ಗಡಿ ವಿವಾದ: ಭಾರತೀಯ ವೈರಸ್ ಹೆಚ್ಚು ಅಪಾಯಕಾರಿ ಎಂದ ನೇಪಾಳ; ಭಾರತದ ತಿರುಗೇಟು

ಭಾರತ ಮತ್ತು ನೇಪಾಳದ ಗಡಿ ವಿವಾದ ತಾರಕಕ್ಕೆ ಏರಿದೆ. ಭಾರತೀಯ ವೈರಸ್ ಚೀನಾ ಹಾಗೂ ಇಟಲಿಯ ವೈರಸ್‌ಗಿಂತಲೂ ಹೆಚ್ಚು ಮಾರಕವಾಗಿದೆ ಎಂದು ನೇಪಾಳ ಪ್ರಧಾನಿ ಕೆ.ಪಿ. ಓಲಿ ಭಾರತದ ವಿರುದ್ದ ವಾಗ್ದಾಳಿ ಮಾಡಿದ್ದಾರೆ. ಅಲ್ಲದೆ ನೆನ್ನೆ ನೇಪಾಳ, ಭಾರತದ ಭಾಗವಾಗಿರುವ ಕಾಲಾಪಾನಿಯನ್ನು ಸೇರಿಸಿಕೊಂಡ ಹೊಸ ನೇಪಾಳ ಭೂಪಟವನ್ನು ಬಿಡುಗಡೆ ಮಾಡಿದ್ದು ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಭಾರತವು ಗಡಿಯಲ್ಲಿನ ಭೂಪ್ರದೇಶದ ಕೆಲವು ಭಾಗಗಳನ್ನು ನೇಪಾಳ ತನ್ನ ಹೊಸ ನಕ್ಷೆಯಲ್ಲಿ ಸೇರಿಸಿಕೊಳ್ಳಲು ಸಂಪುಟ ಒಪ್ಪಿಗೆ ನೀಡಿದ ನಂತರ, ನೇಪಾಳ ಪ್ರಧಾನಿ ಕೆ.ಪಿ. ಓಲಿ ಭಾರತದ ವಿರುದ್ಧ ಹೊಸದಾಗಿ ವಾಗ್ದಾಳಿ ನಡೆಸಿದ್ದಾರೆ.

ಭಾರತದ ವೈರಸ್ ಚೀನೀ ಮತ್ತು ಇಟಾಲಿಯನ್ ವೈರಸ್‌ಗಿಂತ “ಹೆಚ್ಚು ಮಾರಕವಾಗಿದೆ” ಎಂದು ಓಲಿ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.

“ಅಕ್ರಮ ಸಂಪರ್ಕದಾರಿಯ ಮೂಲಕ ಭಾರತದಿಂದ ಬರುತ್ತಿರುವವರು ದೇಶದಲ್ಲಿ ವೈರಸ್ ಹರಡುತ್ತಿದ್ದಾರೆ ಮತ್ತು ಕೆಲವು ಸ್ಥಳೀಯ ಪ್ರತಿನಿಧಿಗಳು ಮತ್ತು ಪಕ್ಷದ ಮುಖಂಡರು ಸರಿಯಾದ ಪರೀಕ್ಷೆಯಿಲ್ಲದೆ ಭಾರತದಿಂದ ಜನರನ್ನು ಕರೆತರುತ್ತಿದ್ದಾರೆ” ಎಂದು ಒಲಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಕೊರೊನಾ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ  ಸಂಸತ್ತಿನಲ್ಲಿ ಪ್ರಧಾನಿ ಒಲಿ ಮಾಡಿದ ಮೊದಲ ಭಾಷಣದಲ್ಲಿ, ನೇಪಾಳವು ಭಾರತದ ಭೂಪ್ರದೇಶದ ಭಾಗವಾಗಿರುವ ಕಾಲಾಪಾನಿ-ಲಿಂಪಿಯಧುರ-ಲಿಪುಲೆಖ್ ಪ್ರದೇಶವನ್ನು “ಯಾವುದೇ ಬೆಲೆತೆತ್ತಾದರೂ ಮರಳಿ ತರುತ್ತದೆ” ಎಂದು ಹೇಳಿದ್ದರು. ಈ ಮೂರು ವಿವಾದಿತ ಪ್ರದೇಶಗಳನ್ನು ಹೊಸ ಭೂಪಟದಲ್ಲಿ ಸೇರಿಸಿರುವ ಕ್ರಮವನ್ನು ನೇಪಾಳದ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಈಗ ನೇಪಾಳದ ನೆಲ ವ್ಯವಸ್ಥಾಪನೆ, ಸಹಕಾರಿ ಸಂಘಗಳು ಮತ್ತು ಬಡತನ ನಿರ್ಮೂಲನೆ ಸಚಿವೆಯಾದ ಪದ್ಮಾ ಕುಮಾರಿ ಆರ್ಯಾಲ್ ಕಾಲಾಪಾನಿ-ಲಿಂಪಿಯಧುರ-ಲಿಪುಲೆಖ್ ಪ್ರದೇಶಗಳನ್ನು ಸೇರಿಸಿಕೊಂಡ ಹೊಸ ಭೂಪಟವನ್ನು ಬಿಡುಗಡೆ ಮಾಡಿದ್ದಾರೆ.

ನೇಪಾಳ ಮತ್ತು ಭಾರತ ದೇಶಗಳು 1,800 ಕಿಮೀ ತೆರೆದ ಗಡಿ ಪ್ರದೇಶವನ್ನು ಹಂಚಿಕೊಂಡಿವೆ. ಬ್ರಿಟಿಷರ ಜತೆ 1816ರಲ್ಲಿ ಸಹಿ ಹಾಕಲಾದ ಸುಗೌಲಿ ಒಪ್ಪಂದಾನುಸಾರ ಲಿಪುಲೆಖ್ ಪಾಸ್ ತನ್ನದೆಂದು ನೇಪಾಳ ಹೇಳುತ್ತಿದೆ.

ಭಾರತ ಚೀನಾದ 1962ರಲ್ಲಿನ ಯುದ್ಧದ ನಂತರ ಲಿಂಪಿಯಧುರ ಹಾಗೂ ಕಾಲಾಪಾನಿಯಲ್ಲಿ ಭಾರತೀಯ ಸೇನೆಗಳು ನಿಯೋಜನೆಗೊಂಡಿವೆಯಾದರೂ ಈ ಪ್ರದೇಶಗಳೂ ತನ್ನದೆಂದು ನೇಪಾಳ ಹೇಳುತ್ತಿದೆ.

ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತ

ಈ ಬೆಳವಣಿಗೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತ ನೇಪಾಳ ಬಿಡುಗಡೆ ಮಾಡಿರುವ ಹೊಸ ರಾಜಕೀಯ ಭೂಪಟ ಒಪ್ಪಿತವಲ್ಲ ಎಂದು ಹೇಳಿರುವುದಲ್ಲದೆ “ಇದು ಅನ್ಯಾಯದ ಉಲಂಘನೆ” ಎಂದಿದೆ.

ಬಹಳ ಖಾರವಾಗಿ ಪ್ರತಿಕ್ರಿಯಿಸಿ ನೀಡಿರುವ ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ “ಭಾರತದ ಭೂಭಾಗವನ್ನು ಒಳಗೊಂಡ ಹೊಸ ರಾಜಕೀಯ ಭೂಪಟವನ್ನು ಇಂದು ನೇಪಾಳ ಬಿಡುಗಡೆ ಮಾಡಿದೆ. ಇದಕ್ಕೆ ಯಾವುದೇ ಐತಿಹಾಸಿಕ ಸಾಕ್ಷ್ಯಗಳು ಇಲ್ಲ”

“ಇಂತಹ ಕೃತಕ ಭೂಪಟ ವಿಸ್ತರಣೆಯನ್ನು ಭಾರತ ಒಪ್ಪುವುದಿಲ್ಲ. ಇಂತಹ ಅನ್ಯಾಯದ ಭೂಪಟ ಉಲ್ಲಂಘನೆಯನ್ನು ನೇಪಾಳ ಕೂಡಲೆ ಹಿಂತೆಗೆದುಕೊಂಡು ಭಾರತದ ಸಾರ್ವಭೌಮತೆ ಮತ್ತು ಗಡಿ ಪ್ರಾಮಾಣಿಕತೆಗೆ ಗೌರವ ನೀಡಬೇಕು” ಎಂದು ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

“ಗಡಿ ವಿವಾದಗಳನ್ನು ಬಗೆಹರಿಸಿಕೊಳ್ಳಲು ನೇಪಾಳ ಮುಖಂಡತ್ವ ಧನಾತ್ಮಕ ವಾತಾವರಣ ನಿರ್ಮಿಸಿ ದ್ವಿಪಕ್ಷೀಯ ಮಾತುಕತೆಗೆ ಮುಂದಾಗುತ್ತದೆ ಎಂದು ನಂಬಿದ್ದೇನೆ” ಎಂದು ಕೂಡ ಅವರು ಹೇಳಿದ್ದಾರೆ.

ಈ ವಿಷಯದಲ್ಲಿ ಚೈನಾ ತಟಸ್ಥವಾಗಿ ಇರಲು ನಿಶ್ಚಯಿಸಿದ್ದು, ಇದು ನೇಪಾಳ ಮತ್ತು ಭಾರತದ ನಡುವಿನ ಗಡಿವಿವಾದ. ಮಾತುಕತೆಯ ಮೂಲಕ ಬಗೆಹರಿಯಲೆಂದು ಆಶಿಸುವುದಾಗಿ ಹೇಳಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights