ವಾರಣಾಸಿ: 3ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಮೇಲೆ ಶಾಲಾ ಸಿಬ್ಬಂದಿ ಅತ್ಯಾಚಾರ
ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಉತ್ತರ ಪ್ರದೇಶದ ವಾರಣಾಸಿಯು ಹೇಯ ಕತ್ಯವೊಂದಕ್ಕೆ ಸಾಕ್ಷಿಯಾಗಿದೆ. ಮೂರನೇ ತರಗತಿ ಓದುತಿದ್ದ ಬಾಲಕಿಯ ಮೇಲೆ ಅದೇ ಶಾಲೆಯ ಸಿಬ್ಬಂದಿಯೊಬ್ಬ ಶಾಲಾ ಶೌಚಾಲಯದಲ್ಲಿ ಅತ್ಯಾಚಾರ ಎಸಗಿರುವ ಹೇಯ ಕೃತ್ಯ ವಾರಣಾಸಿಯಲ್ಲಿ ನಡೆದಿದೆ.
ವಾರಣಾಸಿಯ ಲಹರ್ತಾರಾದಲ್ಲಿರುವ ಸನ್ಬೀಮ್ ಶಾಲೆಯಲ್ಲಿ ಬಾಲಕಿ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆಕೆಯ ಮೇಲೆ ಶಾಲೆಯಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ ವ್ಯಕ್ತಿ ಅತ್ಯಾಚಾರವೆಸಗಿದ್ದಾನೆ.
ಅಪ್ರಾಪ್ತ ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಸಿಗ್ರಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಸ್ವೀಪರ್ ಅಜಯ್ ಕುಮಾರ್ ಅಲಿಯಾಸ್ ಸಿಂಕುನ್ನನು ಬಂಧಿಸಿದ್ದಾರೆ.
ಸಿಗ್ರಾ ಠಾಣೆಯ ಪೊಲೀಸರು ಅಪ್ರಾಪ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರ; ಬರ್ಬರ ಕೊಲೆ: ಅಪರಾಧಿಗಳಿಗೆ ಕೆಮಿಕಲ್ ಕ್ಯಾಸ್ಟ್ರೇಶನ್ ಶಿಕ್ಷೆ?
“ಶುಕ್ರವಾರ ತನ್ನ ಮಗಳು ಶಾಲೆಯಿಂದ ಬಂದಾಗ, ಆಕೆ ತುಂಬಾ ಹೆದರಿದ್ದಳು ಜೊತೆಗೆ ಆಕೆಯ ಬಟ್ಟೆಯ ಮೇಲೆ ರಕ್ತ ಇತ್ತು. ಮಗಳನ್ನು ಕೇಳಿದಾಗ ಆಕೆ ಅಳಲು ಆರಂಭಿಸಿದಳು. ಇದಾದ ಬಳಿಕ ಆಕೆ ಅಳುತ್ತಾ ಶಾಲೆಯ ವಾಶ್ರೂಮ್ಗೆ ಹೋದಾಗ, ಅಲ್ಲಿ ಕಸಗುಡಿಸುವವರೊಬ್ಬರು ಬಂದು ತನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಘಟನೆಯನ್ನು ಸಂಪೂರ್ಣವಾಗಿ ತಿಳಿಸಿದ್ದಾರೆ’ ಎಂದು ಬಾಲಕಿಯ ತಾಯಿ ಹೇಳಿದ್ದಾರೆ.
ಕೂಡಲೇ ಘಟನೆಯ ಬಗ್ಗೆ ಪತಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಬಾಲಕಿಯ ತಂದೆ 112 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಿದ್ದಾರೆ. ಶಾಲೆಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿ ಸ್ವೀಪರ್ ನನ್ನು ಗುರುತಿಸಿ ಬಂಧಿಸಿದ್ದಾರೆ.
ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ವರುಣಾ ವಲಯದ ಡಿಸಿಪಿ ವಿಕ್ರಾಂತ್ ವೀರ್ ತಿಳಿಸಿದ್ದಾರೆ. ಆರೋಪಿಯನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗುವುದು. ಶಾಲಾ ಆವರಣದಲ್ಲಿ ನಡೆದ ಈ ನಾಚಿಕೆಗೇಡಿನ ಘಟನೆಯನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದು ನಾವು ನ್ಯಾಯಾಲಯಕ್ಕೆ ಮನವಿ ಮಾಡುತ್ತೇವೆ. ಆರೋಪಿಗಳಿಗೆ ಆದಷ್ಟು ಬೇಗ ಕಠಿಣ ಶಿಕ್ಷೆ ನೀಡಲಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿವಾಹೇತರ ಸಂಬಂಧ ಆರೋಪ: ಮಹಿಳೆ ಮತ್ತು ಯುವಕನನ್ನು ಕಂಬಕ್ಕೆ ಕಟ್ಟಿ ಕ್ರೌರ್ಯ ಮೆರೆದ ಗ್ರಾಮಸ್ಥರು