ಸಿಂಧಗಿ-ಹಾನಗಲ್ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಫೈನಲ್ : ಹೆಚ್.ಡಿ.ಕುಮಾರಸ್ವಾಮಿ ಘೋಷಣೆ!

ಸಿಂಧಗಿ ಉಪಚುನಾವಣೆಗೆ ದಿನಾಂಕ ಫಿಕ್ಸ್ ಆದ ಬೆನ್ನಲ್ಲೆ ಜೆಡಿಎಸ್ ಅಭ್ಯರ್ಥಿಯನ್ನು ಫೈನಲ್ ಮಾಡಿ ಹೆಚ್.ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ.

ನಾಜಿಯಾ ಶಕೀಲಾ ಅಂಗಡಿ ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಸಿಂಧಗಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಫೈನಲ್ ಮಾಡಲಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ 30-35 ಸೀಟುಗಳನ್ನು ನೀಡುವುದಾಗಿ ಪ್ರಕಟಿಸಿದ್ದ ಜೆಡಿಎಸ್ ವರಿಷ್ಠ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಅದಕ್ಕೆ ಮುನ್ನುಡಿ ಎಂಬಂತೆ ಸಿಂಧಗಿ ಕ್ಷೇತ್ರದ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯನ್ನಾಗಿ ಶ್ರೀಮತಿ ನಾಜಿಯಾ ಶಕೀಲಾ ಅಂಗಡಿ ಅವರನ್ನು ಆಯ್ಕೆ ಮಾಡಿದ್ದಾರೆ.

ಶ್ರೀಮತಿ ನಾಜಿಯಾ ಶಕೀಲಾ ಅಂಗಡಿ ಅವರು MA, B.ed ಪದವೀಧರರಾಗಿದ್ದು, ಜೆಡಿಎಸ್ ಪಕ್ಷದಲ್ಲಿ ಸಕ್ರಿಯರಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಅನೇಕ ವರ್ಷಗಳಿಂದ ಸಮಾಜಮುಖಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಾಜಿಯಾ ಶಕೀಲಾ ಅಂಗಡಿ ಅವರು ಅತ್ಯುತ್ತಮ ಅಭ್ಯರ್ಥಿ ಆಗಿದ್ದು, ಸಮಾಜದ ಎಲ್ಲ ವರ್ಗದ ಜನರಿಗೂ ಸಲ್ಲುವ ಮಹಿಳೆಯಾಗಿದ್ದಾರೆ.

ಪಕ್ಷನಿಷ್ಠೆಯ ಜತೆಗೆ ಪ್ರಾಮಾಣಿಕ ಹಾಗೂ ಸೇವಾ ಮನೋಭಾವ ಹೊಂದಿರುವ ನಾಜಿಯಾ ಶಕೀಲಾ ಅಂಗಡಿ ಅವರನ್ನು ಸಮಸ್ತ ಸಿಂಧಗಿ ಮತದಾರರು ಆಶೀರ್ವದಿಸಿ ಆಯ್ಕೆ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದ್ದಾರೆ.

ಈಗಾಗಲೇ ಹಾನಗಲ್ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿಯನ್ನಾಗಿ Be, M tech ಪದವೀಧರರಾಗಿರುವ ಶ್ರೀ ನಿಯಾಜ್ ಶೇಕ್ ಅವರನ್ನು ಹೆಚ್.ಡಿ.ಕುಮಾರಸ್ವಾಮಿ ಅವರು ಆಯ್ಕೆ ಮಾಡಿದ್ದಾರೆ.

ಎರಡೂ ಕ್ಷೇತ್ರಗಳಲ್ಲಿ ಉತ್ತಮ ಶಿಕ್ಷಣ ಪಡೆದಿರುವ ವಿದ್ಯಾವಂತರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದ್ದು, ಎರಡು ಕ್ಷೇತ್ರಗಳಲ್ಲಿ ಜನರು ಜೆಡಿಎಸ್ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಅವರು ಕೋರಿದ್ದಾರೆ.

ಸಿಂಧಗಿ ಮತ್ತು ಹಾನಗಲ್ ಉಪ ಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಪಕ್ಷ ನಿಷ್ಠೆ ಮತ್ತು ವಿದ್ಯಾರ್ಹತೆ ಗಮನಿಸಿ ಇಬ್ಬರಿಗೂ ಟಿಕೆಟ್ ನೀಡಲಾಗಿದೆ.  ಅಲ್ಪಸಂಖ್ಯಾತ ಸಮುದಾಯದ ಯುವಜನರನ್ನು ಗುರುತಿಸಿದ ಕುಮಾರಸ್ವಾಮಿ ಅವರು ಬಿಜೆಪಿ, ಕಾಂಗ್ರೆಸ್ ಪಕ್ಷಗಗಳಿಗಿಂತ ಮೊದಲೇ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಪಕ್ಷದ ಪಂಚರತ್ನ ಪರಿಕಲ್ಪನೆಯಂತೆ ಇಬ್ಬರೂ ವಿದ್ಯಾವಂತರನ್ನು ಆಯ್ಕೆ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights