ಸ್ಟ್ಯಾನ್‌ ಸ್ವಾಮಿ ಅವರದ್ದು ಸಹಜ ಸಾವಲ್ಲ; ಸಾಂಸ್ಥಿಕ ಕೊಲೆ: ಮಹಾ ಸಿಎಂ ಉದ್ದವ್ ಠಾಕ್ರೆಗೆ ಸ್ವಾಮಿ ಜೊತೆಗಿದ್ದ ಸಹ ಆರೋಪಿಗಳ ಪತ್ರ

ಆದಿವಾಸಿ ಹಕ್ಕುಗಳ ಹೋರಾಟಗಾರ ದಿವಂಗತ ಫಾ. ಸ್ಟ್ಯಾನ್‌ ಸ್ವಾಮಿ ಅವರು ನೈಸರ್ಗಿಕವಾಗಿ ಸಾವನ್ನಪ್ಪಿಲ್ಲ. ಅದು”ಸಾಂಸ್ಥಿಕ ಕೊಲೆ” ಎಂದು ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷದ್ ಪ್ರಕರಣದ ಮೂವರು ಆರೋಪಿಗಳು ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆಗೆ ಪತ್ರ ಬರೆದಿದ್ದಾರೆ.

ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಆರೋಪಿಗಳಾಗಿ ಬಂಧನದಲ್ಲಿರುವ ಹೊರಾಟಗಾರರಾದ ಸುರೇಂದ್ರ ಗದ್ಲಿಂಗ್, ರಮೇಶ್ ಗೈಚೋರ್ ಹಾಗೂ ಸಾಗರ್ ಗೊರ್ಖೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಜುಲೈ 5ರಂದು ಪತ್ರ ಬರೆದಿದ್ದು, ಸ್ವಾಮಿ ಅವರನ್ನು ಜೈಲಿನಲ್ಲಿರುವಾಗ ನೋಡಿಕೊಂಡ ಪರಿಗೆ ನಾವು ಪ್ರತ್ಯಕ್ಷ ಸಾಕ್ಷಿಗಳಾಗಿದ್ದೇವೆ ಎಂದು ಹೇಳಿದ್ದಾರೆ.

“ನಾವು ಫಾ. ಸ್ವಾಮಿ ಜೊತೆಗೆ ಸಹ ಆರೋಪಿಗಳಾಗಿದ್ದೆವು. ಸ್ವಾಮಿ ಅವರ ವಿರುದ್ಧದ ಷಡ್ಯಂತ್ರಗಳಿಗೆ ನಾವು ಪ್ರತ್ಯಕ್ಷ ಸಾಕ್ಷಿಗಳು” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

“ಅವರ ಸಾವು ನಮ್ಮಲ್ಲಿ ತಳಮಳ ಸೃಷ್ಟಿಸಿದೆ. ಅವರ ಸಾವಿಗೆ ತಲೋಜ ಕಾರಾಗೃಹದ ಅಧೀಕ್ಷಕ ಕೌಸ್ತುಭ್ ಕುರ್ಲೇಕರ್ ಕಾರಣ” ಎಂದು ಬರೆಯಲಾಗಿದೆ.

ಕಾರಾಗೃಹದ ಅಧೀಕ್ಷಕರು ಫಾ. ಸ್ವಾಮಿಗೆ ಸೂಕ್ತ ಚಿಕಿತ್ಸೆ ನಿರಾಕರಿಸಿ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಇನ್ನಷ್ಟು ಹದಗೆಡುವಂತೆ ಮಾಡಿದರು. ಅವರಿಗೆ ಸಹಾಯದ ಅಗತ್ಯವಿದ್ದಾಗ ಅವರನ್ನು ಏಕಾಂಗಿಯಾಗಿ ಇರಿಸಲಾಯಿತು. ತಪಾಸಣೆಯ ನೆಪದಲ್ಲಿ ಕಾರಾಗೃಹದ ಪ್ರವೇಶದ್ವಾರದಲ್ಲಿ ಎಲ್ಲರ ಎದುರೇ ಅವರನ್ನು ವಿವಸ್ತ್ರಗೊಳಿಸಲಾಗಿತ್ತು” ಎಂದು ಪತ್ರದಲ್ಲಿ ವಿವರಿಸಿದ್ದಾರೆ.

“ಮೊದಲೇ ಪಾರ್ಕಿನ್ಸನ್ಸ್ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಜೈಲಿನಲ್ಲಿ ಸೂಕ್ತ ಚಿಕಿತ್ಸೆ ದೊರೆಯದೇ ಇದ್ದ ಕಾರಣ ಅವರ ಆರೋಗ್ಯ ಹದಗೆಟ್ಟಿತ್ತು. ನೀರು ಕುಡಿಯಲು ಸ್ಟ್ರಾ ಕೂಡ ನೀಡಲಿಲ್ಲ. ಈ ರೀತಿಯ ಕಿರುಕುಳದಿಂದಾಗಿಯೇ ಅವರಿಗೆ ಪಾರ್ಶ್ವವಾಯು ಉಂಟಾಗಿ ಸೂಕ್ತ ಚಿಕಿತ್ಸೆಯಿಲ್ಲದೆ ಅವರು ಮೃತಪಟ್ಟರು. ಕುರ್ಲೇಕರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು. ಫಾ ಸ್ವಾಮಿ ಸಾವಿನ ಕುರಿತು ನ್ಯಾಯಾಂಗ ತನಿಖೆ ನಡೆಯಬೇಕು” ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಜವಾಬ್ದಾರಿಯನ್ನು ನೀವು ಮರೆತು ಕುಳಿತಿದ್ದೀರಿ: ಮಾಧ್ಯಮಗಳ ವಿರುದ್ದ ರಾಹುಲ್‌ ಕಿಡಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights