ಪ್ರಧಾನಿ ಮೋದಿ – ಅಮಿತ್‌ ಶಾ ಜೋಡಿಗೆ ಬೆವರಿಳಿಸಿದ ಬಿಹಾರ!

ಚುನಾವಣಾ ಸಮೀಕ್ಷೆಗಳು ಮತ್ತು ಮತಗಟ್ಟೆ ಸಮೀಕ್ಷೆಗಳನ್ನು ಸುಳ್ಳು ಮಾಡಿರುವ ಬಿಹಾರ ವಿಧಾನಸಭಾ ಚುನಾವಣೆ, ಸ್ಪರ್ಧಿಗಳನ್ನು ಸೋಲು ಗೆಲುವುಗಳ ನಡುವೆ ತೂಗುಯ್ಯಾಲೆ ಆಡಿಸಿ ಕೊನೆಗೆ ಫಲಿತಾಂಶವು ಕೂದಲೆಳೆಯ ಅಂತರದಲ್ಲಿ ಎನ್‌ಡಿಎ ಪರವಾಯಿತು. ಮಂಗಳವಾರ ಮಧ್ಯರಾತ್ರಿಯ ತನಕ ಮುಂದುವರೆದ ಎಣಿಕೆಯ ನಡುವೆ, 119 ಕಡೆಗಳಲ್ಲಿ ಗೆದ್ದರೂ ಗೆಲುವಿನ ಪ್ರಮಾಣಪತ್ರವನ್ನು ಚುನಾವಣಾ ಆಯೋಗ ನೀಡುತ್ತಿಲ್ಲ ಎಂದು ಆರ್‌ಜೆಡಿ ಪಕ್ಷ ಟ್ವೀಟ್ ಮಾಡಿದೆ.

ಅಳೆದೂ ಸುರಿದೂ ಕೈಕಾಲು ಬಡಿದು ಕೂದಲೆಳೆಯ ಅಂತರದಲ್ಲಿ ಎನ್‌ಡಿಎ ಕಡೆಗೂ ದಡ ಸೇರಿದೆ. ಅದು ಕೇವಲ ತಾಂತ್ರಿಕ ಗೆಲುವೇ ವಿನಾ ಘನ ಗೆಲುವು ಎನಿಸಿಕೊಳ್ಳದು. ನಾಲ್ಕು ತಿಂಗಳ ಸನಿಹದಲ್ಲೇ ಅಸ್ಸಾಮ್, ಕೇರಳ, ಪುದುಚೆರಿ, ತಮಿಳುನಾಡು, ಪಶ್ಚಿಮ ಬಂಗಾಳದ ವಿಧಾನಸಭೆಗಳು ಕದ ಬಡಿದಿವೆ. ಈ ಚುನಾವಣೆಗಳ ಕಣಕ್ಕೆ ಧುಮುಕಲು ಬಿಜೆಪಿಗೆ ಉತ್ಸಾಹ-ಹುಮ್ಮಸ್ಸಿನ ಭುಜಕೀರ್ತಿಗಳನ್ನೇನೂ ಇಂದಿನ ಫಲಿತಾಂಶಗಳು ಕಟ್ಟಿಕೊಟ್ಟಿಲ್ಲ.

ದೆಹಲಿಯ ಬಿಜೆಪಿ ಮುಖ್ಯಕಚೇರಿಯ ಅವರಣದಲ್ಲಿ ಸಂಜೆ ಆರಕ್ಕೆ ಆರಂಭ ಆಗಬೇಕಿದ್ದ ವಿಜಯೋತ್ಸವ ಅನಿರ್ದಿಷ್ಟ ಕಾಲ ಮುಂದೆ ಹೋದದ್ದು ಇದೇ ಕಾರಣದಿಂದಾಗಿ. ಪ್ರಧಾನಮಂತ್ರಿ ಮೋದಿ, ಗೃಹಮಂತ್ರಿ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಸಭೆಯಲ್ಲಿ ಪಾಲ್ಗೊಳ್ಳಲು ಎಲ್ಲ ಸಿದ್ಧತೆಗಳೂ ನಡೆದಿದ್ದವು. ಪಕ್ಷದ ಈ ಪರಮ ನಾಯಕರ ನಿರೀಕ್ಷೆಯಲ್ಲಿ ರಾತ್ರಿ ಎಂಟೂವರೆಯ ನಂತರವೂ ಇಲ್ಲಿ ನೆರೆದಿದ್ದ ಕಾರ್ಯಕರ್ತರು ಹನುಮಾನ್ ಚಾಲೀಸಾ ಹಾಡತೊಡಗಿದ್ದರು.

2019 ರ ಲೋಕಸಭಾ ಫಲಿತಾಂಶಕ್ಕೆ ಹೋಲಿಸಿದರೆ ಇಂದಿನ ಫಲಿತಾಂಶ ಬಿಜೆಪಿಗೆ ದೊಡ್ಡ ಹಿನ್ನಡೆ. ಎನ್‌ಡಿಎ ಈ ಚುನಾವಣೆಯಲ್ಲಿ ಶೇ.12 ರಷ್ಟು ಮತಗಳನ್ನು ಕಳೆದುಕೊಂಡಿದೆ. ಆದರೆ ಹಾಲಿ ಜನಾದೇಶ ಮಹಾಮೈತ್ರಿಕೂಟದ ಪರವಾಗಿಯೂ ಹೊರಬಿದ್ದಿಲ್ಲ ಎಂಬುದನ್ನು ಗಮನಿಸಬೇಕು. ಬಿಜೆಪಿಯ ವರ್ಚಸ್ವೀ ಜೋಡಿ ಮೋದಿ-ಶಾ ಜೋಡಿ ರಾಷ್ಟ್ರೀಯ ಚುನಾವಣೆಗಳ ಗೆಲುವನ್ನು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಪುನರಾವರ್ತನೆಗೊಳಿಸಲು ಅಸಮರ್ಥವಾಗಿದೆ. ಲೋಕಸಭಾ ಚುನಾವಣೆಗಳಲ್ಲಿ ಬಿಹಾರದ ಎಲ್ಲ ಸ್ಥಾನಗಳನ್ನೂ ಗೆದ್ದು ಗುಡಿಸಿಹಾಕಿತ್ತು ಈ ಜೋಡಿ.

ಇದನ್ನೂ ಓದಿ: ಬಿಹಾರ: ಎನ್‌ಡಿಎ ಗೆದ್ದರೂ ನಿತೀಶ್‌ ಕುಮಾರ್‍ ಮುಖ್ಯಮಂತ್ರಿಯಗುವುದು ಕಷ್ಟ! ಸಿಎಂ ಪಟ್ಟ ಬಿಜೆಪಿ ಕೈಯಲ್ಲಿದೆ!

ರಾಮಮಂದಿರ, ಕಾಶ್ಮೀರ, ಸುಶಾಂತ್ ಸಿಂಗ್, ಪಾಕಿಸ್ತಾನದ ಪ್ರಸ್ತಾಪವೂ ಎನ್‌ಡಿಎಗೆ ಸಲೀಸು ಗೆಲುವನ್ನು ಗಳಿಸಿಕೊಡಲಿಲ್ಲ. ಬಿಹಾರ ಉತ್ತರಪ್ರದೇಶವಲ್ಲ. ಒಂದೊಮ್ಮೆ ದೇಶ ರಾಜಕಾರಣದ ಕಂಪನಕೇಂದ್ರ ಎನಿಸಿದ್ದ ಬಿಹಾರದಲ್ಲಿ ಕೋಮು ಧ್ರುವೀಕರಣದ ರಾಜಕಾರಣಕ್ಕೆ ಇತಿಮಿತಿಗಳಿವೆ ಎಂಬುದನ್ನು ಇಂದಿನ ಫಲಿತಾಂಶಗಳು ತೋರಿಸಿಕೊಟ್ಟಿವೆ.

ಮಹಾಮೈತ್ರಿ ಎದುರಿಸಿದ ಹಿನ್ನಡೆಗೆ ತನ್ನ ಕಳಪೆ ಸಾಧನೆಯೇ ಕಾರಣ ಎಂಬ ಟೀಕೆಯನ್ನು ಕಾಂಗ್ರೆಸ್ ಎದುರಿಸಿದೆ. ತಾನು ಸ್ಪರ್ಧಿಸಿದ 70 ಸೀಟುಗಳ ಪೈಕಿ ಗೆದ್ದಿದ್ದು ಕೇವಲ 19 ರಲ್ಲಿ. ಕಾಂಗ್ರೆಸ್ ಮಹಾಮೈತ್ರಿಯ ಕಾಲಿಗೆ ಬಿಗಿದ ಒರಳುಕಲ್ಲಾಯಿತೇ ಎಂಬ ಅಂಶ, ಅಂಕಿ ಅಂಶಗಳ ವಿಶ್ಲೇಷಣೆಯಿಂದ ಹೊರಬೀಳಬೇಕಿದೆ. ಈ ಸೀಟುಗಳು ಬಿಜೆಪಿಯ ಕಟ್ಟರ್ ಬೆಂಬಲ ನೆಲೆಗಳು. ಇಲ್ಲಿ ಯಾರಾದರೂ ಸ್ಪರ್ಧಿಸಬೇಕಿತ್ತು. ನಾವು ಧೀರರಾಗಿ ಸ್ಪರ್ಧಿಸಿದ್ದೇವೆ ಎಂಬುದು ಕಾಂಗ್ರೆಸ್‌ನ ಸಮಜಾಯಿಷಿ.

ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಾರ್ಟಿಯ ಸ್ಪರ್ಧೆಯು ಎರಡಲಗಿನ ಕತ್ತಿಯಾಗಿ ಸಂಯುಕ್ತ ಜನತಾದಳ ಮತ್ತು ರಾಷ್ಟ್ರೀಯ ಜನತಾದಳ ಎರಡನ್ನೂ ಕೊಯ್ದಿದೆ. ಆದರೆ ರಾಷ್ಟ್ರೀಯ ಜನತಾದಳಕ್ಕಿಂತ ಹೆಚ್ಚಾಗಿ ಸಂಯುಕ್ತ ಜನತಾದಳಕ್ಕೆ ಹೆಚ್ಚಿನ ಹಾನಿಯನ್ನು ಉಂಟುಮಾಡಿರುವ ಲೆಕ್ಕಾಚಾರಗಳಿವೆ. 30-35 ಸೀಟುಗಳಲ್ಲಿ ನಿತೀಶ್ ಸೋಲನ್ನು ಬರೆದಿದ್ದಾರೆ ಚಿರಾಗ್ ಪಾಸ್ವಾನ್. ನಿತೀಶ್ ಅವರನ್ನು ತನ್ನ ಅಳತೆಗೆ ತಕ್ಕಂತೆ ಕತ್ತರಿಸುವ ಬಿಜೆಪಿಯ ಅಪಾಯಕಾರಿ ತಂತ್ರ ಆ ಮಟ್ಟಿಗೆ ಫಲ ನೀಡಿದೆ.

This is PM Modi's victory': Chirag Paswan on Bihar poll results

ಆದರೆ ಈ ಗಂಡಾಂತರಕಾರಿ ಆಟದಲ್ಲಿ ತಾನು ಹಚ್ಚಿದ ಬೆಂಕಿಯ ಬಿಸಿ ತನ್ನ ಕೈಯನ್ನೇ ಸುಡುವಷ್ಟು ಹತ್ತಿರ ಬಂದು ಬೆದರಿಸಿದೆ. ಚಿರಾಗ್ ತಮ್ಮ ಚುನಾವಣಾ ಸೌಧಕ್ಕೂ ಬೆಂಕಿ ಇಟ್ಟುಕೊಂಡಿದ್ದಾರೆ. ಅವರಿಗೆ ಒಂದು ಸೀಟೂ ದಕ್ಕಿಲ್ಲ. ಆದರೆ ಅವರು ಹೆಚ್ಚು ಚಿಂತಿಸುವುದಿಲ್ಲ. ಯಾಕೆಂದರೆ ಈ ನಷ್ಟಕ್ಕೆ ಬಿಜೆಪಿಯಲ್ಲಿ ಅವರು ಮುಂಚಿತವಾಗಿಯೇ ವಿಮೆ ಮಾಡಿಸಿದ್ದರು. ಅವರನ್ನು ಈ ಆಟಕ್ಕೆ ಬೆನ್ನು ತಟ್ಟಿ ಹುರಿದುಂಬಿಸಿ ಇಳಿಸಿದ್ದು ಬಿಜೆಪಿಯೇ. ಹೀಗಾಗಿ ಅವರ ನಷ್ಟವನ್ನು ಮೋದಿ-ಅಮಿತ್ ಶಾ ತುಂಬಿಕೊಡಲಿದ್ದಾರೆ.

ಇದೇ ರೀತಿ ಮುಸ್ಲಿಮ್ ಮತದಾರರ ಸಂಖ್ಯೆ ಹೆಚ್ಚಿರುವ ಸೀಮಾಂಚಲ ಮತ್ತಿತರೆ ಸೀಮೆಗಳಲ್ಲಿ ಅಸಾದುದ್ದೀನ್ ಓವೈಸಿ ಅವರ ಪಕ್ಷ ರಾಷ್ಟ್ರೀಯ ಜನತಾದಳಕ್ಕೆ ಏಟು ನೀಡಿದೆ. ಓವೈಸಿ ಕಣಕ್ಕೆ ಇಳಿಯದೆ ಹೋಗಿದ್ದರೆ ಮುಸ್ಲಿಮ್ ಮತಗಳು ರಾಷ್ಟ್ರೀಯ ಜನತಾ ಪಕ್ಷಕ್ಕೆ ಬೀಳುವುದು ನಿಶ್ಚಿತವಿತ್ತು. ಅವರು 24 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಐದು ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಆದರೆ ತಾವು ಸ್ಪರ್ಧಿಸಿದ ಬಹುತೇಕ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಜನತಾದಳದ ಗೆಲುವಿನ ಕಿಟಕಿ ಬಾಗಿಲುಗಳನ್ನು ಮುಚ್ಚಿದ್ದಾರೆ. ಈ ವಿದ್ಯಮಾನದ ನೇರ ಲಾಭ ಬಿಜೆಪಿಗೆ ದೊರೆತಿದೆ. ಅವಕಾಶ ಏರ್ಪಟ್ಟಿದ್ದರೆ ‘ಕಿಂಗ್ ಮೇಕರ್’ ಪಾತ್ರ ಧರಿಸುವ ನಿರೀಕ್ಷೆಯಲ್ಲಿದ್ದರು.

ಒಂದು ಕಾಲಕ್ಕೆ ಮೈತ್ರಿಕೂಟದ ‘ದೊಡ್ಡಣ್ಣ’ನಾಗಿದ್ದ ನಿತೀಶ್ ಕುಮಾರ್ (ಸಂಯುಕ್ತ ಜನತಾದಳ) ಅವರನ್ನು ಆ ಪಟ್ಟದಿಂದ ಕೆಳಗಿಳಿಸುವ ಬಿಜೆಪಿಯ ಹಂಚಿಕೆ ಕೈಗೂಡಿರುವುದು ಇಂದಿನ ಫಲಿತಾಂಶಗಳ ಮತ್ತೊಂದು ಮಹತ್ವದ ಬೆಳವಣಿಗೆ. ಇದೀಗ ಬಿಹಾರದ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿಯೇ ‘ದೊಡ್ಡಣ್ಣ’. ಸಂಯುಕ್ತ ಜನತಾದಳ ಕಡಿಮೆ ಸೀಟುಗಳನ್ನು ಗೆದ್ದರೂ ಅವರೇ ಮುಖ್ಯಮಂತ್ರಿ ಎಂದು ಬಿಜೆಪಿ ಘೋಷಿಸಿತ್ತು. ಬಿಜೆಪಿ ಗಳಿಸಿದ ಅರ್ಧದಷ್ಟು ಸ್ಥಾನಗಳನ್ನು ಮಾತ್ರವೇ ಗೆದ್ದಿರುವ ನಿತೀಶ್ ಇದೀಗ ಬಿಜೆಪಿಯ ಪಾಲಿಗೆ ಸಂಪೂರ್ಣ ಹಲ್ಲು ಕಿತ್ತ ಹಾವು. ಕೈಗೊಂಬೆ ಮುಖ್ಯಮಂತ್ರಿಯಾಗಿ ವರ್ಷದೊಪ್ಪತ್ತು ಇರಿಸಿಕೊಂಡು ಅವರ ಕುರ್ಚಿಯನ್ನು ಕಿತ್ತುಕೊಳ್ಳುವುದು ಗೋಡೆ ಮೇಲಿನ ಬರೆಹ.

ತನ್ನ ಮಿತ್ರಪಕ್ಷಗಳನ್ನು ಭಕ್ಷಿಸಿ ಕಾಲಕ್ರಮೇಣ ಅವುಗಳ ರಾಜಕೀಯ ಆವರಣವನ್ನು ತಾನೇ ಆಕ್ರಮಿಸುವ ಆಕ್ರಮಣಕಾರಿ ರಾಜಕಾರಣ ಬಿಜೆಪಿಯದು. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಈ ಮಾತಿಗೆ ಉದಾಹರಣೆ. ಈಗಿನ ಮೋದಿ-ಶಾ ಕಟ್ಟಿರುವ ಬಿಜೆಪಿಯದು ಲವಲೇಶ ಕರುಣೆಯಿಲ್ಲದ ಕಾಠಿಣ್ಯ. 2015 ರಲ್ಲಿ ನಿತೀಶ್ ದೂರವಾಗಿ ರಾಷ್ಟ್ರೀಯ ಜನತಾದಳ- ಕಾಂಗ್ರೆಸ್ ಸಖ್ಯ ಬೆಳೆಸಿದಾಗ ಬಿಜೆಪಿ ಶೋಚನೀಯ ಸೋಲನ್ನು ಎದುರಿಸಿತ್ತು. ಅಂದಿನಿಂದಲೇ ನಿತೀಶ್ ಅವರನ್ನು ತಿಂದು ಅವರ ಶಕ್ತಿಯನ್ನು ತಾನು ಧರಿಸುವ ಪಣ ತೊಟ್ಟಿರಬೇಕು ಮೋದಿ-ಶಾ ಅವರ ಬಿಜೆಪಿ.

ಚಿರಾಗ್ ಪಾಸ್ವಾನ್ ಅವರನ್ನು ತಮ್ಮ ವಿರುದ್ಧ ಬೆನ್ನುತಟ್ಟಿ ಹುರಿದುಂಬಿಸಿದ ಬಿಜೆಪಿಯ ರಣತಂತ್ರ ನಿತೀಶ್ ಗಮನಕ್ಕೆ ಬಾರದೆ ಇರದು. ಮೋದಿಯವರನ್ನು, ಬಿಜೆಪಿಯನ್ನು ವಿರೋಧಿಸಿ ಪುನಃ ಬೆಂಬಲಿಸಿ ತಬ್ಬಿಕೊಂಡ ಅವರ ರಾಜಕಾರಣ ವಿಶ್ವಾಸನೀಯತೆಯನ್ನು ಕಳೆದುಕೊಂಡಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಕೂಡ ಒಂದು ಕಾಲದಲ್ಲಿ ಬಿಜೆಪಿ ಮೈತ್ರಿಕೂಟದ ದೊಡ್ಡಣ್ಣನಾಗಿತ್ತು. ಆದರೆ ನಿತೀಶ್ ಅವರನ್ನು ಅಳತೆಗೆ ತಕ್ಕಂತೆ ಕತ್ತರಿಸಿದಂತೆ ಸೇನೆಯನ್ನೂ ಕತ್ತರಿಸಿ ತಾನು ದೊಡ್ಡಣ್ಣನ ಸ್ಥಾನದಲ್ಲಿ ಕುಳಿತಿತ್ತು ಬಿಜೆಪಿ. ಈ ಹಂಚಿಕೆಯ ವಿರುದ್ಧ ಬಂಡೆದ್ದ ಸೇನೆ ಕಾಂಗ್ರೆಸ್-ಎನ್‌ಸಿಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸಿತು.

ಇದನ್ನೂ ಓದಿ: Bihar: ಸರಳ ಬಹುಮತ ಪಡೆದ NDA; 5ನೇ ಬಾರಿಯೂ ನಿತೀಶ್‌ ಮುಖ್ಯಮಂತ್ರಿ?

ತಮ್ಮನ್ನು ಮೂಲೆಗುಂಪು ಮಾಡುವ ಬಿಜೆಪಿ ಹುನ್ನಾರದ ಮುಂದೆ ಇದೀಗ ನಿತೀಶ್ ಅಸಹಾಯಕರು. ತಮ್ಮ ಕೈಕಾಲುಗಳನ್ನು ತಾವೇ ಕಟ್ಟಿ ಹಾಕಿಕೊಂಡಿದ್ದಾರೆ. 2017 ರಲ್ಲಿ ರಾಷ್ಟ್ರೀಯ ಜನತಾದಳದೊಂದಿಗೆ ಮೈತ್ರಿ ಮುರಿದು ಪುನಃ ಬಿಜೆಪಿಯನ್ನು ತಬ್ಬಿಕೊಂಡ ಅವರ ಮುಂದೆ ಹೆಚ್ಚಿನ ಆಯ್ಕೆಗಳಿಲ್ಲ. ಸತ್ತರೂ ಸರಿ, ಬಿಜೆಪಿಯೊಂದಿಗೆ ಮತ್ತೆ ಗೆಳೆತನ ಬೆಳೆಸುವುದಿಲ್ಲ ಎಂದು ಬಹಿರಂಗವಾಗಿ ಸಾರಿದ್ದರು ನಿತೀಶ್. ಆದರೆ ಅಂತಿಮವಾಗಿ ಅಧಿಕಾರವೇ ಪರಮ ಎಂಬ ಅವಕಾಶವಾದಿತನ ಮೆರೆದರು. ಅದಕ್ಕೆ ಶಿಕ್ಷೆಯನ್ನೂ ಎದುರಿಸಿದ್ದಾರೆ.

ರಾಜಕಾರಣ ಕುರಿತ ದೇಶಾವರಿ ಚರ್ಚೆ ನಡೆದಾಗ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳನ್ನು ಒಟ್ಟೊಟ್ಟಿಗೆ ಪ್ರಸ್ತಾಪಿಸುವ ರೂಢಿಯುಂಟು. ಜನಸಂಖ್ಯೆ, ಹಿಂದುಳಿದಿರುವಿಕೆ, ಊಳಿಗಮಾನ್ಯ ವ್ಯವಸ್ಥೆ, ದಟ್ಟ ಜಾತಿ ರಾಜಕಾರಣ ಎರಡೂ ರಾಜ್ಯಗಳ ಸಮಾನ ಅಂಶಗಳು. ಹೋಲಿಕೆ ಇಲ್ಲಿ ಅಂತ್ಯಗೊಳ್ಳುತ್ತದೆ.

ವಿಶೇಷವಾಗಿ ಕಳೆದ ಎರಡು ದಶಕಗಳಲ್ಲಿ ಉತ್ತರಪ್ರದೇಶದಲ್ಲಿ ಏಕಪಕ್ಷ ಸರ್ಕಾರಗಳು ಅಧಿಕಾರ ನಡೆಸಿವೆ. ಹಾಲಿ ಭಾರತೀಯ ಜನತಾ ಪಕ್ಷ ಸರ್ಕಾರ ದೈತ್ಯ ಜನಮತ ಹೊಂದಿದೆ. ಬಿಹಾರ ರಾಜಕಾರಣಕ್ಕೆ ಸಮ್ಮಿಶ್ರ ಸರ್ಕಾರಗಳು ಇಲ್ಲವೇ ಮೈತ್ರಿಕೂಟಗಳ ಸರ್ಕಾರಗಳು- ಮೈತ್ರಿಕೂಟ ರಾಜಕಾರಣ ಅನಿವಾರ್ಯ ಆಗಿದೆ. ಬಿಜೆಪಿಯ ಬೆಂಬಲಿಗ ಮೇಲ್ಜಾತಿಗಳಿಗೆ ಬಿಹಾರದಲ್ಲಿ ಜನಸಂಖ್ಯಾಬಲವಿಲ್ಲ.

Lalu Prasad Yadav Health Deteriorated Doctor Doing Treatment Says He Might Need Dialysis Sugar Level Rises - झारखंड: लालू प्रसाद यादव की बिगड़ी तबीयत, पड़ सकती है डायलिसिस की जरूरत - Amar

ಉತ್ತರಪ್ರದೇಶದಲ್ಲಿ ಅವುಗಳ ಜನಸಂಖ್ಯೆ ಗಣನೀಯ. ಬಿಹಾರ ರಾಜಕಾರಣ ಹೀಗೆ ಹಲವು ಪಕ್ಷಗಳಲ್ಲಿ ಹಂಚಿಹೋಗಿರುವ ಕಾರಣವಾಗಿ ಮೈತ್ರಿ ರಾಜಕಾರಣ ಇಲ್ಲಿ ಬೇರು ಬಿಟ್ಟಿದೆ. ರಾಷ್ಟ್ರೀಯ ಜನತಾದಳ, ಸಂಯುಕ್ತ ಜನತಾದಳ ಹಾಗೂ ಬಿಜೆಪಿ ಈ ರಾಜಕಾರಣದ ಮೂರು ಮುಖ್ಯ ಪಾತ್ರಧಾರಿಗಳು. ಈ ಪೈಕಿ ಇಬ್ಬರು ಒಂದಾದರೆ ಮೂರನೆಯವರು ತಿಣುಕಬೇಕಾಗುವ ಸ್ಥಿತಿ. ಸಂಯುಕ್ತ ಜನತಾದಳ ಮತ್ತು ಬಿಜೆಪಿ ಮೈತ್ರಿಯು ಲಾಲೂಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳವನ್ನು ಕಳೆದ 15 ವರ್ಷಗಳ ಕಾಲ ಅಧಿಕಾರದಿಂದ ದೂರ ಇರಿಸಿದೆ. ಹಾಲಿ ಚುನಾವಣೆಯಲ್ಲಿ ಹಲವಾರು ಆತಂಕಗಳ ನಡುವೆಯೂ ಬಿಜೆಪಿ-ಸಂಯುಕ್ತ ಜನತಾದಳ ಗೆಲುವಿನ ಗೆರೆಯತ್ತ ತೆವಳುವುದು ಸಾಧ್ಯವಾಗಿದ್ದರೆ ಅದಕ್ಕೆ ಈ ಮೈತ್ರಿಯೇ ಕಾರಣ. ಈ ಮೈತ್ರಿಯ ಹಿಂದೆ ಕೆಲಸ ಮಾಡುವ ವ್ಯಾಪಕ ತಳಹದಿಯ ಪ್ರಬಲ ಜಾತಿ ಸಮೀಕರಣವೇ ಕಾರಣ.

ತಿಂಗಳ ಹಿಂದೆ ಮೋದಿ-ನಿತೀಶ್ ಮೈತ್ರಿಯ ಗೆಲುವು ಸಲೀಸು ಎಂದು ಸಮೂಹ ಮಾಧ್ಯಮಗಳ ಸಮೀಕ್ಷೆಗಳು ಮಾತ್ರವೇ ಅಲ್ಲದೆ ರಾಜಕೀಯ ವಲಯವೂ ಅಂದಾಜು ಮಾಡಿತ್ತು. ಈ ಅಂದಾಜಿನ ಹಿಂದೆ ಇದ್ದ ಸಮರ್ಥನೆ ಜಾತಿ ಸಮೀಕರಣದ ವ್ಯಾಪಕ ಬೆಂಬಲ ನೆಲೆ. ರಾಷ್ಟ್ರೀಯ ಜನತಾದಳ-ಕಾಂಗ್ರೆಸ್-ಎಡಪಕ್ಷಗಳ ಮಹಾಮೈತ್ರಿಕೂಟ ಗೆಲ್ಲುವುದಿರಲಿ, ಬಲವಾದ ಸ್ಪರ್ಧೆಯನ್ನು ನೀಡುತ್ತದೆ ಎಂಬ ನಿರೀಕ್ಷೆ ಕೂಡ ಇರಲಿಲ್ಲ. ಆದರೆ ಲಾಲೂ ಯಾದವ್ ಅವರ ಮಗ ತೇಜಸ್ವಿ ಯಾದವ್ ಹಠಾತ್ತನೆ ಚುನಾವಣಾ ಕಣದಲ್ಲಿ ಧೂಳೆಬ್ಬಿಸಿದರು.

ಇದನ್ನೂ ಓದಿ: ಬಿಹಾರ ಚುನಾವಣೆ: 1157 ಅಭ್ಯರ್ಥಿಗಳು ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದಾರೆ – ಚುನಾವಣಾ ಆಯೋಗ

ಕರೋನಾ ಮಹಾಮಾರಿ ಉಂಟು ಮಾಡಿದ ನಿರುದ್ಯೋಗ ಮತ್ತು ಮಹಾವಲಸೆಯಿಂದ ತತ್ತರಿಸಿದ್ದ ಯುವಜನ ಸಮೂಹದ ಭಾವನೆಗಳನ್ನು ಚುನಾವಣಾ ವಿಷಯವಾಗಿಸಿದರು. ಭಾರೀ ಜನಸ್ತೋಮಗಳ ಪ್ರತಿಸ್ಪಂದನೆಯೂ ಅವರಿಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ದೊರೆಯಿತು. ಜನ ಕಿಕ್ಕಿರಿದು ಸೇರಿದರು. ಜನಸಭೆಗಳ ಜೊತೆ ತೇಜಸ್ವಿ ಸಂವಾದ ನಡೆಸಿದರು. ದಿನವೊಂದರಲ್ಲಿ 19 ಪ್ರಚಾರಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದು ಅವರ ಚೈತನ್ಯ ಉತ್ಸಾಹದ ದ್ಯೋತಕವಾಗಿತ್ತು. ಮಹಾಮೈತ್ರಿಕೂಟ ಅಧಿಕಾರಕ್ಕೆ ಬಂದರೆ 10 ಲಕ್ಷ ಸರ್ಕಾರಿ ನೌಕರಿಗಳಿಗೆ ನೇಮಕದ ಆಶ್ವಾಸನೆ ನೀಡಿದರು. ನಿರುದ್ಯೋಗದ ಸುತ್ತಲೇ ಚುನಾವಣಾ ಪ್ರಚಾರದ ಸಂವಾದವನ್ನು ಕಟ್ಟಿ ಬೆಳೆಸಿದರು.

ಮಹಾರಥಿ ಮೋದಿ ಮತ್ತು ಅವರ ಸೇನಾಪತಿಗಳು ನಡೆಸಿದ ಕೋಮು ಧ್ರುವೀಕರಣದ ಹೇಳಿಕೆಗಳಿಗೆ, ಲಾಲೂ-ರಬಡಿದೇವಿ ಅವರ ಜಂಗಲ್ ರಾಜ್ಯ ಸರ್ಕಾರಗಳ ರಾಜಕುಮಾರ ಎಂಬ ಚುಚ್ಚುಮಾತುಗಳಿಗೆ ಪ್ರತಿಕ್ರಿಯೆಯನ್ನೇ ನೀಡದೆ ಸಂಯಮ ತೋರಿದರು. ಕೇವಲ 31 ವರ್ಷ ಪ್ರಾಯದ ಈ ಯುವಕ ಸುತ್ತಮುತ್ತ ದಾರಿ ತೋರುವ ಯಾವುದೇ ಹಿರಿಯ ಮಾರ್ಗದರ್ಶಕರಿಲ್ಲದೆ ಚುನಾವಣೆಯನ್ನು ಎದುರಿಸಿದ ರೀತಿ ಅನನ್ಯವಾದದ್ದು. ಸೋತರೆ ಚಿಂತೆಯಿಲ್ಲ, ಸಾಕಷ್ಟು ವಯಸ್ಸು ಬಾಕಿಯಿದೆ ಎಂಬ ಮಾತಿನ ವಯಸ್ಸಿಗೆ ಮೀರಿದ ಪರಿಪಕ್ವತೆಯನ್ನು ತೋರಿದ್ದರು.

ಮೋದಿ-ಶಾ ಅವರಂತಹ ಹೇಮಾ ಹೇಮಿಗಳನ್ನು ಧ್ರುವೀಕರಣದ ಹಾದಿಯಿಂದ ತಮ್ಮ ನಿರುದ್ಯೋಗ ಚರ್ಚೆಯ ಹಾದಿಗೆ ಎಳೆದು ತಂದ ಈ ತರುಣ ರಾಜಕಾರಣಿಯ ಸಾಧನೆ ಸಾಮಾನ್ಯವಲ್ಲ. ಭೋಜಪುರ ಮತ್ತು ಸುತ್ತಮುತ್ತಲ ಸೀಮೆಯಲ್ಲಿ ತಳವರ್ಗಗಳ ಜನರ ನಡುವೆ ಬೇರು ಬಿಟ್ಟಿರುವ ಎಡಪಕ್ಷಗಳನ್ನು ಮೈತ್ರಿಕೂಟಕ್ಕೆ ಸೇರಿಸಿಕೊಂಡು ಅವರಿಗೆ 30 ಸ್ಥಾನಗಳನ್ನು ಬಿಟ್ಟುಕೊಟ್ಟದ್ದು ಜಾಣ ರಾಜಕಾರಣ. ಎಡಪಕ್ಷಗಳು ಇವರ ನಿರೀಕ್ಷೆಯನ್ನು ಸುಳ್ಳಾಗಿಸಿಲ್ಲ ಎಂಬುದು ಗಮನಾರ್ಹ. ತೇಜಸ್ವಿ ಯಾದವ್ ಮುಂಬರುವ ದಿನಗಳ ರಾಜಕಾರಣದಲ್ಲಿ ಗಮನಿಸಬೇಕಾದ ಪ್ರತಿಭೆ ಎಂಬುದನ್ನು ರುಜುವಾತು ಮಾಡಿ ತೋರಿದ್ದಾರೆ. ಗೆಲುವಿನ ಗೆರೆಯ ಬಳಿ ಸಾರಿ ಕಾಲು ಸೋತ ಸಾರಥಿ ತೇಜಸ್ವಿ. ಬಿಹಾರದ ಈ ಚುನಾವಣೆಯಲ್ಲಿ ಅತಿರಥ-ಮಹಾರಥರನ್ನು ಹೊಂದಿದ ಬಿಜೆಪಿ-ಸಂಯುಕ್ತ ಜನತಾದಳ ಮೈತ್ರಿಕೂಟ ಗೆಲುವಿಗಾಗಿ ಬೆವರು ಹರಿಸುವಂತೆ ಮಾಡಿದ ಸಾಧನೆ ಅವರದು.

–  ಡಿ. ಉಮಾಪತಿ


ಇದನ್ನೂ ಓದಿ: ಬಿಹಾರ ಚುನಾವಣೆ ನಂತರ ನಿತೀಶ್‌ ಕುಮಾರ್ ಬಿಜೆಪಿ ಸಖ್ಯ ತೊರೆಯಲಿದ್ದಾರೆ: ಚಿರಾಗ್‌ ಪಾಸ್ವಾನ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights