650 ಕೋಟಿ ಮೌಲ್ಯದ ಸರ್ಕಾರಿ ಜಮೀನು ಕಬಳಿಕೆಗೆ ಲಿಂಬಾವಳಿ ಹುನ್ನಾರ: ಆಪ್ ಆರೋಪ!
ಮಹದೇವಪುರ ವಿಧಾನಸಭಾ ಕ್ಷೇತ್ರಕ್ಕೆ ಹತ್ತಿರದಲ್ಲಿ ಇರುವ ವರ್ತೂರು ಹೋಬಳಿಯ ಜುನ್ನಸಂದ್ರದ ಸುಮಾರು 24.33 ಎಕರೆ ಕೆರೆ ಜಮೀನನ್ನು ನುಂಗಲು ಸ್ಥಳೀಯ ಶಾಸಕ, ಸಚಿವ ಅರವಿಂದ ಲಿಂಬಾವಳಿ ಹುನ್ನಾರ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಆರೋಪಿಸಿದರು.
ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯರಾದ, ಜೋಡಿದಾರರಾಗಿದ್ದ ನಾರಾಯಣ ರೆಡ್ಡಿ ಕುಟುಂಬದವರೊಂದಿಗೆ ಸೇರಿಕೊಂಡು ಸುಮಾರು 650 ಕೋಟಿ ಮೌಲ್ಯದ ಕೆರೆ ಜಮೀನನ್ನು ನುಂಗಲು ಸಚಿವ ಅರವಿಂದ ಲಿಂಬಾವಳಿ ಹೊರಟಿದ್ದಾರೆ ಎಂದರು.
2014 ರಲ್ಲಿ ಒತ್ತುವರಿದಾರ ನಾರಾಯಣ ರೆಡ್ಡಿ ಕುಟುಂಬದ ಕೈಯಿಂದ ಒತ್ತುವರಿ ತೆರವುಗೊಳಿಸಿದ ಮೇಲೂ ಕೇವಲ ಬೇಲಿ ಹಾಕಿ ಬಿಡಲಾಗಿದೆ ಹೊರತು ಮತ್ತೇನೂ ಮಾಡಿಲ್ಲ. ಈ ಕೆರೆ ಅಭಿವೃದ್ಧಿ ಮಾಡಿದರೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನು ಕೈ ತಪ್ಪುತ್ತದೆ ಎಂದು ಸಚಿವ ಅರವಿಂದ ಲಿಂಬಾವಳಿ ಅವರು ಕೆರೆ ಅಭಿವೃದ್ಧಿ ತಡೆಯುತ್ತಿದ್ದಾರೆ ಎಂದು ಆಪಾದಿಸಿದರು.
ಬಿಡಿಎ ಅಧೀನದಲ್ಲಿ ಇರುವ ಈ ಕೆರೆ ಈಗ ಹಾಳು ಕೊಂಪೆಯಾಗಿದೆ. ರಾತ್ರೋ ರಾತ್ರಿ ಬಂದು ತ್ಯಾಜ್ಯ ಸುರಿಯಲಾಗುತ್ತಿದೆ. ಒಳಚರಂಡಿ ನೀರು ಬಿಟ್ಟಿರುವ ಕಾರಣ ಹಂದಿ, ಸೊಳ್ಳೆಗಳ ಕಾಟ ವಿಪರೀತ ಹೆಚ್ಚಾಗಿದೆ. ಅಲ್ಲದೇ ಅಂತರ್ಜಲ ಸಾಕಷ್ಟು ಕಲುಷಿತಗೊಂಡಿದ್ದು ಜನರು ಇದೇ ನೀರನ್ನ ಉಪಯೋಗಿಸುತ್ತಿದ್ದಾರೆ. ಇದೆಲ್ಲವೂ ಸಚಿವರ ಬೆಂಬಲದೊಂದಿಗೆ ನಡೆಯುತ್ತಿದೆ. ಇದುವರೆಗೂ ಕೆರೆ ಅಭಿವೃದ್ದಿಗೆ ಎಂದು ನೀಡಿದ ಅನುದಾನವನ್ನು ನುಂಗಿ ನೀರು ಕುಡಿಯಲಾಗಿದೆ ಎಂದರು.
ಈ ಕೆರೆ ಅಭಿವೃದ್ಧಿಗೆ ಸಾಕಷ್ಟು ಬಾರಿ ಹಣ ಬಿಡುಗಡೆಯಾಗಿದ್ದರೂ ಈ ಸ್ಥಿತಿಯಲ್ಲಿ ಇರಲು ಕಾರಣ ಸಚಿವ ಅರವಿಂದ ಲಿಂಬಾವಳಿ. ಸುಮಾರು 650 ಕೋಟಿ ಮೌಲ್ಯದ ಈ ಭೂಮಿಯನ್ನು ಮಾರಾಟ ಮಾಡುವ ಷಡ್ಯಂತ್ರ ಎಂದು ಕಿಡಿ ಕಾರಿದರು.
ನಾರಾಯಣ ರೆಡ್ಡಿ ಕುಟುಂಬದವರು ಈಗಲೂ ಈ ಭೂಮಿ ತಮಗೆ ಸೇರಬೇಕು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು. ಈ ದಾವೆಯನ್ನು ಸಹ ಗ್ರಾಮಸ್ಥರೇ ಮುನ್ನಡೆಸುತ್ತಿದ್ದಾರೆ. ಬಿಬಿಎಂಪಿಯು ಸಚಿವರ ಒತ್ತಡಕ್ಕೆ ಒಳಗಾಗಿ ಪ್ರಕರಣ ಮುಂದುವರೆಸುತ್ತಿಲ್ಲ ಎಂದು ಆರೋಪಿಸಿದರು.
ಬೆಳ್ಳಂದೂರು ವಾರ್ಡ್ ಅಧ್ಯಕ್ಷ ಅಶೋಕ್ ಮೃತ್ಯುಂಜಯ ಮಾತನಾಡಿ, ಜುನ್ನಸಂದ್ರ ಕೆರೆ ಉಳಿವಿಗಾಗಿ ಸ್ಥಳೀಯ ಜನರ ಸಹಕಾರದೊಂದಿಗೆ ಮಾರ್ಚ್ 21ರ (ಭಾನುವಾರ) ಬೆಳಿಗ್ಗೆ ಕೆರೆ ಅಂಗಳದಲ್ಲೇ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷ ಕಾನೂನು ಘಟಕದ ಅಧ್ಯಕ್ಷರಾದ ನಂಜಪ್ಪ ಕಾಳೇಗೌಡ ಆರೋಪಿಸಿದರು. ಮುಖಂಡರಾದ ಅಶೋಕ್ ಮೃತ್ಯುಂಜಯ, ಚೆಲುವರಾಜು ಅವರು ಉಪಸ್ಥಿತರಿದ್ದರು.