ಪುನೀತ್‌ ಫೋಟೋ ಫ್ರೇಮ್‌ಗಳಿಗೆ ಉತ್ತರ ಕರ್ನಾಟಕದಲ್ಲಿ ಹೆಚ್ಚಿದ ಬೇಡಿಕೆ; ದೇವರ ಪಕ್ಕ ಅಪ್ಪು ಫೋಟೋ ಇಡುತ್ತಿರುವ ಅಭಿಮಾನಿಗಳು!

ಕರ್ನಾಟಕವು ಚಂದನವನದ ಯುವರತ್ನ, ನಟ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು 20 ದಿನಗಳು ಕಳೆದಿವೆ. 46ನೇ ವಯಸ್ಸಿಗೆ ಹಠಾತ್ತನೆ ನಿಧನರಾದ ಪುನೀತ್ ಅವರ ಅಗಲಿಕೆಯ ನೋವಿನಿಂದ ಅವರ ಸ್ನೇಹಿತರು, ಸಹ-ನಟರು, ಅಭಿಮಾನಿಗಳು ಮತ್ತು ಕುಟುಂಬ ಸದಸ್ಯರು ಇನ್ನೂ ಹೊರಬರಲಾಗಿಲ್ಲ.

ಪುನೀತ್ ಅಭಿಮಾನಿಗಳಿಗೆ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಹೀಗಾಗಿ, ಅವರ ಕೆಲವು ಅಭಿಮಾನಿಗಳು ಹೃದಯ ಸ್ತಂಭನ ಮತ್ತು ಆತ್ಮಹತ್ಯೆ ಪ್ರಕರಣಗಳಿಂದ ಸಾವನ್ನಪ್ಪಿದ್ದಾರೆ. ಹಲವು ಅಭಿಮಾನಿಗಳು ಪುನೀತ್ ಅವರ ಭಾವಚಿತ್ರಗಳಿಗೆ ಪುಷ್ಪಮಾಲೆ ಹಾಕಿ, ತಮ್ಮ ಮನೆಗಳಲ್ಲಿ ಇರಿಸಿಕೊಳ್ಳುತ್ತಿದ್ದಾರೆ.

ಕಳೆದ ಎರಡು ವಾರಗಳಲ್ಲಿ ಉತ್ತರ ಕರ್ನಾಟಕದಲ್ಲಿ ಪುನೀತ್‌ ಅವರ ಫೋಟೋ ಫ್ರೇಮ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಅಭಿಮಾನಿಗಳು ದೇವರ ಫೋಟೋ ಜೊತೆಗೆ ಪುನೀತ್‌ ಅವರ ಫೋಟೋವನ್ನು ತಮ್ಮ ಮನೆಗಳಲ್ಲಿ ಇಡುತ್ತಿದ್ದಾರೆ ಎಂದು ತಯಾರಕರು ಹೇಳಿದ್ದಾರೆ.

ಪುನೀತ್ ಅವರ ಫೋಟೋ ಫ್ರೇಮ್‌ಗಳಿಗೆ ಜನರು ವಿವಿಧ ಆಕಾರ ಮತ್ತು ಗಾತ್ರಗಳಲ್ಲಿ ಆರ್ಡರ್ ಮಾಡುತ್ತಿದ್ದಾರೆ. 200 ರಿಂದ 2,500 ರೂ.ವರೆಗೆ ನಾವು ಕಳೆದ ಒಂದು ವಾರದಲ್ಲಿ ವಿವಿಧ ಫ್ರೇಮ್‌ಗಳನ್ನು ಸಿದ್ಧಪಡಿಸಿದ್ದೇವೆ. ನಮ್ಮ ಅಂಗಡಿಯು ಪುನೀತ್ ಅವರ 200 ಫ್ರೇಮ್‌ಗಳನ್ನು ಮಾರಾಟ ಮಾಡಿದೆ. ಈ ಫ್ರೇಮ್‌ಗಳನ್ನು ಸಂತಾಪ ಸೂಚಕ ಸಭೆಗಳು, ಸಮಾರಂಭಗಳು ಮತ್ತು ಇತ್ತೀಚೆಗೆ ನಡೆದ ರಾಜ್ಯೋತ್ಸವ ಆಚರಣೆಗಳಲ್ಲಿ ಬಳಸಲಾಗುತ್ತಿತ್ತು. ಸಾಮಾನ್ಯವಾಗಿ ದೇವರು ಮತ್ತು ದೇವತೆಗಳ ಫೋಟೋಗಳನ್ನು ಹಾಕಲು ಬಳಸುವ ಫ್ರೇಮ್‌ಗಳಿಗೆ ಪುನೀತ್ ಅವರ ಫೋಟೋ ಹಾಕುವಂತೆ ಅನೇಕ ಜನರು ಕೇಳುತ್ತಿದ್ದಾರೆ” ಎಂದು ಹೊಸಪೇಟೆಯ ಫೋಟೋ ಫ್ರೇಮ್ ಅಂಗಡಿಯಲ್ಲಿ ಮಾಲೀಕ ಸಂತೋಷ್ ತಿಳಿಸಿದ್ದಾರೆ.

ಹಾವೇರಿಯಲ್ಲಿಯೂ ಪುನೀತ್ ಅವರ ಫೋಟೋ ಫ್ರೇಮ್‌ಗಳ ಆರ್ಡರ್‌ನಿಂದ ಅಂಗಡಿಗಳು ಆಶ್ಚರ್ಯಗೊಂಡಿವೆ. “ಪುನೀತ್‌ ಅವರು ತುಂಬಾ ಪ್ರೀತಿಯನ್ನು ಪಡೆದಿದ್ದಾರೆ. ಇವರೆಲ್ಲರ ಪ್ರೀತಿಯನ್ನು ತೊರೆದು ಪುನೀತ್‌ ಅಗಲಿದ್ದಾರೆ. ಯಾವುದೇ ಸಮಾರಂಭವಿರಲಿ, ಕಾರ್ಯಕ್ರಮವಿರಲಿ ಆಯೋಜಕರು ಪುನೀತ್ ಅವರ ಭಾವಚಿತ್ರವನ್ನು ಅಲ್ಲಿ ಇರಿಸಲು ಬಯಸುತ್ತಾರೆ” ಎಂದು ಹಾವೇರಿಯ ಅಂಗಡಿಯಲ್ಲಿ ಕೆಲಸ ಮಾಡುವರೊಬ್ಬರು ಹೇಳಿದ್ದಾರೆ.

ಪುನೀತ್‌ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಚಲನಚಿತ್ರಗಳ ಶೂಟಿಂಗ್ ಮಾಡಿದ್ದರು. ಹೀಗಾಗಿ, ಇಲ್ಲಿಯ ಜನರು ಅವರನ್ನು ತುಂಬಾ ಗೌರವಿಸುತ್ತಾರೆ’’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಸಂಭಾವನೆ ಪಡೆಯದೇ ಪುನೀತ್‌ ಅಭಿನಯಿಸಿದ್ದ ಸಾಲು ಸಾಲು ಜಾಹೀರಾತುಗಳು!

Spread the love

Leave a Reply

Your email address will not be published. Required fields are marked *