಗುತ್ತವೆ. “ಉತ್ತರ ಜಕಾರ್ತಾದಲ್ಲಿರುವ ಇಸ್ಲಾಮಿಕ್ ಕೇಂದ್ರ ಮಸೀದಿಯ ಮಿನಾರ್ ಬೆಂಕಿಗೆ ಆಹುತಿಯಾಯಿತು” ಎಂದಿದೆ.

ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ‘jakarta mosque minar fire’ ಎಂಬ ಕೀವರ್ಡ್‌ಗಳನ್ನು ಬಳಸಿ ಸರ್ಚ್ ಮಾಡಿದಾಗ, ಅಕ್ಟೋಬರ್ 19, 2022 ರಂದು ಸಿಎನ್‌ಎನ್ಇಂಡೋನೇಷ್ಯಾದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವಿಡಿಯೋ ವರದಿಯೊಂದು ಲಭ್ಯವಾಗಿದೆ. ವೈರಲ್ ವೀಡಿಯೊಗೆ ಸಂಬಂಧಿಸಿದ ಹಲವು ದೃಶ್ಯಗಳು ಈ ವೀಡಿಯೊ ವರದಿಯಲ್ಲಿವೆ. ವರದಿಯು ಈ ಘಟನೆ ಅಕ್ಟೋಬರ್ 19 ರಂದು ಇಂಡೋನೇಷ್ಯಾದ ಉತ್ತರ ಜಕಾರ್ತದಲ್ಲಿ ಸಂಭವಿಸಿದೆ ಎಂದು ದೃಢಪಡಿಸಿದವು. ಜಾಮಿ ಮಸೀದಿಯ ಗುಮ್ಮಟವು ನವೀಕರಣದ ಹಂತದಲ್ಲಿದ್ದಾಗ ಬೆಂಕಿ ಹೊತ್ತಿಕೊಂಡು ಕುಸಿದು ಬಿದ್ದಿದೆ. ಈ ಮಸೀದಿಯು ಇಸ್ಲಾಮಿಕ್ ಅಧ್ಯಯನಗಳು ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದ ಚಿಂತಕರ ಚಾವಡಿಯಾದ ಜಕಾರ್ತಾ ಇಸ್ಲಾಮಿಕ್ ಸೆಂಟರ್‌ನ ಕಟ್ಟಡ ಸಂಕೀರ್ಣದೊಳಗೆ ಇದೆ.

2022 ರ ಅಕ್ಟೋಬರ್ 20 ರಂದು ಪ್ರಕಟವಾದ ಹಿಂದೂಸ್ತಾನ್ ಟೈಮ್ಸ್ ವರದಿಯು ಇಂಡೋನೇಷ್ಯಾದ ಜಕಾರ್ತಾ ಇಸ್ಲಾಮಿಕ್ ಸೆಂಟರ್ ಗ್ರ್ಯಾಂಡ್ ಮಸೀದಿಯ ದೈತ್ಯ ಗುಮ್ಮಟವು ದೊಡ್ಡ ಬೆಂಕಿಯ ನಂತರ ಕುಸಿದಿದೆ ಎಂದು ಹೇಳುತ್ತದೆ. ಇದರಲ್ಲಿ ಕೂಡ ವೈರಲ್ ವೀಡಿಯೊಕ್ಕೆ ಹೋಲಿಕೆಯಾಗುವ ಸ್ಕ್ರೀನ್ ಶಾಟ್ ಕಾಣಬಹುದು.

ಇದಲ್ಲದೆ, ಇಂಡೋನೇಷ್ಯಾದ ಮಾಧ್ಯಮ ಸಂಸ್ಥೆ ಕೊಂಪಾಸ್‌ನ ವೆಬ್‌ಸೈಟ್‌ನಲ್ಲಿ ಅಕ್ಟೋಬರ್ 20, 2022 ರಂದು ಪ್ರಕಟವಾದ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ. ಈ ವರದಿಯಲ್ಲಿ ‘‘ಅಕ್ಟೋಬರ್ 19, 2022 ರ ಮಧ್ಯಾಹ್ನ, ಜಕಾರ್ತಾ ಇಸ್ಲಾಮಿಕ್ ಸೆಂಟರ್‌ನ ಗ್ರ್ಯಾಂಡ್ ಮಸೀದಿಯ ಗುಮ್ಮಟಕ್ಕೆ ಬೆಂಕಿ ಹೊತ್ತಿಕೊಂಡಿತು. ಮಸೀದಿಯ ಗುಮ್ಮಟವು ಬೆಂಕಿಗೆ ಆಹುತಿಯಾಗಿ ಭೀಕರ ಬೆಂಕಿಯನ್ನು ತಡೆದುಕೊಳ್ಳಲು ಸಾಧ್ಯವಾಗದೆ ಕುಸಿದು ಬಿದ್ದಿದೆ. ಉತ್ತರ ಜಕಾರ್ತಾ ಮೆಟ್ರೋಪಾಲಿಟನ್ ಪೊಲೀಸ್‌ನ ಗುಪ್ತಚರ ಮತ್ತು ಭದ್ರತಾ ಮುಖ್ಯಸ್ಥ ಎಕೆಬಿಪಿ ಸಲಾಮತ್ ವಿಬಿಸೋನೊ, ಮಸೀದಿಯ ಗುಮ್ಮಟವನ್ನು ನವೀಕರಿಸುವಾಗ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಬೆಂಕಿಯ ನಂತರ, ಇಸ್ಲಾಮಿಕ್ ಕೇಂದ್ರದ ಮಸೀದಿಯನ್ನು ಸಾರ್ವಜನಿಕರಿಗೆ ಮುಚ್ಚಲಾಯಿತು. ಮಸೀದಿಯ ಮೇಲ್ಭಾಗದಲ್ಲಿ ಪ್ಲೈವುಡ್ ಅಳವಡಿಸುವಾಗ, ನಿರ್ಮಾಣ ಕಾರ್ಮಿಕರು ಬರ್ನರ್ ಬಳಸಿ ಪೊರೆಯನ್ನು ಕರಗಿಸಿದರು. ಕೆಲಸದ ಸಮಯದಲ್ಲಿ, ಬರ್ನರ್‌ನಿಂದ ಕಿಡಿಗಳು ಹೊರಹೊಮ್ಮಿದ್ದು, ಇದರಿಂದಾಗಿ ದೊಡ್ಡ ಬೆಂಕಿ ಕಾಣಿಸಿಕೊಂಡಿತು’’ ಎಂಬ ಮಾಹಿತಿ ಇದರಲ್ಲಿದೆ. ಹಾಗಾಗಿ ಸ್ಪೇನ್ ಜನರು ಮಸೀದಿಗೆ ಬೆಂಕಿ ಹಚ್ಚಿದ್ದಾರೆ ಎಂಬುದು ಸುಳ್ಳಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮುಸ್ಲಿಮರಿಂದ ಕಿರುಕುಳಕ್ಕೆ ಒಳಗಾದ ಸ್ಪೆನ್​​ನ ಸಾರ್ವಜನಿಕರು ದೊಡ್ಡ ಮಸೀದಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋ ವಾಸ್ತವವಾಗಿ 2022 ರಲ್ಲಿ ಜಕಾರ್ತಾ ಮಸೀದಿಯಲ್ಲಿ ಸಂಭವಿಸಿದ ಬೆಂಕಿಯದ್ದು ಎಂಬುದು ಸ್ಪಷ್ಟವಾಗಿದೆ. ಸಾಮಾಝಿಕ ಮಾಧ್ಯಮಗಳಲ್ಲಿ ಕೋಮು ಮತ್ತು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಉದಯಪುರ ಫೈಲ್ಸ್‌ ಚಿತ್ರದಲ್ಲಿ ಅಭಿನಯಿಸಿದ ಕಲಾವಿದನ ಮನೆಗೆ ಮುಸ್ಲಿಮರು ಬೆಂಕಿ ಹಚ್ಚಿದ್ದಾರೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights