ವಿವಾಹೇತರ ಸಂಬಂಧ ಆರೋಪ: ಮಹಿಳೆ ಮತ್ತು ಯುವಕನನ್ನು ಕಂಬಕ್ಕೆ ಕಟ್ಟಿ ಕ್ರೌರ್ಯ ಮೆರೆದ ಗ್ರಾಮಸ್ಥರು

ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಮಹಿಳೆ ಹಾಗೂ ಯುವಕನೋರ್ವನನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿ, ಚಿತ್ರಹಿಂಸೆ ನೀಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಹಿಳೆ ಹಾಗೂ ಯುವಕನನ್ನು ಕೆಲವು ಗಂಟೆಗಳ ಕಾಲ ಕಟ್ಟಲಾಗಿದೆ. ಆದರೂ, ಗ್ರಾಮಸ್ಥರು ಅವರ ಸಹಾಯಕ್ಕೆ ಬಾರದೆ ಸುಮ್ಮನೆ ನಿಂತು ನೋಡುತ್ತಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಂತ್ರಸ್ತರಿಗೆ ನೆರವಾಗದ ಗ್ರಾಮಸ್ಥರ ವಿರುದ್ದವೂ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಹೆಮ್ಮರಗಾಲ ಗ್ರಾಮದ ಮಹಿಳೆಯು ತನ್ನ ಪತಿ ರವಿಯನ್ನು ತೊರೆದು ಕಳೆದು ಐದು ವರ್ಷಗಳಿಂದ ಪ್ರತ್ಯೇಕವಾಗಿ ವಾಸವಿದ್ದರು. ಇವರ ಮೂವರು ಮಕ್ಕಳ ಪೈಕಿ ಇಬ್ಬರು ಮಕ್ಕಳು ಗಂಡನ ಜೊತೆಗಿದ್ದರೆ, ಒಂದು ಮಗು ಮಹಿಳೆಯ ಜೊತೆಗಿದೆ. ಈ ಮಹಿಳೆಯು ಜೀವನೋಪಾಯಕ್ಕಾಗಿ ಕೊಡಗಿನ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ಗ್ರಾಮಕ್ಕೆ ಮರಳಿದ್ದರು.

ಕೊಡಗಿನ ಕಾಫಿ ತೋಟದಲ್ಲಿ ಪರಿಚಯನಾದ ಪಕ್ಕದ ನೇರಳೆ ಗ್ರಾಮದ ಯುವಕ ಗುರುವಾರ ರಾತ್ರಿ ಮಹಿಳೆಯ ಮನೆಗೆ ಭೇಟಿ ನೀಡಿದ್ದನು. ಇದನ್ನು ಗಮನಿಸಿದ ಮಹಿಳೆಯ ಗಂಡ ರವಿ, ಆಕೆಯ ಮನೆಗೆ ಹೊರಗಿನಿಂದ ಚಿಲಕ ಹಾಕಿ, ತನ್ನ ಸಹೋದರ ಚಂದ್ರು ಜೊತೆಗೂಡಿ ಗ್ರಾಮಸ್ಥರ ಸಮ್ಮುಖದಲ್ಲೇ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾನೆ.

ಚಿತ್ರಹಿಂಸೆಯನ್ನು ತಾಳಲಾರದೆ ಮಹಿಳೆ ನರಳುತ್ತಿದ್ದರೂ ಗ್ರಾಮಸ್ಥರು ಈ ದೃಶ್ಯವನ್ನು ನೋಡುತ್ತಾ ನಿಂತಿದ್ದರು. ಗಂಡಾಳ್ವಿಕೆಯ ದಬ್ಬಾಳಿಕೆ ಇದೆಂದು ಜನರು ಆರೋಪಿಸಿದ್ದಾರೆ. ಈ ದೃಶ್ಯವನ್ನು ಮೊಬೈಲ್‌ನಲ್ಲಿ ಯಾರೋ ಸೆರೆ ಹಿಡಿದಿದ್ದು, ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕೌಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿರಿ: ಶನಿವಾರಪೇಟೆ: ಬುರ್ಖಾ ಧರಿಸಿದಕ್ಕೆ ಅಮಾಯಕ ಬಾಲಕಿಯರ ಮೇಲೆ ಮತೀಯ ಗೂಂಡಾಗಿರಿ
“ಕಂಬಕ್ಕೆ ಕಟ್ಟಿ ಹಾಕಿದ ಕೆಲವು ಗಂಟೆಗಳ ನಂತರ ಗ್ರಾಮದ ಮುಖಂಡರು, ಈ ಯುವಕ ಮತ್ತು ಮಹಿಳೆಯನ್ನು ರಕ್ಷಿಸಿ ನ್ಯಾಯ ಪಂಚಾಯಿತಿ ನಡೆಸಿದ್ದಾರೆ. ಯುವಕನ ಗ್ರಾಮವಾದ ನೇರಳೆಯಿಂದ ಮುಖಂಡರನ್ನು ಕರೆಸಿ ಮಾತುಕತೆ ನಡೆಸಲಾಗಿದೆ” ಎಂದು ವರದಿಯಾಗಿದೆ.

ವಿವಾಹೇತರ ಸಂಬಂಧವಿರಲಿಲ್ಲ: ಮಹಿಳೆ ಸ್ಪಷ್ಟನೆ

ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ಆರೋಪವನ್ನು ಮಹಿಳೆ ಅಲ್ಲಗಳೆದಿದ್ದಾರೆ. ತನ್ನ ಪತ್ನಿ ಯುವಕನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಆಕೆಯ ಗಂಡ ದೂರಿದರೆ, ಗಂಡನ ಆರೋಪವನ್ನು ಮಹಿಳೆ ನಿರಾಕರಿಸಿದ್ದಾರೆ. ಜೊತೆಗೆ ಕೌಲಂದೆ ಪೊಲೀಸ್‌ ಠಾಣೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಕೌಲಂದೆ ಪೊಲೀಸ್ ಠಾಣೆಯ ಪಿಎಸ್‌ಐ ಮಹೇಂದ್ರ, “ಕೊಡಗಿನ ಕಾಫಿ ತೋಟದಲ್ಲಿ ಪರಿಚಯವಾದ ಯುವಕ ಗ್ರಾಮಕ್ಕೆ ಬಂದಾಗ ಕಾಫಿ ಕುಡಿಯಲು ಮನೆಗೆ ಕರೆದಿದ್ದೆ. ನಮ್ಮ ನಡುವೆ ಯಾವುದೇ ವಿವಾಹೇತರ ಸಂಬಂಧವಿಲ್ಲ. ಯುವಕ ನಮ್ಮ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಗಂಡ ಮನೆಯ ಬಾಗಿಲನ್ನು ಮುಚ್ಚಿ, ಹೊರಗಿನಿಂದ ಚಿಲಕ ಹಾಕಿ ನಂತರ, ಆತನ ಸಹೋದರನನ್ನು ಕರೆತಂದು ನಮ್ಮಿಬ್ಬರನ್ನೂ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾನೆ” ಎಂದು ಮಹಿಳೆಯು ದೂರು ನೀಡಿದ್ದಾರೆ.

“ರವಿ ಮತ್ತು ಚಂದ್ರು ಸೇರಿ ಯುವಕ ಹಾಗೂ ಮಹಿಳೆಯನ್ನು ಕಟ್ಟಿಹಾಕಿದ್ದರು. ಗ್ರಾಮಸ್ಥರು ಬಳಿಕ ಬಿಡಿಸಿದ್ದಾರೆ. ಮಹಿಳೆಯ ದೂರಿನ ಆಧಾರದಲ್ಲಿ ಸಾರ್ವಜನಿಕವಾಗಿ ಮಹಿಳೆಗೆ ಹಿಂಸಿಸಿದ್ದರಿಂದ ಐಪಿಸಿ ಸೆಕ್ಷನ್‌ 354 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ರವಿಯನ್ನು ಬಂಧಿಸಿದ್ದು, ಚಂದ್ರು ಪರಾರಿಯಾಗಿದ್ದಾನೆ” ಎಂದು ಪಿಎಸ್‌ಐ ತಿಳಿಸಿದರು.

ಇದನ್ನೂ ಓದಿ: ಧಾರವಾಡ: ಎಸ್‍ಡಿಎಂ ಕಾಲೇಜಿನಲ್ಲಿ ಕೊರೊನಾ ಆಕ್ರಮಣ; ಸೋಂಕಿತರ ಸಂಖ್ಯೆ 282ಕ್ಕೆ ಏರಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights