ಕನ್ನಡ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಇನ್ನಿಲ್ಲ..!

ಕನ್ನಡ ಸಾಮಾಜಿಕ ನಿಘಂಟಿನ ಮೂಲಕ ಕನ್ನಡ ಭಾಷೆಯ ಸಮೃದ್ಧಿಗೆ ವಿನೂತನ ಕೊಡುಗೆ ನೀಡಿದ ಕನ್ನಡದ ಅತಿ ದೊಡ್ಡ ವಿದ್ವಾಂಸರೂ, ಸಂಶೋಧಕರೂ ಆದ ಪ್ರೊ ಜಿ ವೆಂಕಟಸುಬ್ಬಯ್ಯನವರು ತಮ್ಮ 108ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ವೆಂಕಟಸುಬ್ಬಯ್ಯ ಅವರು, ಭಾನುವಾರ ತಡರಾತ್ರಿ 1.15ಕ್ಕೆ ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಒಂದು ವಾರದ ಹಿಂದಷ್ಟೇ ಮೂತ್ರನಾಳದ ಸೋಂಕಿಗೆ ಒಳಗಾಗಿದ್ದ ಅವರನ್ನು ಶಾಂತಿ ಸರ್ಜಿಕಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ  ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಬೇಕಿತ್ತು. ಆದರೆ ರಾತ್ರಿ ವಯೋಸಹಜವಾಗಿ ಅಸ್ವಸ್ಥರಾಗಿ ನಿಧನರಾಗಿದ್ದಾರೆ ಅವರ ಕುಟುಂಬದ ಮೂಲಗಳು ತಿಳಿಸಿವೆ.

1913ರ, ಆಗಸ್ಟ್ 23ರಂದು ಮಂಡ್ಯ ಜಿಲ್ಲೆಯ ಶ್ರಿರಂಗಪಟ್ಟಣದ ಗಂಜಾಮ್​ನಲ್ಲಿ ಜನಿಸಿದ ಪ್ರೊ| ಜಿ. ವೆಂಕಟಸುಬ್ಬಯ್ಯ ಕನ್ನಡದ ಅಪ್ರತಿಮ ಭಾಷಾ ತಜ್ಞರು, ಸಂಶೋಧಕರು, ಬರಹಗಾರರು ಹಾಗೂ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಾಚೀನ ಸಾಹಿತ್ಯ ಅಧ್ಯಯನ ಹಾಗೂ ಅನುವಾದ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರ. ಎಲ್ಲಕ್ಕಿಂತ ಹೆಚ್ಚು ಕೊಡುಗೆ ಇರುವುದು ನಿಘಂಟು ಕ್ಷೇತ್ರಕ್ಕೆ. ಕನ್ನಡ ನಿಘಂಟು ತಜ್ಞರೆಂದೇ ಖ್ಯಾತರಾಗಿರುವ ಅವರಿಗೆ ಪದ್ಮಶ್ರೀ, ನಾಡೋಜ, ಪಂಪ, ಭಾಷಾ ಸನ್ಮಾನ್ ಪ್ರಶಸ್ತಿ ಗೌರವಗಳು ಸಿಕ್ಕಿವೆ.

ಚಾಮರಾಜಪೇಟೆಯ ಚಿತಾಗಾರದಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ಅಂತ್ಯಕ್ರಿಯೆ ನಡೆಯಲಿದ್ದು, ಜಯನಗರ 7ನೇ ಬ್ಲಾಕ್‌ನ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights