ಲಖಿಂಪುರ್ ಹಿಂಸಾಚಾರ ಖಂಡಿಸಿ ಅಖಿಲೇಶ್ ಯಾದವ್ ಮನೆಯ ಹೊರಗೆ ಪ್ರತಿಭಟನೆ!
ಲಖಿಂಪುರ್ ಹಿಂಸಾಚಾರದಲ್ಲಿ 8 ಜನರ ಸಾವು ಖಂಡಿಸಿ ಅಖಿಲೇಶ್ ಯಾದವ್ ಮನೆಯ ಹೊರಗೆ ಪ್ರತಿಭಟನೆಯಲ್ಲಿ ಕುಳಿತಿದ್ದಾರೆ.
ಭಾನುವಾರ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಮೃತಪಟ್ಟ ಲಖಿಂಪುರ್ ಖೇರಿ ಜಿಲ್ಲೆಗೆ ಭೇಟಿ ನೀಡುವುದನ್ನು ಪೊಲೀಸರು ತಡೆದ ಬೆನ್ನಲ್ಲೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಅವರ ಮನೆಯ ಹೊರಗೆ ಧರಣಿ ನಡೆಸುತ್ತಿದ್ದಾರೆ. ಲಕ್ನೋದ ವಿಕ್ರಮಾದಿತ್ಯ ಮಾರ್ಗದಲ್ಲಿರುವ ಅವರ ಮನೆಯ ಹೊರಗೆ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
“ಬಿಜೆಪಿ ಸರ್ಕಾರವು ರೈತರ ಮೇಲೆ ಮಾಡುವಷ್ಟು ಬ್ರಿಟಿಷರು ಕೂಡ ಇಂತಹ ದೌರ್ಜನ್ಯಗಳನ್ನು ಮಾಡಲಿಲ್ಲ. ಬಿಜೆಪಿ ಸರ್ಕಾರ ಸಂತ್ರಸ್ತರ ಮನೆಗೆ ಯಾವುದೇ ರಾಜಕೀಯ ನಾಯಕರು ಹೋಗುವುದನ್ನು ಬಯಸುವುದಿಲ್ಲ. ಹೀಗಾಗಿ ನಮ್ಮಗೆ ತಡೆಯೊಡ್ಡುತ್ತಿದೆ. ಗೃಹ ಸಚಿವರು ಮತ್ತು ಉಪ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಜೀವ ಕಳೆದುಕೊಂಡ ರೈತರಿಗೆ 2 ಕೋಟಿ ಪರಿಹಾರ ನೀಡಬೇಕು. ಅವರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡಬೇಕು “ಎಂದು ಯಾದವ್ ಆಗ್ರಹಿಸಿದ್ದಾರೆ.
ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಹೆಚ್ಚುತ್ತಿರುವ ಘರ್ಷಣೆಯನ್ನು ಅವರು ಖಂಡಿಸಿದ್ದಾರೆ. ಕಾಂಗ್ರೆಸ್ ಮುಖಂಡ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು ಮುಂಜಾನೆ ಲಖಿಂಪುರ್ ಖೇರಿಗೆ ಭೇಟಿ ನೀಡುವುದನ್ನು ಪೊಲೀಸ್ ಸಿಬ್ಬಂದಿಗಳು ತಡೆದಿದ್ದಾರೆ. ಕೊಲೆಯಾದ ರೈತರ ಕುಟುಂಬಗಳನ್ನು ಭೇಟಿ ಮಾಡಲು ಲಖಿಂಪುರ್ ಖೇರಿಗೆ ಹೋಗುವ ದಾರಿಯಲ್ಲಿ ನಿನ್ನೆ ತಡರಾತ್ರಿ ಅವರನ್ನು ಬಂಧಿಸಲಾಯಿತು. ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಪಂಜಾಬ್ ಉಪ ಮುಖ್ಯಮಂತ್ರಿ ಎಸ್.ಎಸ್. ರಾಂಧವಾ ಅವರನ್ನು ಲಕ್ನೋದಲ್ಲಿ ಇಳಿಯಲು ಬಿಡಲಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.