FACT CHECK | ಮುಸ್ಲಿಂ ವಿದ್ಯಾರ್ಥಿನಿಯರು ಫೇಲ್ ಆಗಿದ್ದಕ್ಕೆ ಶಿಕ್ಷಕರ ಮೇಲೆ ಪೋಷಕರು ಹಲ್ಲೆ ನಡೆಸಿದ್ದಾರೆಯೇ?
ಬಾಂಗ್ಲಾದೇಶದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣಕ್ಕೆ ವಿದ್ಯಾರ್ಥಿನಿಯರ ಪೋಷಕರು ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, “ಮುಸ್ಲಿಂ ಹುಡುಗಿಯರು ಪರೀಕ್ಷೆಯಲ್ಲಿ ಫೇಲಾದ ಕಾರಣ ಶಿಕ್ಷಕರನ್ನು ಹೊಡೆದರು. ಒಬ್ಬ ಹಿಂದೂ ಹುಡುಗ ಬಾಂಗ್ಲಾದೇಶದಲ್ಲಿ ಟಾಪರ್ ಆಗಿದ್ದರಿಂದ ಅವರು ಅಸಮಾಧಾನಗೊಂಡಿದ್ದಾರೆ. ಇವರ ಮನೋಭಾವನೆ ಹೀಗೆಯೆ…!! ಈ ಸಮುದಾಯದವರಲ್ಲಿ ವ್ಯಾಪಾರ ಮಾಡುವ ಹಿಂದೂಜರಿಗೆ ಏನನ್ನೋಣ” ಎಂದು ಬರೆದುಕೊಂಡಿದ್ದಾರೆ.
ವೈರಲ್ ವೀಡಿಯೊದಲ್ಲಿ ಮಹಿಳೆಯರ ಗುಂಪೊಂದು ಪುರುಷನ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿರುವುದನ್ನು ಮತ್ತು ಆತನನ್ನು ಹೊರಗೆ ಎಳೆದುಕೊಂಡು ಹೋಗುವುದನ್ನು ತೋರಿಸಲಾಗಿದೆ. ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.ಮ ಹಾಗಿದ್ದರೆ ಪೋಸ್ಟ್‌ನಲ್ಲಿ ಂಆಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ ವಿದ್ಯಾರ್ಥಿನಿಯರು ತಮ್ಮ ಶಿಕ್ಷಕನ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯಗಳನ್ನು ತೋರಿಸುವ ಯಾವುದೇ ಸುದ್ದಿ ವರದಿಗಳು ಅಥವಾ ವಿಶ್ವಾಸಾರ್ಹ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ನಮಗೆ ಲಭ್ಯವಾಗಿಲ್ಲ.
ವೈರಲ್ ಪೋಸ್ಟ್‌ನಲ್ಲಿ ಎರಡು ಸ್ಥಳಗಳಲ್ಲಿ ‘ಕುಮಿಲ್ಲಾ ನ್ಯೂಸ್‘ ವಾಟರ್‌ಮಾರ್ಕ್ ಕಂಡುಬಂದಿದ್ದು, ಇದರ ಮೂಲಕ ಸರ್ಚ್ ಮಾಡಿದಾಗ ಇದೇ ಹೆಸರಿನ ಫೇಸ್‌ಬುಕ್ ಖಾತೆ ಲಭ್ಯವಾಗಿದೆ. ಈ ಖಾತೆಯು ಜುಲೈ 10 ರಂದು “ಚಕಾರಿಯಾದ ಕ್ಯಾಂಬ್ರಿಯನ್ ಪ್ರೌಢಶಾಲೆಯ ಶಿಕ್ಷಕ ಯೂನಸ್ ಮೇಲೆ ದಾಳಿ” ಎಂಬ ಶೀರ್ಷಿಕೆಯೊಂದಿಗೆ ವೈರಲ್ ವೀಡಿಯೊವನ್ನು ಹಂಚಿಕೊಂಡಿದೆ.
ವೈರಲ್ ವೀಡಿಯೊದ ಘಟನೆಯನ್ನು ಬೇರೆಯದೇ ಕೋನದಿಂದ ತೋರಿಸುವ ವೀಡಿಯೊವನ್ನು ಬಿಎಸ್‌ಪಿಟಿವಿ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದೆ. ಈ ವೀಡಿಯೊವನ್ನು ಜುಲೈ 10 ರಂದು ‘ಚಕಾರಿಯಾ ಕ್ಯಾಂಬ್ರಿಯನ್ ಶಾಲೆಯ ಪ್ರಾಂಶುಪಾಲರನ್ನು ತೆಗೆದುಹಾಕಲು ಬೇಡಿಕೆ’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಇದರ ಆಧಾರದಲ್ಲಿ ಚಕಾರಿಯಾದ ಕ್ಯಾಂಬ್ರಿಯನ್ ಪ್ರೌಢಶಾಲೆಗೆ ಸಂಬಂಧಿಸಿದ ಸುದ್ದಿ ವರದಿಗಳನ್ನು ಸರ್ಚ್ ಮಾಡಿದಾಗ, ಜುಲೈ 12 ರಂದು ಪ್ರಕಟವಾದ ದೈನಿಕ್ ಶಿಕ್ಷಾ ವರದಿ ಲಭ್ಯವಾಗಿದೆ. ವರದಿಯು ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದೆ. ಶೀರ್ಷಿಕೆಯಲ್ಲಿ, ‘ಶಿಕ್ಷಕನಿಗೆ ಹೊಡೆತ, ಆ ದಿನ ಕ್ಯಾಂಬ್ರಿಯನ್ ಪ್ರೌಢಶಾಲೆಯಲ್ಲಿ ಏನಾಯಿತು’ ಎಂದು ಬರೆಯಲಾಗಿದೆ.

‘ಚಕಾರಿಯಾ ಕ್ಯಾಂಬ್ರಿಯನ್ ಪ್ರೌಢಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕ ಪ್ರತಿನಿಧಿಯು ವಿದ್ಯಾರ್ಥಿಗಳಿಗೆ ಲೈಂಗಿಕವಾಗಿ ಕಿರುಕುಳ ನೀಡಿದ ಆರೋಪ’ ಎಂಬ ಶೀರ್ಷಿಕೆಯೊಂದಿಗೆ ಜುಲೈ 11 ರಂದು ಅಲೋಕಿಟೊ ಸಕಲ್ ದಿನಪತ್ರಿಕೆಯು ಒಂದು ವರದಿಯನ್ನು ಪ್ರಕಟಿಸಿತು.
ಜುಲೈ 8 ರಂದು ಪ್ರಾಂಶುಪಾಲರು ತರಗತಿಗೆ ಪ್ರವೇಶಿಸಿ 10 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಜೇಬಿನಲ್ಲಿ ಹಣವಿದೆಯೇ ಎಂದು ಕೇಳಿದರು. ನಂತರ “ಅವನು ಆಕೆಯ ಶಾಲಾ ಉಡುಪಿನ ಜೇಬಿನೊಳಗೆ ಕೈ ಹಾಕಿ ಅನುಚಿತವಾಗಿ ಅವಳನ್ನು ಮುಟ್ಟಿದನು” ಎಂದು ಸಂತ್ರಸ್ತೆಯ ಆಪ್ತ ಮೂಲಗಳು ತಿಳಿಸಿವೆ.

ಇದರ ನಂತರ, ಜುಲೈ 10 ರಂದು, ಪೋಷಕರು ಮತ್ತು ವಿದ್ಯಾರ್ಥಿಗಳು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಸಮಯದಲ್ಲಿ, ಜಹೀರುಲ್ ಇಸ್ಲಾಂ, ಶಿಕ್ಷಕರ ಪ್ರತಿನಿಧಿ ಯೂನಸ್ ಮೂಲಕ ಪೋಷಕರನ್ನು ಶಾಲಾ ಕಚೇರಿಗೆ ಕರೆಸಿ, ವಿಷಯವನ್ನು ಪರಿಹರಿಸಲು ಬಯಸುವುದಾಗಿ ಹೇಳಿಕೊಂಡನು. ಒಳಗೆ, ಅವರು ಅಶ್ಲೀಲ ನಿಂದನೆಗಳನ್ನು ಮಾಡಿ ಕಿರುಕುಳ ನೀಡಿದ್ದಾನೆ ಎಂದು ವರದಿಯಾಗಿದೆ. ಶಿಕ್ಷಕರ ಅಶ್ಲೀಲ ಭಾಷೆ ಮತ್ತು ದುರ್ವರ್ತನೆಯಿಂದ ಪೋಷಕರು ಕೋಪಗೊಂಡಿದ್ದರು, ಇದು ತೀವ್ರ ವಾಗ್ವಾದಕ್ಕೆ ಕಾರಣವಾಯಿತು, ಅದು ಅಂತಿಮವಾಗಿ ದೈಹಿಕ ಘರ್ಷಣೆಗೆ ಕಾರಣವಾಯಿತು ಎಂದು ವರದಿಯಲ್ಲಿ ಹೇಳಲಾಗಿದೆ.
“ಸತ್ಯವೇನೆಂದರೆ, ಶಿಕ್ಷಕರ ಪಿತೂರಿಗಾರರ ಗುಂಪೊಂದು, ನಾನು ನನ್ನ ಸ್ವಂತ ಮಕ್ಕಳೆಂದು ಪರಿಗಣಿಸುವ ವಿದ್ಯಾರ್ಥಿಗಳನ್ನು ನನ್ನ ವಿರುದ್ಧ ಪ್ರಚೋದಿಸುತ್ತಿದೆ. ಈ ಪಿತೂರಿ ಸಂಪೂರ್ಣವಾಗಿ ಆ ಗುಂಪಿನ ಕೆಲಸ, ಬೇರೆಯವರಲ್ಲ. ನನ್ನ ಶಾಲೆಯ ಪ್ರತಿಯೊಂದು ತರಗತಿಯೂ ಸಿಸಿಟಿವಿ ಕಣ್ಗಾವಲಿನಲ್ಲಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ನನ್ನ ಯಾವುದೇ ರೀತಿಯ ದುಷ್ಕೃತ್ಯ ಕಂಡುಬಂದರೆ, ನಾನು ನನ್ನ ಮುಖ್ಯೋಪಾಧ್ಯಾಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಮತ್ತು ಬಾಂಗ್ಲಾದೇಶದ ಕಾನೂನುಗಳ ಅಡಿಯಲ್ಲಿ ನನಗೆ ವಿಧಿಸಲಾದ ಯಾವುದೇ ಶಿಕ್ಷೆಯನ್ನು ಸ್ವಇಚ್ಛೆಯಿಂದ ಸ್ವೀಕರಿಸುತ್ತೇನೆ” ಎಂದು ಪ್ರಾಂಶುಪಾಲ ಜಹಿರುಲ್ ಇಸ್ಲಾಂ ಹೇಳಿರುವುದಾಗಿ ಅಲೋಕಿಟೊ ಸಕಲ್ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಪ್ರತಿಪಾದನೆ ಸುಳ್ಳು. ತೋರಿಸಲಾಗಿಲ್ಲ. ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಶಿಕ್ಷಕರ ಪ್ರತಿನಿಧಿ ಯೂನಸ್ ಮತ್ತು ಪ್ರಾಂಶುಪಾಲ ಜಹಿರುಲ್ ಇಸ್ಲಾಂ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ತೋರಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಉದಯಪುರ ಫೈಲ್ಸ್ ಚಿತ್ರದಲ್ಲಿ ಅಭಿನಯಿಸಿದ ಕಲಾವಿದನ ಮನೆಗೆ ಮುಸ್ಲಿಮರು ಬೆಂಕಿ ಹಚ್ಚಿದ್ದಾರೆ ಎಂಬುದು ಸುಳ್ಳು

