IPL 2021: ಕೊನೆ ಎಸೆತದಲ್ಲಿ ಸಿಕ್ಸರ್; ಆರ್‌ಸಿಬಿ ಗೆಲುವು ತಂದ ಭರತ್!

ಈ ಬಾರಿಯ ಐಪಿಎಲ್‌ನಲ್ಲಿ ಪ್ಲೇ ಆಪ್‌ನಲ್ಲಿ ತಂಡ ಆಡುವುದೋ ಇಲ್ಲವೋ ಎಂಬ ಆತಂಕ ಆರ್‌ಸಿಬಿ ಪ್ಯಾನ್ಸ್‌ಗಳಲ್ಲಿತ್ತು. ಅಂತಹ ಆತಂಕಕ್ಕೆ ತಂಡ ತೆರೆ ಎಳೆದಿದ್ದು, ಪ್ಲೇಆಫ್‌ಗೆ ಲಗ್ಗೆ ಇಟ್ಟಿದೆ.

ನಿನ್ನೆ (ಶುಕ್ರವಾರ) ನಡೆದ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಆಟದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಕೊನೇ ಎಸೆತದಲ್ಲಿ 5 ರನ್ ಬೇಕಾಗಿದ್ದಾಗ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆಎಸ್ ಭರತ್ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದಾರೆ.

ಇನ್ನೇನು ಆರ್‌ಸಿಬಿ ಸೋಲಲಿದೆ ಎಂಬ ಕ್ಷಣದಲ್ಲಿ ಕೊನೆ ಎಸೆತದಲ್ಲಿ ಭರತ್ ಅವರು ಲಾಂಗ್ ಆನ್‌ನತ್ತ ಸಿಡಿಸಿದ ಭರ್ಜರಿ ಸಿಕ್ಸರ್ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಟೇಬಲ್ ಟಾಪರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ್ದು, ಐಪಿಎಲ್-14ರ ಪ್ಲೇಆಫ್​‌ಗೆ ಸಜ್ಜಾಗಿದೆ.

ಭರತ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ದಿಟ್ಟ ಚೇಸಿಂಗ್‌ನಿಂದ ಆರ್‌ಸಿಬಿ ತಂಡ, ತನ್ನ ಕಡೇ ಲೀಗ್ ಪಂದ್ಯದಲ್ಲಿ ಆರಂಭಿಕ ಆಘಾತದ ನಡುವೆಯೂ ರೋಚಕ ಗೆಲುವು ಸಾಧಿಸಿತು.

ದುಬೈ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಪೃಥ್ವಿ ಷಾ (48 ರನ್, 31 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಶಿಖರ್ ಧವನ್ (43 ರನ್, 35 ಎಸೆತ, 3 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್‌ಗೆ 164 ರನ್ ಪೇರಿಸಿತು. ಪ್ರತಿಯಾಗಿ ಆರ್‌ಸಿಬಿ ತಂಡ 3 ವಿಕೆಟ್‌ಗೆ 166 ರನ್ ಪೇರಿಸಿ ಜಯಿಸಿತು. ಆವೇಶ್ ಖಾನ್ ಎಸೆದ ಕಡೇ ಓವರ್‌ನಲ್ಲಿ 15 ರನ್ ಬೇಕಿತ್ತು. ಮ್ಯಾಕ್ಸ್‌ವೆಲ್ ಮೊದಲೆರಡು ಎಸೆತಗಳಲ್ಲಿ ಬೌಂಡರಿ ಸಹಿತ 6 ರನ್ ಕಸಿದರೆ, 3ನೇ ಎಸೆತದಲ್ಲಿ ಲೆಗ್‌ಬೈ ಮೂಲಕ 1 ರನ್ ಬಂತು. 4ನೇ ಎಸೆತಕ್ಕೆ ರನ್ ಇಲ್ಲ. 5ನೇ ಎಸೆತದಲ್ಲಿ 2 ರನ್. ಮರು ಎಸೆತ ವೈಡ್. ಬಳಿಕ ಕೊನೇ ಎಸೆತದಲ್ಲಿ ಭರತ್ ಸಿಕ್ಸರ್ ಚಚ್ಚಿದರು.

ಆರ್‌ಸಿಬಿ ಮೊತ್ತ 6 ರನ್ ಆಗುವಷ್ಟರಲ್ಲೇ ಆರಂಭಿಕರಾದ ದೇವದತ್ ಪಡಿಕಲ್ (0) ಮತ್ತು ನಾಯಕ ವಿರಾಟ್ ಕೊಹ್ಲಿ (4) ಡಗೌಟ್ ಸೇರಿದ್ದರೆ, ಎಬಿ ಡಿವಿಲಿಯರ್ಸ್‌ (26) ತುಸು ಚೇತರಿಕೆ ನೀಡಿ ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಔಟಾದರು. ಆಗ ಜತೆಗೂಡಿದ ಕೆಎಸ್ ಭರತ್ ಮತ್ತು ಮ್ಯಾಕ್ಸ್‌ವೆಲ್ ಮುರಿಯದ 4ನೇ ವಿಕೆಟ್‌ಗೆ 63 ಎಸೆತಗಳಲ್ಲಿ 111 ರನ್ ಸೇರಿಸಿ ಆರ್‌ಸಿಬಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಗೆಲುವಿನ ನಡುವೆಯೂ ಆರ್‌ಸಿಬಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲೇ ಉಳಿಯಿತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights