ಬಿಹಾರ ಚುನಾವಣೆ: 1157 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ – ಚುನಾವಣಾ ಆಯೋಗ
ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ 1100ಕ್ಕೂ ಹೆಚ್ಚು ಅಭ್ಯರ್ಥಿಗಳು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಬಿಹಾರದಲ್ಲಿ ನಡೆದ ಮೂರು ಹಂತದ ಚುನಾವಣೆಯಲ್ಲಿ 371 ಮಹಿಳೆಯರು ಸೇರಿದಂತೆ ಒಟ್ಟು 3733 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ ಒಟ್ಟು 1157 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಹೇಳಿದೆ.
ಈ ವರ್ಷದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ, ರಾಜಕೀಯ ಪಕ್ಷಗಳು ಚುನಾವಣಾ ಸ್ಪರ್ಧೆಗೆ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಅಥವಾ ಅಪರಾಧ ಹಿನ್ನಲೆಯುಳ್ಳ ಅಭ್ಯರ್ಥಿಗಳನ್ನು ಏಕೆ ಆಯ್ಕೆ ಮಾಡಿದೆ ಎಂಬುದಕ್ಕೆ ಸಮರ್ಥ ಉತ್ತರ ನೀಡುವಂತೆ ಚುನಾವಣಾ ಆಯೋಗವು ಮಾರ್ಚ್ ತಿಂಗಳಿನಲ್ಲಿ ಪಕ್ಷಗಳಿಗೆ ಕೇಳಿತ್ತು.
ಸೆಪ್ಟೆಂಬರ್ನಲ್ಲಿ, ಆಯೋಗವು ಅಭ್ಯರ್ಥಿಗಳ ಪ್ರಚಾರದ ನಿಯಾಮವಳಿಗಳನ್ನು ಬಿಡುಗಡೆಗೊಳಿಸಿದ್ದು, ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳು ತಮ್ಮ ಮೇಲಿರುವ ಪ್ರಕರಣಗಳ ಬಗ್ಗೆ ಚುನಾವಣಾ ಸಮಯದಲ್ಲಿ ಕನಿಷ್ಠ ಮೂರು ಬಾರಿ ಟಿವಿ ಮತ್ತು ಪತ್ರಿಕೆಗಳ ಜಾಹೀರಾತಿನಲ್ಲಿ ಪ್ರಕಟಿಸಬೇಕು. ಆ ಜಾಹೀರಾತುಗಳನ್ನು ಯಾವಾಗ ಪ್ರಕಟಿಸಬೇಕು ಎಂಬುದನ್ನು ಟೈಮ್ಲೈನ್ ಮೂಲಕ ಹೇಳುವುದಾಗಿ ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ಬಿಹಾರ ಚುನಾವಣೆಯ ಸಂದರ್ಭದಲ್ಲಿ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಮತ್ತು ಅಪರಾಧ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳು ತಮ್ಮ ಮೇಲಿನ ಪ್ರಕರಣಗಳ ಮಾಹಿತಿ ನೀಡಿದ್ದು, ಒಟ್ಟು 1157 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆಯವರಾಗಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಫಲಿತಾಂಶವು ಉದ್ಯೋಗ ಮತ್ತು ಪ್ರಮುಖ ಸಮಸ್ಯೆಗಳ ಬಗ್ಗೆ ಜನರ ಸ್ಪಷ್ಟ ಸಂದೇಶವಾಗಲಿದೆ- ಚಿದಂಬರಂ

