ಪಿಯುಸಿಯಲ್ಲಿ 80% ಅಂಕ ಗಳಿಸಿದ ವಿದ್ಯಾರ್ಥಿನಿ; ಕಾಲೇಜು ಶುಲ್ಕ ಭರಿಸಲಾಗದೇ ಕೂಲಿ ಕೆಲಸ ಮಾಡುತ್ತಿದ್ದಾಳೆ!

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 80% ರಷ್ಟು ಅಂಕಗಳನ್ನು ಗಳಿಸಿ, ತನ್ನ ಕಾಲೇಜಿನಲ್ಲಿ 3ನೇ ರ್‍ಯಾಂಕ್ ಪಡೆದು, ಕಾಲೇಜಿನ ಮ್ಯಾಗಜಿನ್‌ನ ಮುಖಪುಟದಲ್ಲಿ ಕಾಣಿಸಿಕೊಂಡಿದ್ದ ವಿದ್ಯಾರ್ಥಿನಿ, ಉನ್ನತ ವಿದ್ಯಾಭ್ಯಾಸಕ್ಕೆ ತೆರಳಲು ಕಾಲೇಜು ಶುಲ್ಕ ಭರಿಸಲಾಗದೇ ಇಂದು ಕೂಲಿ ಕೆಲಸ ಮಾಡುತ್ತಿದ್ದಾರೆ.

ಹೈದರಾಬಾದ್‌ನ ಜವಾಹರನಗರದ ಡಂಪ್ ಯಾರ್ಡ್ ಬಳಿಯಿರುವ ಗಿರಿ ಪ್ರಸಾದ್ ನಗರದ ನಿವಾಸಿ 17 ವರ್ಷದ ತಿರುಪತಮ್ಮ, ಕಷ್ಟಗಳ ನಡುವೆಯೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 80 ರಷ್ಟು ಅಂಕ ಗಳಿಸಿದ್ದಾರೆ. ಆದರೆ, ಕಾಲೇಜು ಶುಲ್ಕ ಕಟ್ಟಲಾಗದೇ ಕೆಲವೇ ದಿನಗಳಲ್ಲಿ ವಿದ್ಯಾಭ್ಯಾಸ ಬಿಟ್ಟು ಕೂಲಿ ಕೆಲಸಕ್ಕೆ ಇಳಿದಿದ್ದಾರೆ.

ಡ್ರೈ ಫ್ರೂಟ್ಸ್ ಪ್ಯಾಕಿಂಗ್ ಕಂಪನಿಯಲ್ಲಿ ದಿನಗೂಲಿ ಕೆಲಸ ಮಾಡುತ್ತಿರುವ ತಿರುಪತಮ್ಮ ಕಾಲೇಜಿನಲ್ಲಿ ಇನ್ನೂ 8,000 ರೂಪಾಯಿ ಶುಲ್ಕ ಬಾಕಿ ಉಳಿಸಿಕೊಂಡಿರುವುದರಿಂದ ಆಕೆಯ ಪ್ರಮಾಣಪತ್ರಗಳನ್ನು ನೀಡಲು ನಗರಂನಲ್ಲಿರುವ ಖಾಸಗಿ ಜೂನಿಯರ್ ಕಾಲೇಜು ನಿರಾಕರಿಸಿದೆ. ಈ ಕಾರಣಕ್ಕೆ ಆಕೆ ದಿನಗೂಲಿ ಕಾರ್ಮಿಕರಾಗಿದ್ದಾರೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ; ಪ್ರಾಂಶುಪಾಲೆ ಮತ್ತು ಶಿಕ್ಷಕನ ಬಂಧನ

“ನಾನು ಇಲ್ಲಿಯವರೆಗೆ ಕಾಲೇಜಿಗೆ 14,000 ರೂ. ಪಾವತಿಸಿದ್ದೇನೆ. ಇನ್ನೂ 8,000 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗಿದೆ. ಹೀಗಾಗಿ ಕಾಲೇಜಿನವರು ನನ್ನ ಪ್ರಮಾಣಪತ್ರಗಳನ್ನು ನೀಡುತ್ತಿಲ್ಲ. ಲಾಕ್‌ಡೌನ್, ಕೆಲಸದ ಕೊರತೆ ಮತ್ತು ಅನಾರೋಗ್ಯದ ಕಾರಣದಿಂದಾಗಿ ನನ್ನ ಕುಟುಂಬದವರಿಂದ ಊಟಕ್ಕೆ ಹಣ ಸಂಪಾದಿಸಲು ಕೂಡ ಸಾಧ್ಯವಾಗುತ್ತಿಲ್ಲ” ಎಂದು ತಿರುಪತಮ್ಮ ಹೇಳಿದ್ದಾರೆ.

ನಗರಂನಲ್ಲಿರುವ ಖಾಸಗಿ ಜೂನಿಯರ್ ಕಾಲೇಜು ತಿರುಪತಮ್ಮಗೆ ವರ್ಗಾವಣೆ ಮತ್ತು ನಡವಳಿಕೆ ಪ್ರಮಾಣಪತ್ರಗಳು ಮತ್ತು 10 ನೇ ತರಗತಿಯ ಅಂಕಪಟ್ಟಿ ನೀಡಲು ನಿರಾಕರಿಸಿದೆ.

ತಿರುಪತಮ್ಮ ಅವರ ತಂದೆ ಮತ್ತು 21 ವರ್ಷದ ಸಹೋದರ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಇತರ ಅನೇಕ ಬಡ ಕಾರ್ಮಿಕರಂತೆ ಇವರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದರು. ಈಗ ಇಬ್ಬರೂ ಈಗ ಅನಾರೋಗ್ಯಕ್ಕೆ ತುತ್ತಾಗಿದ್ದು, ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿನಿಯ ತಾಯಿ ಮತ್ತು ಆಕೆ ಕೆಲಸಕ್ಕೆ ಹೋಗುತ್ತಿದ್ದಾರೆ.

“ಈಗ ನಾನು ಮತ್ತು ನನ್ನ ತಾಯಿ ಇಬ್ಬರೂ ಕೆಲಸ ಮಾಡದಿದ್ದರೆ ನಮಗೆ ಊಟವಿಲ್ಲ ಎಂಬ ಹಂತಕ್ಕೆ ಬಂದಿದೆ. ನನ್ನ ಅಣ್ಣನ ಆರೋಗ್ಯ ಚೆನ್ನಾಗಿದ್ದಿದ್ದರೇ ಆತ ಎರಡು ತಿಂಗಳಲ್ಲಿ 8,000 ರೂ.ವರೆಗೆ ಸಂಪಾದಿಸಿ ನನ್ನ ಪ್ರಮಾಣಪತ್ರಗಳನ್ನು ತಂದುಕೊಡುತ್ತಿದ್ದರು” ಎಂದು ವಿದ್ಯಾರ್ಥಿನಿ ನೋವಿನಲ್ಲಿ ಹೇಳಿದ್ದಾರೆ.

ವಿದ್ಯಾರ್ಥಿನಿ ತಿರುಪತಮ್ಮ ಶೀಘ್ರದಲ್ಲೇ ಪ್ರಮಾಣಪತ್ರಗಳನ್ನು ಪಡೆಯದಿದ್ದರೆ ಆಕೆ ಬಿಎಸ್ಸಿ ನರ್ಸಿಂಗ್‌ಗೆ ಸೇರಲು ಸಾಧ್ಯವಾಗುವುದಿಲ್ಲ. ಜೊತೆಗೆ ಆಕೆಯ ಒಂದು ವರ್ಷ ಹಾಳಾಗಿ ಆಕೆ ಶಾಶ್ವತವಾಗಿ ಕೂಲಿ ಕಾರ್ಮಿಕಳಾಗಿಯೇ ಉಳಿಯಬಹುದು.

“ನಾವು ನಮ್ಮ ಗಮನಕ್ಕೆ ಬಂದ ವೈಯಕ್ತಿಕ ಪ್ರಕರಣಗಳನ್ನು ಪರಿಹರಿಸುತ್ತಿದ್ದೇವೆ. ನಾವು ಈ ಪ್ರಕರಣವನ್ನೂ ಸಹ ಪರಿಶೀಲಿಸುತ್ತೇವೆ.” ಎಂದು ಮೇಡ್ಚಲ್ ಶಿಕ್ಷಣ ಕಚೇರಿಯ ಅಧಿಕಾರಿಯೊಬ್ಬರನ್ನು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಉಲ್ಲೇಖಿಸಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹೇಯ ಕೃತ್ಯ: ಬಾಲಕಿಯ ಮೇಲೆ 400 ಮಂದಿ ಕಾಮುಕರಿಂದ ಅತ್ಯಾಚಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights