ರಾಜ್ಯಸಭಾ ಚುನಾವಣೆಗಳು ಸಂಸತ್ತಿನ ಮೇಲ್ಮನೆಯ ಆಶಯವನ್ನು ಎತ್ತಿ ಹಿಡಿದಿವೆಯೇ?

ಸಂವಿಧಾನ ರಚನಾ ಸಮಿತಿ ನಡಾವಳಿ ಸಭೆಯಲ್ಲಿ ಬಹಳ ಚರ್ಚೆಯಾದ ವಿಷಯಗಳಲ್ಲಿ ರಾಜ್ಯಸಭೆಯಯ ಅಗತ್ಯತೆ ಕೂಡ ಒಂದು. ಜನರಿಂದ ಆಯ್ಕೆಯಾಗಿ ಬರುವ ಲೋಕಸಭೆಯ ಅಭ್ಯರ್ಥಿಗಳ ಜೊತೆಗೆ, ರಾಜ್ಯ ಸರ್ಕಾರದ ಜನಪ್ರತಿನಿಧಿಗಳು ಆರಿಸಿ ಕಳುಹಿಸುವ ಸದಸ್ಯರ (ಜೊತೆಗೆ ರಾಷ್ಟ್ರಪತಿಗಳು ಕೂಡ 12 ಜನರನ್ನು ನಾಮನಿರ್ದೇಶನ ಮಾಡುತ್ತಾರೆ) ಈ ಎರಡನೇ ಸದನದ ಅಗತ್ಯ ಮತ್ತು ಅದರ ಪ್ರತಿನಿಧಿತ್ವ ಮತ್ತು ಅದರ ಜವಬ್ದಾರಿ ಕುರಿತು ದೊಡ್ಡ ಮಟ್ಟದ ವಾಗ್ವಾದಗಳು ಅಂದು ನಡೆದಿದ್ದವು. ಮೇಲ್ಮನೆ, ಲೋಕಸಭೆ ಪರಿಚಯಿಸುವ ಹೊಸ ಕಾಯಿದೆ- ಕಾನೂನುಗಳಿಗೆ ತಡೆಗೋಡೆಯಾಗಿ ಕೆಲಸ ಮಾಡುತ್ತದೆ. ಇದು ಯಾವತ್ತೂ ವೇಗದ ಪ್ರಗತಿಗೆ ಅಡ್ಡಿ. ಆದುದರಿಂದ, ಸ್ವತಂತ್ರಪೂರ್ವದಲ್ಲಿ ಇದ್ದ ಮೇಲ್ಮನೆಯನ್ನು ಉಳಿಸಿಕೊಳ್ಳುವುದು ಬೇಡ ಎಂಬುದು ಸಂವಿಧಾನ ರಚನಾ ಸಮಿತಿ ಸದ್ಯಸ್ಯರಾಗಿದ್ದ ಶಿಬು ಲಾಲ್ ಸಕ್ಸೇನ ಮತ್ತು ಇತರರ ವಾದವಾಗಿದ್ದರೆ, ಕೆಳಮನೆಯಲ್ಲಿ ಹೆಚ್ಚು ಚಿಂತನೆ ನಡೆಸದೆ ಅತುರಾತುರವಾಗಿ, ಆವೇಶದಿಂದ ಪರಿಚಯಿಸಬಹುದಾದ ಕಾಯಿದೆ – ಕಾನೂನುಗಳನ್ನು ಗಹನವಾಗಿ ಚರ್ಚಿಸಿ, ಅಗತ್ಯ ಬಿದ್ದರೆ ತಿದ್ದುಪಡಿಗಳನ್ನು ಸೂಚಿಸಿ, ತಾತ್ವಿಕ ನೆಲೆಗಟ್ಟಿನಲ್ಲಿ ಚಿಂತನೆ ನಡೆಸಿ, ತಡೆ ಹಿಡಿದು ಕೆಲಸ ಮಾಡುವ ತಜ್ಞರ-ಪರಿಣಿತರ ಸಭೆಯಾಗಿ, ಪುನರ್ ಪರಿಶೀಲನೆ ಮಾಡುವ ಸದನವಾಗಿ ರಾಜ್ಯಸಭೆ ಅಗತ್ಯ ಎಂದು ಕೂಡ ವಾದಗಳು ಮೂಡಿದ್ದವು. ಒಟ್ಟಿನಲ್ಲಿ ರಾಜ್ಯಸಭೆ ಉಳಿದುಕೊಂಡು, 245 ಸದಸ್ಯರ ಮೇಲ್ಮನೆಯಾಗಿ ಈಗ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಿಂದ ರಾಜ್ಯಸಭೆಗೆ 12 ಜನರ ಪ್ರತಿನಿಧಿತ್ವ ಇದೆ.

ರಾಜ್ಯಸಭೆಗಿರುವ ಮತ್ತೊಂದು ಮಹತ್ವದ ವಿಶೇಷವನ್ನು ಗಮನಿಸಬೇಕು; ಒಕ್ಕೂಟ ವ್ಯವಸ್ಥೆಯಾಗಿರುವ ಈ ದೇಶದಲ್ಲಿ ಒಕ್ಕೂಟ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರವಿದೆ. ಅದನ್ನು ಸುಸೂತ್ರವಾಗಿ ನಡೆಸಿಕೊಂಡು ಹೊಗಲು ಬೇಕಾದ ಶಾಸಕಾಂಗ ಹಾಗೂ ಆಡಳಿತ ವ್ಯವಸ್ಥೆಯಾಗಿ ಲೋಕಸಭೆ ಮತ್ತು ಸಚಿವ ಸಂಪುಟದ ನೇತ್ರೂತ್ವದ ಕಾರ್ಯಾಂಗವಷ್ಟೇ ಇದ್ದರೆ ಅದು ರಾಜ್ಯಗಳ ಹಿತವನ್ನು ಕಡೆಗಣಿಸಬಹುದಾದ ಎಲ್ಲಾ ಸಾಧ್ಯತೆಗಳು ಇದ್ದೇ ಇರುತ್ತದೆ. ಏಕೆಂದರೆ ಎಷ್ಟೋ ಬಾರಿ ವಿಧಾನಸಭೆಗೆ ಒಂದು ಪಕ್ಷವನ್ನೂ ಲೋಕಸಭೆಗೆ ಇನ್ನೊಂದು ಪಕ್ಷವನ್ನು ಆಯ್ಕೆ ಮಾಡುವ ಪರಿಪಾಠವನ್ನು ಕಂಡಿದ್ದೇವೆ. ಹೀಗಿರುವಾಗ ರಾಜ್ಯಗಳ ಮೇಲೂ, ರಾಜ್ಯ ಸರ್ಕಾರಗಳ ಮೇಲೂ ಪರಿಣಾಮ ಬೀರುವ ನೀತಿಗಳನ್ನು ಲೋಕಸಭೆ ಹಾಗೂ ಒಕ್ಕೂಟ ಸರ್ಕಾರದ ನೇತೃತ್ವ ವಹಿಸುವವಹಿಸುವ ಸಚಿವಸಂಪುಟ ತೆಗೆದುಕೊಳ್ಳುತ್ತಿರುತ್ತದೆ. ಆದ್ದರಿಂದ ಅದರೊಂದಿಗೆ ಸಂವಾದ ನಡೆಸುವ ಮತ್ತು ಅಫತ್ಯ ಬಿದ್ದರೆ ಕಡಿವಾಣ ಹಾಕುವ ಇನ್ನೊಂದು ಸಾಂಸ್ಥಿಕ ವ್ಯವಸ್ಥೆಯ ಅಗತ್ಯವಿದ್ದೇ ಇದೆ. ಅದನ್ನು ರಾಜ್ಯಸಭೆಯು ಪೂರೈಸಬೇಕು ಎನ್ನುವುದು ಇನ್ನೊಂದು ಆಶಯ.

ರಾಜ್ಯಸಭೆಯನ್ನು ಉಳಿಸಿಕೊಳ್ಳುವುದಕ್ಕೆ ಮುಂದಿಟ್ಟಿದ್ದ ಉದಾತ್ತ ಆಶಯಗಳಗಳಂತೆಯೇ ಕೆಲವು ಬಾರಿ ಅಲ್ಲಿ ಚರ್ಚೆಗಳು ನಡೆದಿರುವ ಉದಾಹರಣೆಗಳು ಇವೆ. ಅದಕ್ಕೆ ತದ್ವಿರುದ್ಧವಾಗಿ, ಲೋಕಸಭೆಯ ಬಿ ಟೀಮಿನಂತೆ ಕೂಡ ರಾಜ್ಯಸಭೆ ಕೆಲಸ ಮಾಡಿರುವ ಸಂದರ್ಭಗಳನ್ನು ಭಾರತದ ಸಂಸತ್ತಿನ ಇತಿಹಾಸ ಕಂಡಿದೆ. ಇತ್ತೀಚೆಗೆ ನಾಗರಿಕ ತಿದ್ದುಪಡಿ ಕಾಯ್ದೆ (ಸಿ ಎ ಎ) ಅಷ್ಟು ಜನವಿರೋಧದ ನಡುವೆಯೂ ಸುಲಭವಾಗಿ ರಾಜ್ಯಸಭೆಯಲ್ಲಿ ಮಂಜೂರಾಗಿದ್ದನ್ನು ನೆನಪಿಸಿಕೊಳ್ಳಬಹುದು. ವಿತ್ತೀಯ ಮಸೂದೆಗಳನ್ನು ಹೊರತುಪಡಿಸಿ ಉಳಿದೆಲ್ಲ ಮಸೂದೆಗಳು ಕಾನೂನಾಗಲು ರಾಜ್ಯಸಭೆಯ ಬಹುಮತದ ಒಪ್ಪಿಗೆ ಕೂಡ ಅವಶ್ಯಕತೆ ಇದೆ. ಆದುದರಿಂದ ಹಣಕಾಸು ಮಸೂದೆ ಹೊರತುಪಡಿಸಿ ಉಳಿದ ಮಸೂದೆಗಳನ್ನು ತಡೆಯುವ, ತಿದ್ದುಪಡಿ ಸೂಚಿಸುವ ಅಧಿಕಾರ ರಾಜ್ಯಸಭೆಗೆ ಇದೆ. ಆದುದರಿಂದ ರಾಜ್ಯಸಭೆಯಲ್ಲಿ ಸದಸ್ಯರನ್ನು ಹೆಚ್ಚಿಸಿಕೊಳ್ಳುವ ಅಗತ್ಯಕ್ಕೆ, ಅಲ್ಲಿಯೂ ಬಹುಮತವನ್ನು ಕಾಯ್ದುಕೊಳ್ಳುವ ಸಂಕಷ್ಟಕ್ಕೆ ಆಡಳಿತ ನಡೆಸುವ ರಾಜಕೀಯ ಪಕ್ಷಗಳು ಮತ್ತು ಮಿತ್ರ ಪಕ್ಷಗಳು ಹಾಗೆಯೇ ವಿರೋಧ ಪಕ್ಷಗಳು ಒಳಪಟ್ಟಿವೆ. ರಾಜ್ಯಸಭೆ ಎಷ್ಟೋ ಬಾರಿ ಸರ್ಕಾರವೊಂದರ ಅನಿಯಂತ್ರಣ ಅಧಿಕಾರಕ್ಕೆ ಕಡಿವಾಣ ಹಾಕುವ ಸಂಸ್ಥೆಯಂತೆಯೂ ನಡೆದುಕೊಂಡಿದೆ.

ರಾಜ್ಯಸಭೆಯ ಸದಸ್ಯರ ಆಯ್ಕೆಯಲ್ಲಿ ಯಾವುದೆ ರಾಜ್ಯ ಮತ್ತೊಂದು ಮುಖ್ಯವಾದ ಆಶಯವನ್ನು ಪಾಲಿಸಿಕೊಂಡು ಬರಬೇಕಿತ್ತು. ಅದು ತನ್ನ ಪ್ರಾದೇಶಿಕ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು. ಇದನ್ನು ಪಾಲಿಸಲು ಪ್ರಾರಂಭದಲ್ಲಿ ಕಾನೂನು ಅಡೆತಡೆಯನ್ನು ಕೂಡ ಒಡ್ಡಲಾಗಿತ್ತು. ರಾಜ್ಯಸಭೆಗೆ ಆಯ್ಕೆಯಾಗುವ ವ್ಯಕ್ತಿ ಆ ರಾಜ್ಯದ ‘ಸಾಮಾನ್ಯ ನಿವಾಸಿ’ಯಾಗಿರಬೇಕು ಮತ್ತು ಅಲ್ಲಿ ಮತ ಚಲಾಯಿಸಲು ನೊಂದಣಿ ಮಾಡಿಕೊಂಡಿರಬೇಕು ಎಂಬ ನಿಯಮ ಇತ್ತು. ರಾಜ್ಯದ ಸಾಮಾನ್ಯ ನಿವಾಸಿಯಾಗಿರಬೇಕು ಎಂಬ ಉಲ್ಲೇಖವನ್ನು ವಿವರಿಸಲು ಸುಲಭವಲ್ಲದ ಕಾರಣ ಬಹುತೇಕ ಎಲ್ಲ ಪಕ್ಷಗಳು ಅದನ್ನು ಗಾಳಿಗೆ ತೂರಿ, ಬೇರೆ ರಾಜ್ಯದವರನ್ನು ರಾಜ್ಯಸಭೆಗೆ ಆಯ್ಕೆಮಾಡಿ ಕಳುಹಿಸುವ ಪರಿಪಾಠ ಇಟ್ಟುಕೊಂಡಿದ್ದವು. ಅಲ್ಲಿ ಇಲ್ಲಿ ಕೇಳಿಬರುತ್ತಿದ್ದ ಪ್ರತಿರೋಧವನ್ನು ಈ ಪಕ್ಷಗಳು ಲೆಕ್ಕಿಸಿದ್ದು ಇಲ್ಲವೇ ಇಲ್ಲ. ಕೊನೆಗೆ 2003 ರಲ್ಲಿ ಅದಕ್ಕೆ “ಭಾರತದ ಪ್ರದೇಶದಲ್ಲಿ ನೆಲೆಸಿದ್ದರೆ” ಸಾಕು ಎಂಬರ್ಥ ಬರುವ ತಿದ್ದುಪಡಿಯನ್ನು ತರಲಾಯಿತು.

ಈ ನಿಯಮವನ್ನು ಕರ್ನಾಟಕವೂ ಸೇರಿದಂತೆ, ಬಹುತೇಕ ರಾಜ್ಯಗಳ ಹಲವು ಪಕ್ಷಗಳು ಗಾಳಿಗೆ ತೂರಿವೆ. ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ, ರಾಜ್ಯದ ನೆಲದ ಜೊತೆಗೆ, ರಾಜ್ಯದ ಜನತೆಯ ಯಾವುದೇ ನಂಟಿರದ ಪ್ರಸಕ್ತ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು, ಪ್ರಸಕ್ತ ರಾಜ್ಯಸಭಾ ಚೇರ್ಮನ್ ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಹಲವು ಬಾರಿ ಕರ್ನಾಟಕದ ಬಿಜೆಪಿ ಪಕ್ಷ ರಾಜ್ಯಸಭೆಗೆ ಆರಿಸಿ ಕಳುಹಿಸಿದೆ. ಕಾಂಗ್ರೆಸ್ ಪಕ್ಷ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅಸ್ಸಾಂನಿಂದ ರಾಜ್ಯಸಭೆಗೆ ಆರಿಸಿ ಕಳುಹಿಸಿದ್ದು ಕೂಡ ಚರ್ಚೆಗೆ ಗ್ರಾಸವಾಗಿತ್ತು. ಇನ್ನೂ ಹಲವು ಬಾರಿ ನಾಡು ನುಡಿ ಮತ್ತು ವೈವಿಧ್ಯತೆಗೆ ಸಂಬಂಧಿಸಿದ ಉದ್ದಿಮೆದಾರನ್ನು ಆಯ್ಕೆಮಾಡಿ ಕಳುಹಿಸುವುದು ಕೂಡ ಅವ್ಯಾಹತವಾಗಿ ನಡೆದಿದೆ. ಕಳೆದ ಕೆಲವು ವರ್ಷಗಳಿಂದ ನಿರ್ಮಲ ಸೀತಾರಾಮನ್ ಮತ್ತು ವೆಂಕಯ್ಯ ನಾಯ್ಡು ಅವರನ್ನು ಕರ್ನಾಟಕದಿಂದ ಕಳುಹಿಸುತ್ತಿದ್ದ ನಡೆಯನ್ನು ಹಲವು ಪ್ರಜ್ಞಾವಂತ ನಾಗರಿಕರು ಬಲವಾಗಿ ವಿರೋಧಿಸಿದ್ದರು. ಬಿಜೆಪಿ ಪಕ್ಷ ಈ ಬಾರಿ ಎಚ್ಚೆತಂತೆ ಕಂಡುಬಂದಿದ್ದು ಉತ್ತರ ಕರ್ನಾಟಕದವರಾದ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಿದೆ. (ಅಪ್ಡೇಟ್: ಮೂರು ಪಕ್ಷಗಳ ನಾಲ್ಕೂ ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ)

ಬಿಜೆಪಿಯ ಈ ಆಯ್ಕೆಗಳಲ್ಲೂ ರಾಜಕೀಯ ಧರ್ಮ ಸೂಕ್ಷ್ಮದ ಉಲ್ಲಂಘನೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಸಾಮಾನ್ಯವಾಗಿ ರಾಷ್ಟ್ರೀಯ ಸಮಸ್ಯೆಗಳು ಮತ್ತು ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಸಂಗತಿಗಳ ಮೇಲೆ ಲೋಕಸಭೆಯ ಚುನಾವಣೆಗಳು ನಡೆದರೆ, ರಾಜ್ಯಸಭೆಯ ಚುನಾವಣೆಗಳು ರಾಜ್ಯದ ಸಮಸ್ಯೆಗಳಿಗೆ, ರಾಜ್ಯದ ಕುಂದುಕೊರತೆಗಳನ್ನು ನೀಗಿಸಲು, ರಾಜ್ಯದ ಹಿತ ಕಾಯುವಂತ ಸದಸ್ಯರ ಪ್ರನಿಧಿತ್ವ ಬೇಡುವಂತವು. ಆದುದರಿಂದ ಇಲ್ಲಿನ ರಾಜ್ಯ ನಾಯಕರು ಕುಳಿತು ಆಂತರಿಕವಾಗಿ ಚರ್ಚಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಮುಖ್ಯ ಮತ್ತು ಅದೇ ವಾಡಿಕೆ. ಈ ಬಾರಿ ಇಲ್ಲಿನ ರಾಜ್ಯ ಮುಖಂಡರು ಕಳುಹಿಸಿದ ಮೂರು ಜನರ ಪಟ್ಟಿಯನ್ನು ಕಸದಬುಟ್ಟಿಗೆ ಬಿಸಾಕಿ, ಇಬ್ಬರು ಹೊಸ ಮುಖಗಳನ್ನು ಬಿಜೆಪಿ ಕೇಂದ್ರ ನಾಯಕರು ಸೂಚಿಸಿರುವುದು ವರದಿಯಾಗಿದೆ. ಇದು ದೊಡ್ಡ ವೈರುಧ್ಯ. ಇದು ಮುಖ್ಯಮಂತ್ರಿಯವರ ಬಲಗುಂದಿಸುವ ನಡೆ ಎಂದು ಕೇಳಿಬಂದಿದ್ದರೂ, ರಾಜ್ಯದ ಮುಖಂಡರು ಇದನ್ನು ಒಪ್ಪಿಕೊಂಡಿರುವಂತೆ ನಟಿಸುತ್ತಿರುವುದು ದುರಂತ. ರಾಜ್ಯಸಭಾ ಸದಸ್ಯರು ಕೇಂದ್ರ ಸರ್ಕಾರದ ಮಸೂದೆಗಳನ್ನು ಮಂಜೂರು ಮಾಡಲು ಸಹಾಯ ಮಾಡುವ ಗೊಂಬೆಗಳಲ್ಲವೆಲ್ಲ!

ಅಲ್ಲದೆ, ಹಲವು ಗಂಭೀರ ವಿಷಯಗಳನ್ನು, ಕೋಮು ಘರ್ಷಣೆಯಂತಹ ಸೂಕ್ಷ್ಮ ವಿಷಯಗಳನ್ನು, ಅಲ್ಪ ಸಂಖ್ಯಾತರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಲೋಕಸಭೆಗಿಂತಲೂ ಮೇಲ್ಮನೆಯಲ್ಲಿ ಹೆಚ್ಚು ಗಂಭೀರವಾಗಿ ಮತ್ತು ಸಮಗ್ರವಾಗಿ ಚರ್ಚಿಸಲಾಗಿದೆ ಎಂಬ ಮಾತು ಕೂಡ ಆಗಾಗ ಕೇಳಿಬಂದಿದೆ. 2002 ರಲ್ಲಿ ಗೋಧ್ರ-ಗುಜರಾತ್ ಗಲಭೆ ಮತ್ತು ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಲ್ಲಿನ ನಾಗರಿಕರನ್ನು ರಕ್ಷಿಸಲು ಮತ್ತು ಹಿಂಸೆಯನ್ನು ತಡೆಯಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯಸಭೆ ನಿರ್ಣಯ ತೆಗೆದುಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು. ಇದಕ್ಕೆ ಎಲ್ಲ ಸಮಯದಲ್ಲೂ ಯಶಸ್ಸು ಸಿಕ್ಕದೆ ಹೋದರೂ, ಕೋಟ್ಯಂತರ ಜನರು ಈ ಸದನಗಳ ಚರ್ಚೆಯನ್ನು ಗಮನಿಸುತ್ತಿರುತ್ತಾರೆ ಮತ್ತು ಅದು ವ್ಯಾಪಕವಾಗಿ ವರದಿಯಾಗುತ್ತಿರುತ್ತದೆ ಎಂಬುದು ಮುಖ್ಯ ಅಂಶ. ಆದರೆ  ರಾಜ್ಯಸಭೆಗೆ ಜನಸಂಖ್ಯೆಯ ಆಧಾರದ ಮೇಲೆ ರಾಜ್ಯಗಳು ಸದಸ್ಯರನ್ನು ಕಳುಹಿಸಬಹುದಾದ ಸಂಖ್ಯೆಯನ್ನು ನಿಗದಿಪಡಿರುವುದರಿಂದ ಸಣ್ಣ ರಾಜ್ಯಗಳ ಹಿತ ಕಾಯುವ ಶಕ್ತಿಯನ್ನು ಇದು ಕುಂದಿಸಿದೆ. ಆದುದರಿಂದ ಪ್ರತಿ ರಾಜ್ಯಕ್ಕೂ ಸಮನಾಗಿ ರಾಜ್ಯಸಭಾ ಸದಸ್ಯರನ್ನು ಕಳುಹಿಸುವಂತೆ ತಿದ್ದುಪಡಿ – ಸುಧಾರಣೆ ತರಬೇಕು ಎಂಬ ಕೂಗು ಹಲವು ದಿನಗಳಿಂದ ಕೇಳಿ ಬಂದಿದೆ.

ಈ ಸಲ ಕರ್ನಾಟಕ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಲಿರುವ  ಎಲ್ಲರೂ ಕರ್ನಾಟಕದ ಜೊತೆಗೆ ಸಂಬಂಧ ಇಟ್ಟುಕೊಂಡಿರುವವರೆ ಎಂಬುದು ಸಂತಸದ ಮತ್ತು ಸಮಾಧಾನಕರ ಅಂಶ. ಅದರಲ್ಲಿಯೂ, ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ್ ಖರ್ಗೆ ಅವರು ಸಂಸತ್ತಿನಲ್ಲಿ ಇರಬೇಕಾಗಿತ್ತು ಎಂಬುದು ಪಕ್ಷಾತೀತವಾಗಿ ಹಲವು ಮುಖಂಡರು ತಳೆದಿದ್ದ ನಿಲುವು ಎಂದು ಕಾಂಗ್ರೆಸ್ ನ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದರಲ್ಲಿ ಉತ್ಪ್ರೇಕ್ಷೆಯೇನಿಲ್ಲ. ಕಳೆದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಅವರು ಲೋಕಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಮಾಡಿದ ಗುಣಮಟ್ಟದ ಚರ್ಚೆಗಳು, ಹಲವು ಸಮಿತಿಗಳಲ್ಲಿ ಇದ್ದುಕೊಂಡು ಅವರು ನಿರ್ವಹಿಸಿದ ಕಾರ್ಯವನ್ನು ಗಮನಿಸಿದಾಗ ಮಲ್ಲಿಕಾರ್ಜುನ್ ಖರ್ಗೆ ಅವರ ಅನುಪಸ್ಥಿತಿ, ವಿರೋಧ ಪಕ್ಷಗಳಲ್ಲಿರುವ ಬಹುತೇಕರಿಗೆ ಕಾಡಿದ್ದರೆ ಆಶ್ಚರ್ಯವೇನಿಲ್ಲ. ಹಾಗೆಯೇ ಜಾತ್ಯಾತೀತ ಜನತಾದಳ ಪಕ್ಷದಿಂದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ರಾಜ್ಯಸಭೆ ಪ್ರವೇಶಿಸಿದ್ದಾರೆ. ಕರ್ನಾಟಕದ ಹಿತ ಕಾಯುವುದರಲ್ಲಿ ದೇವೇಗೌಡರು ರಾಜ್ಯಸಭೆಯಲ್ಲಿರುವುದು ಮುಖ್ಯ ಎಂಬ ಸಂಗತಿಯನ್ನು ಯಾರೂ ಅಲ್ಲಗೆಳೆಯಲಾರರು.

ಲೋಕಸಭಾ ಚುನಾವಣೆಯಲ್ಲಿ ಸೋತವರಿಗೆ ನೆಲೆ ಒದಗಿಸಿಕೊಡಲು ರಾಜ್ಯಸಭೆಯ ಚುನಾವಣೆ ಆಟವಾಗಿದೆ ಎಂಬುದು ಕೂಡ ಗಂಭೀರ ಟೀಕೆ. ನಾಡುನುಡಿಯ ಬಗ್ಗೆ ಹೆಚ್ಚೇನು ಕಾಳಜಿ ವಹಿಸದೆ ಹಣದ ವಹಿವಾಟಿನ ಮೂಲಕ ರಾಜ್ಯಸಭೆ ಪ್ರವೇಶಿಸುವ ಉದ್ದಿಮೆದಾರರಿಗಿಂತ ಚುನಾವಣೆಯಲ್ಲಿ ಸೋತ ಹಿರಿಯ ರಾಜಕಾರಣಿಗಳು ಎಷ್ಟೋ ಮೇಲು ಎಂಬ ವಾದವನ್ನು ಇಲ್ಲಿ ನಾವು ಪರಿಗಣಿಸಬೇಕು.

ಆದರೆ ರಾಜ್ಯಸಭಾ ಚುನಾವಣೆಗಳು ಕೂಡ ಕುದುರೆ ವ್ಯಾಪಾರಕ್ಕೆ ಅನುವು ಮಾಡಿಕೊಡುತ್ತಿರುವುದು ದುರಂತ. ಈ ಸಲದ ಚುನಾವಣೆಯಲ್ಲಿಯೂ ಗುಜರಾತಿನಲ್ಲಿ ಕಾಂಗ್ರೆಸ್ ನ ಮೂವರು ಶಾಸಕರು ರಾಜಾನಾಮೆ ಕೊಟ್ಟಿರುವ ವರದಿಯಾಗಿದೆ. ಕಾಂಗ್ರೆಸ್ ತನ್ನ ಉಳಿದ ಶಾಸಕರನ್ನು ಕಾಯ್ದುಕೊಳ್ಳಲು ರೆಸಾರ್ಟ್ ಮೊರೆ ಹೋಗಿದೆ. ಎಂತ ಸನ್ನಿವೇಶವೇ ಇರಲಿ ತಾವು ಮಂಡಿಸುವ ಎಲ್ಲಾ ಮಸೂದೆಗಳನ್ನು ಕಾನೂನುಗಳಾಗಿ ಪಾಸ್ ಮಾಡಿಕೊಳ್ಳುವ ಇಚ್ಚೆಯನ್ನಷ್ಟೇ ಹೊಂದಿರುವ ರಾಷ್ಟ್ರೀಯ ಪಕ್ಷಗಳಿಗೆ ಅದರಲ್ಲೂ ಬಿಜೆಪಿ ಪಕ್ಷಕ್ಕೆ ರಾಜ್ಯಸಭೆಯ ಕಲ್ಪನೆ, ಅದರಲ್ಲಿ ಇರಬೇಕಾದ ಅಪಾರ ವೈವಿಧ್ಯತೆ, ವಿವಿಧ ರಾಜ್ಯಗಳ ಹಿತವನ್ನು ಕಾಯುವ ಪ್ರತಿನಿಧಿತ್ವ ಬಗ್ಗೆ ತಿಳಿಹೇಳುವ ಹಿರಿಯ ಮುಖಂಡರು ಇಲ್ಲವಾಗಿದೆ. ಇಂತಹ ಕುದುರೆ ವ್ಯಾಪಾರಗಳು ರಾಜ್ಯಸಭೆಯ ಚುನಾವಣೆಯ ಸಮಸ್ಯೆ ಮಾತ್ರ ಆಗಿಲ್ಲ. ಇದಕ್ಕೆ ಸಮಗ್ರವಾದ ರಾಜಕೀಯ ಸುಧಾರಣೆಯ ಅವಶ್ಯಕತೆಯೂ ಇದೆ.

ಗುರುಪ್ರಸಾದ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights