ಹೆಲಿಕಾಪ್ಟರ್ ಅಪಘಾತ : ನಿಶ್ಚಿತಾರ್ಥ ಮುಗಿದು ಕೆಲವೇ ದಿನಗಳಲ್ಲಿ ಪೈಲಟ್ ಸಾವು..!
ಕೆಲ ದಿನಗಳ ಹಿಂದೆಯಷ್ಟೇ ನಿಶ್ಚಿತಾರ್ಥವಾಗಿದ್ದ ಪೈಲಟ್ ಅನುಜ್ ರಜಪೂತ್ ಉಧಂಪುರ್ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದರು.
ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ಜಿಲ್ಲೆಯಲ್ಲಿ ಸೇನಾ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಮೃತಪಟ್ಟ ಇಬ್ಬರು ಪೈಲಟ್ಗಳಲ್ಲಿ ಮೇಜರ್ ಅನುಜ್ ರಜಪೂತ್ ಕೂಡ ಒಬ್ಬರು. ಅವರು ಕೆಲವು ದಿನಗಳ ಹಿಂದೆ ಸೆಪ್ಟೆಂಬರ್ 18 ರಂದು ತಮ್ಮ 27 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು ಮತ್ತು ಈ ವರ್ಷದ ಜುಲೈನಲ್ಲಿ ದೆಹಲಿ ಮೂಲದ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಮೃತ ಯುವ ಮೇಜರ್ ಅವನ ಹೆತ್ತವರ ಏಕೈಕ ಮಗು. ಅವರು ತಮ್ಮ ಶಾಲಾ ಶಿಕ್ಷಣವನ್ನು ಚಂಡೀಗಢದಲ್ಲಿ ಪೂರ್ಣಗೊಳಿಸಿ ನಂತರ ಡೆಹ್ರಾಡೂನ್ನ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಿದರು.
ಹರಿಯಾಣದ ಪಂಚಕುಲದ ನಿವಾಸಿಯಾದ ಅನುಜ್ ರಜಪೂತ್ ಅವರ ತಂದೆ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ ಮತ್ತು ಅವರ ತಾಯಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.
ಹೆಲಿಕಾಪ್ಟರ್ ಅಪಘಾತದ ನಂತರ ತಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ತಿಳಿದ ತಕ್ಷಣ ಪೋಷಕರು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದರು. ಅವರ ದೇಹವನ್ನು ಬುಧವಾರ ಪಂಚಕುಲಕ್ಕೆ ತರಲಾಗಿದೆ.
ಮಂಗಳವಾರ ರಾತ್ರಿ 9 ರ ಸುಮಾರಿಗೆ ಸುದ್ದಿ ಬಂದ ನಂತರ ಪಂಚಕುಲದಲ್ಲಿರುವ ಮೇಜರ್ ಅನುಜ್ ರಜಪೂತ್ ಅವರ ಕುಟುಂಬಸ್ಥರ ಮೇಲೆ ಕತ್ತಲೆ ಆವರಿಸಿದಂತಾಗಿದೆ. ಕೌನ್ಸಿಲರ್ ಸುರೇಶ್ ಗರ್ಗ್ ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಯೆಗೇಂದ್ರ ಕ್ವಾತ್ರಾ ಸೇರಿದಂತೆ ಹಲವರು ಅನುಜ್ ರಜಪೂತ್ ಅವರ ಮನೆಗೆ ಆಗಮಿಸಿ ಗೌರವ ಸಲ್ಲಿಸಿದರು.
ಉಧಂಪುರದಲ್ಲಿ ಏನಾಯಿತು?
ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ಜಿಲ್ಲೆಯ ಶಿವ್ ಗರ್ ಧರ್ ನಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಎರಡು ಸಿಬ್ಬಂದಿಯೊಂದಿಗೆ ಅಪಘಾತಕ್ಕೀಡಾಗಿದೆ. ಪೈಲಟ್ ಮತ್ತು ಸಹ ಪೈಲಟ್ ಇಬ್ಬರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತಾದರೂ, ನಂತರ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಈ ಘಟನೆಯಲ್ಲಿ ಮೇಜರ್ ರೋಹಿತ್ ಕುಮಾರ್ ಮತ್ತು ಮೇಜರ್ ಅನುಜ್ ರಜಪೂತ್ ಪ್ರಾಣ ಕಳೆದುಕೊಂಡಿದ್ದಾರೆ.
ಈ ಪ್ರದೇಶದಲ್ಲಿ ಅತಿಯಾದ ಮಂಜು ಗೋಚರತೆ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಭಾರತೀಯ ಸೇನೆಯು, “ಇಂದು ಪಟ್ನಿಟಾಪ್ ಪ್ರದೇಶದಲ್ಲಿ ತರಬೇತಿಯ ಸಮಯದಲ್ಲಿ, ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಉಧಂಪುರ್ ಜಿಲ್ಲೆಯ ಶಿವ್ ಗರ್ ಧರ್ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು” ಎಂದು ಹೇಳಿದೆ.