ಡ್ಯೂಟಿಯ ವೇಳೆ ಮದ್ಯ ಸೇವಿಸಿದ ಪೊಲೀಸರು; ವಿಡಿಯೋ ವೈರಲ್‌; ಎಎಸ್‌ಐ ಅಮಾನತು!

ಕರ್ತವ್ಯದಲ್ಲಿದ್ದ ಪೊಲೀಸರು ಸಮವಸ್ತ್ರ ಧರಿಸಿಯೇ ಮದ್ಯ ಸೇವಿಸಿದ್ದಾರೆ ಎಂದು ಆರೋಪಿಲಾಗಿರುವ ವಿಡಿಯೋ ವೈರಲ್‌ ಆಗಿದ್ದು, ಚಿಕ್ಕನಾಯಕನಹಳ್ಳಿ ಠಾಣೆಯ ಎಎಸ್‌ಐ ಶ್ರೀನಿವಾಸ್, ತುರುವೇಕೆರೆ ತಾಲ್ಲೂಕು ದಂಡಿನಶಿವರ ಠಾಣೆಯ ಕಾನ್‌ಸ್ಟೆಬಲ್‌ ಪರಮೇಶ್ ಮತ್ತು ಸಂತೋಷ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಕೆಲಸದಿಂದ ಅಮಾನತುಗೊಳಿಸಿದ್ದಾರೆ.

ಈ ಮೂರೂ ಅಧಿಕಾರಿಗಳು ತಾಲ್ಲೂಕಿನಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದರು. ಚುನಾವಣಾ ಕೆಲಸ ಮುಗಿಸಿ ರಾತ್ರಿ ಮನೆಗೆ ಹೊರಟಿದ್ದರು. ಈ ವೇಳೆ 112 ಹೊಯ್ಸಳ ವಾಹನದಲ್ಲಿಯೇ ಕುಳಿತು ಮದ್ಯ ಸೇವಿಸಿದ್ದಾರೆ. ಆಗ ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ ಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ರಘು, ಇದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಈ ಬಗ್ಗೆ ವಿಚಾರಣೆ ನಡೆಸಲು ರಘು ಅವರನ್ನು ಕುಣಿಗಲ್ ಪೊಲೀಸರು ಠಾಣೆಗೆ ಕರೆ ತಂದಿದ್ದರು. ಸ್ಥಳಕ್ಕೆ ಬಂದ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾರೆಡ್ಡಿ, ಠಾಣೆ ಎದುರು ಪ್ರತಿಭಟಿಸಲು ಮುಂದಾದರು. ಆಗ ಪೊಲೀಸರು ಮತ್ತು ಸಮಿತಿ ಕಾರ್ಯಕರ್ತರ ನಡುವೆ ವಾಕ್ಸಮರ ನಡೆಯಿತು. ಡಿವೈಎಸ್‌ಪಿ ಜಗದೀಶ್ ಪ್ರತಿಭಟನಕಾರರ ಜತೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ರವಿಕೃಷ್ಣಾ ರೆಡ್ಡಿ, “ಮಾನ್ಯ ಗೃಹಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರೇ, ಕುಣಿಗಲ್ ಪಟ್ಟಣದಲ್ಲಿ ನಿನ್ನೆ ಸಂಜೆ ಖಾಕಿ ಸಮವಸ್ತ್ರದಲ್ಲಿದ್ದಾಗಲೆ ಸಾರ್ವಜನಿಕವಾಗಿ ಹೆಂಡ ಕುಡಿದು ಪಾನಮತ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರನ್ನು ಪ್ರಶ್ನೆ ಮಾಡಿದ್ದಕ್ಕೆ, ಠಾಣೆಗೆ ಎಳೆದುಕೊಂಡು ಹೋಗಿ ತೀವ್ರ ದೌರ್ಜನ್ಯ ಎಸಗಿದ ಕುಣಿಗಲ್ ಠಾಣೆಯ ಸಿಬ್ಬಂದಿಯನ್ನು ಈ ಕೂಡಲೇ ಅಮಾನತು ಮಾಡಿ” ಎಂದು ಆಗ್ರಹಿಸಿದ್ದರು.

“ತಾವು ಈ ಮೇಲಿನ ವಿಚಾರವಾಗಿ ಇಂದು ಬೆಳಗ್ಗೆ 10:30ರ ಒಳಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ಇಲ್ಲವಾದಲ್ಲಿ ನಾವು ಕುಣಿಗಲ್ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡುವುದು ಅನಿವಾರ್ಯ ಆಗುತ್ತದೆ” ಎಂದು ಎಚ್ಚರಿಸಿದ್ದರು.


ಇದನ್ನೂ ಓದಿ: ಡಿವೈಎಸ್ ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣ : ವೈದ್ಯಕೀಯ ವರದಿ ಹೇಳೋದೇನು..?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights