ಇಂದಿನಿಂದ ಸಂಸತ್‌ ಅಧಿವೇಶನ: ರೈತ ವಿರೋಧಿ ಕೃಷಿ ಕಾಯ್ದೆಗಳ ರದ್ದತಿ ಸೇರಿದಂತೆ 26 ಮಸೂದೆಗಳ ಮಂಡನೆ ಸಾಧ್ಯತೆ!

ಸಂಸತ್ತಿನ ಚಳಿಗಾಲ ಅಧಿವೇಶನ ಇಂದಿನಿಂದ (ನ.29) ಆರಂಭವಾಗುತ್ತಿದೆ. ಅಧಿವೇಶನದ ಮೊದಲ ದಿನವಾದ ಇಂದು ರೈತರ ಪ್ರತಿಭಟನೆಗೆ ಮಣಿದ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯುವ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ.

ಒಂದು ವರ್ಷ ಪೂರೈಸಿದ ರೈತ ಹೋರಾಟ, ಪ್ರತಿಭಟನೆಯ ವೇಳೆ ಸಂಭವಿಸಿದ ರೈತರ ಸಾವುಗಳು ಹಾಗೂ ರೈತರ ವಿಚಾರದಲ್ಲಿ ಸರ್ಕಾರದ ಧೋರಣೆಗಳು, ಆರ್ಥಿಕ ಮುಗ್ಗಟ್ಟು, ಹಣದುಬ್ಬರ ಸೇರಿದಂತೆ ವಿವಿಧ ವಿಚಾರಗಳಲ್ಲಿ ಪ್ರತಿ ಪಕ್ಷಗಳು ಸರ್ಕಾರವನ್ನು ಸಂಸತ್ತಿನಲ್ಲಿ ತರಾಟೆಗೆ ತೆಗೆದುಕೊಳ್ಳಲು ಮುಂದಾಗಿವೆ.

ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯುವುದಾಗಿ ಪ್ರಧಾನಿ ಮೋದಿ ಕಳೆದ ವಾರ ಘೋಷಿಸಿದ್ದರು. ನಂತರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಸಮ್ಮತಿ ದೊರೆತಿದೆ. ಹೀಗಾಗಿ, ಇಂದು ಕೃಷಿ ಕಾಯ್ದೆ ರದ್ದುಗೊಳಿಸುವ ಮಸೂದೆ ಮಂಡನೆಯಾಗಲಿದ್ದು, ಲೋಕಸಭೆಯಲ್ಲಿ ಅನುಮೋದನೆ ದೊರೆತ ನಂತರ, ಇಂದೇ ರಾಜ್ಯಸಭೆಯಲ್ಲೂ ಮಂಡಿಸುವ ಸಾಧ್ಯತೆ ಇದೆ.

ಈ ಚಳಿಗಾಲ ಅಧಿವೇಶನವನ್ನು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಪ್ರಮುಖವಾಗಿ ಪರಿಗಣಿಸಿದೆ. 3 ತಿದ್ದುಪಡಿ ಕೃಷಿ ಕಾಯ್ದೆ ವಾಪಸ್ ಪಡೆಯುವುದು ಸೇರಿದಂತೆ 26 ಹೊಸ ಮಸೂದೆಗಳನ್ನು ಮಂಡಿಸುವ ಉದ್ದೇಶವನ್ನು ಕೂಡ ಹೊಂದಿದೆ.

ಕಲಾಪ ಆರಂಭದ ದಿನವೇ ಕೃಷಿ ಕಾಯ್ದೆಯನ್ನು ವಾಪಾಸ್ ಪಡೆಯುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಈ ವಾರದ ಆರಂಭದಲ್ಲಿ ಕೇಂದ್ರ ಸಚಿವ ಸಂಪುಟವು ಮಸೂದೆಯನ್ನು ಅಂಗೀಕರಿಸಿತ್ತು. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಭೆಯ ನಂತರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸುದ್ದಿಗಾರರಿಗೆ ತಿಳಿಸಿದ್ದರು.

ಸರ್ಕಾರದ ಕಾರ್ಯಸೂಚಿಯು ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ಬಿಲ್, 2021 ರ ನಿಯಂತ್ರಣವನ್ನು ಸಹ ಒಳಗೊಂಡಿದೆ. ಇಂದು ಬಿಜೆಪಿ ಸಂಸದೀಯ ಕಾರ್ಯಕಾರಿ ಸಮಿತಿಯು ಭಾನುವಾರ ಸಂಸತ್ತಿನ ಅನೆಕ್ಸ್‌ನಲ್ಲಿ ಪ್ರತ್ಯೇಕವಾಗಿ ಸಭೆ ನಡೆಸಲಿದೆ. ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಇಂದು ಸರ್ವಪಕ್ಷ ಸಭೆ ನಡೆಯಲಿದೆ.

ಇದನ್ನೂ ಓದಿ: ವಾರಣಾಸಿ: 3ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಮೇಲೆ ಶಾಲಾ ಸಿಬ್ಬಂದಿ ಅತ್ಯಾಚಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights