ಪುನೀತ್‌ ಸಂಸ್ಥೆಗೆ ದೇಣಿಗೆ ನೀಡಲು ಆಯೋಜಿಸಿದ್ದ ಕಾರ್ಯಕ್ರಮ ರದ್ದುಗೊಳಿಸಿದ ಪೊಲೀಸರು!

ಪುನೀತ್‌ ರಾಜ್‌ಕುಮಾರ್‌ ಅವರ ಸಂಸ್ಥೆಗೆ ದೇಣಿಗೆ ನೀಡುವುದಕ್ಕಾಗಿ ಬೆಂಗಳೂರಿನಲ್ಲಿ ಭಾನುವಾರ (ಇಂದು) ಆಯೋಜಿಸಿದ್ದ ಖ್ಯಾತ ಸ್ಟಾಂಡ್‌ ಅಪ್‌ ಕಾಮೆಡಿಯನ್‌ ಮುನಾವರ್‌ ಫಾರೂಖಿ ಅವರ ಕಾರ್ಯಕ್ರಮವನ್ನು ಪೊಲೀಸರು ರದ್ದುಗೊಳಿಸಿದ್ದಾರೆ.

ಕಾರ್ಯಕ್ರಮದ ಆಯೋಜಕರಿಗೆ ಪತ್ರ ಬರೆದಿರುವ ಬೆಂಗಳೂರಿನ ಅಶೋಕನಗರ ಠಾಣೆಯ ಪೊಲೀಸರು ಕಾರ್ಯಕ್ರಮದಿಂದ ಕಾನೂನು ಸುವ್ಯವಸ್ಥೆಗೆ ಭಂಗ ಆಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ, ಆಯೋಜಕರು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಮೇಡಿಯನ್ ಮುನಾವರ್‌, ‘‘ದ್ವೇಷ ಗೆದ್ದಿದೆ, ಕಲಾವಿದ ಸೋತುಬಿಟ್ಟ, ನಾನು ಮುಗಿಸುತ್ತಿದ್ದೇನೆ! ವಿದಾಯ! ಅನ್ಯಾಯ” ಎಂದು ಪ್ರತಿಕ್ರಿಯಿಸಿದ್ದಾರೆ.

ಆಯೋಜಕರಿಗೆ ಬೆಂಗಳೂರು ಪೊಲೀಸರು ಬರೆದಿರುವ ಪತ್ರದಲ್ಲಿ, “ಮುನಾವರ್‌ ಫಾರೂಖಿ ಒಬ್ಬರು ವಿವಾದಾತ್ಮಕ ವ್ಯಕ್ತಿಯಾಗಿದ್ದು, ಅವರು ಇತರ ಧರ್ಮಗಳ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡುವಂತಹ ವ್ಯಕ್ತಿ ಎಂದು ನಮಗೆ ತಿಳಿದು ಬಂದಿದೆ. ಆದ್ದರಿಂದ ಹಲವು ರಾಜ್ಯಗಳಲ್ಲಿ ಅವರ ಕಾರ್ಯಕ್ರಮಗಳು ರದ್ದಾಗಿವೆ. ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಅವರ ವಿರುದ್ದ ಪ್ರಕರಣಗಳು ದಾಖಲಾಗಿದೆ. ಅವರ ಕಾರ್ಯಕ್ರಮಕ್ಕೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂದು ನಮಗೆ ಮಾಹಿತಿಯಿದೆ. ಅವರ ಕಾರ್ಯಕ್ರಮದಿಂದ ಸಾರ್ವಜನಿಕರಲ್ಲಿ ಶಾಂತಿ ಮತ್ತು ಸೌಹಾರ್ಧತೆ ಹಾಳಾಗುತ್ತದೆ, ಇದರಿಂದಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ. ಆದ್ದರಿಂದ ಭಾನುವಾರ ನಡೆಯಲಿರುವ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು” ಎಂದು ಪೊಲೀಸರು ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪುನೀತ್‌ ಫೋಟೋ ಫ್ರೇಮ್‌ಗಳಿಗೆ ಉತ್ತರ ಕರ್ನಾಟಕದಲ್ಲಿ ಹೆಚ್ಚಿದ ಬೇಡಿಕೆ; ದೇವರ ಪಕ್ಕ ಅಪ್ಪು ಫೋಟೋ ಇಡುತ್ತಿರುವ ಅಭಿಮಾನಿಗಳು!

ಕಾರ್ಯಕ್ರಮ ಆಯೋಜಕರು ಪ್ರದರ್ಶನವನ್ನು ರದ್ದುಗೊಳಿಸಿದ್ದಾರೆ ಎಂದು ಮುನಾವರ್‌ ಫಾರೂಖಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಭಾವನಾತ್ಮಕ ಪತ್ರ ಬರೆದಿದ್ದಾರೆ. ಅದರಲ್ಲಿ, “ಬೆದರಿಕೆಗಳು ಬಂದ ಹಿನ್ನಲೆ, ಬೆಂಗಳೂರಿನಲ್ಲಿ ಇಂದು ನಡೆಯಲಿದ್ದ ಶೋ ರದ್ದಾಗಿದೆ. ನಾವು 600+ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದೇವೆ. ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಸಂಸ್ಥೆಗೆ ದೇಣಿಗೆ ಸಂಗ್ರಹಕ್ಕಾಗಿ ತಿಂಗಳ ಹಿಂದೆ ನನ್ನ ತಂಡವನ್ನು ಕರೆಯಲಾಗಿತ್ತು. ಈ ಸಂಸ್ಥೆಯು ‘ಚಾರಿಟಿಗಾಗಿ ಇದನ್ನು ಮಾಡುತ್ತಿದ್ದೇವೆ ಎಂದು ಹೇಳದಿರಿ’ ಎಂದು ಹೇಳಿರುವುದನ್ನು ನಾವು ಒಪ್ಪಿಕೊಂಡಿದ್ದೆವು” ಎಂದು ಹೇಳಿದ್ದಾರೆ.

“ಇದು ಅನ್ಯಾಯವಾಗಿದೆ. ನನ್ನ ಪ್ರದರ್ಶನವು ಧರ್ಮಾತೀತವಾಗಿ ಭಾರತದ ಜನರಿಂದ ಪ್ರೀತಿ ಗಳಿಸಿದೆ. ಇದು ಅನ್ಯಾಯವಾಗಿದೆ. ಪ್ರದರ್ಶನದಲ್ಲಿ ಏನೂ ತೊಂದರೆಯಿಲ್ಲ ಎಂದು ನಾವು ಪ್ರದರ್ಶನದ ಸೆನ್ಸಾರ್ ಪ್ರಮಾಣಪತ್ರವನ್ನು ಹೊಂದಿದ್ದೇವೆ. ಬೆದರಿಕೆಗಳ ಕಾರಣ ಕಳೆದ 2 ತಿಂಗಳುಗಳಲ್ಲಿ 12 ಶೋಗಳನ್ನು ಬಿಟ್ಟುಬಿಟ್ಟಿದ್ದೇವೆ” ಎಂದು ಅವರು ಹೇಳಿದ್ದಾರೆ.

“ನನಗನಿಸುತ್ತದೆ ಇದು ಇಲ್ಲಿ ಮುಗಿಯಿತು ಎಂದು. ನನ್ನ ಹೆಸರು ಮುನಾವರ್ ಫಾರೂಖಿ ಮತ್ತು ಇದು ನನ್ನ ಸಮಯ. ಜನರೇ ನೀವುಗಳು ಅದ್ಭುತ ಪ್ರೇಕ್ಷಕರಾಗಿದ್ದೀರಿ. ನಾನು ಇದನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ, ವಿದಾಯ” ಎಂದು ಅವರು ಬೇಸರ ವ್ಯಕ್ತಪಡಿಸಿ ಬರೆದಿದ್ದಾರೆ.

ಇದನ್ನೂ ಓದಿ: ಪುನೀತ್‌ ವಿರುದ್ದ ಅವಹೇಳನಾಕಾರಿ ಪೋಸ್ಟ್‌; ಆರೋಪಿ ಬಂಧನ

ಮಧ್ಯಪ್ರದೇಶದ ಇಂಧೋರ್‌ನಲ್ಲಿ ಜನವರಿ 2 ರಂದು ಬಂಧನಕ್ಕೊಳಗಾಗಿದ್ದ ಹಾಸ್ಯ ಕಲಾವಿದ ಮುನಾವರ್‌ ಫಾರೂಖಿ ಅವರು ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂಬ ಆರೋಪಕ್ಕೆ ಯಾವುದೇ ಪುರಾವೆಯಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.

“ಮುನಾವರ್‌ ಫಾರೂಖಿ ಅವರು ಹಿಂದೂ ದೇವತೆಗಳನ್ನಾಲಿ ಅಥವಾ ಗೃಹ ಸಚಿವ ಅಮಿತ್ ಶಾ ಅವರನ್ನಾಲಿ ಅವಮಾನಿಸಿದ ಯಾವುದೇ ಪುರಾವೆಗಳಿಲ್ಲ” ಎಂದು ತುಕಾಗಂಜ್ ಠಾಣೆಯ ಇನ್ಸ್‌ಪೆಕ್ಟರ್‌ ಕಮಲೇಶ ಶರ್ಮಾ ಅವರು ಹೇಳಿದ್ದಾಗಿ ದಿ ಕ್ವಿಂಟ್ ವರದಿ ಮಾಡಿತ್ತು. ಇದರ ನಂತರ ಬಂಧನದ ಸುಮಾರು ಒಂದು ತಿಂಗಳ ನಂತರ ಜೈಲಿನಿಂದ ಬಿಡುಗಡೆ ಹೊಂದಿದ್ದರು. ಅದಾಗಿಯೂ ಹಲವು ಹಿಂದುತ್ವವಾದಿ ಸಂಘಟನೆಗಳ ಬೆದರಿಕೆಯಿಂದಾಗಿ ತನಗೆ ಕೆಲಸ ಮಾಡಲು ಆಗುತ್ತಿಲ್ಲ ಎಂದು ಸ್ಟ್ಯಾಂಡ್‌‌ಅಪ್‌ ಕಾಮೇಡಿಯನ್‌ ಮುನಾವರ್ ಫಾರೂಖಿ ಅಕ್ಟೋಬರ್‌ ಕೊನೆಯಲ್ಲಿ ಹೇಳಿದ್ದರು.

ಇದನ್ನೂ ಓದಿ: ಸಂಭಾವನೆ ಪಡೆಯದೇ ಪುನೀತ್‌ ಅಭಿನಯಿಸಿದ್ದ ಸಾಲು ಸಾಲು ಜಾಹೀರಾತುಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.