ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಕರ್ನಾಟಕಕ್ಕೆ ಭರ್ಜರಿ ಗೆಲುವು; ಸೆಮಿ ಫೈನಲ್ಗೆ ಲಗ್ಗೆ!
ನವ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಬಂಗಾಳದ ವಿರುದ್ಧ ನಡೆದ ರೋಚಕ ಗೆಲುವು ಸಾಧಿಸಿದೆ. ಈ ವರ್ಷದ ದೇಶಿ ಟಿ20 ಟ್ರೋಫಿಯಲ್ಲಿ ನಡೆದ ಮೊದಲ ಸೂಪರ್ ಓವರ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಕರ್ನಾಟಕ ಸೆಮಿ ಫೈನಲ್ ಪ್ರವೇಶಿಸಿದೆ.
ಕರ್ನಾಟಕದ ನೀರಸ ಆರಂಭ:
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಕರ್ನಾಟಕ ನೀರಸ ಆರಂಭ ಪಡೆದಿತ್ತು. ತಂಡದ ಮೊತ್ತ 19 ರನ್ ಆಗುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್ಮನ್ ಬಿ.ಆರ್. ಶರತ್ (04) ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದ್ದರು. ಎರಡನೇ ವಿಕೆಟ್ಗೆ ಜೊತೆಗೂಡಿದ್ದ ರೋಹನ್ ಖದಮ್ (30) ಮತ್ತು ನಾಯಕ ಮನೀಶ್ ಪಾಂಡೆ (29) ಉತ್ತಮ ಜೊತೆಯಾಟ ನೀಡಿದ್ದರೂ ಸಹ ತಂಡದ ರನ್ ರೇಟ್ ಏರಿಸುವುದು ಸಾಧ್ಯವಾಗಿರಲಿಲ್ಲ.
ಆದರೆ, ಮಧ್ಯಮ ಕ್ರಮಾಂಕದ ಸ್ಪೋಟಕ ಬ್ಯಾಟ್ಸ್ಮನ್ ಕರುಣ್ ನಾಯರ್ ಕೇವಲ 29 ಎಸೆತಗಳಿಗೆ 4 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 55 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಕೊನೆಯಯಲ್ಲಿ ಅಭಿನವ್ ಮನೋಹರ್ (16) ಮತ್ತು ಅನಿರುದ್ಧ ಜೋಶಿ (16) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಕೊನೆಗೂ ಕರ್ನಾಟಕ ನಿಗದಿತ 20 ಓವರ್ಗಳಿಗೆ 160 ರನ್ಗಳ ಗೌರವಾರ್ಹ ಮೊತ್ತವನ್ನು ಪೇರಿಸುವಲ್ಲಿ ಸಫಲವಾಯಿತು.
ಎಡವಿದ ಬಂಗಾಳ:
161 ರನ್ಗಳ ಗುರಿ ಬೆನ್ನಟ್ಟಿದ ಬಂಗಾಳ ಉತ್ತಮ ಆರಂಭವನ್ನೇ ಪಡೆದಿತ್ತು. ಕೇವಲ 5.4 ಓವರ್ಗಳಲ್ಲಿ 51 ರನ್ ಪೇರಿಸುವ ಮೂಲಕ ಬಂಗಾಳದ ಬ್ಯಾಟ್ಸ್ಮನ್ಗಳು ಕರ್ನಾಟಕಕ್ಕೆ ಆಘಾತ ನೀಡಿದ್ದರು. ಆದರೆ, ಒಂದೆಡೆ ರನ್ ಹರಿದು ಬಂದರೂ ಮತ್ತೊಂದೆಡೆ ವಿಕೆಟ್ಗಳನ್ನು ಸತತವಾಗಿ ಉರುಳಿಸುವಲ್ಲಿ ಕರ್ನಾಟಕದ ಬೌಲರ್ಗಳು ಸಫಲರಾದರು. 17ನೇ ಓವರ್ ವೇಳೆ ಇಡೀ ಪಂದ್ಯ ಕರ್ನಾಟಕದ ಜೇಬಿನಲ್ಲಿತ್ತು. ಕೊನೆಯ ಓವರ್ನಲ್ಲಿ ಬಂಗಾಳ ಗೆಲ್ಲಲು 20 ರನ್ಗಳ ಅಗತ್ಯ ಇತ್ತು. ಈ ವೇಳೆ ಕರ್ನಾಟಕ ಬಹುತೇಕ ಗೆಲುವಿನ ನಗೆ ಬೀರಿತ್ತು. ಆದರೆ, ಬಂಗಾಳದ ಬ್ಯಾಟ್ಸ್ಮನ್ಗಳು ಕೊನೆಯ ಓವರ್ನಲ್ಲಿ 19 ರನ್ ಗಳಿಸುವ ಮೂಲಕ ಪಂದ್ಯ ಟೈ ಮಾಡಿಕೊಳ್ಳುವಲ್ಲಿ ಸಫಲರಾದರು.
ಸೂಪರ್ ಓವರ್ನಲ್ಲಿ ಗೆದ್ದ ಕರ್ನಾಟಕ:
ಸೂಪರ್ ಓವರ್ನಲ್ಲಿ ಕರ್ನಾಟಕ ಪರ ಕೆ.ಸಿ. ಕಾರ್ಯಪ್ಪ ಅದ್ಭುತವಾಗಿ ಬೌಲ್ ಮಾಡಿದರು. ಕೇವಲ 5 ರನ್ ನೀಡಿ ಒಂದು ವಿಕೆಟ್ ಪಡೆಯುವಲ್ಲಿ ಸಫಲರಾದರು. 6 ರನ್ ಗಳ ಸಾಧಾರಣ ಗುರಿ ಬೆನ್ನಟ್ಟಿದ ಕರ್ನಾಟಕ ಮನೀಶ್ ಪಾಂಡೆ ಅವರ ಮನಮೋಹಕ ಸಿಕ್ಸರ್ ನೆರವಿನಿಂದ ಕೇವಲ 2 ಎಸೆತಕ್ಕೆ ಗುರಿ ಮುಟ್ಟಿ ಗೆಲುವನ್ನು ದಾಖಲಿಸಿತು. ಈ ಮೂಲಕ ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದೆ.
Read Also: T-20 ವಿಶ್ವಕಪ್‌ನ ಹೀರೋ ಡೇವಿಡ್ ವಾರ್ನರ್; ಅವರನ್ನು SRH ಕೈಬಿಟ್ಟಿದ್ದೇಕೆ?