ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅತ್ಯಾಚಾರ ಅಪರಾಧಿ- ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಜಾಮೀನು ಅರ್ಜಿ ವಜಾ!
ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಜೈಲು ಶಿಕ್ಷೆಗಳನ್ನು ಅನುಭವಿಸುತ್ತಿರುವ ಸ್ವಯಂ-ಘೋಷಿತ ದೇವಮಾನವ ಅಸಾರಾಂ ಬಾಪು ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಆಯುರ್ವೇದ ಚಿಕಿತ್ಸೆಗಾಗಿ ಶಿಕ್ಷೆಯನ್ನು ಕೆಲವು ತಿಂಗಳುಗಳವರೆಗೆ ಅಮಾನತುಗೊಳಿಸುವಂತೆ ಅಪರಾಧಿ ಅಸಾರಾಂ ಬಾಪು ಅರ್ಜಿ ಸಲ್ಲಿಸಿದ್ದರು. ನಿಮ್ಮ ಈ ಅಪರಾಧವು “ಸಾಮಾನ್ಯ ಅಪರಾಧವಲ್ಲ” ಎಂದಿರುವ ಸುಪ್ರೀಂಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ
ನ್ಯಾಯಾಧೀಶರಾದ ಇಂದಿರಾ ಬ್ಯಾನರ್ಜಿ, ವಿ.ರಾಮಸುಬ್ರಮಣಿಯನ್ ಮತ್ತು ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ನ್ಯಾಯಪೀಠವು, ಅಪರಾಧಿಗೆ ಅಗತ್ಯವಾದ ಚಿಕಿತ್ಸೆಯನ್ನು ಜೈಲಿನಲ್ಲೇ ಒದಗಿಸಲಾಗಿದೆ ಮತ್ತು ಮನವಿಯನ್ನು ತಿರಸ್ಕರಿಸಿದೆ ಎಂದು ತೀರ್ಪು ನೀಡಿದ್ದಾರೆ.
“ಕ್ಷಮಿಸಿ. ಇದು ಸಾಮಾನ್ಯ ಅಪರಾಧವಲ್ಲ. ನಿಮ್ಮ ಎಲ್ಲಾ ಆಯುರ್ವೇದ ಚಿಕಿತ್ಸೆಯನ್ನು ನೀವು ಜೈಲಿನಲ್ಲಿ ಪಡೆಯುತ್ತೀರಿ” ಎಂದು ಅರ್ಜಿಯನ್ನು ತಿರಸ್ಕರಿಸುವಾಗ ನ್ಯಾಯಪೀಠವು ತಿಳಿಸಿದೆ.
Read Also: ಪಾಕಿಸ್ತಾನ ಪರ ಘೋಷಣೆ: ಗುರುಗ್ರಾಮ ನಿವಾಸಿ ವಿರುದ್ಧ ಪ್ರಕರಣ ದಾಖಲು; ಆತ ಖಿನ್ನತೆಗೆ ಒಳಗಾಗಿದ್ದಾನೆ ಎಂದ ಪತ್ನಿ!
ಅಪರಾಧಿ ಪರ ಹಾಜರಾಗಿದ್ದ ಹಿರಿಯ ವಕೀಲ ಆರ್ ಬಸಂತ್, ಎರಡು ತಿಂಗಳ ಅವಧಿಗೆ ಮಧ್ಯಂತರ ಜಾಮೀನನ್ನು ಪರಿಗಣಿಸಿ ಅವರಿಗೆ ತನ್ನ ಕಾಯಿಲೆಗಳಿಗೆ ಸಮಗ್ರ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಡಬೇಕು ಎಂದು ಕೇಳಿದ್ದರು.
ಆದರೆ, ರಾಜ್ಯವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಮನೀಶ್ ಸಿಂಘ್ವಿ, ಅಪರಾಧಿಯು ಜೈಲಿನಲ್ಲಿ ಅತ್ಯುತ್ತಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಮನವಿಯನ್ನು ವಜಾಗೊಳಿಸುವಂತೆ ಒತ್ತಾಯಿಸಿದ್ದರು.
ಇತ್ತ ರಾಜಸ್ಥಾನ ರಾಜ್ಯ ಸರ್ಕಾರವು, ’ಆರೋಪಿಯು ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ತನ್ನ ಕಸ್ಟಡಿಯ ಸ್ಥಳವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಕೆಲಸ ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿದೆ” ಎಂದು ತನ್ನ ಅಫಿಡವಿಟ್‌ನಲ್ಲಿ ಹೇಳಿದೆ.
“ಆರೋಪಿಯು ಗಾಂಧಿ ನಗರ ಹಾಗೂ ಜೋಧಪುರದಲ್ಲಿ ಬಾಕಿಯಿರುವ ವಿಚಾರಣೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ, ಆರೋಪಿಯ ಆರೋಗ್ಯ ಸ್ಥಿರ ಮತ್ತು ಸದೃಢವಾಗಿದ್ದರೂ ಚಿಕಿತ್ಸೆಯ ಮನವಿಯನ್ನು ಸಲ್ಲಿಸುತ್ತಿದ್ದಾರೆ” ಎಂದು ರಾಜ್ಯ ಸರ್ಕಾರ ಆರೋಪಿಸಿದೆ.
2013 ರಲ್ಲಿ ತನ್ನ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೋಧಪುರ ನ್ಯಾಯಾಲಯವು ಏಪ್ರಿಲ್ 25, 2018 ರಂದು ಅಸಾರಾಂಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಇಂದೋರ್‌ನಲ್ಲಿ ಅಸಾರಾಂ ಅವರನ್ನು ಬಂಧಿಸಲಾಗಿತ್ತು. ಸೆಪ್ಟೆಂಬರ್ 1, 2013 ರಂದು ಜೋಧಪುರಕ್ಕೆ ಕರೆತರಲಾಯಿತು. ಅವರು ಸೆಪ್ಟೆಂಬರ್ 2, 2013 ರಿಂದ ನ್ಯಾಯಾಂಗ ಬಂಧನದಲ್ಲಿದ್ದರು. ಇದೇ ಪ್ರಕರಣದಲ್ಲಿ ಆತನ ಸಹಚರರಾದ ಶರದ್ ಮತ್ತು ಶಿಲ್ಪಿ ಅವರಿಗೆ ನ್ಯಾಯಾಲಯವು ಅದೇ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
Read Also: ನೆಹರು-ಗಾಂಧಿ ಕುಟುಂಬದ ವಿರುದ್ದ ‘ಮಾನಹಾನಿ’ ವೀಡಿಯೋ; ನಟಿ ಪಾಯಲ್ ರೋಹಟಗಿ ವಿರುದ್ದ ಮತ್ತೊಮ್ಮೆ ಎಫ್‌ಐಆರ್ ದಾಖಲು!